ಕಾನೂನು ವೃತ್ತಿಗೆ ಅಪರಾಧಿಗಳ ಪ್ರವೇಶ- ಬಾರ್ ಕೌನ್ಸಿಲ್ ಶಾಕಿಂಗ್ ನ್ಯೂಸ್; ತಡೆಯಲು ಏನು ಕ್ರಮ?- ಸುಪ್ರೀಂ ಕೋರ್ಟ್ ತೀಕ್ಷ್ಣ ತಿರುಗೇಟು
ಕಾನೂನು ವೃತ್ತಿಗೆ ಅಪರಾಧಿಗಳ ಪ್ರವೇಶ- ಬಾರ್ ಕೌನ್ಸಿಲ್ ಶಾಕಿಂಗ್ ನ್ಯೂಸ್; ತಡೆಯಲು ಏನು ಕ್ರಮ?- ಸುಪ್ರೀಂ ಕೋರ್ಟ್ ತೀಕ್ಷ್ಣ ತಿರುಗೇಟು
ಅಪರಾಧಿಗಳು ಕಾನೂನು ವೃತ್ತಿಗೆ ಬಂದಿದ್ದಾರೆ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಶಾಕಿಂಗ್ ನ್ಯೂಸ್ ನೀಡಿದೆ. ಬಿಸಿಐ ಈ ವಿಷಯವನ್ನು ಸ್ವತಃ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಅಪರಾಧ ಮನೋಭಾವ ಕಾನೂನು ವೃತ್ತಿಯಲ್ಲಿ ಹೆಚ್ಚುತ್ತಿದೆ. ಅಪರಾಧಿಗಳು ಕಾನೂನು ವೃತ್ತಿಗೆ ಪ್ರವೇಶಿಸುತ್ತಿದ್ದಾರೆ ಎಂದು ಅದು ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, “ವೃತ್ತಿಗೆ ಸೇರಿದ ನಂತರ ಅಪರಾಧಿಗಳಾಗುವವರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ?” ಎಂದು ಬಿಸಿಐಯನ್ನು ಪ್ರಶ್ನಿಸಿದೆ.
ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಬಾಕಿ ಪ್ರಕರಣಗಳಿರುವ ಕಾನೂನು ಪದವೀಧರರನ್ನು ನೋಂದಾಯಿಸಲು ನಿರ್ಬಂಧ ವಿಧಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಸಮರ್ಥಿಸಿಕೊಂಡಿರುವ, ಬಾರ್ ಕೌನ್ಸಿಲ್ ಆಫ್ ಇಂಡಿಯಾ “ಅಪರಾಧಿಗಳು ಕಾನೂನು ವೃತ್ತಿಗೆ ಪ್ರವೇಶಿಸುತ್ತಿದ್ದಾರೆ” ಎಂದು ಹೇಳಿತು.
2017ರ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ ಅರ್ಜಿಯ ಮೇಲೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತು. ಈ ತೀರ್ಪಿನಲ್ಲಿ, ವಿಧಾನಮಂಡಲ ಸೂಕ್ತ ತಿದ್ದುಪಡಿ ಮಾಡುವವರೆಗೆ (ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ) ಬಾಕಿ ಅಪರಾಧ ಪ್ರಕರಣಗಳಿರುವ ಯಾವುದೇ ಕಾನೂನು ಪದವೀಧರರನ್ನು ರಾಜ್ಯ ಬಾರ್ ಕೌನ್ಸಿಲ್‌ಗಳು ನೋಂದಾಯಿಸಬಾರದು ಎಂದು ನಿರ್ದೇಶಿಸಲಾಗಿತ್ತು.
ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹತಾ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, “ಎಲ್ಲಾ ಅಪರಾಧಿಗಳೂ ಈ ವೃತ್ತಿಗೆ ಬರುತ್ತಿದ್ದಾರೆ” ಎಂದು ಬಾರ್ ಕೌನ್ಸಿಲ್ ಪರ ವಕೀಲರು ಹೈಕೋರ್ಟ್ ತೀರ್ಪನ್ನು ಸಮರ್ಥಿಸಲು ಮುಂದಾದರು. ಆಗ ನ್ಯಾಯಮೂರ್ತಿ ವಿಕ್ರಂನಾಥ್, “ವೃತ್ತಿಗೆ ಸೇರಿದ ನಂತರ ಅವರು ಅಪರಾಧಿಗಳಾದರೆ ಏನು? ಅವರ ವಿರುದ್ಧ ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಮೊದಲು ಅದನ್ನು ಹೇಳಿ” ಎಂದು ಕೇಳಿದರು. “ಅಡ್ವೊಕೇಟ್ಸ್ ಕಾಯ್ದೆಯಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿದೆಯೇ?” ಎಂದು ನ್ಯಾಯಮೂರ್ತಿ ಸಂದೀಪ್ ಮೆಹತಾ ಪ್ರಶ್ನಿಸಿದರು.
ಅಂತಿಮವಾಗಿ, ಪೀಠವು ನೋಟಿಸ್ ಜಾರಿಗೊಳಿಸಿ, ಈ ಪ್ರಕರಣವನ್ನು ಬಾಕಿ ಇರುವ ಮತ್ತೊಂದು ಪ್ರಕರಣದೊಂದಿಗೆ ಜೋಡಿಸಿತು.
ಪ್ರಕರಣದ ಸಂಕ್ಷಿಪ್ತ ವಿವರ
ಅರ್ಜಿದಾರರು ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಅವರ ಅರ್ಜಿಯನ್ನು ನೋಂದಾಯಿಸಲು ವಕೀಲರ ಪರಿಷತ್ ನಿರಾಕರಿಸಿತ್ತು. ಈ ಬಗ್ಗೆ "Chairman v. S.M. Anantha Murugan (2017)" ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿನಿಂದ ಬಾಧಿತರಾಗಿದ್ದರು. ಈ ತೀರ್ಪಿನಲ್ಲಿ, 2015ರ ಸಿಂಗಲ್ ಬೆಂಚ್ ಆದೇಶವನ್ನು ಫುಲ್ ಬೆಂಚ್ ಮಾನ್ಯಗೊಳಿಸಿ, ಗಂಭೀರ ಅಪರಾಧ ಪ್ರಕರಣಗಳಿರುವ ಕಾನೂನು ಪದವೀಧರರನ್ನು ನೋಂದಾಯಿಸಬಾರದು ಎಂದು ಬಿಸಿಐಗೆ ಸೂಚಿಸಲಾಗಿತ್ತು. ಮೂರು ವರ್ಷಗಳವರೆಗೆ ಶಿಕ್ಷೆ ಇರುವ ಜಾಮೀನಾತ್ಮಕ ಪ್ರಕರಣಗಳು ಹಾಗೂ ನಾಗರಿಕ ವಿವಾದಗಳನ್ನು ಹೊರತುಪಡಿಸಲಾಗಿತ್ತು.
ಅರ್ಜಿದಾರರು ಕಾನೂನು ವೃತ್ತಿ ಸೇರಲು ಮತ್ತು ಹಣಕಾಸು ಕಾನೂನುಗಳ ಸೂಕ್ಷ್ಮತೆಯನ್ನು ಅರಿಯಲು 2019-20ರಲ್ಲಿ ಕಾನೂನು ಕಾಲೇಜಿಗೆ ಸೇರಿ ಪದವಿ ಪಡೆದರು. ತರುವಾಯ, ತಮಿಳುನಾಡು ಮತ್ತು ಪುದುಚೇರಿ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದಾಗ, ತಮ್ಮ ವಿರುದ್ಧ ಪ್ರಕರಣ ಬಾಕಿ ಇದೆ, ಚಾರ್ಜ್‌ಶೀಟ್ ಸಲ್ಲಿಸಸಲಾಗಿದೆ ಎಂಬ ಕಾರಣಕ್ಕೆ ವಕೀಲರ ಪರಿಷತ್ತಿನ ನೋಂದಣಿ ಸಮಿತಿ ಅವರ ಅರ್ಜಿಯನ್ನು ತಿರಸ್ಕರಿಸಿತು.
ಹೈಕೋರ್ಟ್ ನಲ್ಲಿ ನಡೆದ ಪ್ರಕರಣದ ವಿಚಾರಣೆಯಲ್ಲಿ ಅವರು ಭಾಗಿಯಾಗಿರಲಿಲ್ಲ. ತಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ ಸಹವಾಚಕ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ಬಾಕಿಯಿರುವುದರಿಂದ ನೋಂದಣಿ ನಿರಾಕರಿಸಲಾಗಿದೆ. ಹಾಗಾಗಿ, ತಮ್ಮ ಇಚ್ಛೆಯ ವೃತ್ತಿ ಆರಿಸುವ ಮೂಲಭೂತ ಹಕ್ಕು ಮೊಟಕುಗೊಂಡಿದೆ ಎಂದು ಅವರು ವಾದಿಸಿದ್ದರು.
ಏಕಸದಸ್ಯ ನ್ಯಾಯಪೀಠದ ನಿರ್ದೇಶನವನ್ನು ವಿಭಾಗೀಯ ನ್ಯಾಯಪೀಠ “ತಾತ್ಕಾಲಿಕ ಕ್ರಮ” ಎಂದು ಪರಿಗಣಿಸಿದ್ದರೂ, ಅದು ದಶಕದ ನಂತರವೂ ಮುಂದುವರಿಯುತ್ತಿದೆ. ಜೊತೆಗೆ, ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ಇನ್ನೂ ಅಪರಾಧ ಸಾಬೀತಾಗಿಲ್ಲ ಎಂಬುದನ್ನು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದರು.
ಪ್ರಕರಣ ಶೀರ್ಷಿಕೆ: ಕೆ.ಆರ್. ಸುದರ್ಶನ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷರು ಮತ್ತು ಇನ್ನೊಬ್ಬರು.