ಮರಣಪೂರ್ವ ಹೇಳಿಕೆಗಳು ಹೇಗಿರಬೇಕು? ಯಾವ ಸ್ವರೂಪದ ಹೇಳಿಕೆಗಳನ್ನು ಕೋರ್ಟ್ ನಂಬಬಹುದು?- ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪು
ಮರಣಪೂರ್ವ ಹೇಳಿಕೆಗಳು ಹೇಗಿರಬೇಕು? ಯಾವ ಸ್ವರೂಪದ ಹೇಳಿಕೆಗಳನ್ನು ಕೋರ್ಟ್ ನಂಬಬಹುದು?- ಕರ್ನಾಟಕ ಹೈಕೋರ್ಟ್ ನೀಡಿದ ಮಹತ್ವದ ತೀರ್ಪು
ಮರಣ ಪೂರ್ವ ಹೇಳಿಕೆಗಳು ಮೃತರು ನೀಡುವ ನಿಖರವಾದ ಪದಗಳೊಂದಿಗೆ ಪ್ರಶೋತ್ತರ ರೂಪದಲ್ಲಿದ್ದು, ಸಂಕ್ಷಿಪ್ತವಾಗಿರಬೇಕು. ಅಂತಹ ಹೇಳಿಕೆ ಸಂಪೂರ್ಣ ವಿಶ್ವಾಸಾರ್ಹ ಮತ್ತು ಸತ್ಯವಾದದ್ದು ಎಂಬುದನ್ನು ಸಾಬೀತುಪಡಿಸುವಂತಿರಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ವಿಶ್ಲೇಷಣೆ ಮಾಡಿದೆ.
ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸರ್ಜಾಪುರ ಹೋಬಳಿಯ ರಾಯಸಂದ್ರದ ಸೋಮಶೇಖರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ವಿಶ್ಲೇಷಣೆ ಮಾಡಿದೆ.
ಹಾಗೂ, ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯೊಬ್ಬರನ್ನು ಖುಲಾಸೆಗೊಳಿಸಿದೆ.
'ಮರಣ ಪೂರ್ವ ಹೇಳಿಕೆ ಪ್ರಶೋತ್ತರ ರೂಪದಲ್ಲಿ ಇರಬೇಕು, ಸಂತ್ರಸ್ತರು ಹೇಳಿರುವ ಪದಗಳು ನಿಖರವಾಗಿರಬೇಕು. ಈ ಹೇಳಿಕೆ ಚಿಕ್ಕದಾಗಿ ಸಂಕ್ಷಿಪ್ತವಾಗಿ ಮತ್ತು ವಿಷಯಕ್ಕೆ ತಕ್ಕಂತೆ ಇರಬೇಕು. ಆದರೆ, ಈ ಪ್ರಕರಣದಲ್ಲಿ ಮರಣ ಪೂರ್ವ ಹೇಳಿಕೆ ಎರಡು ಪುಟಗಳಿದ್ದು, ಸಂಪೂರ್ಣ ವಿಶ್ವಾಸಾರ್ಹದಿಂದ ಕೂಡಿಲ್ಲ. ಆದ್ದರಿಂದ ಆರೋಪಿಯನ್ನು ಖುಲಾಸೆಗೊಳಿಸಲಾಗುತ್ತಿದೆ'' ಎಂದು ನ್ಯಾಯಪೀಠ ಆರೋಪಿಯ ಖುಲಾಸೆಗೆ ಕಾರಣವನ್ನು ನೀಡಿದೆ.
'ಜೊತೆಗೆ ಮುಖ, ತುಟಿ ಸೇರಿ ದೇಹದ ನಾನಾ ಭಾಗಗಳಲ್ಲಿ ವ್ಯಾಪಕ ಸುಟ್ಟ ಗಾಯಗಳಾಗಿರುವ ಸ್ಥಿತಿಯಲ್ಲಿ ಅವರ ಮರಣ ಪೂರ್ವ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಹೇಳಿಕೆ ನೀಡಲು ಮೃತರು ಮಾನಸಿಕ ಮತ್ತು ದೈಹಿಕವಾಗಿ ಸಮರ್ಥರಿದ್ದರೇ ಎಂಬುದರ ಬಗ್ಗೆ ಸಂದೇಹವಿದೆ. ಮೃತರ ಹೇಳಿಕೆಯನ್ನು ಪ್ರಕರಣದಲ್ಲಿ ಸಾಕ್ಷಿಗಳಾಗಿರುವ ವೈದ್ಯರು ಮತ್ತು ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದಾಖಲಿಸಿಕೊಂಡಿದ್ದು, ಹೇಳಿಕೆ ದಾಖಲಿಸಿರುವ ವಿಧಾನವು ಅನುಮಾನಾಸ್ಪದವಾಗಿದೆ'' ಎಂದು ನ್ಯಾಯಪೀಠ ಹೇಳಿದೆ.
'ಮರಣಪೂರ್ವ ಹೇಳಿಕೆಯೊಂದನ್ನೇ ಅಧರಿಸಿ ಆರೋಪಿಗೆ ಶಿಕ್ಷೆ ವಿಧಿಸುವುದಕ್ಕೆ ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಮರಣ ಪೂರ್ವ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ನಿಯಮ ಬದ್ಧವಾಗಿ ಸಂಗ್ರಹಿಸಿಲ್ಲ. ಹಾಗಾಗಿ ಈ ಸಾಕ್ಷ್ಯವನ್ನು ತಿರಸ್ಕರಿಸಲಾಗುತ್ತಿದೆ,'' ಎಂದು ನ್ಯಾಯಪೀಠ ತಿಳಿಸಿದೆ.
ಏನಿದು ಪ್ರಕರಣ
ಅರ್ಜಿದಾರರಾದ ಸೋಮಶೇಖರ್, ಮೃತ ಮಹಿಳೆಯೊಂದಿಗೆ ಸುಮಾರು ಒಂದೂವರೆ ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದರು. ಇದು ಆರೋಪಿಯ ಪೋಷಕರಿಗೆ ಗೊತ್ತಾಗಿದೆ. ಆಗ ಆರೋಪಿ ಇಲ್ಲದ ಸಂದರ್ಭದಲ್ಲಿ ಸಂತ್ರಸ್ತೆ ಮನೆಗೆ ತೆರಳಿ ಅಕ್ರಮ ಸಂಬಂಧ ಮುಂದುವರಿಸದಂತೆ ತಿಳಿಸಿದ್ದರು.
ಮರುದಿನ ಬೆಳಗ್ಗೆ ಆರೋಪಿಯು ಸಂತ್ರಸ್ತೆ ಮನೆಗೆ ಬಂದ ಸಂದರ್ಭದಲ್ಲಿ ಈ ವಿಷಯವಾಗಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಸಂತ್ರಸ್ತೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿತ್ತು. ಬಳಿಕ ಸಂತ್ರಸ್ತೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದರು. ಸಾಯುವ ಮುನ್ನ ಮರಣಪೂರ್ವ ಹೇಳಿಕೆ ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಆರೋಪಪಟ್ಟಿಯ ಆಧಾರದಲ್ಲಿ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೊರೆ ಹೋಗಿದ್ದರು.