
ಜಪ್ತಿ ಮಾಡಿಕೊಂಡ ಡ್ರಗ್ಸ್ ತಾನೇ ಸೇವಿಸಿದ ಜಡ್ಜ್: ಇಬ್ಬರು ಜಡ್ಜ್‌ಗಳನ್ನು ವಜಾ ಮಾಡಿದ ಹೈಕೋರ್ಟ್
ಜಪ್ತಿ ಮಾಡಿಕೊಂಡ ಡ್ರಗ್ಸ್ ತಾನೇ ಸೇವಿಸಿದ ಜಡ್ಜ್: ಇಬ್ಬರು ಜಡ್ಜ್‌ಗಳನ್ನು ವಜಾ ಮಾಡಿದ ಹೈಕೋರ್ಟ್
ದುರ್ವರ್ತನೆ ಮತ್ತು ಭ್ರಷ್ಟಾಚಾರದ ನಡವಳಿಕೆಗಾಗಿ ಇಬ್ಬರು ಸೆಷನ್ಸ್ ನ್ಯಾಯಾಧೀಶರನ್ನು ವಜಾಗೊಳಿಸಿ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಎರಡು ಪ್ರತ್ಯೇಕ ಘಟನೆಗಳಲ್ಲಿ ಭ್ರಷ್ಟಾಚಾರ ಮತ್ತು ಮಾದಕದ್ರವ್ಯ ಸೇವನೆ ಆರೋಪದ ಅಡಿಯಲ್ಲಿ ಹೈಕೋರ್ಟ್ ಈ ಕಠಿಣ ನಿರ್ಧಾರ ಕೈಗೊಂಡಿದೆ. ಸತಾರಾ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಧನಂಜಯ್ ಎಲ್. ನಿಖಮ್ ಹಾಗೂ ಪಾಲ್ವರ್ ಸಿವಿಲ್ ನ್ಯಾಯಾಧೀಶ ಇರ್ಫಾನ್ ಆರ್. ಶೇಖ್ ವಜಾಗೊಂಡವರು.
ಸತಾರಾ ಜಿಲ್ಲಾ ನ್ಯಾಯಾಧೀಶ ಧನಂಜಯ್ ನಿಖಮ್ ಅವರು ವಂಚನೆ ಪ್ರಕರಣವೊಂದರಲ್ಲಿ ಜಾಮೀನು ನೀಡಲು 5 ಲಕ್ಷ ರೂ. ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳ ಸತಾರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ್ ನಿಕಮ್ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ.
ಜಡ್ಜ್ ಧನಂಜಯ್ ನಿಕಮ್ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು. ಆ ಬಳಿಕ ನಿಕಮ್ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಯೂ ಅವರ ಅರ್ಜಿಯನ್ನು ಪುರಸ್ಕರಿಸಲಿಲ್ಲ. ತಮ್ಮ ವಿರುದ್ಧದ ಆರೋಪದಲ್ಲಿ ಸಾಕಷ್ಟು ಬಲ ಇದೆ, ಸಾಕ್ಷ್ಯಾಧಾರಗಳು ಆರೋಪ ಸಾಬೀತಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ನಿರೀಕ್ಷಣಾ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಇನ್ನೊಂದು ಪ್ರಕರಣದಲ್ಲಿ, ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಮಾದಕ ದ್ರವ್ಯವನ್ನು ತಾವೇ ಸೇವಿಸಿದ ಆರೋಪದಲ್ಲಿ ಸಿವಿಲ್ ನ್ಯಾಯಾಧೀಶರಾದ ಇರ್ಫಾನ್ ಶೇಖ್ ಅವರನ್ನು ವಜಾಗೊಳಿಸಲಾಗಿದೆ.
ಪ್ಯಾಥಾಲಜಿ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಜಡ್ಜ್ ಮಾದಕ ವಸ್ತುಗಳ ಸೇವೆಯಲ್ಲಿ ತೊಡಗಿರುವುದು ನಿರೂಪಿತವಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಗಂಭೀರ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿತ್ತು.