ಅನುಕಂಪದ ನೇಮಕಾತಿ: ಗರಿಷ್ಟ ವಯೋಮಿತಿ ಮೀರಿದ್ದರೂ ಮೃತರ ಪತ್ನಿಯ ನೌಕರಿಗೆ ಅರ್ಹರು: ಕರ್ನಾಟಕ ಹೈಕೋರ್ಟ್
ಅನುಕಂಪದ ನೇಮಕಾತಿ: ಗರಿಷ್ಟ ವಯೋಮಿತಿ ಮೀರಿದ್ದರೂ ಮೃತರ ಪತ್ನಿಯ ನೌಕರಿಗೆ ಅರ್ಹರು: ಕರ್ನಾಟಕ ಹೈಕೋರ್ಟ್
ಗರಿಷ್ಟ ವಯೋಮಿತಿಯನ್ನು ಮೀರಿದ್ದರೂ ಅನುಕಂಪದ ಆಧಾರದ ನೇಮಕಾತಿಯಡಿ ದಿವಂಗತ ಪತಿಯ ಕೆಲಸವನ್ನು ಪಡೆಯಲು ಪತ್ನಿ ಅರ್ಹತೆ ಹೊಂದಿದ್ದಾರೆ - ಕರ್ನಾಟಕ ಹೈಕೋರ್ಟ್*
ನೇಮಕಾತಿಗೆ ನಿಗದಿಪಡಿಸಿದ ವಯಸ್ಸಿನ ಮಿತಿಯನ್ನು ಮೀರಿದ್ದರೂ ಸಹಾನುಭೂತಿಯ ಆಧಾರದ ಮೇಲೆ ನಡೆಯುವ ನೇಮಕಾತಿಯಲ್ಲಿ ಪತ್ನಿಯು ದಿವಂಗತ ಗಂಡನ ಕೆಲಸವನ್ನು ಪಡೆಯಬಹುದು ಎಂಬುದಾಗಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ದಿನಾಂಕ 14.10.2025 ರಂದು ಸರೋಜಾ ವಿರುದ್ಧ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತಿತರರು ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ರಿಟ್ ಅರ್ಜಿದಾರಳಾದ ಸರೋಜಾ ಎಂಬವರ ಪತಿ ಗಣೇಶ ರಾವ್ ಎನ್. ಕೊಂಡಾಯಿ ಎಂಬವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಧಾರವಾಡ ಘಟಕದಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಯಲ್ಲಿ 4.4.2006 ರಿಂದ ಸೇವೆ ಸಲ್ಲಿಸುತ್ತಿದ್ದರು. ದಿನಾಂಕ 23.9.2023 ರಂದು ಅವರು ಸೇವೆಯಲ್ಲಿದ್ದ ಅವಧಿಯಲ್ಲಿ ಹಠಾತ್ ನಿಧನರಾದರು.
ಅನುಕಂಪದ ನೆಲೆಯಲ್ಲಿ ತನ್ನ ಪತಿಯು ಸೇವೆ ಸಲ್ಲಿಸುತ್ತಿದ್ದ ಸಾರಿಗೆ ಸಂಸ್ಥೆಯಲ್ಲಿ ತನಗೆ ಉದ್ಯೋಗ ನೀಡಬೇಕೆಂದು ಕೋರಿ ದಿನಾಂಕ 20.5.2024 ರಂದು ರಂದು ಮೃತ ಗಣೇಶ್ ರಾವ್ ಎನ್ ಕೊಂಡಾಯಿ ಅವರ ಪತ್ನಿ ಸರೋಜಾ ಎಂಬವರು ಅರ್ಜಿ ಸಲ್ಲಿಸಿದರು. ಅವರ ಅರ್ಜಿಯನ್ನು ಪರಿಶೀಲಿಸಿದ ಸಂಸ್ಥೆಯು ಅರ್ಜಿದಾರರು ಪ್ರವರ್ಗ 3 ಬಿ ಗೆ ಸೇರಿದ್ದು ನೇಮಕಾತಿ ನಿಯಮಾವಳಿಗಳ ಪ್ರಕಾರ ಸದರಿ ಪ್ರವರ್ಗದಡಿ ಗರಿಷ್ಠ ವಯೋಮಿತಿ 38 ಆಗಿದ್ದು ಮೃತಾವಲಂಬಿ ವಿಧವೆಯರಿಗೆ 5 ವರ್ಷಗಳ ವಯೋಮಿತಿಯನ್ನು ಸಡಿಲಿಸಲಾಗಿದ್ದು ಹೆಚ್ಚುವರಿಯಾಗಿ 5 ವರ್ಷಗಳನ್ನು ಸೇರಿಸಿದ್ದಲ್ಲಿ ಗರಿಷ್ಠ ವಯೋಮಿತಿ 43 ಆಗಿರುತ್ತದೆ. ಆದರೆ ಅರ್ಜಿದಾರಳಾದ ಸರೋಜಾ ಅವರ ವಯಸ್ಸು 47 ಆಗಿರುವುದರಿಂದ ಅನುಕಂಪದ ನೆಲೆಯ ನೇಮಕಾತಿ ನಿಯಮಾವಳಿಗಳ ಅಡಿ ನೇಮಕಾತಿಗೆ ಅವಕಾಶವಿರುವುದಿಲ್ಲ ಎಂದು ದಿನಾಂಕ 17-1-2025ರ ಹಿಂಬರಹ ನೀಡಿ ಅರ್ಜಿಯನ್ನು ತಿರಸ್ಕರಿಸಲಾಯಿತು.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ನೀಡಿದ ಸದರಿ ಹಿಂಬರಹವನ್ನು ಪ್ರಶ್ನಿಸಿ ಸರೋಜಾ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 106296/2025 ಅನ್ನು ದಾಖಲಿಸಿದರು.
ರಿಟ್ ಅರ್ಜಿದಾರರ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಅನುಕಂಪದ ನೆಲೆಯಲ್ಲಿ ನೇಮಕಾತಿಯ ಮುಖ್ಯ ಉದ್ದೇಶವೆಂದರೆ ಸೇವೆಯಲ್ಲಿದ್ದಾಗ ಅಕಾಲಿಕ ಮರಣಕ್ಕೆ ತುತ್ತಾದ ನೌಕರರ ಅವಲಂಬಿತ ಕುಟುಂಬಕ್ಕೆ ಆರ್ಥಿಕ ಆಧಾರ ಒದಗಿಸುವುದೇ ಆಗಿದೆ. ಕುಟುಂಬದ ಜೀವನಾಧಾರವಾಗಿದ್ದ ವ್ಯಕ್ತಿಯ ಮರಣದಿಂದ ಸಂತ್ರಸ್ತರಾದ ಅವಲಂಬಿತರಿಗೆ ಬದುಕುವ ದಾರಿಯನ್ನು ಒದಗಿಸುವ ಉದಾತ್ತ ಉದ್ದೇಶವನ್ನು ಈ ನೇಮಕಾತಿ ಹೊಂದಿದೆ. ಸರೋಜಾ ಅವರಿಗೆ 47 ವರ್ಷ ವಯಸ್ಸು ಹಾಗೂ ಆಕೆಯ ಮಗನಿಗೆ 13 ವರ್ಷ ವಯಸ್ಸು ಆಗಿರುವುದರಿಂದ ಇಬ್ಬರಿಗೂ ನಿಯಮಾನುಸಾರ ನೇಮಕಾತಿಗೆ ಅವಕಾಶವಿಲ್ಲ. ಇದರಿಂದಾಗಿ ಅನುಕಂಪದ ನೆಲೆಯ ನೇಮಕಾತಿಯ ಉದ್ದೇಶವೇ ವಿಫಲವಾಗುತ್ತದೆ. ಆದುದರಿಂದ ಮೃತ ನೌಕರನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ವಯೋಮಿತಿಯಲ್ಲಿ ಸಡಿಲಿಕೆ ನೀಡಿ ಅರ್ಜಿದಾರರಾದ ಸರೋಜಾ ಅವರಿಗೆ ಅನುಕಂಪದ ನೆಲೆಯಲ್ಲಿ ನೇಮಕಾತಿ ನೀಡಬೇಕೆಂದು ಪ್ರಾರ್ಥಿಸಲಾಯಿತು.
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ಸಂಸ್ಥೆಯ ನೇಮಕಾತಿ ನಿಯಮಾವಳಿಗಳಡಿ ಅರ್ಜಿದಾರರು ಗರಿಷ್ಠ ವಯೋಮಿತಿ ಮೀರಿರುವುದರಿಂದ ಅವರನ್ನು ಅನುಕಂಪದ ನೆಲೆಯಲ್ಲಿ ನೇಮಕಾತಿ ಮಾಡಲು ಅವಕಾಶವಿಲ್ಲ. ಮೃತನ ಕುಟುಂಬದ ಇತರ ಅರ್ಹ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಪರಿಗಣಿಸಬಹುದು ಎಂದು ಅರ್ಜಿದಾರರಿಗೆ ಹಿಂಬರಹ ನೀಡಲಾಗಿದೆ. ಆದುದರಿಂದ ರಿಟ್ ಅರ್ಜಿಯನ್ನು ವಜಾಗೊಳಿಸಬೇಕಾಗಿ ಪ್ರಾರ್ಥಿಸಿದರು.
ಉಭಯ ಪಕ್ಷಕಾರರವಾದವನ್ನು ಆಲಿಸಿದ ನ್ಯಾಯಪೀಠವು ಈ ಕೆಳಗಿನಂತೆ ಅಭಿಪ್ರಾಯವನ್ನು ವ್ಯಕ್ತಪಡಿಸಿತು
ಪತಿಯ ನಿಧನಾ ನಂತರ ಅನುಕಂಪದ ನೆಲೆಯಲ್ಲಿ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದಾಗ ರಿಟ್ ಅರ್ಜಿದಾರರು 47 ವರ್ಷ, 2 ತಿಂಗಳು ಮತ್ತು 24 ದಿನಗಳ ವಯಸ್ಸಿನವರಾಗಿದ್ದರು. ಸಹಾನುಭೂತಿಯ ನೇಮಕಾತಿಯನ್ನು ನೀಡಲು ಸಾಧ್ಯವಿಲ್ಲ ಎಂದು ಅವರ ಮನವಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತಿರಸ್ಕರಿಸಿತು. ನೇಮಕಾತಿಗಳಿಗೆ ಮಾನವೀಯತೆಯು ಪ್ರೇರಕ ಶಕ್ತಿಯಾಗಿರಬೇಕೇ ಹೊರತು ಕಟ್ಟುನಿಟ್ಟಾದ ಔಪಚಾರಿಕತೆಯಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ವಯಸ್ಸಿನ ಮಿತಿಯನ್ನು ದಾಟಿದ ಕಾರಣ ಅಧಿಕಾರಿಗಳು ಅವರ ನೇಮಕಾತಿ ವಿನಂತಿಯನ್ನು ತಿರಸ್ಕರಿಸಿದ್ದಾರೆ ಎಂದು ಕಂಡುಬಂದಿದೆ. ಅನುಕಂಪದ ನೆಲೆಯ ಉದ್ಯೋಗವು ಕುಟುಂಬದ ಆಧಾರ ಸ್ಥಂಭವಾಗಿದ್ದ ನೌಕರನ ಅಗಲಿಕೆಯಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕುಟುಂಬಗಳನ್ನು ಬೆಂಬಲಿಸುವ ಉದ್ದೇಶದ ಒಂದು ಕಾಯ್ದೆಯಾಗಿದೆ ಎಂದು ಉಚ್ಛ ನ್ಯಾಯಾಲಯ ಗಮನಿಸಿದೆ. ಆದ್ದರಿಂದ ಉದ್ಯೋಗದಾತನು ಮೊದಲು ಕುಟುಂಬದ ಆರ್ಥಿಕ ಸ್ಥಿತಿಯನ್ನು ನಿರ್ಧರಿಸಬೇಕು. ಅರ್ಹ ಪ್ರಕರಣಗಳಲ್ಲಿ ನೀತಿಯು ವಯಸ್ಸಿನ ಸಡಿಲಿಕೆಯನ್ನು ಸಹ ಒದಗಿಸಿರುವುದರಿಂದ, ಆಕೆಯ ಆರ್ಥಿಕ ಅಗತ್ಯವನ್ನು ಪರಿಗಣಿಸದೆ ಸ್ವಯಂಚಾಲಿತವಾಗಿ ತಿರಸ್ಕರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯವು ಕಂಡುಕೊಂಡಿತು ಮತ್ತು ಆಕೆಯ ಹಕ್ಕನ್ನು ಹೊಸದಾಗಿ ಪರಿಗಣಿಸಲು ನಿರ್ದೇಶಿಸಿತು.
ಪತಿಯ ಮರಣದ ನಂತರ ಕುಟುಂಬದ ಆರ್ಥಿಕ ಸಂಕಷ್ಟವನ್ನು ಪರಿಶೀಲಿಸದೆ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅರ್ಜಿದಾರಳು 47 ವರ್ಷ ವಯಸ್ಸಿನವಳಾಗಿದ್ದು, ಆಕೆಯ ವಯಸ್ಸು 43 ವರ್ಷ ಮೀರಿದೆ ಎಂಬ ಕಾರಣಕ್ಕಾಗಿಯೇ ಅನುಕಂಪದ ನೇಮಕಾತಿಗಾಗಿ ಆಕೆಯ ಕೋರಿಕೆಯನ್ನು ತಿರಸ್ಕರಿಸಿದೆ ಎಂದು ಕಂಡುಕೊಂಡ ನಂತರ ಕರ್ನಾಟಕ ಹೈಕೋರ್ಟ್ ಆಕೆಯ ಅರ್ಜಿಯನ್ನು ಅಂಗೀಕರಿಸಿತು.
ವಯಸ್ಸಿನ ಮಿತಿಯ ಈ ಕಠಿಣ ಅನ್ವಯವು, ಅವಲಂಬಿತ ಕುಟುಂಬದ ಅಗತ್ಯಗಳನ್ನು ಮಾನವೀಯ ಮತ್ತು ವಾಸ್ತವಿಕ ಮೌಲ್ಯಮಾಪನದ ನೆಲೆಯಲ್ಲಿ ಇತ್ಯರ್ಥ ಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ ನ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅನುಕಂಪದ ನೇಮಕಾತಿಯ ಉದ್ದೇಶವು ಬಿಕ್ಕಟ್ಟಿನಲ್ಲಿರುವ ಕುಟುಂಬಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸುವುದು ಮತ್ತು ಕೇವಲ ನೇಮಕಾತಿಗಳನ್ನು ನಿಯಂತ್ರಿಸುವುದು ಅಲ್ಲ ಎಂದು ಒತ್ತಿ ಹೇಳಿದ ನ್ಯಾಯಾಲಯ, ವಯಸ್ಸಿನ ಮಿತಿಯನ್ನು ಯಾಂತ್ರಿಕವಾಗಿ ಜಾರಿಗೊಳಿಸದೆ, ಆಕೆಯ ಪ್ರಕರಣವನ್ನು ಹೊಸದಾಗಿ ಮರುಪರಿಶೀಲಿಸುವಂತೆ ನಿಗಮಕ್ಕೆ ನಿರ್ದೇಶನ ನೀಡಿತು.
ಕರ್ನಾಟಕ ಹೈಕೋರ್ಟ್ ನ ಸಮನ್ವಯ ಪೀಠವು 14.8.2025 ರಂದು ರಿಟ್ ಅರ್ಜಿ ಸಂಖ್ಯೆ 102208/2025 ರಲ್ಲಿ ಈ ಯೋಜನೆಯನ್ನು ವ್ಯಾಖ್ಯಾನಿಸಿದ ಕರ್ನಾಟಕ ಹೈಕೋರ್ಟ್, ಇದೇ ರೀತಿಯ ಸಂದರ್ಭಗಳಲ್ಲಿ, ಅನುಕಂಪದ ಆಧಾರದ ಮೇಲೆ ನೇಮಕಾತಿಯನ್ನು ಬಯಸಿದಾಗ ಗರಿಷ್ಠ ವಯೋಮಿತಿ ಮೀರಿದೆ ಎಂಬ ಕಾರಣಕ್ಕಾಗಿ, ನೇಮಕಾತಿಯನ್ನು ನಿರಾಕರಿಸಲಾಗುವುದಿಲ್ಲ ಮತ್ತು ಹೆಚ್ಚಿನ ವಯಸ್ಸಿನ ಮಿತಿಯನ್ನು ಉಲ್ಲೇಖಿಸದೆ ನೇಮಕಾತಿಯನ್ನು ಪರಿಗಣಿಸಲು ನಿರ್ದೇಶಿಸಿದೆ ಎಂದು ಹೇಳಿದೆ. ಇದಲ್ಲದೆ, ಈ ರೀತಿಯ ಪ್ರಕರಣಗಳನ್ನು ಮಾನವೀಯ ನೀತಿಯನ್ನು ರೂಪಿಸುವ ಮೂಲಕ ನಿಯಂತ್ರಿಸಬೇಕು ಎಂದು ಪೀಠ ನಿರ್ದೇಶಿಸಿದೆ.
ಕರ್ನಾಟಕ ಹೈಕೋರ್ಟ್ ನ ಸಮನ್ವಯ ಪೀಠದ ನಿರ್ಣಯವನ್ನು ನ್ಯಾಯಪೀಠವು ಗೌರವಯುತವಾಗಿ ಒಪ್ಪಿದೆ ಹಾಗೂ ಸದರಿ ಸಿದ್ಧ ನಿರ್ಣಯವನ್ನು ಈ ಪ್ರಕರಣಕ್ಕೂ ಅನ್ವಯಿಸುವುದು ಸೂಕ್ತವೆಂದು ಪರಿಗಣಿಸಿದೆ.
"ಕೆನರಾ ಬ್ಯಾಂಕ್ ವಿರುದ್ಧ ಅಜಿತ್‌ಕುಮಾರ್" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸುವುದು ಮುಖ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ, ಇದು "ಉಮೇಶ್‌ಕುಮಾರ್ ನಾಗ್‌ಪಾಲ್ ವಿರುದ್ಧ ಹರಿಯಾಣ ರಾಜ್ಯ" (1994) ರಿಂದ ಪ್ರಾರಂಭವಾಗಿ "ಪಶ್ಚಿಮ ಬಂಗಾಳ ರಾಜ್ಯ ಸರಕಾರ ವಿರುದ್ಧ ದೇಬಬೃತ ತಿವಾರಿ" (2025) ಪ್ರಕರಣದ ವರೆಗಿನ ನಿರ್ಣಯಗಳಲ್ಲಿ ಅನುಕಂಪದ ನೇಮಕಾತಿಗೆ ಸಂಬಂಧಿಸಿದ ಕಾನೂನಿನ ಸಂಪೂರ್ಣ ವಿಶ್ಲೇಷಣೆಯನ್ನು ಪರಿಗಣಿಸುತ್ತದೆ. ಸುಪ್ರೀಂ ಕೋರ್ಟ್ ಕೆಲವು ನೀತಿಗಳನ್ನು ರೂಪಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಅನುಕಂಪದ ನೇಮಕಾತಿ ಯೋಜನೆಯಡಿಯಲ್ಲಿ ಯಾವಾಗ ಸಹಾನುಭೂತಿಯ ನೇಮಕಾತಿ ಅಗತ್ಯವಿದೆ ಎಂಬ ಸಂದರ್ಭಗಳನ್ನು ನೋಡದೆ, ಅರ್ಜಿಯನ್ನು ತಿರಸ್ಕರಿಸಲಾಗುವಂತಿಲ್ಲ ಎಂಬುದು ರೂಪಿಸಲಾದ ನೀತಿಗಳಲ್ಲಿ ಒಂದಾಗಿದೆ.
ಅನುಕಂಪದ ನೆಲೆಯ ನೇಮಕಾತಿಯಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನವನ್ನು ಪರಿಗಣಿಸಬೇಕು. ಅರ್ಜಿಯನ್ನು ತಿರಸ್ಕರಿಸುವಾಗ ಅಥವಾ ಪುರಸ್ಕರಿಸುವಾಗ ಯಾವುದೇ ನಿಗಮ ಅಥವಾ ಉದ್ಯೋಗದಾತರು ಅನುಕಂಪದ ನೇಮಕಾತಿಯ ಅಗತ್ಯವನ್ನು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಆದ್ದರಿಂದ, ಅರ್ಜಿದಾರರು ಸಲ್ಲಿಸಿದ ಎರಡು ಮನವಿಗಳಲ್ಲಿ ವಿವರಿಸಿರುವ ಸಂದರ್ಭಗಳಿಂದಾಗಿ, ಸಡಿಲಗೊಳಿಸಬಹುದಾದ ವಯಸ್ಸಿನ ಮಿತಿ ಅಥವಾ ವಿಸ್ತರಿಸಬಹುದಾದ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿಯನ್ನು ನಿಗಮವು ಈಗ ಮರುಪರಿಶೀಲಿಸಬೇಕಾಗುತ್ತದೆ ಎಂಬ ಏಕೈಕ ಅಂಶದ ಮೇಲೆ ಅರ್ಜಿಯು ಪುರಸ್ಕರಿಸಲು ಅರ್ಹವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಆ ಬೆಳಕಿನಲ್ಲಿ, ರಿಟ್ ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಯಿತು. ಪ್ರತಿವಾದಿ (ಎದುರಾಳಿ) ಸಂಖ್ಯೆ.2 ಇವರು ದಿನಾಂಕ 17.1.2025 ಮತ್ತು 10.5.2025 ರಂದು ಅನುಕ್ರಮವಾಗಿ ಅನುಬಂಧಗಳು- *ಎಚ್* ಮತ್ತು *ಕೆ* ಪ್ರಕಾರ ನೀಡಿದ ಎರಡು ಹಿಂಬರಹಗಳನ್ನು ಹೈಕೋರ್ಟ್ ರದ್ದುಗೊಳಿಸಿತು.
ಈ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಎಂಟು ವಾರಗಳ ಮಿತಿಯೊಳಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಮರು ಪರಿಶೀಲಿಸಲು ವಿಷಯವನ್ನು ನಿಗಮಕ್ಕೆ ಹಿಂತಿರುಗಿಸಲಾಯಿತು.
ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದ.ಕ. ನ್ಯಾಯಾಂಗ ಇಲಾಖೆ
