Income Tax Form 16 ಬದಲು Form 130: ವಿವರ ಮತ್ತು ಸ್ವರೂಪದ ಮಾಹಿತಿ- ಪಾರದರ್ಶಕ ತೆರಿಗೆ ವ್ಯವಸ್ಥೆಯತ್ತ ಹೆಜ್ಜೆ?
Income Tax Form 16 ಬದಲು Form 130: ವಿವರ ಮತ್ತು ಸ್ವರೂಪದ ಮಾಹಿತಿ- ಪಾರದರ್ಶಕ ತೆರಿಗೆ ವ್ಯವಸ್ಥೆಯತ್ತ ಹೆಜ್ಜೆ?
ಪಾರದರ್ಶಕ ತೆರಿಗೆ ವ್ಯವಸ್ಥೆಯತ್ತ ಹೆಜ್ಜೆ- ಫಾರ್ಮ್ 16 ಬದಲು ಫಾರ್ಮ್ 130
ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ (Income Tax Return) ಫೈಲ್ ಮಾಡಲು ಕಂಪನಿ ನೀಡುವ ಫಾರ್ಮ್ 16 (Form 16) ಗಾಗಿ ಕಾಯುವುದು ಸಾಮಾನ್ಯ. ಆದರೆ ಈ ಬಾರಿ ಹಾಗೆ ಕಾಯುತ್ತಾ ಇದ್ದರೆ ನಿಮ್ಮ ಸಮಯ ವ್ಯರ್ಥವಾಗಬಹುದು.
ಏಕೆಂದರೆ, ಏಪ್ರಿಲ್ 1, 2026 ರಿಂದ ನಿಮ್ಮ ಉದ್ಯೋಗದಾತರು (Employers) ಫಾರ್ಮ್ 16 ಅನ್ನು ನೀಡದೇ ಇರಬಹುದಾಗಿದೆ. ಇದರ ಬದಲಿಗೆ ಫಾರ್ಮ್ 130 (Form 130) ಎಂಬ ಹೊಸ ದಾಖಲೆ ಬರುತ್ತಿದೆ.
ಇದು ನಿಮ್ಮ ಆದಾಯ (Income) ಮತ್ತು ತೆರಿಗೆಗಳ (Taxes) ಬಗ್ಗೆ ಇನ್ನಷ್ಟು ವಿವರವಾದ, ಸಿಸ್ಟಮ್-ಆಧಾರಿತ ರಿಪೋರ್ಟ್ ಆಗಿರುತ್ತದೆ.
ಫಾರ್ಮ್ 16 ಜಾಗದಲ್ಲಿ ಫಾರ್ಮ್ 130 ಹೊಸ ಆದಾಯ-ತೆರಿಗೆ ನಿಯಮಗಳ ಪ್ರಕಾರ, 2026 ರಿಂದ ಫಾರ್ಮ್ 16 ಬಳಕೆಯಿಂದ ಹೊರ ಹೋಗಿ, ಅದರ ಸ್ಥಾನವನ್ನು ಫಾರ್ಮ್ 130 ಪಡೆಯಲಿದೆ. ಇದು ಕೂಡ ಕಂಪನಿಯು ನೀಡುವ ಟಿಡಿಎಸ್ (TDS) ಪ್ರಮಾಣಪತ್ರವೇ. ಆದರೆ ಇದರ ಸ್ವರೂಪ ಮತ್ತು ಮಾಹಿತಿಯ ಪ್ರಮಾಣ ಫಾರ್ಮ್ 16ಕ್ಕಿಂತ ಹೆಚ್ಚು ವಿವರವಾದುದು.
ಮೂರು ಭಾಗಗಳಲ್ಲಿ ವಿವರ ಹೊಸ ಫಾರ್ಮ್ 130 ಒಟ್ಟು 3 ಮುಖ್ಯ ಭಾಗಗಳನ್ನು ಒಳಗೊಂಡಿರುತ್ತದೆ.
1) ಮೊದಲ ಭಾಗ: ಉದ್ಯೋಗಿ ಮತ್ತು ಉದ್ಯೋಗದಾತರ ಸಂಪೂರ್ಣ ವಿವರಗಳು
2) ಎರಡನೇ ಭಾಗ: ಸಂಬಳ ಮತ್ತು ಕಡಿತಗೊಳಿಸಲಾದ ತೆರಿಗೆ (TDS) ಯ ಸಾರಾಂಶ
3) ಮೂರನೇ ಭಾಗ: ತೆರಿಗೆಗೆ ಒಳಪಡುವ ಆದಾಯವನ್ನು ಹೇಗೆ ಲೆಕ್ಕ ಹಾಕಲಾಗಿದೆ ಎಂಬ ಸೂಕ್ಷ್ಮ ವಿವರಗಳು
ನಿಮ್ಮ ಆದಾಯದ ಸ್ಪಷ್ಟ ಚಿತ್ರ ಈ ಫಾರ್ಮ್ ಅನ್ನು ನಿಮ್ಮ ಒಟ್ಟು ಆದಾಯದ ಪಕ್ಕಾ ಚಿತ್ರಣ ನೀಡುವಂತೆ ಮಾಡಲಾಗಿದೆ. ನಿಮ್ಮ ಸಂಬಳದ ವಿವರ, ವಿನಾಯಿತಿಗಳು, ಕಡಿತಗಳು, ಒಟ್ಟು ತೆರಿಗೆ ವಿಧಿಸಬಹುದಾದ ಆದಾಯ ಮತ್ತು ಪಾವತಿಸಬೇಕಾದ ಅಂತಿಮ ತೆರಿಗೆಯ ವಿವರಗಳು ಇದರಲ್ಲಿ ಇರುತ್ತವೆ. ಅಂತಿಮ ತೆರಿಗೆಯ ಜೊತೆಗೆ ಟಿಡಿಎಸ್ ಮತ್ತು ಟಿಸಿಎಸ್ ವಿವರಗಳನ್ನು ಕೂಡ ಸ್ಪಷ್ಟವಾಗಿ ತೋರಿಸುತ್ತದೆ.
ತೆರಿಗೆದಾರರ ಮೇಲೆ ಪರಿಣಾಮ
ಈ ಬದಲಾವಣೆಯಿಂದ ಸಂಬಳ ಪಡೆಯುವವರಿಗೆ ಅನುಕೂಲ ಹೆಚ್ಚಾಗುತ್ತದೆ. ಯಾಕೆಂದರೆ ರಿಟರ್ನ್ಸ್ ಫೈಲ್ ಮಾಡುವಾಗ ಬಹುತೇಕ ಮಾಹಿತಿ ಈಗಾಗಲೇ Pre-filled ಆಗಿರುತ್ತದೆ. ಬಂಡವಾಳ ಲಾಭ ಹೊಂದಿರುವ ಹೂಡಿಕೆದಾರರು ಇನ್ನಷ್ಟು ನಿಖರವಾಗಿ ಮಾಹಿತಿ ನೀಡಬೇಕು.
ಅನಿವಾಸಿ ಭಾರತೀಯರು (NRI) ಮತ್ತು ಹೆಚ್ಚಿನ ಆದಾಯ ಹೊಂದಿರುವವರಿಗೆ ನಿಯಮಗಳು ಕಠಿಣವಾಗಿರುತ್ತವೆ. ಆದರೆ ಹಿರಿಯ ನಾಗರಿಕರಿಗೆ ಪಿಂಚಣಿ ಮತ್ತು ಬಡ್ಡಿ ಆದಾಯವನ್ನು ತೋರಿಸಲು ಇದು ಸುಲಭವಾಗುತ್ತದೆ.
ಈ ಬದಲಾವಣೆಯ ಉದ್ದೇಶ ಉದ್ಯೋಗದಾತರು ಸರ್ಕಾರಕ್ಕೆ ನೀಡುವ ವರದಿ ಮತ್ತು ತೆರಿಗೆದಾರರು ತಮ್ಮ ರಿಟರ್ನ್ಸ್‌ನಲ್ಲಿ ಘೋಷಿಸುವ ಲೆಕ್ಕಗಳ ನಡುವೆ ಉಂಟಾಗುವ ವ್ಯತ್ಯಾಸ (ಮಿಸ್‌ಮ್ಯಾಚ್) ಕಡಿಮೆ ಮಾಡುವುದು ಮುಖ್ಯ ಉದ್ದೇಶ.
ಪ್ರಮಾಣೀಕೃತ ಮತ್ತು ಸಿಸ್ಟಮ್-ಆಧಾರಿತ ಮಾಹಿತಿಯಿಂದ ತಪ್ಪುಗಳು ಕಡಿಮೆಯಾಗುತ್ತವೆ. ಆದರೆ, ಹಸ್ತಚಾಲಿತವಾಗಿ ಲೆಕ್ಕ ಬದಲಾಯಿಸುವ ಅವಕಾಶ ಇನ್ನು ಮುಂದೆ ಇರುವುದಿಲ್ಲ. ಆದ್ದರಿಂದ ತೆರಿಗೆದಾರರು ಹೆಚ್ಚು ಎಚ್ಚರಿಕೆಯಿಂದಿರಬೇಕು.
ಆನ್‌ಲೈನ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯ ಫಾರ್ಮ್ 130 ಅನ್ನು ಮ್ಯಾನುವಲ್ ಆಗಿ ಕೊಡಲಾಗುವುದಿಲ್ಲ. ಇದನ್ನು ಕೇವಲ 'TRACES' ಪೋರ್ಟಲ್ ಮೂಲಕ ಮಾತ್ರ ಜನರೇಟ್ ಮಾಡಲಾಗುತ್ತದೆ.
ತ್ರೈಮಾಸಿಕ ಟಿಡಿಎಸ್ ಸ್ಟೇಟ್‌ಮೆಂಟ್ ಸಲ್ಲಿಸಿದ ನಂತರವೇ ಇದು ಲಭ್ಯ. ಅಂದರೆ ಇಡೀ ಪ್ರಕ್ರಿಯೆ ಸಿಸ್ಟಮ್ ಡೇಟಾವನ್ನೇ ಅವಲಂಬಿಸಿದೆ. ಆದ್ದರಿಂದ ಕಂಪನಿಗಳು ಸರಿಯಾದ ಸಮಯಕ್ಕೆ ಡೇಟಾ ಸಲ್ಲಿಸುವುದು ಅನಿವಾರ್ಯ.
ಪಾರದರ್ಶಕ ತೆರಿಗೆ ವ್ಯವಸ್ಥೆಯತ್ತ ಹೆಜ್ಜೆ ಫಾರ್ಮ್ 16 ಅನ್ನು ತೆಗೆದು ಹಾಕಿ ಫಾರ್ಮ್ 130 ಅನ್ನು ತರಲಾಗುತ್ತಿರುವುದು ಹೆಚ್ಚು ಪಾರದರ್ಶಕ ಮತ್ತು ತಂತ್ರಜ್ಞಾನ-ಆಧಾರಿತ ತೆರಿಗೆ ವ್ಯವಸ್ಥೆಯತ್ತ ದೊಡ್ಡ ಹೆಜ್ಜೆ. ಇದು ತೆರಿಗೆ ಪಾವತಿಯನ್ನು ಸುಲಭಗೊಳಿಸುವ ಜೊತೆಗೆ ತಪ್ಪು ಅಥವಾ ವಂಚನೆಗಳಿಗೆ ಅವಕಾಶ ಕಡಿಮೆ ಮಾಡುವ ಉದ್ದೇಶ ಹೊಂದಿದೆ.