ಪತ್ನಿಯ ವ್ಯಭಿಚಾರದಿಂದ ಜನಿಸಿದ ಮಗುವಿಗೆ ಪತಿಯೇ ಕಾನೂನುಬದ್ಧ ತಂದೆ: ಸುಪ್ರೀಂ ಕೋರ್ಟ್
ಪತ್ನಿಯ ವ್ಯಭಿಚಾರದಿಂದ ಜನಿಸಿದ ಮಗುವಿಗೆ ಪತಿಯೇ ಕಾನೂನುಬದ್ಧ ತಂದೆ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ಹೇಳಿರುವಂತೆ, ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ನೋಡಿದರೆ, ಕಾನೂನುಬದ್ಧ ಮಗು ಅಂದರೆ—ಮಾನ್ಯವಾದ ವಿವಾಹ ಸಂಬಂಧ ಮುಂದುವರಿದಿರುವ ಅವಧಿಯಲ್ಲಿ ಜನಿಸಿದ ಮಗು—ಎಂದರೆ ಅದು ಯಾವಾಗಲೂ ಆ ವಿವಾಹದಲ್ಲಿರುವ ವ್ಯಕ್ತಿಗಳ ಜೈವಿಕ (biological) ಮಗು ಆಗಿರಬೇಕೆಂದೇನೂ ಇಲ್ಲ.
ಕೇವಲ ವ್ಯಭಿಚಾರದ ಆರೋಪಗಳ ಆಧಾರದ ಮೇಲೆ ಡಿಎನ್‌ಎ ಪರೀಕ್ಷೆಗೆ ಆದೇಶ ನೀಡುವುದು, ಪುರುಷನ ಗೌರವ ಮತ್ತು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112 ಅನ್ನು ಉಲ್ಲೇಖಿಸಿ, ವಿವಾಹ ಸಂಬಂಧ ಜಾರಿಯಲ್ಲಿರುವ ಅವಧಿಯಲ್ಲಿ ಪತ್ನಿಯಿಂದ ಜನಿಸಿದ ಮಗುವಿನ ತಂದೆ ಪತಿಯೇ ಎಂಬ ಬಲವಾದ ಕಾನೂನು ಊಹೆ (presumption) ಅಸ್ತಿತ್ವದಲ್ಲಿದೆ ಎಂದು ಹೇಳಿತು.
ಈ ವಿಧಿ, ಕಾನೂನುಬದ್ಧತೆಯ ಕುರಿತು ನಿರ್ಣಾಯಕ ಸಾಕ್ಷ್ಯ (conclusive proof of legitimacy) ಎಂದರೆ ಅದು ಪಿತೃತ್ವಕ್ಕೆ (paternity) ಸಮಾನವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
“ಈ ತತ್ವದ ಉದ್ದೇಶವು ಮಗುವಿನ ಪೋಷಕತ್ವದ ಕುರಿತು ಅನಗತ್ಯ ವಿಚಾರಣೆಗಳನ್ನು ತಡೆಯುವುದಾಗಿದೆ. ಕಾನೂನುಬದ್ಧತೆಯ ಪರವಾಗಿಯೇ ಊಹೆ ಇರುವುದರಿಂದ, ‘ಅಕ್ರಮ ಸಂತಾನ’ (illegitimacy) ಎಂದು ವಾದಿಸುವ ವ್ಯಕ್ತಿಯ ಮೇಲೆಯೇ, ‘ಪತಿ–ಪತ್ನಿಗಳ ನಡುವೆ ಸಂಪರ್ಕ ಇರಲಿಲ್ಲ’ (non-access) ಎಂಬುದನ್ನು ಸಾಬೀತುಪಡಿಸುವ ಹೊಣೆ ಬರುತ್ತದೆ,” ಎಂದು ಪೀಠ ಹೇಳಿದೆ.
ಸಾಮಾನ್ಯವಾಗಿ ಕಾನೂನುಬದ್ಧತೆಯ ಕುರಿತು ಇರುವ ಪ್ರಕರಣಗಳಲ್ಲಿ, ಮೊದಲಿಗೆ ರಕ್ಷಿಸಬೇಕಾಗಿರುವುದು ಮಗುವಿನ ಗೌರವ ಮತ್ತು ಗೌಪ್ಯತೆ. ಏಕೆಂದರೆ ಇಂತಹ ವಿವಾದಗಳಲ್ಲಿ ಮೊದಲ ಗುರಿಯಾಗುವುದು ಮಗುವೇ ಆಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಒಂದು ತೀರ್ಪಿನಲ್ಲಿ, ‘ಮಗುವಿನ ಕಾನೂನುಬದ್ಧತೆ ಕುರಿತ ಸಮಕಾಲೀನ ನಿರ್ಣಯಗಳಿಂದ ಸ್ವತಂತ್ರವಾಗಿ ಪಿತೃತ್ವವನ್ನು ನಿರ್ಧರಿಸಬಹುದು’ ಎಂಬ ಕೇರಳ ಹೈಕೋರ್ಟ್‌ನ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ, ಇಂತಹ ದೃಷ್ಟಿಕೋನವನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ.
‘ಪಿತೃತ್ವ’ ಮತ್ತು ‘ಕಾನೂನುಬದ್ಧತೆ’ ಎರಡು ವಿಭಿನ್ನ ಅಥವಾ ಸ್ವತಂತ್ರ ಕಲ್ಪನೆಗಳೆಂಬ ಹೈಕೋರ್ಟ್ ಮುಂದೆ ಮುಂದಿಟ್ಟ ವಾದವು ತಪ್ಪು ದಾರಿಯಲ್ಲಿ ನಡೆದ ಕಲ್ಪನೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ, ಹೈಕೋರ್ಟ್‌ನ 2018ರ ಆದೇಶದ ವಿರುದ್ಧ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿತು. ಆ ಆದೇಶವು ಕುಟುಂಬ ನ್ಯಾಯಾಲಯದ 2015ರ ಆದೇಶವನ್ನು ಮಾನ್ಯಗೊಳಿಸಿ, 23 ವರ್ಷದ ಯುವಕನೊಬ್ಬನು ತನ್ನ ವಿರುದ್ಧ ಸಲ್ಲಿಸಿದ್ದ ಪೋಷಣಾ ಧನದ ಬೇಡಿಕೆಯನ್ನು ಪುನರ್ಜೀವಗೊಳಿಸಿತ್ತು.
ಆ ಯುವಕನು, 2001ರಲ್ಲಿ ತನ್ನ ತಾಯಿ ವಿವಾಹ ಬಂಧನದಲ್ಲಿದ್ದಾಗ, ಆಕೆಯ ವಿವಾಹೇತರ ಸಂಬಂಧದಿಂದ ತಾನು ಅರ್ಜಿದಾರನಿಂದ ಜನಿಸಿದ್ದೇನೆ ಎಂದು ವಾದಿಸಿದ್ದ. ಆದರೆ ಅರ್ಜಿದಾರನು ಈ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದ.
ನ್ಯಾಯಾಲಯ ಪುನಃ ಸ್ಪಷ್ಟಪಡಿಸಿದ್ದು, ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ನೋಡಿದರೆ, ಮಾನ್ಯ ವಿವಾಹ ಮುಂದುವರಿದಿರುವ ಅವಧಿಯಲ್ಲಿ ಜನಿಸಿದ ಮಗು ಯಾವಾಗಲೂ ಆ ವಿವಾಹದಲ್ಲಿರುವ ವ್ಯಕ್ತಿಗಳ ಜೈವಿಕ ಮಗು ಆಗಿರಬೇಕೆಂಬುದಿಲ್ಲ.
ವಿಶ್ವದ ವಿವಿಧ ನ್ಯಾಯಾಲಯಗಳು ‘ಪಿತೃತ್ವ’ ಮತ್ತು ‘ಕಾನೂನುಬದ್ಧತೆ’ ನಡುವಿನ ಸೈದ್ಧಾಂತಿಕ ವ್ಯತ್ಯಾಸವನ್ನು ಗುರುತಿಸಿವೆ. ವೆನ್ ಡಯಾಗ್ರಾಂ ಉದಾಹರಣೆಯಲ್ಲಿ ಹೇಳುವುದಾದರೆ, ಕಾನೂನುಬದ್ಧತೆ ಸ್ವತಂತ್ರ ವೃತ್ತವಾಗದೆ, ಪಿತೃತ್ವದ ಒಳಗೇ ಅಡಕವಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ವೈಜ್ಞಾನಿಕ ಪರೀಕ್ಷೆಗಳ ಅಭಿವೃದ್ಧಿಯಿಂದ, ಮಗು ನಿರ್ದಿಷ್ಟ ವ್ಯಕ್ತಿಯ ಸಂತಾನವಲ್ಲ ಎಂಬುದನ್ನು ಸಾಬೀತುಪಡಿಸುವುದು ಸುಲಭವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ನ್ಯಾಯಾಲಯಗಳು ಡಿಎನ್‌ಎ ಪರೀಕ್ಷೆಯ ಬಳಕೆಯನ್ನು ಒಪ್ಪಿಕೊಂಡಿದ್ದರೂ, ಅದು ಅಪರೂಪವಾಗಿ ಮಾತ್ರ,” ಎಂದು ಪೀಠ ಹೇಳಿದೆ.
ಕಾನೂನುಬದ್ಧತೆಯ ಊಹೆಯನ್ನು ಖಂಡಿಸಲು, ಮೊದಲಿಗೆ ‘ಪತಿ–ಪತ್ನಿಯರ ನಡುವೆ ಸಂಪರ್ಕ ಇರಲಿಲ್ಲ’ ಎಂಬುದನ್ನು ವಾದಿಸಬೇಕಾಗುತ್ತದೆ ಮತ್ತು ಅದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಇಂತಹ ವಾದವನ್ನು ಮುಂದಿಟ್ಟ ನಂತರ ಮಾತ್ರ, ಪಿತ್ವತ್ವವನ್ನು ಸ್ಥಾಪಿಸಲು ಡಿಎನ್‌ಎ ಪರೀಕ್ಷೆಗೆ ಆದೇಶ ನೀಡುವ ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಬಹುದು ಎಂದು ಪೀಠ ಸೇರಿಸಿದೆ.
ಈ ಪ್ರಕರಣದಲ್ಲಿ, 2001ರಲ್ಲಿ ಪ್ರತಿವಾದಿ ಜನಿಸಿದಾಗ, ಅವನ ತಾಯಿ ತನ್ನ ಪತಿಯೊಂದಿಗೆ ವಿವಾಹಿತಳಾಗಿದ್ದು, 1989ರಿಂದ 2003ರವರೆಗೆ ಒಂದೇ ಮನೆಮೇಲೆ ವಾಸಿಸಿದ್ದಾಳೆ ಎಂಬುದು ಒಪ್ಪಿಗೆಯ ವಿಷಯವಾಗಿದೆ. ಅಂದರೆ, ವಿವಾಹ ಅವಧಿಯಲ್ಲಿಯೇ ಪತಿ–ಪತ್ನಿಗಳಿಗೆ ಪರಸ್ಪರ ಸಂಪರ್ಕ ಇತ್ತು ಎಂಬುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.
“ಪ್ರತಿವಾದಿಯ ತಾಯಿ ಅರ್ಜಿದಾರನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಊಹಿಸಿದರೂ ಸಹ, ಆ ಕಾರಣ ಮಾತ್ರದಿಂದ ಕಾನೂನುಬದ್ಧತೆಯ ಊಹೆಯನ್ನು ಕೆಡವಲು ಸಾಧ್ಯವಿಲ್ಲ,” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಇಂತಹ ಪ್ರಕರಣಗಳಲ್ಲಿ, ಭಾಗವಹಿಸಿರುವ ಎಲ್ಲ ಪಕ್ಷಗಳ ಹಿತಾಸಕ್ತಿಗಳನ್ನು ಸಮತೋಲನಗೊಳಿಸಿ, ಡಿಎನ್‌ಎ ಪರೀಕ್ಷೆಗೆ ‘ಅತ್ಯಾವಶ್ಯಕ ಅಗತ್ಯ’ (eminent need) ಇದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕೆಂದು ಪೀಠ ತಿಳಿಸಿದೆ.
“ಗೌರವವನ್ನು ರಕ್ಷಿಸಲು ವ್ಯಕ್ತಿಯು ತನ್ನ ಗೌಪ್ಯತೆಯ ಹಕ್ಕನ್ನು ಬಳಸಿಕೊಳ್ಳಬಹುದು ಮತ್ತು ಅದರ ವಿರುದ್ಧವೂ ಸಹ. ಈ ಎರಡೂ ಹಕ್ಕುಗಳು ಒಟ್ಟಾಗಿ, ವಿವಾಹದ ಒಳಗೆ ಅಥವಾ ಹೊರಗೆ ಇರುವ ಲೈಂಗಿಕ ಜೀವನ ಸೇರಿದಂತೆ, ತನ್ನ ಜೀವನದ ಅತ್ಯಂತ ವೈಯಕ್ತಿಕ ನಿರ್ಧಾರಗಳನ್ನು ಕೈಗೊಳ್ಳುವ ವ್ಯಕ್ತಿಯ ಸಾಮರ್ಥ್ಯವನ್ನು ರಕ್ಷಿಸುತ್ತವೆ,” ಎಂದು ಪೀಠ ಹೇಳಿದೆ.
ಬಲವಂತವಾಗಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸುವುದು ವ್ಯಕ್ತಿಯ ಸಾಮಾಜಿಕ ಮತ್ತು ವೃತ್ತಿಪರ ಜೀವನದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಅಪರಿಹಾರ್ಯ ಹಾನಿ ಉಂಟುಮಾಡಬಹುದು. ಆದ್ದರಿಂದ, ಡಿಎನ್‌ಎ ಪರೀಕ್ಷೆಗೆ ನಿರಾಕರಿಸುವುದೂ ಸೇರಿದಂತೆ, ತನ್ನ ಗೌರವ ಮತ್ತು ಗೌಪ್ಯತೆಯನ್ನು ರಕ್ಷಿಸಲು ವ್ಯಕ್ತಿಗೆ ಕೆಲವು ಕ್ರಮಗಳನ್ನು ಕೈಗೊಳ್ಳುವ ಹಕ್ಕಿದೆ ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ಮಗು ಪ್ರಾಪ್ತವಯಸ್ಕನಾಗಿದ್ದು, ಸ್ವಯಂ ಇಚ್ಛೆಯಿಂದ ಡಿಎನ್‌ಎ ಪರೀಕ್ಷೆಗೆ ಒಪ್ಪಿಕೊಂಡಿದ್ದರೂ ಸಹ, ಫಲಿತಾಂಶದಲ್ಲಿ ವೈಯಕ್ತಿಕ ಹಿತಾಸಕ್ತಿ ಹೊಂದಿರುವ ಏಕೈಕ ವ್ಯಕ್ತಿ ಅವನಲ್ಲ. ಅಕ್ರಮ ಸಂತಾನದ ಕುರಿತು ಇರುವ ಸಾಮಾಜಿಕ ಅಪವಾದಗಳು, ಆರೋಪಿತ ವ್ಯಭಿಚಾರದ ಕಾರಣದಿಂದಾಗಿ ಪೋಷಕರ ಜೀವನಕ್ಕೂ ಪರಿಣಾಮ ಬೀರುತ್ತವೆ. ಈ ಹಿನ್ನೆಲೆಯಲ್ಲಿಯೇ ಅರ್ಜಿದಾರನ ಗೌರವ ಮತ್ತು ಗೌಪ್ಯತೆಯ ಹಕ್ಕನ್ನು ಪರಿಗಣಿಸಬೇಕೆಂದು ಪೀಠ ತಿಳಿಸಿದೆ.
ಇದಲ್ಲದೆ, ಪ್ರತಿವಾದಿಯನ್ನು ಈಗಾಗಲೇ ಅವನ ತಾಯಿಯ ಪತಿಯ ಕಾನೂನುಬದ್ಧ ಪುತ್ರನೆಂದು ಘೋಷಿಸಲಾಗಿದೆ.
“ಈ ರೀತಿಯ ಅನಾವಶ್ಯಕ ತನಿಖೆ (fishing enquiry) ಮುಖ್ಯವಾಗಿ ಅರ್ಜಿದಾರನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದಲೇ ನಡೆಯುತ್ತಿದೆ. ಕಾನೂನು ಪ್ರಕಾರ ತನ್ನ ‘ತಂದೆ’ ಯಾರು ಎಂಬುದು ಪ್ರತಿವಾದಿಗೆ ಚೆನ್ನಾಗಿ ತಿಳಿದಿದೆ,” ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ಪ್ರತಿವಾದಿಯ ತಾಯಿ ಈ ಅನವಶ್ಯಕ ವ್ಯಾಜ್ಯವನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದರೂ, ಇತರ ಪ್ರಕರಣಗಳಲ್ಲಿ ತಾಯಿಯ ಭಾವನೆಗಳು ಮತ್ತು ಆತ್ಮಗೌರವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮಗು ಪಿತೃತ್ವ ಘೋಷಣೆಗೆ ನ್ಯಾಯಾಲಯವನ್ನು ಸಂಪರ್ಕಿಸಿದರೆ ಉಂಟಾಗುವ ಪರಿಣಾಮಗಳನ್ನು ಊಹಿಸಬಹುದು ಎಂದು ಪೀಠ ಹೇಳಿದೆ.
“ಇಂತಹ ಹಕ್ಕನ್ನು ನೀಡುವುದರಿಂದ, ಅದು ದುರ್ಬಲ ಮಹಿಳೆಯರ ವಿರುದ್ಧ ದುರುಪಯೋಗವಾಗುವ ಸಾಧ್ಯತೆ ಇದೆ. ಅವರು ನ್ಯಾಯಾಲಯದ ಕಾನೂನು ಪ್ರಕ್ರಿಯೆಯಲ್ಲಿಯೂ, ಸಾರ್ವಜನಿಕ ಅಭಿಪ್ರಾಯದ ನ್ಯಾಯಾಲಯದಲ್ಲಿಯೂ ವಿಚಾರಣೆಗೆ ಒಳಗಾಗಬೇಕಾಗಿ ಬಂದು, ತೀವ್ರ ಮಾನಸಿಕ ವೇದನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಅವರ ಗೌರವ ಮತ್ತು ಗೌಪ್ಯತೆಯ ಹಕ್ಕುಗಳಿಗೆ ವಿಶೇಷ ಮಹತ್ವ ನೀಡಬೇಕು,” ಎಂದು ಪೀಠ ಅಂತಿಮವಾಗಿ ಅಭಿಪ್ರಾಯಪಟ್ಟಿದೆ.