-->
law point 39 - ಮೌಢ್ಯವೋ ಧಾರ್ಮಿಕ ಆಚರಣೆಯೋ: ನಿರ್ಧಾರದ ಹಕ್ಕು, ನ್ಯಾಯವ್ಯಾಪ್ತಿ ಕೋರ್ಟ್‌ಗಿದೆ !

law point 39 - ಮೌಢ್ಯವೋ ಧಾರ್ಮಿಕ ಆಚರಣೆಯೋ: ನಿರ್ಧಾರದ ಹಕ್ಕು, ನ್ಯಾಯವ್ಯಾಪ್ತಿ ಕೋರ್ಟ್‌ಗಿದೆ !

ಮೌಢ್ಯವೋ ಧಾರ್ಮಿಕ ಆಚರಣೆಯೋ: ನಿರ್ಧಾರದ ಹಕ್ಕು, ನ್ಯಾಯವ್ಯಾಪ್ತಿ ಕೋರ್ಟ್‌ಗಿದೆ !





ಧಾರ್ಮಿಕ ಆಚರಣೆಯು ಮೂಢನಂಬಿಕೆಯ ಅನುಷ್ಠಾನವೋ ಅಲ್ಲವೋ ಎಂಬುದನ್ನು ಪರಿಗಣಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿ ನ್ಯಾಯಾಲಯಕ್ಕೆ ಇದೆ. ಧಾರ್ಮಿಕ ಆಚರಣೆ ಮತ್ತು ಮೂಢನಂಬಿಕೆ ಎರಡು ಭಿನ್ನ ವಿಷಯಗಳಾಗಿದ್ದರೂ ಒಂದರೊಳಗೆ ಇನ್ನೊಂದು ಹಾಸು ಹೊದ್ದುಕೊಂಡರೆ ಜೀವನ ಕ್ರಮದಲ್ಲಿ ಢಾಂಬಿಕತೆಯನ್ನು ಮೌಢ್ಯವನ್ನು ಪ್ರತ್ಯೇಕಿಸಿ ನೋಡುವ ವಿವೇಚನೆಯೂ ಅಗತ್ಯವಿದೆ.

ಶಬರಿಮಲೆ ದೇವಸ್ಥಾನ ಮತ್ತು ದೇಶದ ವಿವಿಧ ಪೂಜಾ ಸ್ಥಳಗಳಿಗೆ ಮಹಿಳೆಯರ ನಿರ್ಬಂಧಿತ ಪ್ರವೇಶಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದವನ್ನು ಬಗೆಹರಿಸುವಾಗ ಸುಪ್ರೀಂ ಕೋರ್ಟ್‌ನ ಮುಂದೆ ಈ ಗಹನವಾದ ವಿಷಯ ಉದ್ಭವವಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10-50 ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದ್ದ ಸಾಂಪ್ರದಾಯಿಕ ಪದ್ಧತಿಯನ್ನು ಸುಪ್ರೀಂ ಕೋರ್ಟ್ 2018ರಲ್ಲಿ ರದ್ದುಗೊಳಿಸಿ, ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿತು.

ಮಹಿಳೆಯ ಪ್ರವೇಶ ನಿರ್ಬಂಧವು ಸಂವಿಧಾನದ ಅಡಿಯಲ್ಲಿನ ಸಮಾನತೆಯ ಹಕ್ಕು ಮತ್ತು ಮಹಿಳೆಯರ ಘನತೆಯನ್ನು ಉಲ್ಲಂಘಿಸುತ್ತದೆ ಸುಪ್ರೀಂ ಕೋರ್ಟ್ ತೀರ್ಪು (2018) ಎಂದು ಹೇಳಿತ್ತು.

ಸುಪ್ರೀಂ ಕೋರ್ಟ್‌ನ ಈ ತೀರ್ಪು ವ್ಯಾಪಕ ಪ್ರತಿಭಟನೆಗೆ ಮತ್ತು ಜನಾಕ್ರೋಶಕ್ಕೆ ಕಾರಣವಾಗಿತ್ತು. ಕಣ್ಮುಚ್ಚಿ ಮೌಢ್ಯವನ್ನೂ ಸಹಿಸುವ ಢಾಂಬಿಕರು ಈ ತೀರ್ಪನ್ನು ಭಕ್ತಿಯ ಆಚರಣೆ ಮತ್ತು ಸಂಪ್ರದಾಯದ ಉಲ್ಲಂಘನೆ ಎಂದು ವಿರೋಧಿಸಿದರೆ, ನಾಸ್ತಿಕರು ಮತ್ತು ಮಹಿಳಾ ಸ್ವಾತಂತ್ರ್ಯ ಪರ ಹೋರಾಟಗಾರರು ಹಾಗೂ ಇತರ ಕೆಲವರು ಲಿಂಗ ಸಮಾನತೆಗಾಗಿ ಈ ತೀರ್ಪನ್ನು ಸ್ವಾಗತಿಸಿದರು. ಈ ವಿವಾದಿತ ತೀರ್ಪಿನ ಮರುಪರಿಶೀಲನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟಗಳು ಇನ್ನೂ ನಡೆಯುತ್ತಿವೆ.

ಮಹಿಳಾ ಪ್ರವೇಶ:

2019ರ ಜನವರಿಯಲ್ಲಿ ಇಬ್ಬರು ಮಹಿಳೆಯರು ಕಠಿಣ ಭದ್ರತೆಯ ನಡುವೆ ದೇವಸ್ಥಾನ ಪ್ರವೇಶಿಸಿ ಈ ಚರ್ಚೆಗೆ ಮತ್ತಷ್ಟು ಕಿಡಿ ಹೊತ್ತಿಸಿದ್ದರು. ಈ ಘಟನೆ ಮತ್ತಷ್ಟು ಉದ್ವಿಗ್ನತೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವನ್ನು ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿತು. ಇದಕ್ಕೆ ತಮ್ಮ ಅಭಿಪ್ರಾಯವನ್ನು ನೀಡುವಂತೆ ವಿವಿಧ ಸರ್ಕಾರಗಳನ್ನು ಅದೇ ರೀತಿ, ಕಾನೂನು ಪರಿಣಿತರು, ಗಣ್ಯರು ಮತ್ತು ಜನ ಸಮೂಹಕ್ಕೂ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಿತು.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ, ಬಿ.ವಿ. ನಾಗರತ್ನ, ಎಂ.ಎಂ. ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲ, ಅರವಿಂದ ಕುಮಾರ್, ಆಗಸ್ಟಿನ್ ಜಾರ್ಜ್‌ ಮಸೀಹ್, ಪ್ರಸನ್ನ ಬಿ. ವರಾಳೆ ಮತ್ತು ಆರ್. ಮಹಾದೇವನ್ ಅವರಿದ್ದ ವಿಸ್ತೃತ ಪೀಠ ಈ ಮಹತ್ವದ ಮರುಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ.

ಶ್ರೀ ಅಯ್ಯಪ್ಪ ಸ್ವಾಮಿಯು 'ನೈಷ್ಠಿಕ ಬ್ರಹ್ಮಚಾರಿ' ಆಗಿರುವುದರಿಂದ, ಮಹಿಳೆಯರ ಮುಟ್ಟಿನ ವಯಸ್ಸು ಎಂದು ಪರಿಗಣಿಸಲಾದ (10-50 ವರ್ಷ) ಸಮಯದಲ್ಲಿ ಮಹಿಳೆಯರಿಗೆ ದೇಗುಲದ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದೊಂದು ಸಂಪ್ರದಾಯದ ಆಚರಣೆ ಎಂಬುದು ಜನಜನಿತವಾಗಿತ್ತು.

ಮೌಢ್ಯದ ಆಚರಣೆ ನಿಲ್ಲಿಸಲು ಹಕ್ಕು, ನ್ಯಾಯವ್ಯಾಪ್ತಿ ಇದೆಯೇ..?

ಧಾರ್ಮಿಕ ಆಚರಣೆಯೊಂದು ಮೌಢ್ಯವೋ ಅಲ್ಲವೋ ಎಂದು ತೀರ್ಮಾನಿಸಲು ತನಗೆ ನ್ಯಾಯವ್ಯಾಪ್ತಿ ಇದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು. "ಅಗತ್ಯ ಧಾರ್ಮಿಕ ಆಚರಣೆ" ಯಾವುದು ಎಂಬುದನ್ನು ನಿರ್ಧರಿಸುವಾಗ ನ್ಯಾಯಾಲಯವು ನಿರ್ದಿಷ್ಟ ಧರ್ಮದ ತತ್ವಶಾಸ್ತ್ರದ ಮಸೂರದ ಮೂಲಕ ನೋಡಬೇಕು ಎಂಬುದು ನ್ಯಾ. ಬಿ.ವಿ. ನಾಗರತ್ನ ಅಭಿಪ್ರಾಯವಾಗಿತ್ತು.

ಭಕ್ತರಲ್ಲದವರು ಪಿಐಎಲ್ ಸಲ್ಲಿಸಬಹುದೇ? ಎಂಬ ಪ್ರಶ್ನೆಯೂ ನ್ಯಾಯಪೀಠದ ಮುಂದೆ ಉದ್ಭವವಾಯಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು ಭಕ್ತರಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು. ಅಯ್ಯಪ್ಪ ಸ್ವಾಮಿಯ ಭಕ್ತರಲ್ಲದವರು, ದೇಗುಲದ ಬಗ್ಗೆ ಕಾಳಜಿ ಇಲ್ಲದವರು ಅಲ್ಲಿನ ಆಚರಣೆಯ ಬಗ್ಗೆ ರಿಟ್ ಅರ್ಜಿ ಹಾಕಬಹುದೇ..? ಹೀಗೆ ಮುಂದುವರಿದರೆ, ನಾಳೆ ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶ ಕೋರಿ ಇತರ ಧರ್ಮೀಯರೂ ಅರ್ಜಿ ಸಲ್ಲಿಸಬಹುದು ಎಂಬ ಚರ್ಚೆಗಳು ನಡೆಯಿತು.

"ಇಂಡಿಯನ್ ಯಂಗ್ ಲಾಯರ್ಸ್‌" ಸಂಸ್ಥೆಯು ಮಹಿಳಾ ಭಕ್ತರ ಪರವಾಗಿ ಈ ಅರ್ಜಿ ಸಲ್ಲಿಸಿದೆ. ಇದು ಕೋರ್ಟ್‌ಗೆ ಬರಲು ಹಿಂಜರಿಯುವ ಮಹಿಳಾ ಭಕ್ತರನ್ನು ಪ್ರತಿನಿಧಿಸಿದೆ ಎಂದು ಸಂಸ್ಥೆ ಪರ ವಕೀಲರು ತಮ್ಮ ಅರ್ಜಿಯನ್ನು ಸಮರ್ಥಿಸಿಕೊಂಡರು.

"ಭಕ್ತರ ರಕ್ಷಣೆಗೆ ಸಂವಿಧಾನ ಇದೆ"

ಭಕ್ತನೊಬ್ಬ ದೇವಸ್ಥಾನಕ್ಕೆ ಪೂಜೆಗಾಗಿ ಹೋಗುವಾಗ ದೇವರ ಗುಣಲಕ್ಷಣಕ್ಕೆ ವಿರುದ್ಧವಾಗಿ ಇರಲು ಸಾಧ್ಯವಿಲ್ಲ. ದೇವರ ದೈವಿಕ ಚೈತನ್ಯಕ್ಕೆ ಭಕ್ತರು ಶರಣಾಗುತ್ತಾರೆ ಎಂಬುದು ಶಬರಿಮಲೆಯ ಮುಖ್ಯ ಅರ್ಚಕರು ನ್ಯಾಯಪೀಠದ ಮುಂದೆ ಅಭಿಪ್ರಾಯ ಮಂಡಿಸಿದರು.

ಭಕ್ತರೊಬ್ಬರು ತಾನು ದೇವಸ್ಥಾನಕ್ಕೆ ಹೋಗುವಾಗ ಅಲ್ಲಿ ದೇವರಿದ್ದಾನೆ ಎಂಬ ನಂಬಿಕೆಯಿಂದ ಅಲ್ಲಿಗೆ ಹೋಗುತ್ತಾರೆ. ದೇವರು ತನ್ನ ಸೃಷ್ಟಿಕರ್ತ ಎನ್ನುವುದು ಭಕ್ತರ ಮೂಲ ನಂಬಿಕೆ ಆಗಿರುತ್ತದೆ. ದೇವರ ಮುಂದೆ ಹೋಗಿ ನಿಲ್ಲುವಾಗ ಭಕ್ತರ ಹೃದಯದಲ್ಲಿ ಅಶುದ್ಧವಾದದ್ದು ಏನೂ ಇರುವುದಿಲ್ಲ. ಆದರೆ, ಹುಟ್ಟಿನಿಂದ, ನಿರ್ದಿಷ್ಟ ಸನ್ನಿವೇಶದಿಂದ ಅಥವಾ ವಂಶ ಪಾರಂಪರ್ಯದಿಂದ ದೇವರನ್ನು ಮುಟ್ಟಲು ನಿರಾಕರಿಸಿದರೆ ಹೇಗೆ? ಅಂತಹ ಸಂದರ್ಭದಲ್ಲಿ ಭಕ್ತರ ರಕ್ಷಣೆಗೆ ಸಂವಿಧಾನ ಬರುವುದಿಲ್ಲವೇ..? ಎಂಬ ಪ್ರಶ್ನೆ ಈ ಜಟಿಲವಾಗಿದೆ. ಆದರೆ, 'ಸೃಷ್ಟಿಕರ್ತ' ಮತ್ತು 'ಸೃಷ್ಟಿ'ಯ ನಡುವೆ ವ್ಯತ್ಯಾಸ ಇರಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಪೀಠ ಮನದಟ್ಟು ಮಾಡಿತು. ಈ ಬಗ್ಗೆ ಮುಕ್ತ ಅಭಿಪ್ರಾಯ ಮಂಡನೆಗೆ ವಿಸ್ತೃತ ವಾದಕ್ಕೆ ನ್ಯಾಯಪೀಠ ಅವಕಾಶ ನೀಡಿತು.

ವಾಟ್ಸ್ಯಾಪ್ ಯೂನಿವರ್ಸಿಟಿಯ ಅಭಿಪ್ರಾಯಕ್ಕೆ ಅವಕಾಶವಿಲ್ಲ: ಸುಪ್ರೀಂ ಕೋರ್ಟ್‌

ನ್ಯಾಯಪೀಠದ ಸೂಚನೆಯಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಅಭಿಪ್ರಾಯವನ್ನು ವಾದವನ್ನು ಅಫಿಡವಿಟ್ ಮೂಲಕ ಮಂಡಿಸಿವೆ. ಶಶಿ ತರೂರ್‌, ನೀರಜ್ ಕಿಶನ್, ರಾಜೀವ್ ಧವನ್ ಸೇರಿದಂತೆ ವಿವಿಧ ಚಿಂತಕರು, ಕಾನೂನು ಪಂಡಿತರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಅರ್ಚಕರು, ಆಧ್ಯಾತ್ಮಕ ಪ್ರಾಜ್ಞರು, ದೇವಸ್ಥಾನದ ಮುಖಂಡರು ತಮ್ಮ ಅಭಿಪ್ರಾಯಗಳನ್ನು ನ್ಯಾಯಪೀಠದ ಮುಂದೆ ಸಲ್ಲಿಸಿದ್ದಾರೆ. ಎಲ್ಲ ಗಣ್ಯರ ನ್ಯಾಯಶಾಸ್ತ್ರಜ್ಞರ ಅಭಿಪ್ರಾಯಗಳನ್ನು ವೈಯಕ್ತಿಕ ಅಭಿಪ್ರಾಯಗಳಾಗಿದ್ದರೂ ಗೌರವಿಸುವುದಾಗಿ ವಿಸ್ತೃತ ಸಾಂವಿಧಾನಿಕ ನ್ಯಾಯಪೀಠ ಹೇಳಿತು. ಆದರೆ, ಕೆಲವೊಂದು ವಾಟ್ಸ್ಯಾಪ್ ವಿಶ್ವವಿದ್ಯಾನಿಲಯ ಪ್ರೇರಿತ ಅಭಿಪ್ರಾಯಗಳಿಗೆ ಮಣೆ ಹಾಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತು.

ಧಾರ್ಮಿಕ ಆಚರಣೆಯು ಮೂಢನಂಬಿಕೆ ಎಂದು ಊಹಿಸಿದರೂ ಅದು ಮೂಢನಂಬಿಕೆ ಎಂದು ನಿರ್ಧರಿಸುವುದು ಯಾರು ಎಂಬುದು ಮತ್ತೊಂದು ಮುಖ್ಯವಾದ ಪ್ರಶ್ನೆಯಾಗಿದೆ. ಅದು ನ್ಯಾಯಾಲಯದ ಕೆಲಸವಲ್ಲ, ಬದಲಾಗಿ ಅದು ಶಾಸಕಾಂಗದ ಕೆಲಸ ಎಂಬುದನ್ನು ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಅಭಿಪ್ರಾಯವಾಗಿತ್ತು. ಶಾಸಕಾಂಗವು ಮಧ್ಯಪ್ರವೇಶಿಸಿ ಸುಧಾರಣೆಗಾಗಿ ಕಾನೂನು ರೂಪಿಸುತ್ತದೆ ಎಂದು ತಮ್ಮ ವಾದವನ್ನು ಸರ್ಮಥಿಸಿಕೊಂಡರು.

ಆದರೆ, ಈ ವಾದಕ್ಕೆ ಸೊಪ್ಪು ಹಾಕದ ಸುಪ್ರೀಂ ಕೋರ್ಟ್, ಸಂವಿಧಾನವು ವೈಜ್ಞಾನಿಕ ಮನೋಭಾವಕ್ಕೆ ಪೂರಕವಾದ ಭಾವನೆಗಳಿಗೆ ಸದಾ ತೆರೆದುಕೊಳ್ಳುತ್ತದೆ. ಯಾವುದು 'ಮೂಢನಂಬಿಕೆ' ಎಂಬುದನ್ನು ನಿರ್ಧರಿಸುವ ಹಕ್ಕು ಮತ್ತು ನ್ಯಾಯವ್ಯಾಪ್ತಿ ಸುಪ್ರೀಂ ಕೋರ್ಟ್‌ಗೆ ಇದೆ ಎಂಬುದನ್ನು ಸ್ಪಷ್ಟಪಡಿಸಿತು. ಮತ್ತು ಆನಂತರ ಅಂತಹ ಆಚರಣೆಗಳನ್ನು ನಿರ್ಬಂಧಿಸಲು ಏನು ಮಾಡಬೇಕು ಎಂದು ಶಾಸಕಾಂಗ ತೀರ್ಮಾನಿಸಬೇಕು. ಆದರೆ, ಶಾಸಕಾಂಗದ ನಿರ್ಧಾರವೇ ಕೊನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಂವಿಧಾನಿಕ ಪೀಠ ಹೇಳಿದ್ದು, ಸಂವಿಧಾನದ ಪಾರಮ್ಯವನ್ನು ಎತ್ತಿಹಿಡಿಯುವಂತಾಯಿತು.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu