ತಲಾಕ್ ನೀಡುವ ಅಧಿಕಾರ ಯಾರಿಗೆ? ಮುಸ್ಲಿಂ ವಿವಾಹ ರದ್ದುಗೊಳಿಸಲು ಕಿರಿಯ ವಿಭಾಗದ ಸಿವಿಲ್ ಜಡ್ಜ್‌ರಿಗೆ ಅಧಿಕಾರವಿಲ್ಲ: ಗುವಾಹಟಿ ಹೈಕೋರ್ಟ್ ತೀರ್ಪು
ತಲಾಕ್ ನೀಡುವ ಅಧಿಕಾರ ಯಾರಿಗೆ? ಮುಸ್ಲಿಂ ವಿವಾಹ ರದ್ದುಗೊಳಿಸಲು ಕಿರಿಯ ವಿಭಾಗದ ಸಿವಿಲ್ ಜಡ್ಜ್‌ರಿಗೆ ಅಧಿಕಾರವಿಲ್ಲ: ಗುವಾಹಟಿ ಹೈಕೋರ್ಟ್ ತೀರ್ಪು
ದಿನಾಂಕ 12.6.2025 ರಂದು ಗೌಹಾಟಿ ಹೈಕೋರ್ಟ್, ತಲಾಕ್ ದೃಢೀಕರಣ (authentication) ಕೋರಿ ಸಲ್ಲಿಸಿದ ದಾವೆಯಲ್ಲಿ ಸಿವಿಲ್ ನ್ಯಾಯಾಧೀಶರು (ಕಿರಿಯ ವಿಭಾಗ) ಇವರು ಮುಸ್ಲಿಂ ವಿವಾಹವನ್ನು ರದ್ದುಗೊಳಿಸಲು ಅಧಿಕಾರ ಹೊಂದಿಲ್ಲ ಎಂದು ಗುವಾಹಟಿ ಹೈಕೋರ್ಟ್ ತೀರ್ಪು ನೀಡಿದೆ.
ವಿವಾಹ ವಿಚ್ಛೇದನ ಸೇರಿದಂತೆ ದಾಂಪತ್ಯ ವಿವಾದಗಳು ನಿರ್ದಿಷ್ಟ ನ್ಯಾಯಾಧಿಕಾರ ಹೊಂದಿರುವ ನ್ಯಾಯಾಲಯಗಳ ಮೂಲಕವೇ ತೀರ್ಮಾನಗೊಳ್ಳಬೇಕು ಎಂದು ಕೋರ್ಟ್ ಒತ್ತಿಹೇಳಿದ್ದು, “ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ನೀಡಿದ ಡಿಕ್ರಿಯನ್ನು ನ್ಯಾಯಾಧಿಕಾರದ ಕೊರತೆಯಿಂದ ಶೂನ್ಯ (nullity) ಎಂದು ಪರಿಗಣಿಸಬಹುದು” ಎಂದು ಹೇಳಿದೆ.
ಈ ಪ್ರಕರಣವು 2024ರಲ್ಲಿ ಹೈಲಾಕಂಡಿಯಲ್ಲಿ ಒಬ್ಬ ಮುಸ್ಲಿಂ ಪತಿ ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಮುಂದೆ ದಾವೆ ಹೂಡಿ, ತನ್ನ ಪತ್ನಿಗೆ ತಲಾಕ್ ಉಚ್ಚರಿಸಿದ ಪರಿಣಾಮವಾಗಿ ವಿವಾಹವು ರದ್ದಾಗಿದೆ ಎಂದು ಘೋಷಣೆ (declaration) ನೀಡುವಂತೆ ಕೋರಿದಾಗ ಉದ್ಭವಿಸಿತು. ಜೊತೆಗೆ, ಲಿಖಿತ ವಿಚ್ಛೇದನವನ್ನು ದೃಢೀಕರಿಸುವ ಡಿಕ್ರಿಯನ್ನು ನೀಡಬೇಕೆಂದು ಪ್ರಾರ್ಥಿಸಲಾಯಿತು.
2025ರ ಮೇ ತಿಂಗಳಲ್ಲಿ ಕಿರಿಯ ಸಿವಿಲ್ ನ್ಯಾಯಾಲಯ ಪತಿಯ ಮನವಿಯನ್ನು ಅನುಮೋದಿಸಿತ್ತು.
ನಂತರ ಪತ್ನಿ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರ ಮುಂದೆ ಮೇಲ್ಮನವಿ ಸಲ್ಲಿಸಿದರು. ಕೆಳ ನ್ಯಾಯಾಲಯಕ್ಕೆ ವಿಚ್ಛೇದನ ನೀಡುವ ನ್ಯಾಯಾಧಿಕಾರವಿಲ್ಲ ಎಂದು ಹೇಳಿ, ಮೇಲ್ಮನವಿ ನ್ಯಾಯಾಲಯವು ಆ ಡಿಕ್ರಿಯನ್ನು ರದ್ದುಗೊಳಿಸಿತು.
ಈ ಮೇಲ್ಮನವಿ ಆದೇಶವನ್ನು ಪ್ರಶ್ನಿಸಿ, ಪತಿ ಗೌಹಾಟಿ ಹೈಕೋರ್ಟ್‌ಗೆ ಮೊರೆಹೋಗಿ, ತಾನು 1963ರ ಸ್ಪೆಸಿಫಿಕ್ ರಿಲೀಫ್ ಆಕ್ಟ್‌ನ ಸೆಕ್ಷನ್ 34 ಅಡಿಯಲ್ಲಿ ಕೇವಲ ಘೋಷಣಾತ್ಮಕ ಪರಿಹಾರವನ್ನು ಮಾತ್ರ ಬೇಡಿದ್ದೇನೆ, ವಿಚ್ಛೇದನ ಡಿಕ್ರಿಯನ್ನು ಬೇಡಿಲ್ಲ ಎಂದು ವಾದಿಸಿದರು.
ಪತಿ, ತನ್ನ ದಾವೆ ಕೇವಲ ಈಗಾಗಲೇ ಉಚ್ಚರಿಸಿದ ತಲಾಕ್‌ಗೆ ಮಾನ್ಯತೆ ನೀಡುವ ಘೋಷಣಾತ್ಮಕ ಸ್ವಭಾವದ್ದೇ ಹೊರತು, ವಿಚ್ಛೇದನ ಡಿಕ್ರಿಗಾಗಿ ಸಲ್ಲಿಸಿದ ಮನವಿ ಅಲ್ಲ ಎಂದು ವಾದಿಸಿದರು. ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರು ಸ್ಪೆಸಿಫಿಕ್ ರಿಲೀಫ್ ಆಕ್ಟ್ ಅಡಿಯಲ್ಲಿ ಇಂತಹ ಘೋಷಣೆ ನೀಡಲು ಅಧಿಕಾರ ಹೊಂದಿದ್ದಾರೆ ಎಂದು ಅವರ ವಕೀಲರು ವಾದಿಸಿ, ಕೆಳ ನ್ಯಾಯಾಲಯದ ನ್ಯಾಯಾಧಿಕಾರವನ್ನು ಪ್ರಶ್ನಿಸಿದ ಮೇಲ್ಮನವಿ ನ್ಯಾಯಾಲಯ ತಪ್ಪು ಮಾಡಿಕೊಂಡಿದೆ ಎಂದು ಹೇಳಿದರು.
ಘೋಷಣಾತ್ಮಕ ಪರಿಹಾರ ಮತ್ತು ದಾಂಪತ್ಯ ಸಂಬಂಧಿತ ಮೂಲಭೂತ ಪರಿಹಾರಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಿ, ಪ್ರಾಥಮಿಕ ತೀರ್ಪನ್ನು ಉಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದರು.
ಪತ್ನಿ ಪರ ವಕೀಲರು, ಈ ದಾವೆ ವಾಸ್ತವವಾಗಿ ವಿಚ್ಛೇದನ ಡಿಕ್ರಿಯನ್ನೇ ಕೋರುತ್ತಿದ್ದು, ಅದು ಸಂಪೂರ್ಣವಾಗಿ ಕುಟುಂಬ ನ್ಯಾಯಾಲಯದ ಅಥವಾ ಕುಟುಂಬ ನ್ಯಾಯಾಲಯ ಇಲ್ಲದಿದ್ದಲ್ಲಿ ಮೂಲ ನ್ಯಾಯಾಧಿಕಾರ ಹೊಂದಿರುವ ಪ್ರಧಾನ ಸಿವಿಲ್ ನ್ಯಾಯಾಲಯವಾದ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ವಾದಿಸಿದರು. 1984ರ ಫ್ಯಾಮಿಲಿ ಕೋರ್ಟ್ಸ್ ಆಕ್ಟ್‌ನ ಸೆಕ್ಷನ್ 7 ಮತ್ತು 8ರ ಪ್ರಕಾರ, ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಗೆ ವಿಚ್ಛೇದನ ಅಥವಾ ತಲಾಕ್ ವಿಷಯಗಳನ್ನು ವಿಚಾರಣೆ ಮಾಡುವ ಯಾವುದೇ ಅಧಿಕಾರವಿಲ್ಲ ಎಂದು ಅವರು ಒತ್ತಿಹೇಳಿದರು.
ದಾಂಪತ್ಯ ವಿವಾದಗಳನ್ನು ಸಾಮಾನ್ಯ ಸಿವಿಲ್ ನ್ಯಾಯಾಲಯಗಳಲ್ಲಿ ಅಲ್ಲದೆ, ಕುಟುಂಬ ವಿಚಾರಗಳಿಗೆ ವಿಶೇಷವಾಗಿ ನೇಮಕಗೊಂಡ ನ್ಯಾಯಾಲಯಗಳಲ್ಲೇ ವಿಚಾರಣೆ ಮಾಡಬೇಕು ಎಂಬ ಸ್ಥಾಪಿತ ನ್ಯಾಯನಿರ್ಣಯಗಳನ್ನೂ ಪ್ರತಿವಾದಿ ಉಲ್ಲೇಖಿಸಿದರು.
ನ್ಯಾಯಾಲಯವು ದಾವೆಯ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಪಿಟಿಷನರ್ ದಾವೆಯನ್ನು ಘೋಷಣಾತ್ಮಕ ಎಂದು ರೂಪಿಸಿದರೂ, ಬೇಡಿಕೆಯಾದ ಪರಿಹಾರವು ವಾಸ್ತವವಾಗಿ ವಿಚ್ಛೇದನ ಡಿಕ್ರಿಗೆ ಸಮಾನವಾಗಿದೆ ಎಂದು ನಿರ್ಣಯಿಸಿತು. “ಕುಟುಂಬ ವಿವಾದಗಳು, ವಿವಾಹ ರದ್ದತಿ, ಹಿಂದೂ ವಿವಾಹ ಕಾಯ್ದೆ ಅಥವಾ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ವಿಚ್ಛೇದನ ಡಿಕ್ರಿಗಳನ್ನು 1984ರ ಫ್ಯಾಮಿಲಿ ಕೋರ್ಟ್ಸ್ ಆಕ್ಟ್‌ನ ಸೆಕ್ಷನ್ 7 ಮತ್ತು 8ರ ಪ್ರಕಾರ ಕುಟುಂಬ ನ್ಯಾಯಾಲಯವೇ ವಿಚಾರಿಸಬೇಕು; ಕುಟುಂಬ ನ್ಯಾಯಾಲಯ ಇಲ್ಲದಿದ್ದಲ್ಲಿ ಜಿಲ್ಲಾ ನ್ಯಾಯಾಲಯ ಯಾ ಪ್ರಧಾನ ಸಿವಿಲ್ ನ್ಯಾಯಾಲಯ ಈ ವಿಷಯಗಳನ್ನು ಪರಿಶೀಲಿಸಬಹುದು ಎಂಬುದು ಸ್ಥಿರವಾದ ಕಾನೂನು” ಎಂದು ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಮಿತಾಲಿ ಠಾಕೂರಿಯಾ, ಕಿರಿಯ ಸಿವಿಲ್ ನ್ಯಾಯಾಲಯ ನೀಡಿದ ಡಿಕ್ರಿ ನ್ಯಾಯಾಧಿಕಾರದ ಕೊರತೆಯಿಂದ ಅಮಾನ್ಯವಾಗಿದ್ದು, ಮೇಲ್ಮನವಿ ನ್ಯಾಯಾಲಯ ಅದನ್ನು ಸರಿಯಾಗಿ ರದ್ದುಗೊಳಿಸಿ, ದಾಂಪತ್ಯ ಪರಿಹಾರಕ್ಕಾಗಿ ಸಮರ್ಥ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಪಕ್ಷಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಿದ್ದಾರೆ.
ನ್ಯಾಯಾಧಿಕಾರದ ದೋಷವೇ ಡಿಕ್ರಿಯನ್ನು ಶೂನ್ಯಗೊಳಿಸಿರುವುದರಿಂದ, ಇತರ ವಿಷಯಗಳ ಮೌಲ್ಯಮಾಪನ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಸಮರ್ಥಿಸಿ, ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಿಗೆ ವಿಚ್ಛೇದನ ನೀಡಲು ಅಥವಾ ತಲಾಕ್ ಮಾನ್ಯಗೊಳಿಸಲು ಯಾವುದೇ ಅಧಿಕಾರವಿಲ್ಲ ಎಂದು ದೃಢಪಡಿಸಿದೆ. ದಾಂಪತ್ಯ ವಿಚಾರಗಳನ್ನು ತೀರ್ಮಾನಿಸಲು ಸಕ್ಷಮ ನ್ಯಾಯಾಲಯವನ್ನು ಪಕ್ಷಗಳು ಸಂಪರ್ಕಿಸಬೇಕೆಂದು ಕೋರ್ಟ್ ನಿರ್ದೇಶಿಸಿದೆ.
ಪ್ರಕರಣ ಶೀರ್ಷಿಕೆ: ಜಾವೇದ್ ಪರ್ವೇಜ್ ಚೌಧುರಿ ವಿರುದ್ಧ ಬೇಗಮ್ ನಜೀಫಾ ಯಾಸ್ಮಿನ್ ಚೌಧುರಿ
ಪ್ರಕರಣ ಸಂಖ್ಯೆ: RSA/131/2025