ಅರ್ಥಹೀನ ವಾದಪತ್ರದ ಜೊತೆ ಕೋರ್ಟ್ ಮೆಟ್ಟಿಲೇರಬಾರದು: ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
ಅರ್ಥಹೀನ ವಾದಪತ್ರದ ಜೊತೆ ಕೋರ್ಟ್ ಮೆಟ್ಟಿಲೇರಬಾರದು: ವಕೀಲರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
ಕ್ಷುಲ್ಲಕ ಮತ್ತು ಅರ್ಥಹೀನ ವಾದಪತ್ರಗಳೊಂದಿಗೆ ವಕೀಲರು ಕೋರ್ಟ್ ಮೆಟ್ಟಿಲೇರಬಾರದು ಎಂದು ಅಲಹಾಬಾದ್ ಹೈಕೋರ್ಟ್ ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕಕ್ಷಿಗಾರರ ಅರ್ಥಹೀನ ವಾದಪತ್ರಗಳನ್ನು ವಕೀಲರು ಸ್ವೀಕರಿಸಬಾರದು. ಇದರಿಂದ ಕೋರ್ಟಿನ ‘ಮೌಲ್ಯಯುತ’ ಸಮಯ ವ್ಯರ್ಥವಾಗುತ್ತದೆ. ಇಂತಹ ಕೃತ್ಯ ಎಸಗಿರುವುದಕ್ಕೆ ಯುವ ವಕೀಲರನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಡಿಆರ್‌ಟಿ ಕಾರ್ಯವಿಧಾನಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಂವಿಧಾನದ ಕಲಂ 227 ಅಡಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಮಾಡಿದ ಅಲಹಾಬಾದ್ ಹೈಕೋರ್ಟ್ ಗಮನಾರ್ಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ನ್ಯಾಯಪೀಠ ವ್ಯಕ್ತಪಡಿಸಿದ ಅಭಿಪ್ರಾಯಗಳು ಹೀಗಿವೆ:
ವಕೀಲನು ತನ್ನ ಕಕ್ಷಿಗಾರನ ಮುಖವಾಣಿ (mouthpiece) ಆಗಬಾರದು ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ಯಾವುದೇ ಕಕ್ಷಿಗಾರ ಅರ್ಥವಿಲ್ಲದ ಅಥವಾ ತೀರಾ ನಿರರ್ಥಕವಾದ ಅರ್ಜಿಯನ್ನು ಸಲ್ಲಿಸುವಂತೆ ಅಥವಾ ಅಂಥ ವಾದವನ್ನು ಮುಂದಿಡುವಂತೆ ಹಠ ಹಿಡಿದರೆ, ಅದನ್ನು ಮಾಡಬೇಡಿ ಎಂದು ವಕೀಲನು ತಮ್ಮ ಕಕ್ಷಿದಾರರಿಗೆ ಬುದ್ದಿವಾದ ಹೇಳಬೇಕು. ಹಾಗೂ ಅಂಥ ಅರ್ಥವಿಲ್ಲದ ವಾದಪತ್ರವನ್ನು ಸ್ವೀಕರಿಸುವುದರಿಂದ ದೂರ ಉಳಿಯಬೇಕು.
ಸಂವಿಧಾನದ ಕಲಂ 227 ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಅರ್ಜಿಯಲ್ಲಿ, 2002ರ SARFAESI ಕಾಯ್ದೆ ಅಡಿಯಲ್ಲಿ ದಾಖಲಾದ ಸೆಕ್ಯುರಿಟೈಜೇಷನ್ ಅರ್ಜಿಯೊಂದರಲ್ಲಿ ಲಕ್ನೋದಲ್ಲಿನ ಸಾಲ ವಸೂಲಾತಿ ನ್ಯಾಯಮಂಡಳಿ (DRT) ರಿಜಿಸ್ಟ್ರಾರ್ ಅವರು ಹೊರಡಿಸಿದ್ದ ನೋಟಿಸ್ ಅನ್ನು ಪ್ರಶ್ನಿಸಲಾಗಿತ್ತು.
ಈ ಸಂಬಂಧವಾಗಿ, ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರನ್ನೊಳಗೊಂಡ ಪೀಠವು ಹೀಗಾಗಿ ಸ್ಪಷ್ಟವಾಗಿ ಗಮನಾರ್ಹವಾಗಿ ಹೇಳಿತು:
“…ಇದನ್ನು ದಾಖಲೆ ಮೇಲೆ ಇರಿಸುವುದು ಅಗತ್ಯವೆಂದು ನ್ಯಾಯಾಲಯ ಭಾವಿಸುತ್ತದೆ. ಇಂದು ಹೊಸ ಅರ್ಜಿಗಳ ಪಟ್ಟಿಯಲ್ಲಿ 207 ಪ್ರಕರಣಗಳು, ಹೆಚ್ಚುವರಿ ಪಟ್ಟಿಯಲ್ಲಿ 128 ಪ್ರಕರಣಗಳು ಹಾಗೂ ಮತ್ತು ದಿನನಿತ್ಯದ ಐಎ (IA) ಪಟ್ಟಿಯಲ್ಲಿ 51 ಪ್ರಕರಣಗಳನ್ನು ಲಿಸ್ಟ್ ಮಾಡಲಾಗಿದೆ.
ಅರ್ಜಿದಾರರ ಪರ ಹಾಜರಾದ ಪ್ರಾಜ್ಞ ವಕೀಲರಿಗೆ ನ್ಯಾಯಾಲಯವು ಪುನಃ ಪುನಃ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡದೆ, ಈಗಾಗಲೇ ಬಾಕಿಯಿರುವ ಸೆಕ್ಯುರಿಟೈಜೇಷನ್ ಅರ್ಜಿಯ ವಿಚಾರಣೆಯಾಗುತ್ತಿರುವ ಡಿಆರ್‌ಟಿ ಮುಂದೆ ತಮ್ಮ ವಾದಗಳನ್ನು ಮುಂದಿಡಲು ಮನವಿ ಮಾಡಿತು. ಆದರೂ ಅವರ ಹಠದ ಕಾರಣದಿಂದಾಗಿ, ಈ ನ್ಯಾಯಾಲಯವು ವಿವರವಾದ ತೀರ್ಪಿನ ಮೂಲಕ ಈ ಅರ್ಜಿಯನ್ನು ತೀರ್ಮಾನಿಸಬೇಕಾಯಿತು. ಇದರಿಂದಾಗಿ ನ್ಯಾಯಾಲಯದ ಅಮೂಲ್ಯ ಸಮಯ ಅನಾವಶ್ಯಕವಾಗಿ ವ್ಯರ್ಥವಾಯಿತು; ಆ ಸಮಯವನ್ನು ಇನ್ನಿತರ ಪ್ರಕರಣಗಳ ನಿರ್ಣಯಕ್ಕೆ ಬಳಸಬಹುದಾಗಿತ್ತು.” ಎಂದು ಹೇಳಿತು.
ವಕೀಲರು ಕೇವಲ 2024ನೇ ವರ್ಷದಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿತರಾಗಿದ್ದಾರೆ ಎಂಬುದನ್ನು ಗಮನಿಸಿದ ಪೀಠವು ಮುಂದುವರಿದು ಹೀಗೆ ಹೇಳಿತು:
“ಸಾಮಾನ್ಯವಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ ಕಾರಣಕ್ಕೆ ಖರ್ಚು (costs) ವಿಧಿಸಬೇಕಾಗಿತ್ತು. ಆದರೆ ಅರ್ಜಿದಾರರ ಪರ ಹಾಜರಾದ learned Counsel ಅವರು ಯುವ ಹಾಗೂ ಅನುಭವವಿಲ್ಲದ ವಕೀಲರಾಗಿದ್ದು, ಕೇವಲ 2024ನೇ ವರ್ಷದಲ್ಲೇ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿತರಾಗಿರುವುದನ್ನು ಪರಿಗಣಿಸಿ, ನ್ಯಾಯಾಲಯವು ಮೃಧು ಧೋರಣೆ ತಳೆದು ಖರ್ಚು ವಿಧಿಸುತ್ತಿಲ್ಲ. ಆದರೂ, ವಕೀಲರು ನ್ಯಾಯಾಲಯದ ಮುಂದೆ ತಮ್ಮ ಗ್ರಾಹಕರನ್ನು ಪ್ರತಿನಿಧಿಸುತ್ತಾರೆ ಎಂಬ ಕಾರಣಕ್ಕೆ ಅವರು ಗ್ರಾಹಕರ ಕೇವಲ ಮಾತಿನ ಯಂತ್ರ ಮಾತ್ರವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಗ್ರಾಹಕ ಅರ್ಥವಿಲ್ಲದ ಅರ್ಜಿಯನ್ನು ಸಲ್ಲಿಸಲು ಅಥವಾ ಅಂಥ ವಾದವನ್ನು ಮುಂದಿಡಲು ಹಠ ಹಿಡಿದರೆ, ವಕೀಲರು ಅದನ್ನು ಮಾಡಬೇಡಿ ಎಂದು ಸಲಹೆ ನೀಡಬೇಕು ಮತ್ತು ಅಂಥ ಅರ್ಥವಿಲ್ಲದ ವಾದಪತ್ರವನ್ನು ಸ್ವೀಕರಿಸುವುದನ್ನು ನಿಲ್ಲಿಸಬೇಕು.”
ಅರ್ಜಿದಾರರ ಪರವಾಗಿ ವಕೀಲರಾದ ಸೂರ್ಯಾಂಶ್ ಕುಮಾರ್ ಅರೋರಾ ಹಾಗೂ ನೋಯೆಲ್ ವಿಕ್ಟರ್ ಹಾಜರಿದ್ದರು.
ಈ ಪ್ರಕರಣದಲ್ಲಿ, ಸೆಕ್ಯುರಿಟೈಜೇಷನ್ ಅರ್ಜಿಯಲ್ಲಿ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ಹೊರಡಿಸುವ ಅಧಿಕಾರವೇ ಇಲ್ಲ, ಆ ಅಧಿಕಾರ ಕೇವಲ ಟ್ರಿಬ್ಯುನಲ್‌ನ ಪೀಠಾಸೀನಾಧಿಕಾರಿ (Presiding Officer) ಅವರಿಗೆ ಮಾತ್ರ ಇದೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ, ಹೈಕೋರ್ಟ್ ಈ ಆಕ್ಷೇಪಣೆಯನ್ನು ತಿರಸ್ಕರಿಸಿ, DRT (Procedure) Rules, 1993 ಅಡಿಯಲ್ಲಿ ರಿಜಿಸ್ಟ್ರಾರ್ ಅವರಿಗೆ ಅರ್ಜಿಗಳನ್ನು ಪರಿಶೀಲಿಸುವುದು, ದಿನಾಂಕ ನಿಗದಿಪಡಿಸುವುದು ಮತ್ತು ಅಧ್ಯಕ್ಷಾಧಿಕಾರಿಯ ನಿರ್ದೇಶನಗಳಿಗೆ ಒಳಪಟ್ಟು ನೋಟಿಸ್‌ಗಳನ್ನು ಹೊರಡಿಸುವ ಅಧಿಕಾರ ಇದೆ ಎಂದು ಸ್ಪಷ್ಟಪಡಿಸಿತು.
ನ್ಯಾಯಾಲಯವು, ಎತ್ತಿಹಿಡಿದ ಆಕ್ಷೇಪಣೆ ಸಂಪೂರ್ಣವಾಗಿ ತಾಂತ್ರಿಕ ಸ್ವಭಾವದ್ದಾಗಿದ್ದು, ಸಂವಿಧಾನದ ಕಲಂ 227 ಅಡಿಯಲ್ಲಿ ಹಸ್ತಕ್ಷೇಪ ಮಾಡಲು ಅಗತ್ಯವಿರುವ ಯಾವುದೇ ಗಂಭೀರ ಅನ್ಯಾಯ ಅಥವಾ ನ್ಯಾಯದ ವಿಫಲತೆಯನ್ನು ತೋರಿಸುವುದಿಲ್ಲ ಎಂದು ಗಮನಿಸಿತು.
ಇದಲ್ಲದೆ, ನೋಟಿಸ್ ಹೊರಡಿಸುವುದು ಅಗತ್ಯವಿರುವ ಪ್ರಕ್ರಿಯಾತ್ಮಕ ಹಂತವಾಗಿದ್ದು, ಮೇಲಾಗಿ, ಹೈಕೋರ್ಟ್ ಅರ್ಜಿಯನ್ನು ಕೈಗೆತ್ತಿಕೊಳ್ಳುವ ಮೊದಲುಲೇ ಈ ವಿಷಯವನ್ನು ಡಿಆರ್‌ಟಿ ಅಧ್ಯಕ್ಷಾಧಿಕಾರಿಯ ಮುಂದೆ ಇಡಲಾಗಿದ್ದರಿಂದ, ಅರ್ಜಿದಾರರ ಅಸಮಾಧಾನವು ಅಕಾಡೆಮಿಕ್ ಸ್ವಭಾವದ್ದಾಗಿ (ಅರ್ಥಹೀನವಾಗಿ) ಮಾರ್ಪಟ್ಟಿದೆ ಎಂದು ನ್ಯಾಯಾಲಯ ಹೇಳಿತು.
ಪೀಠವು ಮತ್ತೊಮ್ಮೆ ಒತ್ತಿ ಹೇಳಿದ್ದು, ಸಂವಿಧಾನದ ಕಲಂ 227 ಅಡಗಿನ ಮೇಲ್ವಿಚಾರಣಾ ಅಧಿಕಾರವು ಪ್ರತಿಯೊಂದು ಪ್ರಕ್ರಿಯಾತ್ಮಕ ಅಸಮಾಧಾನ ಅಥವಾ ತಾಂತ್ರಿಕ ಆಕ್ಷೇಪಣೆಯನ್ನು ಸರಿಪಡಿಸುವುದಕ್ಕಾಗಿ ಅಲ್ಲ; ಅನಾವಶ್ಯಕ ನ್ಯಾಯಾಂಗ ಹೋರಾಟಗಳು ಈಗಾಗಲೇ ಭಾರೀ ಬಾಕಿ ಪ್ರಕರಣಗಳಿಂದ ಬಳಲುತ್ತಿರುವ ನ್ಯಾಯಾಲಯಗಳ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸುವುದಷ್ಟೆ.
ಅರ್ಜಿಯಲ್ಲಿ ಯಾವುದೇ ಅರ್ಹತೆ (merit) ಇರದ ಕಾರಣ, ನ್ಯಾಯಾಲಯವು ಅದನ್ನು ದಾಖಲಿಸುವ ಹಂತದಲ್ಲಿಯೇ ವಜಾಗೊಳಿಸಿತು.
ಕೇಸ್ ಶೀರ್ಷಿಕೆ:
ದಿನೇಶ್ ಕುಮಾರ್ ಜಿಂದಲ್ ವಿರುದ್ಧ ಡೆಟ್ ರಿಕವರಿ ಟ್ರಿಬ್ಯುನಲ್ ಮತ್ತೊಬ್ಬರು