ಪತ್ನಿಯ ಜೀವನಾಂಶದ ಹಕ್ಕನ್ನು ಸೋಲಿಸಲು 'ವ್ಯಭಿಚಾರ'ದ ಸಾಂದರ್ಭಿಕ ಸಾಕ್ಷ್ಯ ಸಾಕು: ಕೇರಳ ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿಯ ಜೀವನಾಂಶದ ಹಕ್ಕನ್ನು ಸೋಲಿಸಲು 'ವ್ಯಭಿಚಾರ'ದ ಸಾಂದರ್ಭಿಕ ಸಾಕ್ಷ್ಯ ಸಾಕು: ಕೇರಳ ಹೈಕೋರ್ಟ್ ಮಹತ್ವದ ತೀರ್ಪು
ಪತ್ನಿಯ ಜೀವನಾಂಶದ ಹಕ್ಕನ್ನು ಸೋಲಿಸಲು ಆಕೆಯ 'ವ್ಯಭಿಚಾರ'ದ ಬಗ್ಗೆ ಸಾಂದರ್ಭಿಕ ಸಾಕ್ಷ್ಯದ ಮೂಲಕ ಸಾಬೀತುಪಡಿಸಿದರೆ ಸಾಕಾಗುತ್ತದೆ. ಸಂದರ್ಭಗಳು ತಾರ್ಕಿಕವಾಗಿ ಆ ತೀರ್ಮಾನಕ್ಕೆ ಕಾರಣವಾದರೆ, ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ವ್ಯಭಿಚಾರವನ್ನು ಸ್ಥಾಪಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಸೆಕ್ಷನ್ 125 ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯವು ನೀಡಿದ ಜೀವನಾಂಶದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಪರಿಷ್ಕರಣಾ ಅರ್ಜಿಯನ್ನು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಕೌಸೆರ್ ಎಡಪ್ಪಗತ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
"..... ಪತ್ನಿಯು ವ್ಯಭಿಚಾರದಲ್ಲಿ ವಾಸಿಸುತ್ತಿದ್ದಾಳೆ ಮತ್ತು ಆ ಮೂಲಕ ಜೀವನಾಂಶವನ್ನು ಪಡೆಯಲು ಅನರ್ಹಳಾಗಿದ್ದಾಳೆ ಎಂದು ಪತಿ ಆರೋಪಿಸಿದಾಗ, ಐಪಿಸಿಯ ಈಗ ರದ್ದುಗೊಂಡಿರುವ ಸೆಕ್ಷನ್ 497ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯಂತೆ, ವ್ಯಭಿಚಾರದ ಕೃತ್ಯವನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತುಪಡಿಸುವ ಅಗತ್ಯವಿಲ್ಲ. ಬದಲಾಗಿ, ಸಂಭವನೀಯತೆಗಳ ಸಾಧ್ಯತೆಯನ್ನು ನಿರೂಪಿಸಿದರೂ ಸಾಕು. ವ್ಯಭಿಚಾರವು ಸಾಮಾನ್ಯವಾಗಿ ರಹಸ್ಯವಾಗಿ ಸಂಭವಿಸುತ್ತದೆ. ಇದಕ್ಕೆ ನೇರವಾದ ಪುರಾವೆಗಳನ್ನು ನೀಡಲು ಎಲ್ಲ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಹಾಗಾಗಿ, ಸಂದರ್ಭಗಳು ತಾರ್ಕಿಕವಾಗಿ ಆ ತೀರ್ಮಾನಕ್ಕೆ ಕಾರಣವಾದರೆ, ವ್ಯಭಿಚಾರವನ್ನು ಹೆಚ್ಚಾಗಿ ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಸ್ಥಾಪಿಸಬಹುದು." ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರರಕಣ: Jinesh C.R. v. Aswathy P.R. (2025:KER:88717)
ಕೇರಳ ಹೈಕೋರ್ಟ್, RPFC 100/2023, Dated 19-11-2025