ಸೇವಾ ಸಂಘಗಳಿಗೆ ವಾಣಿಜ್ಯ ಚಟುವಟಿಕೆ ನಿರ್ಬಂಧ: ಸರ್ಕಾರಿ ನೌಕರರ ಸಂಘಕ್ಕೂ ಅನ್ವಯಿಸಿ ರಾಜ್ಯ ಸರ್ಕಾರ ಅಧಿಪತ್ರ ಪ್ರಕಟ
ಸೇವಾ ಸಂಘಗಳಿಗೆ ವಾಣಿಜ್ಯ ಚಟುವಟಿಕೆ ನಿರ್ಬಂಧ: ಸರ್ಕಾರಿ ನೌಕರರ ಸಂಘಕ್ಕೂ ಅನ್ವಯಿಸಿ ರಾಜ್ಯ ಸರ್ಕಾರ ಅಧಿಪತ್ರ ಪ್ರಕಟ
ಸರ್ಕಾರಿ ನೌಕರರ ಸಂಘ ಸಹಿತ ಯಾವುದೇ ಸೇವಾ ಸಂಘಗಳು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗತಕ್ಕದ್ದಲ್ಲ ಎಂದು ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ನೂತನ ನಿಯಮಗಳ ಕರಡನ್ನು ಪ್ರಕಟಿಸಿದೆ.
ಕರ್ನಾಟಕ ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು 2015ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ನಿಯಮಗಳ ಕರಡನ್ನು ಕರ್ನಾಟಕ ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವನ್ನು ಒಳಗೊಂಡಂತೆ ರಾಜ್ಯಾದ್ಯಂತ ಸ್ಥಾಪಿಸಲ್ಪಟ್ಟ ವಿವಿಧ ಇಲಾಖೆಗಳ ನೌಕರರ ಸಂಘಗಳು, ಪದವೃಂದ ನೌಕರರ ಸಂಘಗಳಿಗೆ ಸಂಘದ ಕಾರ್ಯ ಚಟುವಟಿಕೆಗಳಿಗೆ ಹಾಗೂ ನೌಕರರಿಗೆ ಅನುಕೂಲಕರ ವಾಗುವ ದೃಷ್ಟಿಯಲ್ಲಿ ಸರ್ಕಾರದಿಂದ ಮಂಜೂರಾದ, ಅವಧಿ ಗೇಣಿಗೆ ನೀಡಲಾದ ಭೂಮಿಯಲ್ಲಿ ನೌಕರರಿಗೆ ಉಪಯುಕ್ತ ಕಾರ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವಾಣಿಜ್ಯ ಕಟ್ಟಡ ನಿರ್ಮಿಸಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ರಾಜ್ಯ ಸರಕಾರ
ನಿಷೇಧಿಸಿದೆ.
ಕರ್ನಾಟಕ ರಾಜ್ಯ ಸರಕಾರವು ಅಧಿಸೂಚನೆ ಸಂಖ್ಯೆ: ಸಿಆಸುಇ 13 ಸಹಿಮ ದಿನಾಂಕ 18.02.2026 ಪ್ರಕಾರ
ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) 8ನೇ ಪ್ರಕರಣದೊಂದಿಗೆ ಓದಲಾದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಈ ಅಧಿಪತ್ರವನ್ನು ಪ್ರಕಟಿಸಲಾಗಿದೆ.
ಕರ್ನಾಟಕ ಸರ್ಕಾರವು ರಚಿಸಿರುವ ಕರ್ನಾಟಕ ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು 2015ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಈ ಕೆಳಗಿನ ನಿಯಮಗಳ ಕರಡನ್ನು, ಸದರಿ ಅಧಿನಿಯಮದ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಇದರಿಂದ ಬಾಧಿತರಾಗುವ ಸಂಭವವಿರುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ, ಈ ಮೂಲಕ ಪ್ರಕಟಿಸಲಾಗಿದೆ.
ಮತ್ತು ಸದರಿ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪುಕಟಗೊಂಡ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗು ಎಂದು ಈ ಮೂಲಕ ಸೂಚಿಸಲಾಗಿದೆ.
ಸದರಿ ಕರಡು ನಿಯಮಗಳಿಗೆ ಸಂಬಂಧಪಟ್ಟಂತೆ ಮೇಲೆ ಗೊತ್ತುಪಡಿಸಿದ ಅವಧಿ ಕೊನೆಗೊಳ್ಳುವ ಮುಂಚೆ ಯಾರೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನ ಸೌಧ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರಿಗೆ ಸಲ್ಲಿಸತಕ್ಕದ್ದು
ಕರಡು ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ
ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) (ತಿದ್ದುಪಡಿ) ನಿಯಮಗಳು, 2026 ಎಂದು ಕರೆಯತಕ್ಕದ್ದು.
(2) ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ನಿಯಮಗಳು
ದಿನಾಂಕದಿಂದ ಜಾರಿಗೆ ಬರತಕ್ಕದು.
2 ನಿಯಮ 4ಕ್ಕೆ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು, 2015ರ ನಿಯಮ 4ರಲ್ಲಿ, ಖಂಡ (16)ರ ನಂತರ ಈ ಕೆಳಕಂಡಂತೆ ಸೇರಿಸತಕ್ಕದ್ದು.
"(17) ಸೇವಾ ಸಂಘವು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗತಕ್ಕದ್ದಲ್ಲ."
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-3) ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಸೇವಾ ಸಂಘಗಳ ನಿಯಮಗಳು ಮುಖ್ಯವಾಗಿ ಕರ್ನಾಟಕ ನಾಗರಿಕ ಸೇವೆಗಳು (ಸೇವಾ ಸಂಘಗಳ ಮಾನ್ಯತೆ) ನಿಯಮಗಳು, 2015 ಮೂಲಕ ನಿಯಂತ್ರಿಸಲ್ಪಡುತ್ತವೆ.
ಈ ನಿಯಮಗಳ ಪ್ರಕಾರ, ಸಂಘಗಳು ಸಾಮಾನ್ಯ ಹಿತಾಸಕ್ತಿಗಳನ್ನು ಪ್ರತಿನಿಧಿಸಬೇಕು, ಸರ್ಕಾರೇತರ ಸದಸ್ಯರನ್ನು ಹೊರತುಪಡಿಸಬೇಕು, ಜಾತಿ/ಧರ್ಮ ಆಧಾರಿತವಾಗಿ ರಚನೆಗೊಳ್ಳಬಾರದು ಮತ್ತು ಯಾವುದೇ ಪ್ರಕಟಣೆಗಳನ್ನು ಆರಂಭಿಸಲು ಮುಂಚಿತವಾಗಿ ಸರ್ಕಾರದ ಅನುಮೋದನೆ ಪಡೆಯಬೇಕು. ಪ್ರತಿ ಕ್ಯಾಡರ್‌ಗೆ ಒಂದೇ ಸಂಘಕ್ಕೆ ಮಾತ್ರ ಮಾನ್ಯತೆ ನೀಡಲಾಗುತ್ತದೆ ಮತ್ತು ನಡತೆ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಮುಷ್ಕರಗಳಲ್ಲಿ ತೊಡಗಿದರೆ ಮಾನ್ಯತೆ ಹಿಂತೆಗೆದುಕೊಳ್ಳಬಹುದು.
ಕರ್ನಾಟಕ ರಾಜ್ಯ ಸೇವಾ ಸಂಘಗಳಿಗೆ ಪ್ರಮುಖ ನಿಯಮಗಳು
- ರಚನೆ ಮತ್ತು ಸದಸ್ಯತ್ವ:
ಸಂಘಗಳು ಸೇವೆಯಲ್ಲಿರುವ ಸರ್ಕಾರಿ ನೌಕರರಿಂದ ಮಾತ್ರ ಕೂಡಿರಬೇಕು.
ಸದಸ್ಯತ್ವವು ಸಾಮಾನ್ಯ ಹಿತಾಸಕ್ತಿಯುಳ್ಳ ನಿರ್ದಿಷ್ಟ ವರ್ಗದ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿರಬೇಕು.
ಜಾತಿ, ಧರ್ಮ ಅಥವಾ ವಂಶಾವಳಿ ಆಧಾರಿತ ರಚನೆ ನಿಷೇಧಿತವಾಗಿದೆ.
ಮಾನ್ಯತೆ ಪಡೆಯಲು ಸದಸ್ಯರು ಸಂಬಂಧಿತ ಕ್ಯಾಡರ್/ವರ್ಗದ ಕನಿಷ್ಠ 50% ಪ್ರತಿನಿಧಿಸಬೇಕು.
- ಮಾನ್ಯತೆ ಮತ್ತು ನಿರ್ಬಂಧಗಳು:
ಇಲಾಖೆಯ ಪ್ರತಿ ಕ್ಯಾಡರ್‌ಗೆ ಒಂದೇ ಸೇವಾ ಸಂಘಕ್ಕೆ ಮಾನ್ಯತೆ ನೀಡಲಾಗುತ್ತದೆ.
ಸರ್ಕಾರದ ಅನುಮತಿಯಿಲ್ಲದೆ ವಿದೇಶಿ ಪ್ರಾಧಿಕಾರಗಳೊಂದಿಗೆ ಸಂಘಗಳು ಸಂಪರ್ಕ ಸಾಧಿಸಲು ಸಾಧ್ಯವಿಲ್ಲ.
ಮುಂಚಿತ ಅನುಮತಿಯಿಲ್ಲದೆ ಯಾವುದೇ ಪ್ರಕಟಣೆಗಳು (ಪತ್ರಿಕೆಗಳು, ಬುಲೆಟಿನ್‌ಗಳು) ಆರಂಭಿಸಲು ಸಾಧ್ಯವಿಲ್ಲ.
ಸಂಘಗಳು ಕರ್ನಾಟಕ ನಾಗರಿಕ ಸೇವೆಗಳು (ನಡೆ-ನುಡಿಗಳ) ನಿಯಮಗಳು, 2021 ಅನ್ನು ಉಲ್ಲಂಘಿಸಬಾರದು.
ನಿಯಮ ಉಲ್ಲಂಘನೆ ಮಾಡಿದರೆ ಅಥವಾ ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದರೆ ಸರ್ಕಾರ ಮಾನ್ಯತೆಯನ್ನು ಹಿಂತೆಗೆದುಕೊಳ್ಳಬಹುದು.
- ಕಾರ್ಯಾಚರಣಾ ನಿಯಮಗಳು:
ವ್ಯಕ್ತಿ ಸಂಬಂಧಿತ ಕ್ಯಾಡರ್‌ನಿಂದ ಹೊರಬಂದರೆ ಅವರ ಸದಸ್ಯತ್ವವು ಸ್ವಯಂಚಾಲಿತವಾಗಿ ರದ್ದುಪಡುತ್ತದೆ.
ಸಂಘಗಳು ನಿಯಮಗಳನ್ನು ಉಲ್ಲಂಘಿಸುವ ರೀತಿಯಲ್ಲಿ ವರ್ತಿಸಬಾರದು.
ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರಿ ನೌಕರರನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಅದರ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳಲ್ಲಿ ನೌಕರರ ಶ್ರೇಯೋಭಿವೃದ್ಧಿಯ ಕಲ್ಪನೆ ಮಾಯವಾಗಿದೆ. ಮನರಂಜನಾ ಕ್ಲಬ್ ಗಳು, ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿ ಸೇವಾ ಮನೋಭಾವನೆಯ ಬದಲಿಗೆ ವಾಣಿಜ್ಯ ಉದ್ದೇಶ ಹೊಂದಿವೆ.
ಸರಕಾರಿ ನೌಕರರ ಅನುಕೂಲಕ್ಕಾಗಿ ನೀಡಿದ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರ ಉದ್ದೇಶಿತ ತಿದ್ದುಪಡಿಯನ್ನು ತಂದಿದೆ.