-->
ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ನ್ಯಾಯಾಲಯದ ಸಿಬ್ಬಂದಿಯೊಬ್ಬರು "ತಿರಸ್ಕರಿಸಲಾಗಿದೆ" ಬದಲಿಗೆ "ಅನುಮತಿಸಲಾಗಿದೆ" ಎಂದು ಟೈಪ್ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಜಾಮೀನು ಮಂಜೂರು ಮಾಡಿ ಸಹಿ ಮಾಡಿದ ನ್ಯಾಯಾಂಗ ಆದೇಶವನ್ನು ರದ್ದುಗೊಳಿಸಬಹುದೇ?


ಸುಪ್ರೀಂ ಕೋರ್ಟ್ ನಕಾರಾತ್ಮಕವಾಗಿ ಉತ್ತರಿಸಿದ್ದು, ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಮರು ಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದೆ.


ನ್ಯಾಯಮೂರ್ತಿಗಳಾದ ಶ್ರೀ ಅರವಿಂದ ಕುಮಾರ್ ಮತ್ತು ಪ್ರಸನ್ನ ಬಿ ವರಾಳೆ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು ದಂ.ಪ್ರ.ಸಂ. ಸೆಕ್ಷನ್ 362 ಅನ್ನು ವಿವೇಚಿಸಿ ಜಾಮೀನು ಆದೇಶವನ್ನು ಹಿಂಪಡೆಯುವ ನ್ಯಾಯಾಧಿಕಾರ ನ್ಯಾಯಾಲಯಗಳಿಗೆ ಇಲ್ಲ ಎಂಬುದಾಗಿ *ರಂಬಳಿ ಸಾಹ್ನಿ ವಿರುದ್ಧ ಬಿಹಾರ ರಾಜ್ಯ* ಶೀರ್ಷಿಕೆಯ ಕ್ರಿಮಿನಲ್ ಅಪೀಲ್ ನಂ.105/2026 ಈ ಪ್ರಕರಣದಲ್ಲಿ ದಿನಾಂಕ 7.1.2026ರಂದು ಮಹತ್ವದ ತೀರ್ಪು ನೀಡಿದೆ.


ಕ್ರಿಮಿನಲ್ ಮೇಲ್ಮನವಿ ನ್ಯಾಯ ವ್ಯಾಪ್ತಿಯಲ್ಲಿ, ದಂ.ಪ್ರ.ಸಂ. 1973 ರ ಸೆಕ್ಷನ್ 362 ಅನ್ನು ವಿವೇಚಿಸಿ, ನ್ಯಾಯಾಲಯವು ಒಮ್ಮೆ ಸಹಿ ಮಾಡಿದ ತೀರ್ಪು ಅಥವಾ ಆದೇಶವನ್ನು ಕೇವಲ ಲಿಪಿಕ ಅಥವಾ ಗಣಿತದ ದೋಷಗಳನ್ನು ತಿದ್ದುಪಡಿ ಮಾಡುವ ಸಂದರ್ಭವನ್ನಷ್ಟೇ ಹೊರತುಪಡಿಸಿ ಮರುಪರಿಶೀಲಿಸುವ ಅಥವಾ ಹಿಂಪಡೆಯುವ ಅಧಿಕಾರ ಹೊಂದಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದೆ.


ಪ್ರಕರಣದ ಸಾರಾಂಶ

23.10.2024 ರಂದು ಎಫ್‌ಐಆರ್ ನಂ.287/2024 ದಾಖಲಿಸಲಾಯಿತು. ಅಭಿಯೋಗದ ಪ್ರಕಾರ, ಗುಪ್ತ ಮಾಹಿತಿಯ ಆಧಾರದ ಮೇಲೆ ಧವನ್ ಕುಮಾರ್ ಎಂಬಾತನನ್ನು ತಡೆದು ಪರಿಶೀಲನೆ ನಡೆಸಿದಾಗ, ಅವನ ವಶದಲ್ಲಿದ್ದ 6.330 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಯಿತು.


ವಿಚಾರಣೆಯಲ್ಲಿ, ಈ ಮಾದಕ ವಸ್ತುವನ್ನು ತನ್ನ ತಂದೆಯು ಮೇಲ್ಮನವಿದಾರನಿಗೆ ಒಪ್ಪಿಸುವ ಸಲುವಾಗಿ ನೀಡಿದ್ದಾನೆ ಎಂಬ ಹೇಳಿಕೆಯನ್ನು ಸಹ ಆರೋಪಿ ನೀಡಿದ್ದನು. ಈ ಹೇಳಿಕೆಯ ಆಧಾರದಲ್ಲಿ ಮೇಲ್ಮನವಿದಾರನನ್ನು ಆರೋಪಿಯಾಗಿ ಸೇರಿಸಲಾಯಿತು.


ಹೈಕೋರ್ಟ್ ಆದೇಶ

ಹೈಕೋರ್ಟ್ ದಿನಾಂಕ 27.08.2025 ರಂದು ಅಪೀಲುದಾರನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ದಿನಾಂಕ 30.08.2025 ರಂದು, ಕೋರ್ಟ್ ಮಾಸ್ಟರ್‌ (ನ್ಯಾಯಪೀಠದ ಸಹಾಯಕ)ನಿಂದ ನಡೆದ ಲಿಪಿಕ ದೋಷವನ್ನು ಆಧಾರವಾಗಿ ಉಲ್ಲೇಖಿಸಿ, ಆ ಜಾಮೀನು ಆದೇಶವನ್ನು ಹಿಂಪಡೆಯಲಾಯಿತು. ಸಂಬಂಧಿತ ಸಿಬ್ಬಂದಿಯಿಂದ ದೋಷವಾಗಿದೆ ಎಂದು ನಿಶ್ಶರ್ಥ ಕ್ಷಮೆಯಾಚನೆ ಸಲ್ಲಿಸಲಾಯಿತು.


ಕಾನೂನು ಪ್ರಶ್ನೆ

ಒಮ್ಮೆ ಸಹಿ ಮಾಡಿದ ಜಾಮೀನು ಆದೇಶವನ್ನು, ದಂ.ಪ್ರ.ಸಂ. ಸೆಕ್ಷನ್ 362ರ ಬೆಳಕಿನಲ್ಲಿ, ಹೈಕೋರ್ಟ್ ಹಿಂಪಡೆಯಲು ಅಥವಾ ಮರುಪರಿಶೀಲಿಸಲು ಅಧಿಕಾರ ಹೊಂದಿದೆಯೇ ಎಂಬುದೇ ವಿಚಾರಣೆಯ ಮುಖ್ಯ ಪ್ರಶ್ನೆಯಾಗಿತ್ತು.


ಸುಪ್ರೀಂ ಕೋರ್ಟ್‌ನ ನಿರ್ಣಯ

ಸುಪ್ರೀಂ ಕೋರ್ಟ್, ಸೆಕ್ಷನ್ 362ರ ಅನ್ವಯತೆಯನ್ನು ಪುನರುಚ್ಚರಿಸಿ, ಈ ಪ್ರಕರಣದಲ್ಲಿ ಯಾವುದೇ ಲಿಪಿಕ ಅಥವಾ ಗಣಿತದ ದೋಷ ಇರಲಿಲ್ಲವೆಂದು ಗಮನಿಸಿದೆ. ಆದ್ದರಿಂದ, ಹೈಕೋರ್ಟ್ ಜಾಮೀನು ಆದೇಶವನ್ನು ಹಿಂಪಡೆದಿರುವುದು ಕಾನೂನುಬಾಹಿರವಾಗಿದ್ದು, ಮೂಲದಿಂದಲೇ ಅಮಾನ್ಯ (void ab initio) ಎಂದು ಘೋಷಿಸಲಾಯಿತು. ಹೀಗಾಗಿ, ಜಾಮೀನು ಹಿಂಪಡೆಯುವ ಆದೇಶವನ್ನು ರದ್ದುಪಡಿಸಲಾಯಿತು.


ಜಾಮೀನಿನ ಹಕ್ಕು

ಮೇಲ್ಮನವಿದಾರನನ್ನು ಕೇವಲ ಸಹಆರೋಪಿಯ ಹೇಳಿಕೆಯ ಆಧಾರದಲ್ಲಿ ಆರೋಪಿಯಾಗಿ ಸೇರಿಸಲಾಗಿದೆ. ಮೇಲ್ಮನವಿದಾರನ ನೈಜ ಪಾತ್ರ ಹಾಗೂ ದೋಷಾರೋಪಣೆ ವಿಚಾರಣೆಯ ನಂತರ ನಿರ್ಧಾರವಾಗಬೇಕಾದ ವಿಷಯವಾಗಿದ್ದು, ಈ ಹಂತದಲ್ಲಿ ಅಪೀಲುದಾರನು ಜಾಮೀನಿಗೆ ಅರ್ಹನಾಗಿದ್ದಾನೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.


ಆದೇಶ

ಮೇಲ್ಮನವಿಯನ್ನು ಅಂಗೀಕರಿಸಿ, ಹೈಕೋರ್ಟ್ ನೀಡಿದ್ದ ಜಾಮೀನು ಹಿಂಪಡೆಯುವ ಆದೇಶವನ್ನು ರದ್ದುಪಡಿಸಿ, ದಿನಾಂಕ 27.08.2025ರ ಜಾಮೀನು ಆದೇಶವನ್ನು ಪುನಃ ಜಾರಿಗೊಳಿಸಲಾಯಿತು. ಸಂಬಂಧಿತ ತನಿಖಾಧಿಕಾರಿಯವರು ಸೂಕ್ತ ಷರತ್ತುಗಳೊಂದಿಗೆ ಮೇಲ್ಮನವಿದಾರನನ್ನು ನಿರೀಕ್ಷಣಾ ಜಾಮೀನಿನ ( anticipatory bail) ಮೇಲೆ ಬಿಡುಗಡೆ ಮಾಡಬೇಕೆಂದು ನಿರ್ದೇಶಿಸಲಾಯಿತು.


ನ್ಯಾಯಾಂಗ ತತ್ವ

ಈ ತೀರ್ಪು,

(i) ದಂ.ಪ್ರ.ಸಂ. ಸೆಕ್ಷನ್ 362ರ ವ್ಯಾಪ್ತಿಯ ಮಿತಿಯನ್ನು,

(ii) ಜಾಮೀನು ಆದೇಶಗಳ ಅಂತಿಮತೆಯನ್ನು, ಮತ್ತು

(iii) ನ್ಯಾಯಾಲಯಗಳ ಮರುಪರಿಶೀಲನಾ ಅಧಿಕಾರದ ನಿರ್ಬಂಧವನ್ನು

ಸ್ಪಷ್ಟವಾಗಿ ಸ್ಥಾಪಿಸುವ ಮಹತ್ವದ ನಿರ್ಣಯವಾಗಿದೆ.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ದ.ಕ. ನ್ಯಾಯಾಂಗ ಇಲಾಖೆ




Ads on article

Advertise in articles 1

advertising articles 2

Advertise under the article