ಆದಾಯ ಮಿತಿ 8 ಲಕ್ಷ ದಾಟಿದ್ದರೆ ಅಭ್ಯರ್ಥಿಗೆ ಹಿಂದುಳಿದ ಮೀಸಲಾತಿ ಸೌಲಭ್ಯ ದೊರೆಯದು: ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು
ಆದಾಯ ಮಿತಿ 8 ಲಕ್ಷ ದಾಟಿದ್ದರೆ ಅಭ್ಯರ್ಥಿಗೆ ಹಿಂದುಳಿದ ಮೀಸಲಾತಿ ಸೌಲಭ್ಯ ದೊರೆಯದು: ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು
'ಪ್ರವರ್ಗ 2-ಎ (ಹಿಂದುಳಿದ ವರ್ಗ) ಅಡಿಯಲ್ಲಿ ಪೋಷಕರ ವಾರ್ಷಿಕ ಆದಾಯ ನಿಗದಿತ ಮಿತಿಯನ್ನು ದಾಟಿದ್ದರೆ ಅಭ್ಯರ್ಥಿಯು ಕೆನೆ ಪದರ ವ್ಯಾಪ್ತಿಗೆ ಒಳಪಡುತ್ತಾರೆ. ಹಾಗಾಗಿ, ಅವರು ಮೀಸಲಾತಿ ಪತ್ರ ಪಡೆಯಲು ಅನರ್ಹರಾಗುತ್ತಾರೆ' ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
"ಹಿಂದುಳಿದ ವರ್ಷಗಳ ಆಯುಕ್ತರು ವಿರುದ್ಧ ರಾಘವೇಂದ್ರ ಫಕೀರಪ್ಪ ಚಂದ್ರಣ್ಣನವರ್" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಮೇಲ್ಮನವಿಯನ್ನು ಪುರಸ್ಕರಿಸಿದೆ.
'ಅಭ್ಯರ್ಥಿಯ ಪೋಷಕರ ಸಂಬಳವೂ ಸೇರಿದಂತೆ ಎಲ್ಲ ಮೂಲಗಳ ಆದಾಯವನ್ನು ಪರಿಗಣಿಸಬೇಕು. ಒಂದು ವೇಳೆ ಆದಾಯವು ನಿಗದಿತ ಮಿತಿಯನ್ನು ದಾಟಿದ್ದರೆ ಮತ್ತು ಅರ್ಜಿದಾರರು ಆದಾಯ ತೆರಿಗೆ ಪಾವತಿದಾರ ಆಗಿದ್ದರೆ ಆಗ ಅವರಿಗೆ "ಕೆನೆ ಪದರ ನಿಯಮ" ಅನ್ವಯವಾಗುತ್ತದೆ ಮತ್ತು ಅಭ್ಯರ್ಥಿಯು ಪ್ರವರ್ಗ 2-ಎ ಅಡಿ ಮೀಸಲಾತಿಯ ಅಧಿಕಾರ ಹೊಂದುವ ಬೇಡಿಕೆ ಸಲ್ಲಿಸಲು ಅವಕಾಶ ಹೊಂದಿರುವುದಿಲ್ಲ' ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಪ್ರಕರಣದ ವಿವರ:
ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಧಾರವಾಡದ ರಾಘವೇಂದ್ರ ಫಕ್ಕೀರಪ್ಪ ಚಂದ್ರಣ್ಣನವರ ಪ್ರವರ್ಗ 2ಎ (ಕುರುಬ ಜಾತಿ) ಅಡಿ ಆಯ್ಕೆಯಾಗಿದ್ದರು. ಅದರಂತೆ ಮೀಸಲಾತಿ ಪತ್ರಕ್ಕಾಗಿ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನೆ ಸಮಿತಿಗೆ ಅರ್ಜಿ ಸಲ್ಲಿಸಿದ್ದರು.
ಸಮಿತಿಯು, 'ಅಭ್ಯರ್ಥಿಯ ಪೋಷಕರ ಆದಾಯವು ಪ್ರವರ್ಗ-2ಎಗೆ ನಿಗದಿಪಡಿಸಿರುವ ವಾರ್ಷಿಕ ಆದಾಯ ಮಿತಿಯಾದ 28 ಲಕ್ಷ ಮೀರುತ್ತಿರುವ ಕಾರಣ ಅವರು ಹಿಂದುಳಿದ ವರ್ಗಗಳಡಿ ಮೀಸಲಾತಿ ಪಡೆಯಲು ಅರ್ಹರಲ್ಲ' ಎಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ರಾಘವೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ 2024ರ ಅಕ್ಟೋಬರ್‌ನಲ್ಲಿ, 'ಅಭ್ಯರ್ಥಿಯು ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ' ಎಂದು ತೀರ್ಪು ನೀಡಿತ್ತು. ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ನ್ಯಾಯಪೀಠದ ಮುಂದೆ ಮೇಲ್ಮನವಿ ಸಲ್ಲಿಸಿತ್ತು.
ಹಿಂದುಳಿದ ವರ್ಷಗಳ ಆಯುಕ್ತರು ವಿರುದ್ಧ ರಾಘವೇಂದ್ರ ಫಕೀರಪ್ಪ ಚಂದ್ರಣ್ಣನವರ್
ಕರ್ನಾಟಕ ಹೈಕೋರ್ಟ್, WA 301/2025, Dated 03-12-2025