ಪತಿಯನ್ನು 'ಸಾಕು ಇಲಿ' ಕರೆಯುವುದು, ಹೆತ್ತವರನ್ನು ಬಿಡಲು ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ- ಪತ್ನಿಯಿಂದ ವಿಚ್ಚೇದನ ನೀಡಿದ ಹೈಕೋರ್ಟ್
ಪತಿಯನ್ನು 'ಸಾಕು ಇಲಿ' ಕರೆಯುವುದು, ಹೆತ್ತವರನ್ನು ಬಿಡಲು ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ- ಪತ್ನಿಯಿಂದ ವಿಚ್ಚೇದನ ನೀಡಿದ ಹೈಕೋರ್ಟ್
ಪತ್ನಿಯು ತನ್ನ ಗಂಡನನ್ನು 'ಸಾಕು ಇಲಿ' ಎಂದು ಹೀಯಾಳಿಸುವುದು ಮತ್ತು ತನ್ನ ಹೆತ್ತವರನ್ನು ಬಿಟ್ಟು ಬರುವಂತೆ ಪತಿಯನ್ನು ಒತ್ತಾಯಿಸುವುದು ಕ್ರೌರ್ಯಕ್ಕೆ ಸಮ ಎಂದು ಛತ್ತೀಸ್‌ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಛತ್ತೀಸ್‌ಗಢ ಹೈಕೋರ್ಟ್ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪತಿಯು ಕ್ರೌರ್ಯ ಮತ್ತು ತನ್ನ ಪತ್ನಿಯು ಆತನನ್ನು ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿರುವುದನ್ನು ಉಲ್ಲೇಖಿಸಿ ವಿಚ್ಛೇದನವನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ತನ್ನ ಹೆಂಡತಿ ನಿರಂತರವಾಗಿ ತನ್ನ ಹೆತ್ತವರನ್ನು ತ್ಯಜಿಸಿ ಪ್ರತ್ಯೇಕವಾಗಿ ವಾಸಿಸುವಂತೆ ಆತನ ಮೇಲೆ ಒತ್ತಡ ಹೇರುತ್ತಿದ್ದಳು ಎಂದು ಆರೋಪಿಸಿದ್ದನು.
ಪತಿಯು ತನ್ನ ಹೆತ್ತವರ ಜೊತೆಗೆ ವಾಸವಾಗಿದ್ದು, ಅವರಿಗೆ ವಿಧೇಯನಾಗಿರುವುದಕ್ಕೆ ಪತ್ನಿಯು ತಮ್ಮನ್ನು ಹೀಯಾಳಿಸುತ್ತಾರೆ, ಮೌಖಿಕ ನಿಂದನೆಗೆ ಒಳಪಡಿಸುತ್ತಾರೆ. ನಿರ್ದಿಷ್ಟವಾಗಿ "ಪಾಲ್ತೂ ಚೂಹಾ" (ಸಾಕಿದ ಇಲಿ) ಎಂದು ಸಂಬೋಧಿಸುತ್ತಾರೆ ಎಂದು ಆರೋಪಿಸಿದ್ದರು. ಹಾಗೂ ತನ್ನ ತಾಯಿಯ ಸಮ್ಮುಖದಲ್ಲಿಯೇ ಪತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರು ಎಂಬುದಕ್ಕೆ ಪತಿಯು ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿದ್ದರು.
2010ರ ಆಗಸ್ಟ್‌ನಲ್ಲಿ ಪತ್ನಿ ತನ್ನ ವೈವಾಹಿಕ ಮನೆಯನ್ನು ತೊರೆದು ಹೋಗಿದ್ದರು. ಮತ್ತೆ ಆಕೆ ಆ ಮನೆಗೆ ವಾಪಸ್ ಬಂದಿಲ್ಲ. ಇದರಿಂದ ಎರಡು ವರ್ಷಗಳಿಗೂ ಹೆಚ್ಚು ಕಾಲ ಪತ್ನಿ ತನ್ನ ಪತಿಯಿಂದ ಬೇರ್ಪಟ್ಟಿದ್ದರು.
ಪತ್ನಿಯು ತಿಂಗಳಿಗೆ 46,941 ರೂ.ಗಳನ್ನು ಗಳಿಸುತ್ತಿದ್ದರೂ ಕೂಡ ಆಕೆ ಪತಿಯ ವಿರುದ್ಧ ಪ್ರತಿ ತಿಂಗಳು ರೂ. 35,000/-.ಗಳ ಜೀವನಾಂಶ ನೀಡುವಂತೆ ಹಾಗೂ ನಿರ್ಲಕ್ಷ್ಯವನ್ನು ಪ್ರತಿಪಾದಿಸುವ ಮೂಲಕ ಮತ್ತು ದಾಂಪತ್ಯ ಹಕ್ಕುಗಳ ಪುನರ್ ಪ್ರಾಪ್ತಿ ಒತ್ತಾಯಿಸಿ ಪರಿಹಾರ ಕೋರಿದ್ದಳು.
ಹಿಂದೂ ವಿವಾಹ ಕಾಯ್ದೆ, 1955 ರ ಕಲಂ.13(1)(ia) ಮತ್ತು (i)(b) ಅನ್ನು ಉಲ್ಲೇಖಿಸುವ ಮೂಲಕ, ಸಮರ್ಥನೀಯ ಕಾರಣವಿಲ್ಲದೆ, ಸಂಗಾತಿಯು ತನ್ನ ಹೆತ್ತವರಿಂದ ಬೇರ್ಪಡಿಸುವುದು ಮಾನಸಿಕ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.
ಪತಿಯು ತನ್ನ ಹೆತ್ತವರನ್ನು ಬಿಟ್ಟು ಬರುವಂತೆ ಪತ್ನಿಯು ಷರತ್ತುಬದ್ಧವಾಗಿ ಹೇಳುವ ಪಠ್ಯ ಸಂದೇಶಗಳು ಈ ಕ್ರೌರ್ಯದ ಸ್ಪಷ್ಟ ತಪ್ಪೊಪ್ಪಿಗೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಎರಡು ವರ್ಷಗಳಿಗೂ ಹೆಚ್ಚು ಕಾಲ ಯುಕ್ತ ಕಾರಣವಿಲ್ಲದೆ ವೈವಾಹಿಕ ಮನೆಗೆ ಮರಳಲು ಪತ್ನಿಯು ನಿರಂತರವಾಗಿ ನಿರಾಕರಿಸಿದ್ದು, ಪ್ರತ್ಯೇಕ ವಾಸಿಸುತ್ತಿರುವುದಕ್ಕೆ ಶಾಸನಬದ್ಧ ಮಿತಿಯನ್ನು ಪೂರೈಸಿದೆ ಎಂದು ತಿಳಿಸಿದ ನ್ಯಾಯಪೀಠ, ಪತ್ನಿಯ ಮೇಲ್ಮನವಿಯನ್ನು ವಜಾಗೊಳಿಸಿ ಮತ್ತು ಕೌಟುಂಬಿಕ ನ್ಯಾಯಾಲಯದ ವಿಚ್ಛೇದನದ ತೀರ್ಪನ್ನು ದೃಢಪಡಿಸಿತು.
ಸದ್ರಿ ಪ್ರಕರಣದಲ್ಲಿ ಪತ್ನಿ ಗಂಡನಿಗಿಂತ ಹೆಚ್ಚಿನ ಸಂಬಳವನ್ನು ಗಳಿಸುತ್ತಿದ್ದಾರೆ ಎಂಬುದನ್ನು ಗಮನಿಸಿ, ಪತಿಗೆ 5 ಲಕ್ಷ ರೂ.ಗಳ ಶಾಶ್ವತ ಜೀವನಾಂಶವನ್ನು ಪಾವತಿಸಲು ಆದೇಶಿಸಿತು. ಈ ಮೊತ್ತವನ್ನು ಅವರ ಅಪ್ರಾಪ್ತ ಮಗುವಿನ ಪಾಲನೆಯನ್ನು ಪರಿಗಣಿಸಿ ನಿರ್ಧರಿಸಲಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತು.
ಪ್ರಕರಣದ ಶೀರ್ಷಿಕೆ: ಮೋನಿಕಾ ತಾಮ್ರಕರ್ ವಿರುದ್ಧ ಪ್ರಶಾಂತ್ ಕುಮಾರ್ ತಾಮ್ರಕರ್
ಛತ್ತೀಸ್‌ಗಢ ಹೈಕೋರ್ಟ್: FA (MAT) 10/2019, Dated 03.09.2025