ಕಾನೂನುಬದ್ಧ ಅಪೀಲುಗಳಿಗೆ ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿ ಕಡ್ಡಾಯ ಸಲ್ಲಿಕೆ: ಸುಪ್ರೀಂ ಕೋರ್ಟ್ ತಾಕೀತು
ಕಾನೂನುಬದ್ಧ ಅಪೀಲುಗಳಿಗೆ ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿ ಕಡ್ಡಾಯ ಸಲ್ಲಿಕೆ: ಸುಪ್ರೀಂ ಕೋರ್ಟ್ ತಾಕೀತು
ಪ್ರಶ್ನಿತ (impugned) ತೀರ್ಪಿನ ಪ್ರಮಾಣಿತ ಪ್ರತಿಯನ್ನು ಸಲ್ಲಿಸದೆ ಕಾನೂನುಬದ್ಧ ಅಪೀಲನ್ನು (statutory appeal) ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ, ನ್ಯಾಷನಲ್ ಕಂಪನಿ ಲಾ ಅಪೀಲೇಟ್ ಟ್ರಿಬ್ಯುನಲ್ ತೀರ್ಪನ್ನು ಪ್ರಶ್ನಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಸಿವಿಲ್ ಅಪೀಲ್ ಪ್ರಕರಣದಲ್ಲಿ ಈ ತೀರ್ಪು ನೀಡಿದೆ.
ಅಪೀಲುದಾರರು ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿಯನ್ನು ಸಲ್ಲಿಸುವುದರಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಪೀಲನ್ನು ಮರುಸಲ್ಲಿಸಲು 102 ದಿನಗಳ ವಿಳಂಬವಾಗಿದ್ದರೂ, ಪ್ರಮಾಣಿತ ಪ್ರತಿ ಪಡೆಯಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.
ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಿಯಮಗಳು, 2013ರ ಆದೇಶ XIX ನಿಯಮ 40 ಅನ್ನು ಉಲ್ಲೇಖಿಸಿ, ಪ್ರಶ್ನಿಸಲಾದ ತೀರ್ಪಿನ ಪ್ರಮಾಣಿತ ಪ್ರತಿಯಿಲ್ಲದೆ ಕಾನೂನುಬದ್ಧ ಅಪೀಲನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು.
ಇದಕ್ಕೂ ಜೊತೆಗೆ, ನಿರ್ದಿಷ್ಟ ಕಾಲಮಿತಿಯೊಳಗೆ ಸಲ್ಲಿಸಬೇಕಾದ ಅಪೀಲುಗಳಲ್ಲಿ ವಿಳಂಬದ ವಿಷಯವನ್ನು ಪರಿಶೀಲಿಸುವಾಗ ರಿಜಿಸ್ಟ್ರಿ ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು.
ಈ ಪ್ರಕರಣದಲ್ಲಿ ನೀಡಿದ ನಿರ್ದೇಶನದ ಅನುಸರಣೆಯಾಗಿ, ಸುಪ್ರೀಂ ಕೋರ್ಟ್ ಸುತ್ತೋಲೆಯನ್ನು ಹೊರಡಿಸಿದ್ದು, ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿಯಿಲ್ಲದೆ ಯಾವುದೇ ಕಾನೂನುಬದ್ಧ ಅಪೀಲನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
"2025ರ ಸಿವಿಲ್ ಅಪೀಲ್ D.No. 57050 (Central Bank of India v. Bijendra Kumar Jha & Others) ಪ್ರಕರಣದಲ್ಲಿ 27.02.2026ರಂದು ನೀಡಿದ ನಿರ್ದೇಶನಗಳ ಅನ್ವಯ, ಸುಪ್ರೀಂ ಕೋರ್ಟ್ ನಿಯಮಗಳು, 2013ರ ಆದೇಶ XIX ನಿಯಮ 3(2) ಹಾಗೂ 40 ಪ್ರಕಾರ, ಪ್ರಶ್ನಿಸಲಾದ ತೀರ್ಪಿನ ಪ್ರಮಾಣಿತ ಪ್ರತಿಯಿಲ್ಲದೆ ಯಾವುದೇ ಕಾನೂನುಬದ್ಧ ಅಪೀಲನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಇನ್ನುಮುಂದೆ ಎಲ್ಲಾ ಕಾನೂನುಬದ್ಧ ಅಪೀಲುಗಳಿಗೆ ಪ್ರಶ್ನಿಸಲಾದ ತೀರ್ಪಿನ ಪ್ರಮಾಣಿತ ಪ್ರತಿಯನ್ನು ಕಡ್ಡಾಯವಾಗಿ ಜೊತೆಯಾಗಿ ಸಲ್ಲಿಸಬೇಕು." ಎಂಬುದಾಗಿ ಈ ಸುತ್ತೋಲೆ ಹೇಳಿದೆ.
ಪ್ರಕರಣ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿರುದ್ಧ ಬಿಜೇಂದ್ರ ಕುಮಾರ್ ಝಾ ಮತ್ತು ಇತರರು.
ಸುಪ್ರೀಂ ಕೋರ್ಟ್