-->
ವಿವಾಹ ಪೂರ್ವ ನಾಮನಿರ್ದೇಶನವು ಮದುವೆ ಬಳಿಕ ಸ್ವಯಂಚಾಲಿತವಾಗಿ ಅಮಾನ್ಯವಾಗುತ್ತದೆ - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಾಹ ಪೂರ್ವ ನಾಮನಿರ್ದೇಶನವು ಮದುವೆ ಬಳಿಕ ಸ್ವಯಂಚಾಲಿತವಾಗಿ ಅಮಾನ್ಯವಾಗುತ್ತದೆ - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ವಿವಾಹ ಪೂರ್ವ ನಾಮನಿರ್ದೇಶನವು ಮದುವೆ ಬಳಿಕ ಸ್ವಯಂಚಾಲಿತವಾಗಿ ಅಮಾನ್ಯವಾಗುತ್ತದೆ - ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಸಾಮಾನ್ಯ ಭವಿಷ್ಯ ನಿಧಿ (ಜಿ.ಪಿ.ಎಫ್.) ಯಲ್ಲಿ ತಾಯಿ-ತಂದೆಯ ಪರ ನೌಕರರು ಮಾಡಿರುವ ನಾಮನಿರ್ದೇಶನ ವಿವಾಹವಾದ ನಂತರ ಅಮಾನ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠ 5.12.2025 ರಂದು "ಬೊಳ್ಳ ಮಾಲತಿ ವಿರುದ್ಧ ಬಿ ಸುಗುಣ ಮತ್ತಿತರರು" ಪ್ರಕರಣದಲ್ಲಿ ತೀರ್ಪು ಘೋಷಿಸಿದೆ.


ಒಬ್ಬ ನೌಕರ ವಿವಾಹವಾದ ನಂತರ, ಆತ ತನ್ನ ಹೆತ್ತವರ ಪರ ಮಾಡಿರುವ ನಾಮನಿರ್ದೇಶನ ಜಾರಿಯಲ್ಲಿರುವುದಿಲ್ಲ ಹಾಗೂ ಸಾಮಾನ್ಯ ಭವಿಷ್ಯ ನಿಧಿಯ ಮೊತ್ತವನ್ನು ಮರಣ ಹೊಂದಿದ ನೌಕರನ ಪತ್ನಿ ಮತ್ತು ಪೋಷಕರ ನಡುವೆ ಸಮಾನವಾಗಿ ಹಂಚಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.


ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ರದ್ದುಪಡಿಸಿ, ಮರಣಹೊಂದಿದ ನೌಕರನ ಪತ್ನಿ ಮತ್ತು ತಾಯಿಯ ನಡುವೆ ಸಾಮಾನ್ಯ ಭವಿಷ್ಯ ನಿಧಿಯ ಮೊತ್ತವನ್ನು ಸಮಾನವಾಗಿ ಹಂಚಲು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯು ನೀಡಿದ ತೀರ್ಪನ್ನು ಪುನಃಸ್ಥಾಪಿಸಿತು.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ ಮೃತ ನೌಕರ ಬೊಳ್ಳ ಮೋಹನ್ ಎಂಬುವರು ಜಿಪಿಎಫ್ ಸೇರಿದಂತೆ ಎಲ್ಲಾ ನಿವೃತ್ತಿ ಸೌಲಭ್ಯಗಳಿಗೆ ತನ್ನ ತಾಯಿಯನ್ನು ನಾಮನಿರ್ದೇಶನ ಮಾಡಿದರು. 2003ರಲ್ಲಿ ವಿವಾಹವಾದಾಗ ತಮ್ಮ ಪತ್ನಿಯ ಪರವಾಗಿ ಕೆಲವು ಸೇವಾ ಸವಲತ್ತುಗಳಿಗೆ ನಾಮನಿರ್ದೇಶನಗಳನ್ನು ಬದಲಾಯಿಸಿದರು. ಆದರೆ ಸಾಮಾನ್ಯ ಭವಿಷ್ಯ ನಿಧಿಯ ನಾಮ ನಿರ್ದೇಶನವನ್ನು ಬದಲಾಯಿಸಲಿಲ್ಲ. 2021 ರಲ್ಲಿ ಅವರ ಮರಣಾ ನಂತರ ಅವರ ಪತ್ನಿ ಇತರ ಸೇವಾ ಸೌಲಭ್ಯಗಳನ್ನು ಪಡೆದರು. ಆದರೆ ಸಾಮಾನ್ಯ ಭವಿಷ್ಯ ನಿಧಿಗೆ ಅಧಿಕೃತ ದಾಖಲೆಗಳಲ್ಲಿ ಅವರ ತಾಯಿಯನ್ನು ನಾಮಿನಿ ಎಂದು ತೋರಿಸಿದ್ದರಿಂದ ಸದರಿ ಹಣವನ್ನು ಪತ್ನಿಗೆ ಪಾವತಿಸಲಾಗಿಲ್ಲ.


ಜಿಪಿಎಫ್ ಮೊತ್ತವನ್ನು ತಡೆ ಹಿಡಿದಿರುವುದರಿಂದ ತನಗೆ ಪಾವತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಪತ್ನಿ ಕೇಂದ್ರ ಆಡಳಿತ ನ್ಯಾಯ ಮಂಡಳಿಯಲ್ಲಿ (ಸಿಎಟಿ)ಅರ್ಜಿ ಸಲ್ಲಿಸಿದರು. ಕೇಂದ್ರ ಆಡಳಿತ ನ್ಯಾಯ ಮಂಡಳಿಯು ಪತ್ನಿ ಮತ್ತು ತಾಯಿಯ ನಡುವೆ ಜಿಪಿಎಫ್ ಮೊತ್ತವನ್ನು ಸಮಾನವಾಗಿ ಹಂಚಬೇಕೆಂದು ಆದೇಶಿಸಿತು. ಸದರಿ ಆದೇಶದಿಂದ ಬಾಧಿತಳಾದ ಪತ್ನಿ ಬಾಂಬೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 5756/2024 ಅನ್ನು ದಾಖಲಿಸಿದರು.


ಕೇಂದ್ರ ಆಡಳಿತ ನ್ಯಾಯ ಮಂಡಳಿಯ ಆದೇಶವನ್ನು ರದ್ದುಪಡಿಸಿದ ಬಾಂಬೆ ಹೈಕೋರ್ಟ್ ಸಾಮಾನ್ಯ ಭವಿಷ್ಯ ನಿಧಿಯ ಸಂಪೂರ್ಣ ಮೊತ್ತವನ್ನು ತಾಯಿಗೆ ನೀಡಬೇಕೆಂದು ಆದೇಶಿಸಿತು. ಬಾಂಬೆ ಹೈಕೋರ್ಟಿನ ಆದೇಶದಿಂದ ಬಾಧಿತಳಾದ ಪತ್ನಿಯು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿ ಸಂಖ್ಯೆ 8303/2025 ಅನ್ನು ಸಲ್ಲಿಸಿದರು.


ಮೇಲ್ಮನವಿದಾರಳಾದ ಪತ್ನಿಯ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ಈ ಕೆಳಗಿನ ವಾದ ಮಂಡಿಸಲಾಯಿತು.


ಜಿಪಿಎಫ್ ನಿಯಮಗಳ ಪ್ರಕಾರ ನಾಮನಿರ್ದೇಶನವು ಒಡೆತನದ ಹಕ್ಕನ್ನು ನೀಡುವುದಿಲ್ಲ. ಇದು ನಾಮನಿರ್ದೇಶಿತರಿಗೆ ಮೊತ್ತವನ್ನು ಸ್ವೀಕರಿಸಲು ಮಾತ್ರ ಅಧಿಕಾರವನ್ನು ನೀಡುತ್ತದೆ. ಹಣದ ಸಂಪೂರ್ಣ ಒಡೆತನವು ಕಾನೂನು ಬದ್ಧ ಉತ್ತರಾಧಿಕಾರಿಗಳದ್ದಾಗಿದೆ.


ಯಾವುದೇ ನಾಮನಿರ್ದೇಶನ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಜಿಪಿಎಫ್ ನಿಯಮ 33 (1)(ಬಿ) ಪ್ರಕಾರ ಮೃತನ ನ್ಯಾಯಯುತ ವಾರಸುದಾರರಲ್ಲಿ ಸಮಾನ ಹಂಚಿಕೆಯನ್ನು ಕಡ್ಡಾಯಗೊಳಿಸುತ್ತದೆ.


ಒಂದನೇ ಪ್ರತಿವಾದಿ ಮೃತನ ತಾಯಿಯ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ನಾಮನಿರ್ದೇಶಿತ ವ್ಯಕ್ತಿಗೆ ಮೊತ್ತವನ್ನು ಪಾವತಿಸದೆ ತಡೆಹಿಡಿಯುವಂತಿಲ್ಲ. ಜಿಪಿಎಫ್ ಮೊತ್ತವನ್ನು 1ನೇ ಪ್ರತಿವಾದಿ/ತಾಯಿಗೆ ನೀಡಬೇಕೆಂದು ಬಾಂಬೆ ಹೈಕೋರ್ಟ್ ನೀಡಿದ ತೀರ್ಪು ಕಾನೂನು ಬದ್ಧವಾಗಿದೆ.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ಸಮಕ್ಷಮ ಈ ಕೆಳಗಿನ ವಿವಾದಾಂಶಗಳು ಉದ್ಭವಿಸಿದವು.


1) ಮೃತರ ವಿವಾಹದ ನಂತರ ತಾಯಿಯ ಪರವಾಗಿ ಮಾಡಿದ ನಾಮ ನಿರ್ದೇಶನವು ಅಮಾನ್ಯವಾಗಿದೆಯೆ?


2) ಜಿಪಿಎಫ್ ಮೊತ್ತವನ್ನು ನಾಮಿನಿಗೆ ಮಾತ್ರ ಪಾವತಿಸಬೇಕೇ ಅಥವಾ ಕಾನೂನು ಬದ್ದ ಉತ್ತರಾಧಿಕಾರಿಗಳಿಗೆ ವಿತರಿಸಬೇಕೇ?


ಸರ್ವೋಚ್ಚ ನ್ಯಾಯಾಲಯದ ತಾರ್ಕಿಕತೆ:


ಮೃತ ನೌಕರನ ತಾಯಿಯ ಪರ ಮಾಡಲಾದ ನಾಮನಿರ್ದೇಶನವು ಮೃತ ನೌಕರನು ವಿವಾಹವಾದ ಕ್ಷಣದಿಂದಲೇ ಅಮಾನ್ಯವಾಗುತ್ತದೆ ಎಂದು ಪೀಠ ಹೇಳಿದೆ. ನಾಮನಿರ್ದೇಶನವು ಮಾಲೀಕತ್ವವಲ್ಲ. ಸ್ವೀಕಾರಾರ್ಹತೆಯಾಗಿದೆ ಎಂಬ ಅಭಿಪ್ರಾಯದೊಂದಿಗೆ ಶರತ್ತು ಬದ್ಧ ಅಮಾನ್ಯತೆಯನ್ನು ಎತ್ತಿ ಹಿಡಿಯಲಾಯಿತು.


ನಾಮನಿರ್ದೇಶನವು ಜನರಲ್ ಪ್ರಾವಿಡೆಂಟ್ ಫಂಡ್ ಮೇಲೆ ಯಾವುದೇ ಉತ್ತೇಜಿತ ಹಕ್ಕು ನೀಡುವುದಿಲ್ಲ ಎಂಬ ಸ್ಥಿರವಾದ ಕಾನೂನು ತತ್ವವನ್ನು ಮತ್ತೆ ಒತ್ತಿಹೇಳುತ್ತಾ, ಮೃತ ನೌಕರರ ತಾಯಿ/ಪ್ರತಿವಾದಿ ಸಂಖ್ಯೆ 1 ಅವರಿಗೆ, ಪತ್ನಿ/ ಮೇಲ್ಮನವಿದಾರಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಸಿಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಮೃತ ನೌಕರನು ಕುಟುಂಬವನ್ನು ಹೊಂದಿದ ಕ್ಷಣದಿಂದ, ತಾಯಿಯ ಪರ ಮಾಡಿದ ಹಿಂದಿನ ನಾಮನಿರ್ದೇಶನ ರದ್ದುಗೊಂಡು, ಜಿಪಿಎಫ್ (ಕೇಂದ್ರೀಯ ಸೇವೆ) ನಿಯಮಗಳು, 1960 ರ ನಿಯಮ 33 ಅನ್ವಯ ಜಾರಿಗೆ ಬರುತ್ತದೆ ಮತ್ತು ಅರ್ಹ ಕುಟುಂಬ ಸದಸ್ಯರಿಗೆ ಮೊತ್ತವನ್ನು ಸಮಾನವಾಗಿ ಹಂಚಬೇಕೆಂದು ಪೀಠ ತೀರ್ಮಾನಿಸಿತು.


ತನ್ನ ತೀರ್ಮಾನಕ್ಕೆ ಪೂರಕವಾಗಿ ನ್ಯಾಯಪೀಠವು ಈ ಕೆಳಗಿನ ಸಿದ್ಧ ನಿರ್ಣಯಗಳನ್ನು ಉಲ್ಲೇಖಿಸಿದೆ.


1)ಸರ್ಬತಿ ದೇವಿ ವಿರುದ್ಧ ಉಷಾದೇವಿ 1984

2) ಶಿಪ್ರಾ ಸೆಂಗುಪ್ತಾ ವಿರುದ್ಧ ಮೃದುಲ್ ಸೇನ್ ಗುಪ್ತ 2009

3) ಶಕ್ತಿ ಯೆಜ್ದಾನಿ ವಿರುದ್ಧ ಜಯಾನಂದ್ ಜಯಂತ್ ಸಲ್ಗಾಂವ್ಕರ್ 2024


ಅಂತಿಮ ತೀರ್ಪು:

ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ಅಂಗೀಕರಿಸಿತು. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲಾಯಿತು. ಪತ್ನಿ ಮತ್ತು ತಾಯಿಯ ನಡುವೆ ಜಿಪಿಎಫ್ ಮೊತ್ತವನ್ನು ಸಮಾನವಾಗಿ ವಿತರಿಸಬೇಕೆಂಬ ಕೇಂದ್ರ ನ್ಯಾಯ ಮಂಡಳಿಯ ಆದೇಶವನ್ನು ಪುನಸ್ಥಾಪಿಸಲಾಯಿತು. ಪತ್ನಿ ಈಗಾಗಲೇ ಪಡೆದಿದ್ದ ಅರ್ಧ ಪಾಲನ್ನು ದೃಢೀಕರಿಸಲಾಯಿತು ಮತ್ತು ಹೈಕೋರ್ಟ್ ನಲ್ಲಿ ಠೇವಣಿ ಇಟ್ಟಿದ್ದ ಉಳಿದ ಅರ್ಧ ಭಾಗವನ್ನು ತಾಯಿಗೆ ಬಿಡುಗಡೆ ಮಾಡಲು ಆದೇಶಿಸಲಾಯಿತು


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದಕ್ಷಿಣ ಕನ್ನಡ ನ್ಯಾಯಾಂಗ ಇಲಾಖೆ


Ads on article

Advertise in articles 1

advertising articles 2

Advertise under the article