.jpg)
PTCL Act: ಎಸ್ಸಿ,ಎಸ್ಟಿ ಜಮೀನು ಮರು ವಶಕ್ಕಿಲ್ಲ ಮಿತಿ: ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿ ಕುರಿತು ಹೈಕೋರ್ಟ್ ಮಹತ್ವದ ತೀರ್ಪು
PTCL Act: ಎಸ್ಸಿ,ಎಸ್ಟಿ ಜಮೀನು ಮರು ವಶಕ್ಕಿಲ್ಲ ಮಿತಿ: ಪಿಟಿಸಿಎಲ್ ಕಾಯ್ದೆಯ ವ್ಯಾಪ್ತಿ ಕುರಿತು ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲ ಜಮೀನು ಪರಭಾರೆ ನಿಷೇಧ ಕಾಯ್ದೆ- 1978 (ಪಿಟಿಸಿಎಲ್ ಕಾಯ್ದೆ) ಬಳಸಿಕೊಂಡು ಮೂಲ ಮಂಜೂರಾತಿ ಪಡೆದವರು ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಅನಧಿಕೃತವಾಗಿ ಪರಭಾರೆಗೊಂಡ ತಮ್ಮ ಭೂಮಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಮರು ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪಿಟಿಸಿಎಲ್ ಕಾಯ್ದೆ ಅಡಿಯಲ್ಲಿ ಮಂಜೂರಾದ ಜಮೀನನ್ನು ಅನಧಿಕೃತವಾಗಿ ಪರಭಾರೆಗೊಂಡರೆ, ಅದೇ ಭೂಮಿಯನ್ನು ಪಿಟಿಸಿಎಲ್ ಕಾಯ್ದೆಯ ಮೂಲಕ ಒಮ್ಮೆ ಮರಳಿ ಪಡೆದ ನಂತರವೂ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಅದೇ ಭೂಮಿಯನ್ನು ಬೇರೊಬ್ಬರಿಗೆ ವರ್ಗಾಯಿಸಿದ್ದರೆ, ಅದನ್ನು ಪುನಃ ಪಡೆಯಲು ಕಾಯ್ದೆ ಅನುವು ಮಾಡಿಕೊಡುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ತಮ್ಮ ಮಾರಾಟ ಪತ್ರವನ್ನು ರದ್ದುಗೊಳಿಸಿ ಭೂಮಿಯನ್ನು ಮೂಲ ವಾರಸುದಾರರಿಗೆ ಮರು ಸ್ವಾಧೀನಗೊಳಿಸಿ ನೀಡಿದ್ದ ಸಹಾಯಕ ಆಯುಕ್ತರು ಮತ್ತು ವಿಶೇಷ ಉಪ ಆಯುಕ್ತರ ಆದೇಶವನ್ನು ಪ್ರಶ್ನಿಸಿ ದೊಡ್ಡಗಿರಿಯಪ್ಪಾಚಾರಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಅರ್ಜಿದಾರರು ಮಂಡಿಸಿದ ವಾದ:
ಅರ್ಜಿದಾರರು ಒಂದು ಬಾರಿ ಪಿಟಿಸಿಎಲ್ ಕಾಯ್ದೆಯನ್ನು ಬಳಸಿಕೊಂಡು ಭೂಮಿಯನ್ನು ವಶಪಡಿಸಿಕೊಂಡಿದ್ದರೆ, ನಂತರ ನಡೆಯುವ ವಹಿವಾಟಿಗೆ ಅದನ್ನು ಅನ್ವಯಿಸಲು ಸಾಧ್ಯವಿಲ್ಲ. ಅದಕ್ಕೆ ಅವಕಾಶ ನೀಡಿದರೆ ಭೂ ವ್ಯವಹಾರಗಳಲ್ಲಿ ಅನಿಶ್ಚಿತತೆ ಸೃಷ್ಟಿಸಿ, ಖರೀದಿದಾರರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಮೂಲ ವಾರಸುದಾರರಿಗೆ ಸರ್ಕಾರ 2005ರ ಡಿಸೆಂಬರ್‌ನಲ್ಲಿ ಭೂಮಿಯನ್ನು ಮಾರಾಟ ಮಾಡಲು ಅನುಮತಿ ನೀಡಿದೆ. ಅವರಿಗೆ ಭೂಮಿಯ ಮಾರುಕಟ್ಟೆ ಬೆಲೆಯನ್ನು ಪಾವತಿಸಲಾಗಿದ್ದು, ಕುಟುಂಬದ ಜೀವನೋಪಾಯಕ್ಕಾಗಿ ಪರ್ಯಾಯ ಕೃಷಿ ಭೂಮಿ ಖರೀದಿಗೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸಲಾಗಿದೆ. ಆದ್ದರಿಂದ ಅರ್ಜಿದಾರರ ಮಾರಾಟ ಕ್ರಯಪತ್ರವನ್ನು ರದ್ದುಗೊಳಿಸಿರುವುದು ಕಾನೂನು ಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು.
ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಪ್ರತಿವಾದಿಗಳಾದ ಉಪ ಆಯುಕ್ತರು ಮತ್ತು ಮೂಲ ಮಂಜುರಾತಿದಾರರ ಉತ್ತರಾಧಿಕಾರಿಗಳು, ಪಿಟಿಸಿಎಲ್ ಕಾಯ್ದೆಯು ಮೊದಲ ಅನಧಿಕೃತ ಪರಭಾರೆಯಿಂದ ಮಾತ್ರ ರಕ್ಷಣೆಗೆ ಸೀಮಿತವಾಗಿಲ್ಲ. ಎಲ್ಲ ಅನಧಿಕೃತ ವರ್ಗಾವಣೆಗಳಿಗೆ ಇದು ವಿಸ್ತರಿಸುತ್ತದೆ. ಕಾಯ್ದೆಯು ಸೆಕ್ಷನ್ 4ರ ಅನ್ವಯ ಎಸ್ಸಿ, ಎಸ್ಟಿಗಳಿಗೆ ಮಂಜೂರು ಮಾಡಿದ ಭೂಮಿಯನ್ನು ಸರ್ಕಾರದ ಪೂರ್ವಾನುಮತಿಯಿಲ್ಲದೆ ವರ್ಗಾವಣೆ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಪ್ರಸ್ತುತ ಪ್ರಕರಣದಲ್ಲಿ ವಿಧಿಸಲಾದ ಷರತ್ತುಗಳನ್ನು ಪೂರೈಸದ ಕಾರಣ ಮಾರಾಟವು ಅನೂರ್ಜಿತವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಪೀಠ, ಕಾಯ್ದೆಯ ಹಿಂದಿನ ಆಶಯವನ್ನು ಸೂಕ್ಷ್ಮವಾಗಿ ಪರಿಗಣಿಸಿದೆ. ಕಾನೂನಿನ ರಕ್ಷಣೆಗಳನ್ನು ತಪ್ಪು ವ್ಯಾಖ್ಯಾನಗಳ ಮೂಲಕ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ಆದೇಶಗಳನ್ನು ಉಲ್ಲೇಖಿಸಿ. ಪಿಟಿಸಿಎಲ್ ಕಾಯ್ದೆಯು ಅನಧಿಕೃತವಾಗಿ ಪರಭಾರೆಗೊಂಡ ಭೂಮಿಯನ್ನು ಮರಳಿ ಪಡೆಯಲು ಮಿತಿಗಳನ್ನು ಹೇರಿಲ್ಲ ಎಂದು ತೀರ್ಪು ನೀಡಿತು.
ಪ್ರಕರಣ: ಶ್ರೀ ದೊಡ್ಡಗಿರಿಯಪ್ಪಾಚಾರಿ ವಿರುದ್ಧ ಜಿಲ್ಲಾಧಿಕಾರಿ, ಬೆಂಗಳೂರು ನಗರ ಮತ್ತಿತರರು
ಕರ್ನಾಟಕ ಹೈಕೋರ್ಟ್, WP 14207/2025 Dated 26-09-2025