ದೇಶದಲ್ಲೇ ಅತ್ಯಂತ ಕನಿಷ್ಠ ಸಂಬಳ-ಸವಲತ್ತು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಪಾಡು | ಬಕೆಟ್ ಹಿಡಿಯದ ನಾಯಕತ್ವದಿಂದ ಮಾತ್ರ ಪರಿಹಾರ ಸಾಧ್ಯ
ದೇಶದಲ್ಲೇ ಅತ್ಯಂತ ಕನಿಷ್ಠ ಸಂಬಳ-ಸವಲತ್ತು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಪಾಡು | ಬಕೆಟ್ ಹಿಡಿಯದ ನಾಯಕತ್ವದಿಂದ ಮಾತ್ರ ಪರಿಹಾರ ಸಾಧ್ಯ
ಕರ್ನಾಟಕ ರಾಜ್ಯ ಸರಕಾರಿ ನೌಕರರು ದೇಶದಲ್ಲೇ ಅತ್ಯಂತ ಕನಿಷ್ಠ ಸಂಬಳ ಮತ್ತು ಸವಲತ್ತುಗಳನ್ನು ಪಡೆಯುವ ನೌಕರರು
ನೆರೆಯ ಕೇರಳ ರಾಜ್ಯದ ಸರ್ಕಾರಿ ನೌಕರರ ಸಂಘಟನೆಗಳು 11ನೇ ವೇತನ ಆಯೋಗದ ನಂತರ ಈಗ 12ನೇ ವೇತನ ಆಯೋಗ ರಚನೆಗೆ ಆಗ್ರಹಿಸುತ್ತಿದ್ದು, ತಮ್ಮ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸುವಂತೆ ಒತ್ತಡ ಹೇರುತ್ತಿವೆ. ಕೇಂದ್ರದ ಮಾದರಿಯಲ್ಲಿ ಪೇ ಕಮಿಷನ್ ರಚಿಸದೆ ಸರ್ಕಾರವೇ ನೇರವಾಗಿ ವೇತನ ಪರಿಷ್ಕರಣೆ ಮಾಡುವ ಸಾಧ್ಯತೆಯೂ ಇದೆ.
ಕೇರಳದಲ್ಲಿ 12 ನೇ ವೇತನ ಆಯೋಗಕ್ಕೆ ಸಿದ್ಧತೆಗಳು ನಡೆಯುತ್ತಿದ್ದರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಏಳನೇ ವೇತನ ಆಯೋಗದ ಶಿಫಾರಸುಗಳು ಕಾಲ್ಪನಿಕವಾಗಿ 1.7.2022 ರಿಂದ ಅನ್ವಯವಾಗಿದ್ದು ನೌಕರರಿಗೆ ಆರ್ಥಿಕ ಸೌಲಭ್ಯಗಳು 1.8.2024 ರಿಂದ ದೊರೆತಿವೆ. ವೇತನ ಆಯೋಗಗಳ ರಚನೆಯಲ್ಲಿ ವಿಳಂಬ ಉಂಟಾಗಿರುವುದರಿಂದ ಕೇರಳ ರಾಜ್ಯಕ್ಕೆ ಹೋಲಿಸಿದರೆ ನಮಗೆ ಮೂರು ವೇತನ ಆಯೋಗಗಳ ನಷ್ಟ ಉಂಟಾಗಿದೆ.
1.7.2022 ರಿಂದ ನಮಗೆ ಬಾಕಿ ವೇತನ ಮತ್ತಿತರ ಸೇವಾ ಸೌಲಭ್ಯಗಳು ದೊರೆಯಬೇಕಾಗಿತ್ತು. ಕೇಂದ್ರ ಸರಕಾರಿ ನೌಕರರಿಗೆ ವೇತನ ಪರಿಷ್ಕರಣೆ ಎಷ್ಟೇ ವಿಳಂಬವಾದರೂ ನಿಗದಿತ ದಿನಾಂಕದಿಂದ ಆರ್ಥಿಕ ಸೌಲಭ್ಯ ಬಾಕಿ ವೇತನ ದೊರಕುತ್ತದೆ.
ನಮ್ಮ ರಾಜ್ಯದಲ್ಲಿ 1.7.2022 ರಿಂದ ಕಾಲ್ಪನಿಕ ವೇತನ ನಿಗದಿ ಮಾಡಿರುವುದರಿಂದ 1.7.2022 ರಿಂದ 31.7.2024 ರ ಅವಧಿಯಲ್ಲಿ ನಿವೃತ್ತರಾದ ಸಾವಿರಾರು ನೌಕರರು ನಿವೃತ್ತಿ ಸೌಲಭ್ಯಗಳಲ್ಲಿ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ.
ಇದೀಗ ಕೇಂದ್ರ ಸರಕಾರ ತನ್ನ ನೌಕರರ ವೇತನ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಪರಿಷ್ಕರಿಸಲು ಎಂಟನೇ ವೇತನ ಆಯೋಗವನ್ನು ರಚಿಸಿದೆ. ಕೇಂದ್ರ ಸರಕಾರದ ನೌಕರರಿಗೆ ದಿನಾಂಕ 1-1-2026 ರಿಂದ ವೇತನ ಹೆಚ್ಚಳ ಆಗುತ್ತಿದೆ. ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನ 51,480 ಕ್ಕೆ ನಿಗದಿಯಾಗುವ ಸಾಧ್ಯತೆ ಇದೆ.
ಸಂಬಳ, ಬಡ್ತಿ, ವರ್ಗಾವಣೆ, ಕೆಲಸದ ವಾತಾವರಣ, ಕೆಲಸದ ಸಮಯ ಇತ್ಯಾದಿಗಳ ವಿಷಯದಲ್ಲಿ ಕೇಂದ್ರ ಅಥವಾ ಇತರ ರಾಜ್ಯಗಳ ಸರ್ಕಾರಿ ನೌಕರರನ್ನು ಹೋಲಿಸಿದಾಗ ಕರ್ನಾಟಕ ರಾಜ್ಯದ ಸರಕಾರಿ ನೌಕರರ ಅತ್ಯಂತ ಕಡಿಮೆ ಸಂಬಳ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಸ್ಪಷ್ಟವಾಗಿ ಹೇಳುವುದಾದರೆ, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕರ್ನಾಟಕ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗಿಂತ ಹೆಚ್ಚಿನ ಸಂಬಳ ಮತ್ತು ಸೇವಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಸವಲತ್ತುಗಳು ಮತ್ತು ಭತ್ಯೆಗಳು ಉತ್ತಮವಾಗಿವೆ, ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ:
*ಆರೋಗ್ಯ ಭದ್ರತೆ*
ಅತ್ಯಂತ ಮುಖ್ಯವಾದ ವಿಷಯವೆಂದರೆ ಸ್ವಯಂ ಮತ್ತು ಅವಲಂಬಿತರಿಗೆ, ವಿಶೇಷವಾಗಿ ವೃದ್ಧಾಪ್ಯದ ಪೋಷಕರಿಗೆ ಆರೋಗ್ಯ ಭದ್ರತೆ, ಆದ್ದರಿಂದ ಇಲ್ಲಿ CGHS (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ) ಬರುತ್ತದೆ , ಇದು ಹೆಸರೇ ಸೂಚಿಸುವಂತೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ, ಬ್ಯಾಂಕರ್‌ಗಳು, ಸ್ವಾಯತ್ತ ಸಂಸ್ಥೆಗಳು ಮತ್ತು FCI, KVS, HAL, BHEL, GAIL, NTPC, LIC ಮುಂತಾದ PSU ಗಳು ಸಹ CGHS ಸೌಲಭ್ಯವನ್ನು ಹೊಂದಿಲ್ಲ. ಮತ್ತು ಒಂದು ವಿಷಯವನ್ನು ಗಮನಿಸಬೇಕು: CGHS ನೀಡುವಷ್ಟು ರಕ್ಷಣೆಯನ್ನು ಯಾವುದೇ ವೈದ್ಯಕೀಯ ವಿಮೆ ನಿಮಗೆ ನೀಡುವುದಿಲ್ಲ.
ನಮ್ಮ ರಾಜ್ಯದಲ್ಲಿ ಸರಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಈ ವರ್ಷ ಜಾರಿಗೊಳಿಸಲಾಗಿದೆ. ಆದರೆ ಸದರಿ ಯೋಜನೆಯ ಸರಕಾರಿ ನೌಕರರಿಗೆ ಪ್ರಯೋಜನಕಾರಿಯಾಗಿಲ್ಲ ಎಂಬುದು ಇದೀಗ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ಬಂದ ಬಳಿಕ ನೌಕರರಿಗೆ ಅನುಭವವಾಗಿದೆ.
*ಸಾರಿಗೆ ಭತ್ಯೆ*
ಸಾರಿಗೆ ಭತ್ಯೆಯನ್ನು ಸಂಬಳದ ಒಂದು ಭಾಗವಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ನೀಡಲಾಗುತ್ತದೆ. ಇದಲ್ಲದೆ, TA ಮೇಲೆ DA ಅನ್ನು ಸಹ ನೀಡಲಾಗುತ್ತದೆ. ನಮ್ಮ ರಾಜ್ಯದ ನೌಕರರಿಗೆ ಈ ಸೌಲಭ್ಯ ಇಲ್ಲ.
*ರಜೆ ಪ್ರಯಾಣ ರಿಯಾಯಿತಿ (LTC)* — ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ರಜೆ ಪ್ರಯಾಣ ರಿಯಾಯಿತಿ ಅತ್ಯುತ್ಕೃಷ್ಟವಾಗಿದೆ. ನಮ್ಮ ರಾಜ್ಯದಲ್ಲಿ ಯಾವ ನೌಕರನೂ ಈ ಸವಲತ್ತು ಪಡೆಯಲು ಇಚ್ಛಿಸುವುದಿಲ್ಲ. ಏಕೆಂದರೆ ಕೇವಲ ಸಾರಿಗೆ ವೆಚ್ಚವನ್ನು ಮಾತ್ರ ನೀಡಲಾಗುತ್ತದೆ.
*ತುಟ್ಟಿ ಭತ್ಯೆ* - AICPIN (ಹಣದುಬ್ಬರ)ವನ್ನು ಅವಲಂಬಿಸಿ ಪ್ರತಿ ಆರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವ ತುಟ್ಟಿ ಭತ್ಯೆಯನ್ನು ಮೊದಲು ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ನಮ್ಮ ರಾಜ್ಯವೂ ಸೇರಿ ಉತ್ತರ ಪ್ರದೇಶ ಸರ್ಕಾರವನ್ನು ಹೊರತುಪಡಿಸಿ ಯಾವುದೇ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಮಾನವಾಗಿ ತಮ್ಮ ಉದ್ಯೋಗಿಗಳಿಗೆ ಡಿಎ ಪಾವತಿಸುವುದಿಲ್ಲ.
*ಮಕ್ಕಳ ಶಿಕ್ಷಣ ಭತ್ಯೆ*
ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ (ವಿನಾಯಿತಿಗಳನ್ನು ಹೊರತುಪಡಿಸಿ) ಈ ಸೌಲಭ್ಯವಿದೆ ನಮ್ಮ ರಾಜ್ಯದಲ್ಲಿ ಮಕ್ಕಳ ಶಿಕ್ಷಣ ಭತ್ತ್ಯೆ ದೊರಕುವುದಿಲ್ಲ.
*ವೃತ್ತಪತ್ರಿಕೆ ಮರುಪಾವತಿ ಶುಲ್ಕಗಳು*
ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ (ವಿನಾಯಿತಿಗಳನ್ನು ಹೊರತುಪಡಿಸಿ) ಈ ಸೌಲಭ್ಯ ಇದೆ.
*ದೂರವಾಣಿ ವೆಚ್ಚ ಮರುಪಾವತಿ* - ಕೇಂದ್ರ ಸರ್ಕಾರಿ ನೌಕರರು ದೂರವಾಣಿ ಮೆಚ್ಚಿ ಮರುಪಾವತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
*ಸಕಾಲಿಕ ನೌಕರ ಸ್ನೇಹಿ ವರ್ಗಾವಣೆಗಳು*
ಕೇಂದ್ರ ಸರಕಾರಿ ನೌಕರರಿಗೆ ಬಹುತೇಕ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ, ವರ್ಗಾವಣೆಯ ನಿಯಮಗಳನ್ನು ಪಾಲಿಸಿ ನೌಕರರಿಗೆ ತೊಂದರೆಯಾಗದ ರೀತಿಯಲ್ಲಿ ವರ್ಗಾವಣೆ ನಡೆಯುತ್ತದೆ.
*ಒಳ್ಳೆಯ ವಾತಾವರಣ*
ಸಕಾಲಿಕ ಭಡ್ತಿ, ಕೆಲಸ ಮಾಡುವ ಸ್ಥಳಗಳಲ್ಲಿ ಉತ್ತಮ ವಾತಾವರಣ ಕೇಂದ್ರ ಸರಕಾರಿ ಕಚೇರಿಗಳಲ್ಲಿ ನಿರ್ಮಾಣವಾಗಿದೆ.
ಮೇಲಿನ ಅಂಶಗಳ ಅಭಾವ ರಾಜ್ಯ ಸರ್ಕಾರಿ ನೌಕರರ ಅನುಭವಿಸುತ್ತಿದ್ದಾರೆ.
ಕೇರಳ ರಾಜ್ಯದಲ್ಲಿ ನೌಕರರ ಪರ ಚಿಂತನೆಯ ನೌಕರ ಸಂಘಟನೆಗಳಲ್ಲಿ ಹಾಗೂ ಆಡಳಿತ ಸರಕಾರದ ಮನವೊಲಿಸಿ ಬೇಡಿಕೆಗಳನ್ನು ಈಡೇರಿಸುವ ಚಾಕಚಕ್ಯತೆ ಇದೆ. ಅದೇ ಚಿಂತನೆಯ ನೌಕರರ ಪರವಾಗಿರುವ ರಾಜಕೀಯ ಪಕ್ಷದ ಸರಕಾರ ಆಳ್ವಿಕೆ ನಡೆಸುತ್ತಿರುವುದರಿಂದ ಸಕಾಲಕ್ಕೆ ವೇತನ ಪರಿಷ್ಕರಣೆಯಾಗಿ ಇದೀಗ 12ನೆಯ ವೇತನ ಆಯೋಗ ರಚನೆಗೆ ಸಿದ್ಧತೆ ನಡೆಯುತ್ತಿದೆ.
ಆಡಳಿತ ನಡೆಸುತ್ತಿರುವ ಸರಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಲ್ಲಿ ನೌಕರರ ಬೇಡಿಕೆಗಳು ಖಂಡಿತವಾಗಿಯೂ ಈಡೇರಲು ಸಾಧ್ಯ. ಈ ಹಿಂದೆ ನಮ್ಮ ರಾಜ್ಯದ ನೌಕರ ಸಂಘಟನೆ ರಾಜ್ಯದ ಸಮಸ್ತ ನೌಕರರನ್ನು ಪ್ರತಿನಿಧಿಸುವ ಏಕೈಕ ಸಂಘಟನೆಯಾಗಿದ್ದು ಜಾತ್ಯತೀತ, ಪಕ್ಷಾತೀತ, ನೌಕರರ ಸ್ನೇಹಿ ಸಂಘಟನೆ ಎಂಬ ಖ್ಯಾತಿ ಪಡೆದು ದೇಶದಲ್ಲೇ ಮಾದರಿ ನೌಕರ ಸಂಘಟನೆಯಾಗಿತ್ತು.
ಇದೀಗ ನೌಕರರ ನ್ಯಾಯಯುತ ಬೇಡಿಕೆಗಳು ಈಡೇರುತ್ತಿಲ್ಲ. ಇದಕ್ಕೆ ಉದಾಹರಣೆ ಎಂದರೆ ಹಳೆಯ ಪಿಂಚಣಿ ಪದ್ಧತಿಯನ್ನು ರಾಜ್ಯದ ನೌಕರರಿಗೆ ಇದುವರೆಗೂ ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯದ ನೌಕರ ಸಂಘಟನೆ ವಿಫಲವಾಗಿರುವುದು. ಈ ವೈಫಲ್ಯ ರಾಜ್ಯದ ನೌಕರರಲ್ಲಿ ಹತಾಶೆ ಮೂಡಿಸಿದ್ದು ಸಂಘಟನೆಯ ಮೇಲಿನ ನಂಬಿಕೆ ಕುಸಿಯುತ್ತಿದೆ.
ಸಂಘಟನೆಯಲ್ಲಿ ತೋರಿಕೆಗೆ ನೌಕರ ಪ್ರೇಮವಿದೆ. ಒಳಗೆ ಸ್ವಜನ ಮೋಹ. ಸತ್ಯದ ಮುಖವನ್ನು ಮರೆ ಮಾಚುತ್ತಿರುವ ಸುವರ್ಣ ಪಾತ್ರೆ. ಜಾತಿ, ಮತ, ಭಾಷೆ, ಸ್ವಾರ್ಥಗಳ ತೊತ್ತಳ ತುಳಿತ. ಇವುಗಳ ಕಾಲಡಿಯಲ್ಲಿ ಸಿಕ್ಕಿದ ನಮ್ಮ ರಾಜ್ಯದ ಬಡ ಸರಕಾರಿ ನೌಕರ ನುಚ್ಚು ನುರಿ ಆಗದಿದ್ದರೆ ಅದು ನಿಜಕ್ಕೂ ಪವಾಡ.
ತಮ್ಮ ಸ್ವಾರ್ಥ ಸಾಧನೆಗಾಗಿ ಕಂಡ ಕಂಡವರ ಬಾಲ ಹಿಡಿಯದ, ಆರ್ಥಿಕ ಆಮಿಷಗಳಿಗೆ ಹಾತೊರೆಯದ, ನಿಸ್ವಾರ್ಥ ಮನೋಭಾವದ ಧುರೀಣರನ್ನು ಸಂಘಟನೆಯ ನಾಯಕತ್ವಕ್ಕೆ ಆರಿಸಿದಾಗ ಮಾತ್ರ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ.
ಒಂದು ವೇಳೆ ವ್ಯತಿರಿಕ್ತವಾಗಿ ನಡೆದಾಗ ಅಧಿಕಾರದಿಂದ ಕೆಳಗಿಳಿಸುವಂತಹ ಮಹಾ ಶಕ್ತಿ ಸಾಮಾನ್ಯ ನೌಕರರಿಗೆ ಬಂದಾಗ ಮಾತ್ರ ನಮ್ಮ ಭಾಗ್ಯೋದಯದ ಬಾಗಿಲು ತೆರೆಯಲಿದೆ.