ವಕೀಲರ ವೃತ್ತಿ ಜೀವನದ ಆರಂಭ ಆರ್ಥಿಕ ಸಂಕಷ್ಟದಿಂದ ಕೂಡಿದೆ; ಜೀವನಾಂಶ ಮೊತ್ತವನ್ನು ಕಡಿಮೆಗೊಳಿಸಿದ ಹೈಕೋರ್ಟ್
ವಕೀಲರ ವೃತ್ತಿ ಜೀವನದ ಆರಂಭ ಆರ್ಥಿಕ ಸಂಕಷ್ಟದಿಂದ ಕೂಡಿದೆ; ಜೀವನಾಂಶ ಮೊತ್ತವನ್ನು ಕಡಿಮೆಗೊಳಿಸಿದ ಹೈಕೋರ್ಟ್
ಜಿಲ್ಲಾ ನ್ಯಾಯಾಲಯಗಳಲ್ಲಿ ವೃತ್ತಿಯ ಆರಂಭಿಕ ಹಂತದಲ್ಲಿರುವ ವಕೀಲರು ಸಮರ್ಪಕ ಆದಾಯ ಗಳಿಸಲು ಕಷ್ಟಪಡುತ್ತಾರೆ ಎಂದ ಅಲಹಾಬಾದ್ ಹೈಕೋರ್ಟ್
ಜಿಲ್ಲಾ ನ್ಯಾಯಾಲಯಗಳಲ್ಲಿ ವೃತ್ತಿಯ ಆರಂಭಿಕ ಹಂತದಲ್ಲಿರುವ ವಕೀಲರು ಸಮರ್ಪಕ ಆದಾಯ ಗಳಿಸಲು ಕಷ್ಟಪಡುವುದು ಮತ್ತು ಅನೇಕ ಬಾರಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುವುದು ಸಾಮಾನ್ಯ ಜ್ಞಾನವೆಂದು ಗಮನಿಸಿದ ಅಲಹಾಬಾದ್ ಹೈಕೋರ್ಟ್, ಇತ್ತೀಚೆಗೆ ಕಿರಿಯ ವಕೀಲನೊಬ್ಬನು ತನ್ನಿಂದ ಪ್ರತ್ಯೇಕವಾಗಿರುವ ಪತ್ನಿಗೆ ಪಾವತಿಸಬೇಕಿದ್ದ ಜೀವನಾಂಶ/ ಪೋಷಣಾ ಭತ್ಯೆಯ ಮೊತ್ತವನ್ನು ಕಡಿತಗೊಳಿಸಿದೆ.
ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅವರ ಪೀಠವು, ಪಿಲಿಭೀತ್ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪರಿಷ್ಕರಿಸಿ, ಅಭ್ಯಾಸದಲ್ಲಿರುವ ವಕೀಲನಾದ ಗಂಡನ “ಅನಿಶ್ಚಿತ ಹಾಗೂ ಏರಿಳಿತಗೊಳ್ಳುವ ಆದಾಯ”ವನ್ನು ಗಮನದಲ್ಲಿಟ್ಟುಕೊಂಡು, ಮೊದಲು ನಿಗದಿಪಡಿಸಿದ್ದ ರೂ. 5,000 ಜೀವನಾಂಶ/ಪೋಷಣಾ ಭತ್ಯೆ “ಅತಿಯಾಗಿ” ಇದೆ ಎಂದು ತಿಳಿಸಿದೆ.
ಈ ಪೀಠವು, ಮೇ 16ರಂದು ಕುಟುಂಬ ನ್ಯಾಯಾಲಯವು ಪತ್ನಿಗೆ ಮಾಸಿಕ ರೂ.5,000 ಪೋಷಣಾ ಭತ್ಯೆ ಪಾವತಿಸುವಂತೆ ನಿರ್ದೇಶಿಸಿದ್ದ ಆದೇಶವನ್ನು ಪ್ರಶ್ನಿಸಿ ಗಂಡ ಹೀರಾಲಾಲ್ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ವಿಚಾರಣೆ ಮಾಡುತ್ತಿತ್ತು.
ರಿವಿಷನ್ ಅರ್ಜಿಯಲ್ಲಿ ತಿಳಿಸಿದಂತೆ, ಅರ್ಜಿದಾರ ಹೀರಾಲಾಲ್ ಅವರು 2016ರಲ್ಲಿ ಎಲ್‌ಎಲ್‌ಬಿ ಪೂರ್ಣಗೊಳಿಸಿದ್ದು, ಪ್ರಸ್ತುತ ಜಿಲ್ಲಾ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿ ವೃತ್ತಿ ಮಾಡುತ್ತಿದ್ದು, ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಅವರ ಪರ ವಕೀಲರು, ತಮ್ಮ ಕಕ್ಷಿಗಾರರಿಗೆ ಕೆಲ ದಿನಗಳಲ್ಲಿ ಕೇವಲ ರೂ.300–400 ಮಾತ್ರ ಆದಾಯವಾಗುತ್ತದೆ, ಕೆಲ ದಿನಗಳಲ್ಲಿ ಏನೂ ಆದಾಯವಿಲ್ಲ. ಇದರಿಂದ ತಮ್ಮ ಮೂಲ ಜೀವನೋಪಾಯ ವೆಚ್ಚಗಳನ್ನು ಕೂಡ ಪೂರೈಸುವುದು ಅತೀವ ಕಷ್ಟಕರವಾಗುತ್ತಿದೆ ಎಂದು ವಾದಿಸಿದರು.
ಇತ್ತ, ಪ್ರತ್ಯರ್ಜಿದಾರ್ತಿ ಪತ್ನಿಯ ಪರ ವಕೀಲರು ಅರ್ಜಿಯನ್ನು ವಿರೋಧಿಸಿ, ಗಂಡನು ಉತ್ತಮ ಆದಾಯ ಗಳಿಸುತ್ತಿದ್ದಾನೆ ಹಾಗೂ ಅವನಿಗೆ ಸಾಕಷ್ಟು ಭೂಮಿ ಮತ್ತು ಬಾಡಿಗೆ ಆಸ್ತಿಗಳು ಇವೆ ಎಂದು ವಾದಿಸಿದರು.
ನ್ಯಾಯಮೂರ್ತಿ ಸಿಂಗ್ ಅವರು, ವಿವಾಹವಾಗಿರುವುದು ಒಪ್ಪಿತ ವಿಷಯವಾದರೂ, ಗಂಡನಿಗೆ ಸ್ಥಿರ ಆದಾಯವಿದೆ ಎಂಬುದನ್ನು ಸಮರ್ಥಿಸುವ ಯಾವುದೇ ದಾಖಲೆ/ ಸಾಕ್ಷ್ಯವನ್ನು ಪತ್ನಿ ಸಲ್ಲಿಸಿಲ್ಲ ಎಂದು ಗಮನಿಸಿದರು.
ಅದರ ಬದಲು, ಕಾನೂನು ವೃತ್ತಿಯ ಆರ್ಥಿಕ ವಾಸ್ತವತೆಯನ್ನು ನ್ಯಾಯಾಲಯ ನ್ಯಾಯಿಕ ಅವಗಾಹನೆಗೆ ತೆಗೆದುಕೊಂಡಿತು. ನ್ಯಾಯಾಲಯ ಹೀಗಂದು ಗಮನಿಸಿತು:
“ಜಿಲ್ಲಾ ನ್ಯಾಯಾಲಯಗಳಲ್ಲಿ ವೃತ್ತಿಯ ಆರಂಭಿಕ ಹಂತದಲ್ಲಿರುವ ಹೆಚ್ಚಿನ ವಕೀಲರು ಸಮರ್ಪಕ ಆದಾಯ ಗಳಿಸಲು ಕಷ್ಟಪಡುತ್ತಾರೆ ಹಾಗೂ ಅನೇಕ ಬಾರಿ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾರೆ ಎಂಬುದು ಸಾಮಾನ್ಯ ಜ್ಞಾನ.”
ಗಂಡನ ಆದಾಯ “ಅನಿಶ್ಚಿತ ಮತ್ತು ಏರಿಳಿತಗೊಳ್ಳುವ” ಸ್ವರೂಪದಲ್ಲಿದೆ ಎಂದು ಹೇಳಿದ ನ್ಯಾಯಾಲಯ, ಸ್ಥಿರ ಆದಾಯದ ಪುರಾವೆಗಳಿಲ್ಲದ ಸಂದರ್ಭದಲ್ಲಿ ಜೀವನಾಂಶ/ಪೋಷಣಾ ಭತ್ಯೆಯ ಮೊತ್ತವು “ಗಂಡನ ಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಯುಕ್ತ ಮತ್ತು ಸಮಂಜಸವಾಗಿರಬೇಕು” ಎಂದು ತಿಳಿಸಿತು.
ಈ ಹಿನ್ನೆಲೆಯಲ್ಲಿ, ಕೆಳ ನ್ಯಾಯಾಲಯ ನೀಡಿದ ಪೋಷಣಾ ಭತ್ಯೆ ಗಂಡನ ನಿಜವಾದ ಆರ್ಥಿಕ ಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿತು.
ಅಂತಿಮವಾಗಿ, ನ್ಯಾಯಾಲಯವು ರಿವಿಷನ್ ಅರ್ಜಿಯನ್ನು ಭಾಗಶಃ ಅನುಮೋದಿಸಿ, ಗಂಡನು ಪಾವತಿಸಬೇಕಾದ ಮಾಸಿಕ ಜೀವನಾಂಶ/ ಪೋಷಣಾ ಭತ್ಯೆಯನ್ನು ರೂ.5,000ರಿಂದ ರೂ.3,750ಕ್ಕೆ ಕಡಿತಗೊಳಿಸಿತು. ಈ ಕಡಿತವು ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಜಾರಿಯಾಗುತ್ತದೆ.
ಪ್ರಕರಣ ಶೀರ್ಷಿಕೆ: ಶ್ರೀ ಹೀರಾಲಾಲ್ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತೊಬ್ಬರು
ಅಲಹಾಬಾದ್ ಹೈಕೋರ್ಟ್