.png)
ನ್ಯಾಯಾಲಯ ಆವರಣದಲ್ಲಿ ಧೂಮಪಾನ, ಅನುಚಿತ ವರ್ತನೆ: ಆವರಣ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿದ ಕೋರ್ಟ್
ನ್ಯಾಯಾಲಯ ಆವರಣದಲ್ಲಿ ಧೂಮಪಾನ, ಅನುಚಿತ ವರ್ತನೆ: ಆವರಣ ಸ್ವಚ್ಛಗೊಳಿಸುವ ಶಿಕ್ಷೆ ವಿಧಿಸಿದ ಕೋರ್ಟ್
ನ್ಯಾಯಾಲಯ ಆವರಣದಲ್ಲಿ ಧೂಮಪಾನ ಮಾಡಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಒಂದು ಸಾವಿರ ದಂಡ ಹಾಗೂ ನ್ಯಾಯಾಲಯದ ಆವರಣ ಸ್ವಚ್ಛಗೊಳಿಸುವ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ಈ ಘಟನೆ ನಡೆದಿರುವುದು ಕುಂದಾಪುರದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದಲ್ಲಿ. ಆರೋಪಿಗಳು ಕೋರ್ಟ್ ಆವರಣಕ್ಕೆ ಮದ್ಯಪಾನ ಮಾಡಿ ಬಂದಿದ್ದರು. ಅಲ್ಲದೆ, ಅಲ್ಲಿಯೇ ಧೂಮಪಾನ ಮಾಡಿ, ಕಲಾಪದ ಸಂದರ್ಭದಲ್ಲಿ ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಿ ಕೋರ್ಟ್ ಕಲಾಪಕ್ಕೆ ಕಿರಿಕಿರಿ ಉಂಟು ಮಾಡಿದ್ದರು.
ಪ್ರಕರಣವೊಂದಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಕೋರ್ಟಿಗೆ ಬಂದಿದ್ದ ವಿನಯ ಶೆಟ್ಟಿ, ಸಂದೀಪ ಶೆಟ್ಟಿ ಹಾಗೂ ಅಣ್ಣಪ್ಪ ಶೆಟ್ಟಿಯವರು ತಮ್ಮ ಸರದಿಗಾಗಿ ಹೊರಗಡೆ ಹಾಕಲಾದ ಬೆಂಚಿನಲ್ಲಿ ಕಾಯುತ್ತಿದ್ದರು.
ಕೋರ್ಟ್ ಕಲಾಪ ನಡೆಯುತ್ತಿದ್ದ ವೇಳೆ ಈ ಮೂವರು ಜೋರಾದ ಧ್ವನಿಯಲ್ಲಿ ಮಾತನಾಡುತ್ತಿದ್ದುದಲ್ಲದೆ, ಅಲ್ಲಿಯೇ ಧೂಮಪಾನ ಸಹ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೋರ್ಟ್ ಸಿಬಂದಿ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಕರೆಸಿ ವಿಚಾರಣೆ ನಡೆಸಿ ಈ ರೀತಿ ಕೋರ್ಟಿನಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಎಚ್ಚರಿಕೆ ನೀಡಿದ್ದಲ್ಲದೆ, 1 ಸಾವಿರ ರೂ. ದಂಡ ವಿಧಿಸಿ, ಶಿಕ್ಷೆಯ ರೂಪವಾಗಿ ಕೋರ್ಟ್ ಆವರಣ ಸ್ವಚ್ಛಗೊಳಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ ಎನ್ನಲಾಗಿದೆ.
ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರುತಿ ಶ್ರೀ ಅವರು ದಂಡ ಮತ್ತು ನ್ಯಾಯಾಲಯದ ಆವರಣ ಶುಚಿಗೊಳಿಸುವಂತೆ ಸೂಚಿಸಿದರು. ಕೋರ್ಟ್ ಆದೇಶದಂತೆ ಈ ಮೂವರು ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಿ, ತೆರಳಿರುವುದಾಗಿ ತಿಳಿದು ಬಂದಿದೆ.