ರೌಡಿಶೀಟರ್‌ಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ: ಠಾಣೆಗೆ ಕರೆಸಲು ಪೂರ್ವಮಾಹಿತಿ ಅಗತ್ಯ- ಕರ್ನಾಟಕ ಹೈಕೋರ್ಟ್
ರೌಡಿಶೀಟರ್‌ಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ: ಠಾಣೆಗೆ ಕರೆಸಲು ಪೂರ್ವಮಾಹಿತಿ ಅಗತ್ಯ- ಕರ್ನಾಟಕ ಹೈಕೋರ್ಟ್
ರೌಡಿಶೀಟರ್‌ಗಳಿಗೂ ಘನತೆಯಿಂದ ಬದುಕುವ ಹಕ್ಕಿದೆ. ಅವರಿಗೆ ತಮ್ಮ ಇತಿಹಾಸ ಮರೆತು ಬದಲಾಗದು ಅವಕಾಶ ಕಲ್ಪಿಸಿಕೊಡಬೇಕು. ಅವರನ್ನು ಠಾಣೆಗೆ ಕರೆಸಲು ಪೂರ್ವಮಾಹಿತಿ ಅಗತ್ಯವಾಗಿ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
"ಸುನೀಲ್ ಕುಮಾರ್ ಆಲಿಯಾಸ್ ಸೈಲೆಂಟ್ ಸುನೀಲ್" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಆರ್. ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ದಿನಾಂಕ 04-12-2025ರಂದು ಈ ತೀರ್ಪು ನಿಡಿದೆ.
ರೌಡಿ ಶೀಟ್‌ನಲ್ಲಿ ಹೆಸರಿದೆ ಎಂಬ ಒಂದೇ ಕಾರಣಕ್ಕೆ ಪೊಲೀಸರು ರೌಡಿ ಶೀಟರ್ ಗಳನ್ನು ತಮಗಿಷ್ಟ ಬಂದಂತೆ ಠಾಣೆಗೆ ಕರೆತರಬಾರದು. ಅಗತ್ಯ ಇಲ್ಲದಿದ್ದರೂ ಠಾಣೆಯಲ್ಲಿ ಸುದೀರ್ಘ ಕಾಲ ಕಾಯಿಸಬಾರದು ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದ್ದು, ರೌಡಿ ಶೀಟರ್ ಗಳನ್ನು ಠಾಣೆಗೆ ಕರೆಸಲು ನಿಯಮ ಪಾಲಿಸುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದೆ.
ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸುವ ಅಗತ್ಯ ಬಿದ್ದರೆ, ಮೊದಲು ಅವರಿಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಬೇಕು. ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡದೇ ಇದ್ದರೆ, ಅಥವಾ ಠಾಣೆಗೆ ಬರದಿದ್ದಲ್ಲಿ ಮಾತ್ರ ಪೊಲೀಸರು ಅವರಿರುವ ಜಾಗ ಅಥವಾ ಮನೆಗೆ ಹೋಗಿ ಕರೆತರಬಹುದು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ತಮ್ಮ ದೂರವಾಣಿ ಸಂಖ್ಯೆಗಳನ್ನು ರೌಡಿಶೀಟರ್‌ಗಳು ಪೊಲೀಸರಿಗೆ ನೀಡಿರಬೇಕು. ಅಗತ್ಯಬಿದ್ದಾಗ ಪೊಲೀಸರು ಮೊಬೈಲ್ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸೂಚಿಸಿದರೆ, ಅವರ ಮುಂದೆ ಹಾಜರಾಗಬೇಕು. ಒಂದೊಮ್ಮೆ ಹಾಜರಾಗದಿದ್ದರೆ ಪೊಲೀಸರು ರೌಡಿಶೀಟರ್ ಗಳ ಮನೆ ಬಳಿ ಹೋಗಲು ಅಡ್ಡಿಯಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹಾಗೆಯೇ, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರಿಗೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ 6,500 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿದ್ದಾರೆ. ಅವರಿಗೂ ಘನತೆಯಿಂದ ಬದುಕುವ ಹಕ್ಕಿದೆ ಮತ್ತು ಅವರಿಗೆ ತಮ್ಮ ಇತಿಹಾಸ ಮರೆತು ಬದಲಾಗಲು ಅವಕಾಶ ನೀಡಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ರೌಡಿ ಶೀಟರ್ ಗಳನ್ನು ಪೊಲೀಸರು ಠಾಣೆಗೆ ಕರೆತರುವ ವಿಚಾರವಾಗಿ ರೌಡಿ ಶೀಟರ್ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಪ್ರಕ್ರಿಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿಶೀಟರ್ ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಕರೆಸಿ ಎಚ್ಚರಿಸಿದ್ದರು. ಅಲೋಕ್ ಕುಮಾರ್ ವಾರ್ನಿಂಗ್ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸೈಲೆಂಟ್ ಸುನೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಶೀರ್ಷಿಕೆ: ಸುನಿಲ್ ಕುಮಾರ್ ಆಲಿಯಾಸ್ ಸೈಲೆಂಟ್ ಸುನೀಲ್ ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, WP 18789/2019 ದಿನಾಂಕ 04-12-2025