-->
ವಕೀಲರಿಗೆ ಅವಾಚ್ಯ ಪದಗಳ ನಿಂದನೆ: ಪೊಲೀಸ್ ಅಧಿಕಾರಿಗೆ ನ್ಯಾಯಾಂಗ ನಿಂದನೆ ಅಡಿ 2 ತಿಂಗಳ ಜೈಲು ಶಿಕ್ಷೆ

ವಕೀಲರಿಗೆ ಅವಾಚ್ಯ ಪದಗಳ ನಿಂದನೆ: ಪೊಲೀಸ್ ಅಧಿಕಾರಿಗೆ ನ್ಯಾಯಾಂಗ ನಿಂದನೆ ಅಡಿ 2 ತಿಂಗಳ ಜೈಲು ಶಿಕ್ಷೆ

ವಕೀಲರಿಗೆ ಅವಾಚ್ಯ ಪದಗಳ ನಿಂದನೆ: ಪೊಲೀಸ್ ಅಧಿಕಾರಿಗೆ ನ್ಯಾಯಾಂಗ ನಿಂದನೆ ಅಡಿ 2 ತಿಂಗಳ ಜೈಲು ಶಿಕ್ಷೆ





ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗೆ ನ್ಯಾಯಾಂಗ ನಿಂದನೆ ಆರೋಪದಡಿ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಶ್ರೀ ದೇವನ್ ರಾಮಚಂದ್ರನ್ ಅವರಿದ್ದ ನ್ಯಾಯಪೀಠ ಈ ಶಿಕ್ಷೆ ವಿಧಿಸಿದೆ.


ಅಲತ್ತೂರು ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ವಿ.ಆರ್. ರಿನೀಶ್ ವಕೀಲರೊಬ್ಬರಿಗೆ ನಿಂದಿಸಿದ ಕುರಿತಂತೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.


"ಕಾನೂನು ವೃತ್ತಿಪರರನ್ನು ಅಗೌರವಿಸುವ ಪರಿಣಾಮಗಳ ಬಗ್ಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಈ ತೀರ್ಪು ಎಚ್ಚರಿಕೆಯಂತಿರಬೇಕು. ಈ ಪ್ರಕರಣ ಎಲ್ಲರಿಗೂ ಉದಾಹರಣೆಯಾಗಬೇಕು" ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಇದೇ ವೇಳೆ, ಶಿಕ್ಷೆಯನ್ನು ಷರತ್ತಿನ ಮೇಲೆ ಅಮಾನತಿನಲ್ಲಿಟ್ಟಿರುವ ಹೈಕೋರ್ಟ್, ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮುಂದಿನ ಒಂದು ವರ್ಷ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಬಾರದು. ಭಾಗಿಯಾದಲ್ಲಿ ಶಿಕ್ಷೆ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದೆ.


ಆಲತ್ತೂರಿನಲ್ಲಿ ಎಸ್‌ಐ ರಿನೀಶ್ ಅವರು ವಕೀಲರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಕೇರಳ ಹೈಕೋರ್ಟ್ ವಕೀಲರ ಸಂಘ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ನ್ಯಾಯಾಲಯದ ಮುಂದೆ ಬೇಷರತ್ ಕ್ಷಮೆ ಯಾಚಿಸಿದ್ದರು.


ಆದರೆ ಕ್ಷಮೆಯಾಚನೆ ಪ್ರಮಾಣಪತ್ರದಲ್ಲಿನ ಅಂಶಗಳು ಸೂಕ್ತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಬೇಷರತ್ ಕ್ಷಮೆ ಯಾಚಿಸುವುದಾಗಿ ಎರಡನೇ ಅಫಿಡವಿಟ್ ಸಲ್ಲಿಸಿದ್ದರು.


ಅದು ಕೂಡ ಸೂಕ್ತ ರೀತಿಯಲ್ಲಿರದ ಕಾರಣ ಮತ್ತು ನ್ಯಾಯಾಲಯಕ್ಕೆ ತೃಪ್ತಿಯಾಗದ ಹಿನ್ನೆಲೆಯಲ್ಲಿ 2 ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜತೆಗೆ ಮುಂದಿನ ಒಂದು ವರ್ಷ ಇಂತಹ ಕೃತ್ಯಗಳು ಮರುಕಳಿಸದಂತೆ ಜವಾಬ್ದಾರಿಯುತವಾಗಿ ನಡೆದುಕೊಂಡಲ್ಲಿ ಮಾತ್ರ ಶಿಕ್ಷೆಯಿಂದ ಪಾರಾಗಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.


Kerala High Court Case (C) 175/2024


Ads on article

Advertise in articles 1

advertising articles 2

Advertise under the article