ವಾಹನ ಅಪಘಾತ ಪರಿಹಾರ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ; ಮೃತರನ್ನು ಅವಲಂಬಿಸಿರುವ ಸಂಸ್ಥೆಗಳಿಗೂ ಲಭ್ಯ: ಕರ್ನಾಟಕ ಹೈಕೋರ್ಟ್
ವಾಹನ ಅಪಘಾತ ಪರಿಹಾರ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ; ಮೃತರನ್ನು ಅವಲಂಬಿಸಿರುವ ಸಂಸ್ಥೆಗಳಿಗೂ ಲಭ್ಯ: ಕರ್ನಾಟಕ ಹೈಕೋರ್ಟ್
ವಾಹನ ಅಪಘಾತ ಪರಿಹಾರ ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಲ್ಲ. ಮೃತರನ್ನು ಅವಲಂಬಿಸಿರುವ ಸಂಸ್ಥೆಗಳಿಗೂ ಅಪಘಾತದ ಪರಿಹಾರವನ್ನು ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ಕಲಬುರ್ಗಿ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ತ್ಯಾಗರಾಜ ಎನ್.ಇನವಲ್ಲಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ರಸ್ತೆ ಅಪಘಾತದಲ್ಲಿ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರು ನಿಧನರಾದರೆ ಆ ಸಂಸ್ಥೆಯು ಪರಿಹಾರ ಕ್ಷೇಮು ಮಾಡಬಹುದು. ಮೋಟಾರು ಅಪಘಾತ ಪರಿಹಾರ ಕಾನೂನಿನಡಿಯಲ್ಲಿ "ಅವಲಂಬನೆ" ಕೇವಲ ಕುಟುಂಬ ಸದಸ್ಯರಿಗೆ ಸೀಮಿತವಾಗಿಲ್ಲ ಮತ್ತು ಮೃತರ ಮೇಲೆ ಅವಲಂಬಿತವಾಗಿರುವ ಸಂಸ್ಥೆಗಳನ್ನು ಸಹ ಒಳಗೊಂಡಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಜೀಪು ಮತ್ತು ಟ್ರಕ್ ನಡುವೆ 2011ರಲ್ಲಿ ಸಂಭವಿಸಿದ ಅಪಘಾತದಲ್ಲಿ ಸುತ್ತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ನಿಧನರಾಗಿದ್ದರು. 15.94 ಲಕ್ಷ ಪರಿಹಾರವನ್ನು ಮಠಕ್ಕೆ ಪಾವತಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಮಠದ ಸ್ವಾಮೀಜಿಯು ವೈಯಕ್ತಿಕಕ್ಕಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ ಸಂಸ್ಥೆಯ ಪ್ರತಿನಿಧಿಯಾಗಿರುತ್ತಾರೆ. ಸ್ವಾಮೀಜಿಯ ಪಾತ್ರ ಮತ್ತು ಸೇವೆಯಿಂದ ಸಂಸ್ಥೆಗೆ ಲಾಭವಾಗುತ್ತಿರುತ್ತದೆ. ಸ್ವಾಮೀಜಿಯ ಸಾವಿನಿಂದ ನಾಯಕತ್ವಕ್ಕೆ ಹಿನ್ನಡೆಯಾಗಿದ್ದು, ಅದು ಇಡೀ ಆಡಳಿತದ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
'ಮಠಾಧಿಪತಿ ಸ್ಥಾನವು ವೈಯಕ್ತಿಕ ಜೀವನೋಪಾಯಕ್ಕಾಗಿ ಸಂಪಾದಿಸುವ ಸಾಮಾನ್ಯ ವ್ಯಕ್ತಿಯ ಸ್ಥಾನವಲ್ಲ, ಬದಲಾಗಿ ಮಠದ ಕಾರ್ಯನಿರ್ವಹಣೆ, ಆಡಳಿತ ಮತ್ತು ನಿರಂತರತೆಯೊಂದಿಗೆ ಅವಿಭಾಜ್ಯ ಸಂಬಂಧ ಹೊಂದಿರುವ ಆಧ್ಯಾತ್ಮಿಕ ಮುಖ್ಯಸ್ಥನ ಸ್ಥಾನವಾಗಿದೆ" ಎಂದು ಪೀಠ ಹೇಳಿದೆ.
2011ರಲ್ಲಿ ಸುತ್ತೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಟ್ರಕ್‌ಗೆ ಡಿಕ್ಕಿಯಾಗಿ ಸ್ವಾಮೀಜಿ ಸಾವನ್ನಪ್ಪಿದ್ದರು. ಮೋಟಾರು ಅಪಘಾತ ಕೈಮು ನ್ಯಾಯಮಂಡಳಿಯು ₹1.2 ಲಕ್ಷವನ್ನು ಆಸ್ತಿಯ ನಷ್ಟ ಮತ್ತು ಅಂತ್ಯಕ್ರಿಯೆ ವೆಚ್ಚಕ್ಕೆ ಪಾವತಿಸಲು ಆದೇಶಿಸಿತ್ತು. ಆದರೆ, ಸ್ವಾಮೀಜಿಗೆ ಕುಟುಂಬವಿಲ್ಲ ಎಂದು ಮಠದ ಮುಖಸ್ಥರ ಸಾವಿನ ಅವಲಂಬಿತರಿಗೆ ಪರಿಹಾರ ಪಾವತಿಸಲು ನಿರಾಕರಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಮಠದ ಪ್ರತಿನಿಧಿ ಪ್ರಶ್ನಿಸಿದ್ದರು.
ಮಠವನ್ನು ಪ್ರತಿನಿಧಿಸಿದ್ದ ವಕೀಲರು ಸ್ವಾಮೀಜಿಯು ಮಠದ ಸೇವೆಯಲ್ಲಿ ನಿರತರಾಗಿದ್ದು, ಸಂಸ್ಥೆಗೆ ಅವರ ಸಾವಿನಿಂದ ಹಾನಿಯಾಗಿದೆ. ಹೀಗಾಗಿ, ಮುಖ್ಯಸ್ಥರ ನಿಧನದಿಂದ ಉಂಟಾಗಿರುವ ಅಲಂಬನೆಯ ಹಾನಿಗೆ ಪರಿಹಾರ ಪಡೆಯಲು ಅರ್ಹವಾಗಿದೆ" ಎಂದಿದ್ದರು.
ವಿಮಾ ಕಂಪನಿಯ ಪರ ವಕೀಲರು "ಮಠದ ಉತ್ತರಾಧಿಕಾರಿಯನ್ನು ಅವಲಂಬಿತರು ಎಂದು ಪರಿಗಣಿಸಲಾಗದು, ಸ್ವಾಮೀಜಿ ಸ್ವತಂತ್ರ ತಪಸ್ವಿ ಜೀವನವನ್ನು ನಡೆಸಿದ್ದರು" ಎಂದು ವಾದಿಸಿದ್ದರು.
"ಅವಲಂಬನೆಯನ್ನು ಕೌಟುಂಬಿಕ ಅವಲಂಬನೆಯೊಂದಿಗೆ ಮಾತ್ರ ಸಮೀಕರಿಸುವುದು ಮತ್ತು ಸಾಂಸ್ಥಿಕ ಅವಲಂಬನೆಯನ್ನು ಕಡೆಗಣಿಸಿರುವುದು ನ್ಯಾಯಮಂಡಳಿಯ ದೋಷವಾಗಿದೆ" ಎಂದು ನ್ಯಾಯಾಲಯ ಹೇಳಿದ್ದು, ನ್ಯಾಯಮಂಡಳಿಯ ಆದೇಶದಲ್ಲಿ ಮಾರ್ಪಾಡು ಮಾಡುವ ಮೂಲಕ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.
ಮಠದ ಪ್ರತಿನಿಧಿಯು ಅರ್ಜಿ ಸಲ್ಲಿಸಿದ ದಿನದಿಂದ ಹಣ ಪಾವತಿಸುವವರೆಗೂ ಪರಿಷ್ಕೃತ ₹4,74,330 ಮತ್ತು ಶೇ 6ರಷ್ಟು ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ. ಅಂತೆಯೇ ನಾಲ್ಕು ವಾರಗಳಲ್ಲಿ ವಿಮಾ ಕಂಪನಿಯು ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.