ಚಾಲಕನ ಡಿಎಲ್ ಉದ್ಯೋಗದಾತನ ಕರ್ತವ್ಯ: ಲೈಸನ್ಸ್ ರಹಿತ ಅಪಘಾತಕ್ಕೆ ವಿಮಾ ಕಂಪೆನಿ ಹೊಣೆಗಾರ ಅಲ್ಲ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಚಾಲಕನ ಡಿಎಲ್ ಉದ್ಯೋಗದಾತನ ಕರ್ತವ್ಯ: ಲೈಸನ್ಸ್ ರಹಿತ ಅಪಘಾತಕ್ಕೆ ವಿಮಾ ಕಂಪೆನಿ ಹೊಣೆಗಾರ ಅಲ್ಲ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ತನ್ನ ಉದ್ಯೋಗಿ ಚಾಲಕನ ಚಾಲನಾ ಪರವಾನಿಗೆ (ಡ್ರೈವಿಂಗ್ ಲೈಸನ್ಸ್) ಮಾಡಿಸಿಕೊಳ್ಳುವುದು ಉದ್ಯೋಗದಾತನ ಕರ್ತವ್ಯ. ಲೈಸನ್ಸ್ ರಹಿತ ಚಾಲಕ ಮಾಡಿದ ಅಪಘಾತಕ್ಕೆ ವಿಮಾ ಕಂಪೆನಿಯನ್ನು ಹೊಣೆಗಾರನನ್ನಾಗಿ ಮಾಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಂಗಳೂರಿನ ಹೊರವಲಯದ ಬಾಮಿ ಶಾಲಾ ಆಡಳಿತ ಮಂಡಳಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಮನ್ಮಥ ರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಅಪಘಾತಕ್ಕೀಡಾಗಿ ಮೃತಪಟ್ಟ ಚಾಲಕನ ಕುಟುಂಬಕ್ಕೆ 5.38 ಲಕ್ಷ ರೂ. ಪರಿಹಾರ ಪಾವತಿಸುವಂತೆ ಕಾರ್ಮಿಕ ಪರಿಹಾರ ಆಯುಕ್ತರು ನೀಡಿದ್ದ ಆದೇಶ ಪ್ರಶ್ನಿಸಿ ಮಂಗಳೂರು ತಾಲೂಕಿನ ತೆಂಕುಳಿಪಾಡಿಯ ಬಾಲ್ಕಿ ಪ್ರೈಮರಿ ಶಾಲೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಜಾ ಮಾಡಿ ಈ ಆದೇಶ ನೀಡಿದೆ.
2008ರ ಅಗಸ್ಟ್ 14ರಂದು ಬಾಲ್ಕಿ ಶಾಲೆಯ ಬಸ್ ಚಾಲಕ ಬದ್ರುದ್ದೀನ್ ಉಳಾಯಿಬೆಟ್ಟು ಗ್ರಾಮದಿಂದ ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದೊಯ್ಯುತ್ತಿದ್ದರು. ಭಾರಿ ಮಳೆ ಕಾರಣ ನೆರೆ ಬಂದು ಬಸ್ ಫಲ್ಗುಣಿ ನದಿಗೆ ಉರುಳಿತ್ತು. ಪ್ರವಾಹದ ನೀರಿಗೆ ಸಿಲುಕಿ ನಡೆದ ದುರ್ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಶಾಲೆಗೆ ಕಾರ್ಮಿಕ ಆಯುಕ್ತರು ಸೂಚಿಸಿದ್ದರು. ಅಪಘಾತ ನಡೆಯುವ ಎರಡು ತಿಂಗಳ ಮೊದಲೇ ಚಾಲಕ ಬದ್ರುದ್ದೀನ್ ನ ಪರವಾನಗಿ ಅವಧಿ ಮುಗಿದಿದ್ದ ಕಾರಣ ವಿಮಾ ಕಂಪನಿ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಶಾಲಾ ಆಡಳಿತ ಮಂಡಳಿಯೇ ಪರಿಹಾರ ಪಾವತಿಸಬೇಕು ಎಂದು ನಿರ್ದೇಶನ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಚಾಲಕರ ಪರವಾನಗಿ ಪರಿಶೀಲನೆ ಉದ್ಯೋಗದಾತರ ಕರ್ತವ್ಯ. ಇಲ್ಲವಾದರೆ ಅನು ವಿಮಾ ಪಾಲಿಸಿಯ ಷರತ್ತಿನ ಉಲ್ಲಂಘನೆಯಾಗುತ್ತದೆ ಎಂದು ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಆದ್ದರಿಂದ ಈ ಪ್ರಕರಣದಲ್ಲಿ ವಿಮಾ ಕಂಪನಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಚಾಲಕರು ಚಾಲನಾ ಪರವಾನಗಿ ಹೊಂದಿರುವುದನ್ನು ವಾಹನ ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಅಪಘಾತದ ವೇಳೆ ಚಾಲಕನ ಬಳಿ ಚಾಲ್ತಿಯಲ್ಲಿರುವ ಪರವಾನಗಿ ಇಲ್ಲದಿದ್ದರೆ, ವಿಮಾ ಕಂಪನಿಗಳು ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಈ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.