4 ವರ್ಷಗಳಲ್ಲಿ 7 ಬಾರಿ ವರ್ಗಾವಣೆ: ರಾಜಸ್ಥಾನದ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್- ನಿರ್ದೇಶನ ಹೊರಡಿಸಿದ ನ್ಯಾಯಪೀಠ
4 ವರ್ಷಗಳಲ್ಲಿ 7 ಬಾರಿ ವರ್ಗಾವಣೆ: ರಾಜಸ್ಥಾನದ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್- ನಿರ್ದೇಶನ ಹೊರಡಿಸಿದ ನ್ಯಾಯಪೀಠ
ನಾಲ್ಕು ವರ್ಷಗಳಲ್ಲಿ ಏಳು ಬಾರಿ ವರ್ಗಾವಣೆಗೊಂಡಿರುವ ರಾಜಸ್ಥಾನದ ಪ್ರಧಾನ ಜಿಲ್ಲಾ ನ್ಯಾಯಾಧೀಶರ ನೆರವಿಗೆ ಸುಪ್ರೀಂ ಕೋರ್ಟ್ ಧಾವಿಸಿದ್ದು, ಜಿಲ್ಲಾ ನ್ಯಾಯಾಧೀಶರ ಹುದ್ದೆ ಹಾಗೂ ವೇತನವನ್ನು ಸುಪ್ರೀಂ ಕೋರ್ಟ್ ಕಾಪಾಡಿಕೊಂಡು ನಿರ್ದೇಶನ ಹೊರಡಿಸಿದೆ.
2021ರಿಂದ ಏಳು ಬಾರಿ ವರ್ಗಾವಣೆಗೆ ಒಳಗಾದ ರಾಜಸ್ಥಾನದ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ಇದೀಗ ಕಾರ್ಮಿಕ ನ್ಯಾಯಾಲಯ–ಕಮ್–ಕೈಗಾರಿಕಾ ನ್ಯಾಯಮಂಡಳಿಯ ಅಧ್ಯಕ್ಷಾಧಿಕಾರಿಯಾಗಿ ನಿಯೋಜಿಸಿದ ಹಿನ್ನೆಲೆಯಲ್ಲಿ, ಅವರ ಮೂಲ ಹುದ್ದೆ, ವೇತನ ಮತ್ತು ಆಡಳಿತಾತ್ಮಕ ಸ್ಥಾನಮಾನವನ್ನು ಸುಪ್ರೀಂ ಕೋರ್ಟ್ ಕಾಪಾಡುವಂತೆ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತನ್ನನ್ನು ಗುರಿಯಾಗಿಸಿ ಪದೇ ಪದೇ ವರ್ಗಾವಣೆ ಮಾಡಲಾಗಿದೆ ಹಾಗೂ ಅನ್ವಯವಾಗುವ ವರ್ಗಾವಣೆ ನೀತಿಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯವನ್ನು ಮೊರೆಹೋದ ರಾಜಸ್ಥಾನದ ಪ್ರಧಾನ ಜಿಲ್ಲಾ ನ್ಯಾಯಾಧೀಶ ದಿನೇಶ್ ಕುಮಾರ್ ಗುಪ್ತ ಅವರಿಗೆ ಈ ರಿಲೀಫ್ ನೀಡಿತು.
ಸುಪ್ರೀಂ ಕೋರ್ಟ್, ಅವರ ಮನವಿಯನ್ನು ಪರಿಗಣಿಸಲು ಹೈಕೋರ್ಟ್‌ಗೆ ಸೂಚಿಸಿದ ಆದೇಶದ ಹಿನ್ನೆಲೆಯಲ್ಲಿ, ಅವರನ್ನು ಜೈಪುರ್ ಮೆಟ್ರೋಪಾಲಿಟನ್ ಕಾರ್ಮಿಕ ನ್ಯಾಯಾಲಯ–ಕಮ್–ಕೈಗಾರಿಕಾ ನ್ಯಾಯಮಂಡಳಿಯ ಅಧ್ಯಕ್ಷಾಧಿಕಾರಿಯಾಗಿ ನೇಮಿಸಲಾಗಿತ್ತು.
ಆದರೆ, ಈ ನೇಮಕಾತಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಹುದ್ದೆ, ಸ್ಥಾನಮಾನ ಮತ್ತು ಗೌರವಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದರು. ಈ ಆತಂಕವನ್ನು ಗಮನಿಸಿದ ನ್ಯಾಯಾಲಯ, ಕೆಳಗಿನಂತೆ ನಿರ್ದೇಶನ ನೀಡಿತು:
(i) ಅರ್ಜಿದಾರರ ಮೂಲ ಹುದ್ದೆ ಪ್ರಧಾನ ಜಿಲ್ಲಾ ನ್ಯಾಯಾಧೀಶರದೇ ಮುಂದುವರಿಯಬೇಕು.
(ii) ಕಾರ್ಮಿಕ ನ್ಯಾಯಾಲಯ–ಕಮ್–ಕೈಗಾರಿಕಾ ನ್ಯಾಯಮಂಡಳಿಯ ಅಧ್ಯಕ್ಷಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಅವಧಿಯಲ್ಲಿಯೂ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಅನ್ವಯವಾಗುವ ಎಲ್ಲಾ ಭತ್ಯೆಗಳಿಗೆ ಅವರು ಅರ್ಹರಾಗಿರುತ್ತಾರೆ.
(iii) ಅರ್ಜಿದಾರರು ಯಾವುದೇ ಕಿರಿಯ ಅಧಿಕಾರಿಗೆ ಅಥವಾ ಜಿಲ್ಲಾ ನ್ಯಾಯಾಧೀಶರಿಗೆ ವರದಿ ಮಾಡಬಾರದು. ಅವರು ನಿಯೋಜಿಸಲಾದ ಕಾರ್ಮಿಕ ನ್ಯಾಯಾಲಯ–ಕಮ್–ಕೈಗಾರಿಕಾ ನ್ಯಾಯಮಂಡಳಿ ಇರುವ ಸೆಷನ್ಸ್ ವಿಭಾಗದ ಆಡಳಿತ/ಪೋರ್ಟ್‌ಫೋಲಿಯೊ ನ್ಯಾಯಾಧೀಶರ ನೇರ ಆಡಳಿತಾತ್ಮಕ ನಿಯಂತ್ರಣದಲ್ಲಿ ಇರಬೇಕು.
ರಾಜಸ್ಥಾನ ಹೈಕೋರ್ಟ್ ಈ ನಿರ್ದೇಶನಗಳನ್ನು ಅಂಗೀಕರಿಸಿದ ನಂತರ, ಅರ್ಜಿ ವಜಾಗೊಳಿಸಲಾಯಿತು.
ಪ್ರಕರಣದ ಹಿನ್ನೆಲೆ:
ಈ ಆದೇಶವು, ಅರ್ಜಿದಾರರು ಪದೇಪದೇ ಮಾಡಲಾದ ತಮ್ಮ ವರ್ಗಾವಣೆಗಳನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ, 2025ರ ಡಿಸೆಂಬರ್ 19ರಂದು ಸುಪ್ರೀಂ ಕೋರ್ಟ್ ನೀಡಿದ್ದ ಹಿಂದಿನ ತೀರ್ಪಿನ ಮುಂದುವರಿಕೆಯಾಗಿದೆ. ಆ ರಿಟ್ ಅರ್ಜಿಯಲ್ಲಿ, 2025ರ ಡಿಸೆಂಬರ್ 2ರಂದು ಬೀವರ್‌ನಿಂದ ಜಾಲೋರ್‌ಗೆ ವರ್ಗಾವಣೆ ಮಾಡಿದ ಆದೇಶವನ್ನು ಅವರು ಪ್ರಶ್ನಿಸಿದ್ದರು. 2021ರಿಂದ ಇದು ತನ್ನ ಏಳನೇ ವರ್ಗಾವಣೆ ಆಗಿದ್ದು, ಯಾವುದೇ ವರ್ಗಾವಣೆ ಕನಿಷ್ಠ ಅವಧಿಯನ್ನು ಪೂರ್ಣಗೊಳಿಸಿಲ್ಲ ಎಂದು ಅವರು ತಿಳಿಸಿದ್ದರು ಹಾಗೂ ಮರುಮರು ವರ್ಗಾವಣೆಗಳು ಇಚ್ಛಾಚಾರ, ದುರುದ್ದೇಶಪೂರಿತ ಮತ್ತು ಶಿಕ್ಷಾತ್ಮಕವಾಗಿವೆ ಎಂದು ಆರೋಪಿಸಿದ್ದರು.
2013ರಲ್ಲಿ ಪ್ರಕಟಿಸಲಾದ ರಾಜಸ್ಥಾನ ನ್ಯಾಯಾಂಗ ಸೇವಾ ಅಧಿಕಾರಿಗಳ ವರ್ಗಾವಣೆ ನೀತಿಯನ್ನು ಈ ವರ್ಗಾವಣೆಗಳು ಉಲ್ಲಂಘಿಸುತ್ತವೆ ಎಂದು ಅವರು ವಾದಿಸಿದರು. *ಆ ನೀತಿಯು ಕನಿಷ್ಠ ಎರಡು ವರ್ಷಗಳ ಅವಧಿ, ನಿವೃತ್ತಿಗೆ ಸಮೀಪಿಸುವ ಅಧಿಕಾರಿಗಳಿಗೆ ರಕ್ಷಣೆ, ವೈದ್ಯಕೀಯ ಕಾರಣಗಳ ಪರಿಗಣನೆ ಹಾಗೂ ದಂಪತಿ ನಿಯೋಜನಾ ಮಾನದಂಡಗಳನ್ನು ಒದಗಿಸುತ್ತದೆ.*
ಜೈಪುರ ಅಥವಾ ಮುಂಬೈನಲ್ಲಿ ಉನ್ನತ ಚಿಕಿತ್ಸೆಯ ಅಗತ್ಯವಿರುವ ತನ್ನ ಗಂಭೀರ ವೈದ್ಯಕೀಯ ಸ್ಥಿತಿಯನ್ನು ನಿರ್ಲಕ್ಷಿಸಲಾಗಿದೆ, ನಿವೃತ್ತಿಗೆ ಸಮೀಪಿಸುವ ಅಧಿಕಾರಿಗಳನ್ನು ಕಾಡಬಾರದು, ಮತ್ತು ವರ್ಗಾವಣೆಗೆ-ಒಂದು ಬದಲಾವಣೆ ಮಾತ್ರವಾಗಿದ್ದು ಯಾವುದೇ ಆಡಳಿತಾತ್ಮಕ ಅವಶ್ಯಕತೆ ಇಲ್ಲ ಎಂದು ಅವರು ಆರೋಪಿಸಿದರು.
2020–2021ರಲ್ಲಿ ರಾಜಸ್ಥಾನ ಹೈಕೋರ್ಟ್ ಅವರ ವಿರುದ್ಧ ಮಾಡಿದ್ದ ನಿರಂತರ ಪ್ರತಿಕೂಲ ಟೀಕೆಗಳನ್ನೂ ನ್ಯಾಯಪೀಠ ಉಲ್ಲೇಖಿಸಿತು. ಬಳಿಕ, ಆ ಟೀಕೆಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.
ಸಂವಿಧಾನದ ಕಲಂಗಳು 14, 16 ಮತ್ತು 21 ಅನ್ನು ಆಧರಿಸಿ, ಈ ವರ್ಗಾವಣೆಗಳು ಸಮಾನತೆ, ಸೇವೆಯಲ್ಲಿ ಸಮಾನ ಅವಕಾಶ, ಗೌರವ ಮತ್ತು ಆರೋಗ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಹಾಗೂ ವರ್ಗಾವಣೆಗಳನ್ನು ಶಿಕ್ಷಾತ್ಮಕ ಸಾಧನವಾಗಿ ಬಳಸಲಾಗುತ್ತಿದೆ ಎಂದು ಅವರು ವಾದಿಸಿದರು.
2025ರ ಡಿಸೆಂಬರ್ 19ರಂದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ಜೈಪುರ್ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ (ಕಾನೂನು) ಆಗಿ ಅವರ ಹಿಂದಿನ ನಿಯೋಜನೆಗಳು ಸೇವಾ ದಾಖಲೆಯ ಆಧಾರದ ಮೇಲೆ ನಡೆದಿದ್ದು ಶಿಕ್ಷಾತ್ಮಕವೆಂದು ಕರೆಯಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿತು.
ನಿವೃತ್ತಿಗೆ ಸುಮಾರು 10 ತಿಂಗಳು ಮಾತ್ರ ಉಳಿದಿದ್ದು, ಜೈಪುರ್‌ನಲ್ಲಿ ನಿರಂತರ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಹಾಗೂ ಜೈಪುರ್‌ನಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ತಮ್ಮ ಪತ್ನಿಯೂ ನಿವೃತ್ತಿಗೆ ಸಮೀಪಿಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದರು.
ಆದ್ದರಿಂದ, ಅರ್ಜಿದಾರರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಲು ರಾಜಸ್ಥಾನ ಹೈಕೋರ್ಟ್ ಕಾರ್ಯನಿರ್ವಹಣಾ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂ ಕೋರ್ಟ್ ಮನವಿ ಮಾಡಿತ್ತು. ಅದರಂತೆ, ಅವರನ್ನು ಕಾರ್ಮಿಕ ನ್ಯಾಯಾಲಯ–ಕಮ್–ಕೈಗಾರಿಕಾ ನ್ಯಾಯಮಂಡಳಿಯ ಅಧ್ಯಕ್ಷಾಧಿಕಾರಿಯಾಗಿ ನಿಯೋಜಿಸಲಾಯಿತು.
ಕಳೆದ ವರ್ಷದ ಜುಲೈನಲ್ಲಿ ಜೈಪುರ್ ವಾಣಿಜ್ಯ ನ್ಯಾಯಾಲಯದಿಂದ ಬೀವರ್ ಜಿಲ್ಲಾ ನ್ಯಾಯಾಲಯಕ್ಕೆ ದಿನೇಶ್ ಕುಮಾರ್ ಗುಪ್ತ ಅವರ ವರ್ಗಾವಣೆ, ಅದಾನಿ ಗುಂಪಿನ ಕಂಪನಿಯ ವಿರುದ್ಧ ತೀರ್ಪು ನೀಡಿದ ದಿನವೇ ನಡೆದಿತ್ತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕಾಸ್ ಸಿಂಗ್, ವರುಣ್ ಸಿಂಗ್ ಮತ್ತು ಮುದಿತ್ ಗುಪ್ತ (AOR) ಹಾಜರಾದರು.
ಪ್ರಕರಣದ ಶೀರ್ಷಿಕೆ: ದಿನೇಶ್ ಕುಮಾರ್ ಗುಪ್ತ ವಿರುದ್ಧ ಜೋಧ್ಪುರದಲ್ಲಿನ ರಾಜಸ್ಥಾನ ಹೈಕೋರ್ಟ್
ವಾಜ್ಯ ಸಂಖ್ಯೆ: Miscellaneous Application No.79/2026 in W.P.(C) No.1264/2025
ಸುಪ್ರೀಂ ಕೋರ್ಟ್