ವಕೀಲರ ಸ್ಟಿಕ್ಕರ್ ದುರ್ಬಳಕೆ: ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ- ಪೊಲೀಸರಿಗೆ ಹೈಕೋರ್ಟ್ ಸೂಚನೆ
ವಕೀಲರ ಸ್ಟಿಕ್ಕರ್ ದುರ್ಬಳಕೆ: ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ- ಪೊಲೀಸರಿಗೆ ಹೈಕೋರ್ಟ್ ಸೂಚನೆ
ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡುತ್ತಿರುವ ಬಗ್ಗೆ ಮದ್ರಾಸ್ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೀಗೆ ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡುತ್ತಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಕೆಲ ಲಾಯರ್ ಗಳು ಹಾಗೂ ಖಾಸಗಿ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಅಡ್ವಕೇಟ್ ಸ್ಟಿಕ್ಕರ್ ಹಾಕಿಕೊಂಡು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರು ವಾದಿಸಿ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ಪೊಲೀಸರ ಕ್ರಮದಿಂದ ತಪ್ಪಿಸಿಕೊಳ್ಳಲು ಹಾಗು ಅವರನ್ನು ಬೆದರಿಸಲು ಅಡ್ವಕೇಟ್ ಸ್ಟಿಕ್ಕರ್ ಗಳನ್ನು ಖಾಸಗಿ ವಾಹನಗಳ ಮೇಲೆ ಅಳವಡಿಸಿಕೊಂಡು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರಿಗೆ ಸ್ಟಿಕ್ಕರ್ ಗಳ ಅವಶ್ಯಕತೆ ಇರುವುದಿಲ್ಲ. ಅದೇ ರೀತಿ, ವಕೀಲರು ನ್ಯಾಯಾಲಯದಿಂದ ಹೊರಗೆ ಬಂದ ನಂತರ ಅವರಿಗೆ ಸ್ಟಿಕರ್ ಅವಶ್ಯಕತೆ ಇರುವುದಿಲ್ಲ ಎಂದು ಅರ್ಜಿದಾರರು ವಾದಿಸಿದರು.
ವಕೀಲರು ಹಾಗೂ ಕೆಲ ಖಾಸಗಿ ವ್ಯಕ್ತಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಅಡ್ವಕೇಟ್ ಸ್ಟಿಕ್ಕರ್'ಗಳನ್ನು ಹಾಕಿಕೊಂಡು ಸಂಚಾರ ಅಪರಾಧಗಳಿಂದ ವಿನಾಯ್ತಿ ಪಡೆಯುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಖಾಸಗಿ ವಾಹನಗಳ ಮೇಲೆ 'ಅಡ್ವಕೇಟ್' ಸ್ಟಿಕ್ಕರ್‌ಗಳನ್ನು ಹಾಕಿಕೊಂಡು ಅವುಗಳನ್ನು ದುರ್ಬಳಕೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳವಂತೆ ಎಂದು ಸೂಚನೆ ನೀಡಿತು.
"ಸ್ಟಿಕರ್‌ಳ ದುರ್ಬಳಕೆಯನ್ನು ನಿಯಂತ್ರಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಪೊಲೀಸರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು, ಪೊಲೀಸರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ" ಎಂದು ಹೈಕೋರ್ಟ್ ಪೊಲೀಸರಿಗೆ ಕಿವಿಮಾತು ಹೇಳಿದೆ.