ರಸ್ತೆ ಅಪಘಾತ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ವಾಹನ ಮಾಲಕ ತಂದೆಗೆ 25 ಸಾವಿರ ರೂ. ದಂಡ- ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ
ರಸ್ತೆ ಅಪಘಾತ: ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ವಾಹನ ಮಾಲಕ ತಂದೆಗೆ 25 ಸಾವಿರ ರೂ. ದಂಡ- ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ
ತನ್ನ ದ್ವಿಚಕ್ರ ವಾಹನವನ್ನು ಚಾಲಯಿಸಲು ಅಪ್ರಾಪ್ತ ಮಗನಿಗೆ ನೀಡಿ ರಸ್ತೆ ಅಪಘಾತಕ್ಕೆ ಕಾರಣರಾದ ವಾಹನ ಮಾಲಕ ತಂದೆಗೆ 25 ಸಾವಿರ ರೂ. ದಂಡ ವಿಧಿಸಿ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.
ಸ್ಕೂಟರ್ ಮಾಲೀಕ ಅಬ್ದುಲ್ ಹಮೀದ್ ಎಂಬವರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದ್ದು, ತನ್ನ ಮಗ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಲಾಯಿಸಿ ರಸ್ತೆ ಅಪಘಾತ ಮಾಡಿದ್ದ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರಿನ ನ್ಯಾಯಾಲಯ ಗಮನಾರ್ಹ ದಂಡ ವಿಧಿಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡಿದೆ.
ಮಾರ್ಚ್ 30ರಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಪದವು ಬಳಿ ಬೆಳಗ್ಗಿನ ಜಾವ ಅಪ್ರಾಪ್ತ ಬಾಲಕ ಇತರ ಇಬ್ಬರೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅದೇ ದಿಕ್ಕಿನಲ್ಲಿ ಕುಂಟಿಕಾನ ಕಡೆಗೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹೊಡೆದಿದೆ. ಇದರಿಂದ ಎರಡೂ ಸ್ಕೂಟರ್‌ನಲ್ಲಿದ್ದವರು ಗಾಯಗೊಂಡಿದ್ದರು.
ಈ ಬಗ್ಗೆ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಉಪನಿರೀಕ್ಷಕಿ ರೋಸಮ್ಮ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಜೆಎಂಎಫ್‌ಸಿ ಎಂಟನೇ ನ್ಯಾಯಾಲಯದ ನ್ಯಾಯಾಧೀಶರಾದ ಫವಾಜ್ ಪಿ.ಎ. ಸ್ಕೂಟರ್ ಮಾಲೀಕ ಅಬ್ದುಲ್ ಹಮೀದ್ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.