-->
ಕೌಟುಂಬಿಕ ನ್ಯಾಯಾಲಯಕ್ಕೆ ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಲು ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್‌

ಕೌಟುಂಬಿಕ ನ್ಯಾಯಾಲಯಕ್ಕೆ ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಲು ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್‌

ಕೌಟುಂಬಿಕ ನ್ಯಾಯಾಲಯಕ್ಕೆ ಲುಕ್‌ಔಟ್ ಸುತ್ತೋಲೆ ಜಾರಿಗೊಳಿಸಲು ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್‌





ಜೀವನಾಂಶ ಪಾವತಿಸುವ ಆದೇಶ ಜಾರಿಗೆ ಲುಕ್‌ಔಟ್ ಸರ್ಕ್ಯುಲರ್ (LOC) ಹೊರಡಿಸಲು ಕುಟುಂಬ ನ್ಯಾಯಾಲಯಕ್ಕೆ ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್


ಪತ್ನಿ, ಮಕ್ಕಳು ಹಾಗೂ ಪಾಲಕರ ಪೋಷಣೆಗೆ ಸಂಬಂಧಿಸಿದ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ (CrPC) ಸೆಕ್ಷನ್ 125ರ ಅಡಿಯಲ್ಲಿ ನೀಡಲಾದ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕುಟುಂಬ ನ್ಯಾಯಾಲಯಕ್ಕೆ ಲುಕ್‌ಔಟ್ ಸರ್ಕ್ಯುಲರ್ (LOC) ಹೊರಡಿಸುವ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.


ನ್ಯಾಯಮೂರ್ತಿ ಲಲಿತಾ ಕನ್ನೇಗಂಟಿ ಅವರು, CrPC ಸೆಕ್ಷನ್ 125ರ ಅಡಿಯಲ್ಲಿ ನೀಡುವ ಜೀವನಾಂಶ ಆದೇಶಗಳು ನ್ಯಾಯಾಲಯದ ಆದೇಶಗಳ ಮೂಲಕ ಜಾರಿಗೊಳಿಸಬಹುದಾದ ನಾಗರಿಕ ಬಾಧ್ಯತೆಯನ್ನು (civil obligation) ಸೃಷ್ಟಿಸುತ್ತವೆ ಎಂದು ಗಮನಿಸಿದರು.


ಯಾವುದೇ ಪಕ್ಷವು ಆದೇಶವನ್ನು ಪಾಲಿಸಲು ವಿಫಲವಾದಲ್ಲಿ, ಆ ಆದೇಶದ ಜಾರಿಗೆ ಆಸ್ತಿ ಜಪ್ತಿ, ಬಂಧನ ವಾರಂಟ್ ಹೊರಡಿಸುವುದು ಅಥವಾ ನಾಗರಿಕ ಕಾರಾಗೃಹ ಶಿಕ್ಷೆ ವಿಧಿಸುವುದು ಮುಂತಾದ ಪರಿಹಾರ ಕ್ರಮಗಳು ಲಭ್ಯವಿವೆ ಎಂದು ಹೇಳಿದರು. ಲುಕ್‌ಔಟ್ ಸರ್ಕ್ಯುಲರ್‌ಗಳ ಉದ್ದೇಶವು ಅಪರಾಧ ಆರೋಪಿತರು ಅಥವಾ ಅಪರಾಧಿಗಳು ಕ್ರಿಮಿನಲ್ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವುದನ್ನು ತಡೆಯುವುದಕ್ಕಾಗಿ ಮಾತ್ರವಾಗಿದ್ದು, ಜೀವನಾಂಶ ಬಾಕಿ ಮೊತ್ತ ವಸೂಲಿಗಾಗಿ LOC ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.


ನ್ಯಾಯಾಲಯವು ಮುಂದುವರೆದು, ನ್ಯಾಯಾಲಯದ ಆದೇಶವಿದ್ದರೂ LOC ಅನ್ನು ಮುಂದುವರಿಸುವುದು ಕಾನೂನುಬಾಹಿರವಾಗಿದ್ದು, ನ್ಯಾಯಾಲಯ ನಿಂದನೆಗೂ ಸಮಾನವಾಗುತ್ತದೆ ಮತ್ತು ಭಾರತದ ಸಂವಿಧಾನದ ಕಲಂ 21ರ ಅಡಿಯಲ್ಲಿ ಖಚಿತಪಡಿಸಲಾದ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿತು.


ಅರ್ಜಿದಾರರಾದ ಮೊಹಮ್ಮದ್ ಅಝೀಮ್ ಅವರು, 30.10.2024ರಂದು ಮಂಗಳೂರು ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಪತ್ನಿಯ ಅರ್ಜಿಯನ್ನು ಅನುಮೋದಿಸಿ ಗಂಡನ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆಹೋದರು.


ಅರ್ಜಿದಾರರ ಪರವಾಗಿ, ಜೀವನಾಂಶ ಪಾವತಿ ಆದೇಶ ಜಾರಿಗೆ ಕುಟುಂಬ ನ್ಯಾಯಾಲಯಕ್ಕೆ LOC ಹೊರಡಿಸುವ ನ್ಯಾಯಾಧಿಕಾರವಿಲ್ಲ ಎಂದು ವಾದಿಸಲಾಯಿತು. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ Rajnesh v. Neha and Another [(2021) 2 SCC 324] ತೀರ್ಪನ್ನು ಉಲ್ಲೇಖಿಸಲಾಗಿದ್ದು, ಜೀವನಾಂಶ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಬಲವಂತದ ಜಾರಿ ಕ್ರಮಗಳು (defence striking off ಸೇರಿದಂತೆ) ಡೀಫಾಲ್ಟ್ ಉದ್ದೇಶಪೂರ್ವಕ ಹಾಗೂ ಹಠಮಾರಿ (wilful and contumacious) ಎಂದು ಕಂಡುಬಂದಾಗ ಮಾತ್ರ, ಅದು ಕೂಡ ಕೊನೆಯ ಕ್ರಮವಾಗಿ ಅನುಸರಿಸಬೇಕು ಎಂದು ಹೇಳಲಾಗಿದೆ ಎಂದು ಉಲ್ಲೇಖಿಸಲಾಯಿತು.


ಇನ್ನೊಂದೆಡೆ, ಪ್ರತಿವಾದಿ–ಪತ್ನಿಯ ಪರ ವಕೀಲರು, ಜೀವನಾಂಶದ ಆದೇಶ ಹೊರಡಿಸಿದ ನಂತರ ಅದನ್ನು ಪಾಲಿಸುವುದು ಗಂಡನ ಕರ್ತವ್ಯವಾಗಿದೆ ಎಂದು ವಾದಿಸಿದರು. ಅರ್ಜಿದಾರರು ವಿದೇಶದಲ್ಲಿ ವಾಸಿಸುತ್ತಿದ್ದು, ಆದೇಶವನ್ನು ಪಾಲಿಸದೆ ಇರುವುದರಿಂದ ಕುಟುಂಬ ನ್ಯಾಯಾಲಯಕ್ಕೆ LOC ಹೊರಡಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯಿರಲಿಲ್ಲ ಎಂದು ವಾದಿಸಲಾಯಿತು.


ಹೈಕೋರ್ಟ್ ಅರ್ಜಿದಾರರ ಪರ ಮಂಡಿಸಲಾದ ವಾದಗಳಲ್ಲಿ ತರ್ಕವಿದೆ ಎಂದು ಮನಗಂಡು , CrPC ಸೆಕ್ಷನ್ 125ರ ಅಡಿಯಲ್ಲಿ ನೀಡಲಾದ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕುಟುಂಬ ನ್ಯಾಯಾಲಯಕ್ಕೆ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸುವ ಯಾವುದೇ ಅಧಿಕಾರವಿಲ್ಲ ಎಂದು ತೀರ್ಮಾನಿಸಿತು.


ನ್ಯಾಯಾಲಯವು ಮತ್ತಷ್ಟು ಗಮನಿಸಿದಂತೆ, LOC ಅನ್ನು ಸ್ಥಗಿತಗೊಳಿಸುವ ಆದೇಶ ಹೊರಡಿಸಿದಾಗ, ಅದನ್ನು ತಕ್ಷಣವೇ ಸಂಬಂಧಿಸಿದ ಪ್ರಾಧಿಕಾರಗಳಿಗೆ ತಿಳಿಸಿ LOC ಹಿಂಪಡೆಯುವಂತೆ ಮಾಡುವ ಕರ್ತವ್ಯ ಮನವಿ ಸಲ್ಲಿಸಿದ ಪ್ರಾಧಿಕಾರಕ್ಕೆ (requisitioning authority) ಇದೆ.


ಆದರೆ, ನ್ಯಾಯಾಲಯದ ಆದೇಶಗಳಿದ್ದರೂ ಸಹ, LOC ಹೊರಡಿಸಲು ವಿನಂತಿಸಿದ ಅಧಿಕಾರಿಗಳು ಅವುಗಳನ್ನು ಮುಚ್ಚುವ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾಮಾನ್ಯ ಅಭ್ಯಾಸವಾಗಿಬಿಟ್ಟಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.


ಅದರಂತೆ, ನ್ಯಾಯಾಲಯವು ಪೊಲೀಸ್ ಮಹಾನಿರ್ದೇಶಕರಿಗೆ (Director General of Police) ಅಗತ್ಯ ನಿರ್ದೇಶನಗಳನ್ನು ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಹೊರಡಿಸುವಂತೆ ಆದೇಶಿಸಿ, ಯಾವುದೇ ನ್ಯಾಯಾಲಯ LOC ಅನ್ನು ಸ್ಥಗಿತಗೊಳಿಸಿದಾಗ, ಆ ಮಾಹಿತಿಯನ್ನು ತಕ್ಷಣವೇ ವಲಸೆ ಬ್ಯೂರೋಗೆ (Bureau of Immigration) ತಿಳಿಸಿ LOC ಹಿಂಪಡೆಯುವುದನ್ನು ಖಚಿತಪಡಿಸಬೇಕೆಂದು ಸೂಚಿಸಿತು.


LOC ಹೊರಡಿಸಲು ವಿನಂತಿಸಿದ ಅಧಿಕಾರಿಯ ಮೇಲೆಯೇ ಜವಾಬ್ದಾರಿ ನಿಗದಿಪಡಿಸಬೇಕೆಂದು ಮತ್ತು ಅದರಲ್ಲಿ ವಿಫಲವಾದಲ್ಲಿ ಇಲಾಖಾತ್ಮಕ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಆದೇಶಿಸಿತು. ಇಲ್ಲವಾದರೆ ನ್ಯಾಯಾಲಯದ ಆದೇಶಗಳಿಗೆ ಯಾವುದೇ ಪಾವಿತ್ರ್ಯ ಇರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.


CrPC ಸೆಕ್ಷನ್ 125ರ ಅಡಿಯಲ್ಲಿ ನಡೆಯುವ ಪ್ರಕ್ರಿಯೆಗಳು ಮತ್ತು ಜಾರಿಗೆ ಸಂಬಂಧಿಸಿದ ಎಲ್ಲಾ ನ್ಯಾಯಾಲಯಗಳಿಗೆ ಈ ಆದೇಶದ ಪ್ರತಿಯನ್ನು ವಿತರಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ನ್ಯಾಯಾಲಯ ನಿರ್ದೇಶನ ನೀಡಿತು. ಈ ಪ್ರಕರಣಗಳಲ್ಲಿ ಲುಕ್‌ಔಟ್ ಸರ್ಕ್ಯುಲರ್‌ಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಯಿತು.


ಅರ್ಜಿಯನ್ನು ಅಂಗೀಕರಿಸಿದ ಹೈಕೋರ್ಟ್, ಕುಟುಂಬ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತು.


ಕೇಸ್ ಶೀರ್ಷಿಕೆ: Mohammed Azeem ವಿರುದ್ಧ Sabeeha & Others

ಕೇಸ್ ಸಂಖ್ಯೆ: WRIT PETITION NO. 22223 OF 2025

ಕರ್ನಾಟಕ ಹೈಕೋರ್ಟ್‌


Ads on article

Advertise in articles 1

advertising articles 2

Advertise under the article