ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್: ಮತ್ತೆ ಅರ್ಜಿ ಸಲ್ಲಿಸಲು ವಕೀಲರಿಗೆ ಕೊನೆ ಅವಕಾಶ
ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್: ಮತ್ತೆ ಅರ್ಜಿ ಸಲ್ಲಿಸಲು ವಕೀಲರಿಗೆ ಕೊನೆ ಅವಕಾಶ
ವಕೀಲ ವೃತ್ತಿಯ ಕುರಿತು ಕರ್ನಾಟಕ ವಕೀಲರ ಪರಿಷತ್ತು ನೀಡುವ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್ ಗೆ ಸಂಬಂಧಿಸಿದಂತೆ ಪಟ್ಟಿಯಲ್ಲಿ ಹೆಸರಿಲ್ಲದ ವಕೀಲರಿಗೆ ಮತ್ತೆ ಅರ್ಜಿ ಸಲ್ಲಿಸಲು ಕೊನೆ ಅವಕಾಶ ಒದಗಿಸಲಾಗಿದೆ.
ಡಿಸೆಂಬರ್ 6ರ ಒಳಗೆ ವಕೀಲರಿಗೆ ಸಿಓಪಿ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಕೀಲರು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ರಿಟ್ ಅರ್ಜಿ 1319/2023ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನೀಡಿದ ಆದೇಶದಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೊನೆಯ ಅವಕಾಶವಾಗಿ ಅಂತಿಮ ಗಡುವನ್ನು ನಿಗದಿಪಡಿಸಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ವಕೀಲರ ಪರಿಷತ್ತಿನ ಅಧಿಕೃತ ವೆಬ್‌ಸೈಟ್ ksbc.org.in ನ್ನು ಸಂಪರ್ಕಿಸಲು ಕೋರಲಾಗಿದೆ.
2010ಕ್ಕಿಂತ ಹಿಂದೆ ನೋಂದಣಿ ಮಾಡಿಕೊಂಡಿರುವ ವಕೀಲರು ಕಳೆದ ಐದು ವರ್ಷಗಳ ವಕಾಲತ್ತು ಅಥವಾ ವಕೀಲಿಕೆಗೆ ಸಂಬಂಧಿಸಿದ ಐದು ವರ್ಷಗಳ ತಲಾ ಒಂದು ದಾಖಲೆಯನ್ನು ಅರ್ಜಿಯ ಜೊತೆಗೆ ಲಗತ್ತಿಸಿ ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಹಾಗೆಯೇ 12-07-2010ರ ಬಳಿಕ ಕಾನೂನು ಪದವಿಯನ್ನು ಪಡೆದವರು ಮತ್ತು ಅಖಿಲ ಭಾರತ ವಕೀಲರ ಪರೀಕ್ಷೆಯನ್ನು ಪೂರೈಸಿದವರು ಸಿಓಪಿ ಪಡೆಯಬೇಕಾಗಿದ್ದು, ಇದಕ್ಕಾಗಿ ಪಟ್ಟಿ ಇಲ್ಲದ ವಕೀಲರು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಾಗಿದೆ.
ಅಂಚೆ ಮೂಲಕ, ಇಮೇಲ್ ಮೂಲಕ ಅಥವಾ ಆಫ್‌ಲೈನ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅದೇ ರೀತಿ, ವಿಳಾಸದಲ್ಲಿ ಬದಲಾವಣೆ ಮತ್ತು ಮತದಾನದ ಸ್ಥಳದಲ್ಲಿ ಬದಲಾವಣೆ ಕೋರುವ ವಕೀಲರು ರೂ. 250/- ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಪರಿಷತ್ತು ಪ್ರಕಟಣೆ ತಿಳಿಸಿದೆ.