ಜಾಮೀನು ಅರ್ಜಿ ಸಲ್ಲಿಸುವಾಗ ಪೂರ್ವ ವಕೀಲರ ನಿರಪೇಕ್ಷಣೆ, ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್
ಜಾಮೀನು ಅರ್ಜಿ ಸಲ್ಲಿಸುವಾಗ ಪೂರ್ವ ವಕೀಲರ ನಿರಪೇಕ್ಷಣೆ, ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ: ಅಲಹಾಬಾದ್ ಹೈಕೋರ್ಟ್
ದಂಡ ಪ್ರಕ್ರಿಯೆ ಸಂಹಿತೆಯ ಅಡಿಯಲ್ಲಿ ಆರೋಪಿ ಪರ ಜಾಮೀನು ಅರ್ಜಿ ಸಲ್ಲಿಸುವಾಗ ಈ ಹಿಂದೆ ಆರೋಪಿಯನ್ನು ಪ್ರತಿನಿಧಿಸಿದ್ದ ವಕೀಲರ ನಿರಪೇಕ್ಷಣೆ ಅಥವಾ ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಬ್ದೇಶ್ ಕುಮಾರ್ ಚೌಧರಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದ್ದು, ವರದಕ್ಷಿಣೆ ಸಾವು ಪ್ರಕರಣದಲ್ಲಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಶ್ರೀಮತಿ ಮನೋರಮಾ ಶುಕ್ಲಾ ಅವರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಜ್ಯೋತಿ ರಜಪೂತ್ ಎಂಬ ವಕೀಲರು ಎನ್‌ಜಿಓ ಪರವಾಗಿ ಅರ್ಜಿದಾರ ಮಹಿಳೆ ಪರವಾಗಿ ನ್ಯಾಯಪೀಠದ ಮುಂದೆ ಕಲಾಪದಲ್ಲಿ ಭಾಗವಹಿಸಿದ್ದರು. ಹಿಂದಿನ ವಕೀಲರು ನಿರಪೇಕ್ಷಣ ಪತ್ರ (ಎನ್‌ಓಸಿ)ಯನ್ನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.
ಈ ಸಂದರ್ಭದಲ್ಲಿ ನ್ಯಾಯಪೀಠ ಪ್ರಮುಖ ಮಾರ್ಗಸೂಚಿಯನ್ನು ಹೊರಡಿಸಿತು.
ರೆಗ್ಯೂಲರ್ ಜಾಮೀನು, ನಿರೀಕ್ಷಣಾ ಜಾಮೀನು ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಕಾಲತ್‌ನಾಮ ಸಲ್ಲಿಸುವುದು ಕಡ್ಡಾಯವಲ್ಲ.
ಸಂವಿಧಾನದ 22(1)ನೇ ವಿಧಿಯಡಿ ಮತ್ತು ದಂಡ ಪ್ರಕ್ರಿಯಾ ಸಂಹಿತೆಯ 303 ಮತ್ತು 41-D ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗೆ ತನ್ನ ಇಚ್ಚೆಯ ವಕೀಲರ ಮೂಲಕ ನ್ಯಾಯಾಲಯದಲ್ಲಿ ತನ್ನ ಪ್ರಕರಣವನ್ನು ಪ್ರತಿನಿಧಿಸುವುದು ಆತನ ಸಂವಿಧಾನಿಕ ಹಕ್ಕು.
ನಿರಪೇಕ್ಷಣ ಪತ್ರ ಎನ್ನುವುದು ಒಂದು ಉತ್ತಮ ವೃತ್ತಿ ಹವ್ಯಾಸ. ಆದರೆ, ಅದು ಕಾನೂನು ಅಲ್ಲ.