ಲೋಕ ಅದಾಲತ್ ರಾಜಿ ಒಪ್ಪಂದ ರದ್ದು ಮಾಡಿದ ಹೈಕೋರ್ಟ್: ಅದಾಲತ್ ತೀರ್ಪು ಪ್ರಶ್ನಾತೀತವಲ್ಲ ಎಂದ ನ್ಯಾಯಪೀಠ
ಲೋಕ ಅದಾಲತ್ ರಾಜಿ ಒಪ್ಪಂದ ರದ್ದು ಮಾಡಿದ ಹೈಕೋರ್ಟ್: ಅದಾಲತ್ ತೀರ್ಪು ಪ್ರಶ್ನಾತೀತವಲ್ಲ ಎಂದ ನ್ಯಾಯಪೀಠ
ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ. 'ಲೋಕ ಅದಾಲತ್‌ನಲ್ಲಿ ವ್ಯಾಜ್ಯಕರ್ತ, ಉಭಯ ಪಕ್ಷಗಾರರ ಅನುಪಸ್ಥಿತಿಯಲ್ಲಿ ತೀರ್ಪು ಅಂಗೀಕೃತವಾಗಿದ್ದರೆ ಅಂತಹ ತೀರ್ಪು ಎಲ್ಲ ಕಾಲಕ್ಕೂ ಕಾನೂನುಬದ್ದವಾಗಿದೆ ಮತ್ತು ಸರಿಯಾಗಿದೆ ಎಂದು ಹೇಳಲಾಗದು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಮೋಟಾರು ವಾಹನ ಅಪಘಾತ ಪ್ರಕರಣವೊಂದರಲ್ಲಿ ಲೋಕ ಅದಾಲತ್ ತೀರ್ಪು ಪ್ರಶ್ನಿಸಿ ಹುಬ್ಬಳ್ಳಿ ಆನಂದನಗರದ ಬಡ ಕುಟುಂಬದ ತಾಯಿ-ಮಗ, ಶೈಲಾ ಐ ಕರ್ಕಿಹಳ್ಳಿಮಠ (37) ಮತ್ತು ವಿಶಾಲ್ ಐ ಕರ್ಕಿಹಳ್ಳಿಮಠ (11) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
'ಲೋಕ ಅದಾಲತ್‌ನಲ್ಲಿ ನಮಗೆ ನೀಡಲಾಗಿದ್ದ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವುದು ತಪ್ಪಾಗಿದೆ. ನಮ್ಮ ಪರವಾದ ಹಿಂದಿನ ವಕೀಲರು ಮತ್ತು ವಿಮಾ ಕಂಪನಿಯ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಯಾವತ್ತೂ ಗಮನಕ್ಕೆ ಬಂದೇ ಇರಲಿಲ್ಲ. ಆದ್ದರಿಂದ. ಲೋಕ ಅದಾಲತ್‌ನಲ್ಲಿ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿ ಆದೇಶಿಸಿರುವುದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಮನ್ನಿಸಿದೆ.
'ಅರ್ಜಿ ದಾಖಲಿಸಿದ ದಿನದಿಂದ ಅರ್ಜಿದಾರರಿಗೆ ಪಾವತಿಯಾಗುವ ದಿನದವರೆಗೆ ವಾರ್ಷಿಕ ಶೇ 6ರ ಬಡ್ಡಿ ಸೇರಿಸಿ ₹9.18.600 ಪರಿಹಾರ ನೀಡಬೇಕು' ಎಂಬ ನ್ಯಾಯಮಂಡಳಿ ಆದೇಶವನ್ನು ಪುನರ್‌ಸ್ತಾಪಿಸಿದೆ.
ಅರ್ಜಿದಾರರ ಪರ ಅವರ ವಕೀಲರು ಸಹಿ ಮಾಡಿದ್ದಾರೆ. ಒಂದು ವೇಳೆ ಈ ರಿಟ್ ಅರ್ಜಿಯನ್ನು ಮನ್ನಿಸಿದರೆ ಅಸಂಖ್ಯಾತ ವ್ಯಾಜ್ಯಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಅನಿರೀಕ್ಷಿತ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ' ಎಂದು ಪ್ರತಿವಾದಿ ಇನ್ಸೂರೆನ್ಸ್ ಕಂಪನಿ ವಾದಿಸಿತು.
ಈ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, 'ಅರ್ಜಿದಾರರು ಜಂಟಿ ಮೆಮೊಗೆ (ಜ್ಞಾಪನ ಪತ್ರ) ಸಹಿ ಹಾಕಿಲ್ಲ ಎಂಬುದು ಗಮನಾರ್ಹ ಅಂಶ' ಎಂದು ಯೋಗ್ಯತೆಯ ಆಧಾರದಡಿ ಅರ್ಜಿದಾರರ ಮನವಿಯನ್ನು ಪರಿಗಣಿಸಿದೆ.
'ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಗಾರರು ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಮತ್ತು ಅದಾಲತ್‌ನ ಹೊರಗೆ ಮಾಡಿಕೊಂಡ ಯಾವುದೇ ಒಪ್ಪಂದಕ್ಕೆ ಅವರು ಸಹಿ ಹಾಕುವುದಿಲ್ಲ ಎಂಬುದನ್ನು ಲೋಕ ಅದಾಲತ್ ಖಚಿತಪಡಿಸಿಕೊಳ್ಳಬೇಕು' ಎಂದು ನ್ಯಾಯಪೀಠ ಎಚ್ಚರಿಸಿದೆ.
ಪ್ರಕರಣದ ವಿವರ:
ಬಾಣಸಿಗನಾಗಿ ತಿಂಗಳಿಗೆ 26 ಸಾವಿರ ರೂ. ವೇತನಕ್ಕೆ ದುಡಿಯುತ್ತಿದ್ದ ಶೈಲಾ ಐ ಕರ್ಕಿಹಳ್ಳಿ ಮಠ ಅವರ ಪತಿ (41) 2012ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಪರಿಹಾರ ನೀಡಿಕೆ ಮೊತ್ತವನ್ನು ಪ್ರಶ್ನಿಸಿದ್ದ ಐಸಿಐಸಿಐ ಇನ್ನೂರೆನ್ಸ್ ಕಂಪನಿ 2014ರಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವೇಳೆ ಪ್ರಕರಣವನ್ನು ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಲು ಶಿಫಾರಸು ಮಾಡಲಾಗಿತ್ತು.
ಧಾರವಾಡ ಪೀಠದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ, ಹೈಕೋರ್ಟ್ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿಯು ಪರಿಹಾರದ ₹9,18,600 ಮೊತ್ತವನ್ನು ₹7,82,000ಕ್ಕೆ ಇಳಿಸಿ ಅಂತಿಮಗೊಳಿಸಿತ್ತು.
ಈ ತೀರ್ಪಿನ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದ ಶೈಲಾ ಮತ್ತು ಮಗ, 'ಲೋಕ ಅದಾಲತ್ ಮುಂದೆ ಪರಿಹಾರದ ಮೊತ್ತವನ್ನು ಕಡಿಮೆ ಮಾಡುವಾಗ ನಮ್ಮ ಕಡೆಯ ವಕೀಲರು ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ ಎಂಬುದು ಮತ್ತು ಇದಕ್ಕಾಗಿ ಸಲ್ಲಿಸಲಾದ ಜಂಟಿ ಮೆಮೊಗೆ ಸಹಿ ಹಾಕಿರುವುದು ನಮ್ಮ ಅರಿವಿಗೆ ಬಂದಿರಲಿಲ್ಲ. ಹಾಗಾಗಿ, ಮಿಶ್ರಿತ ಮೊದಲ ಮೇಲ್ಮನವಿಗೆ (ಎಂಎಫ್‌ಎ) ಸಂಬಂಧಿಸಿದಂತೆ ಲೋಕ ಅದಾಲತ್ 2019ರ ಜುಲೈ 13ರಂದು ನೀಡಿರುವ ಆದೇಶವನ್ನು ಸದ್ದುಗೊಳಿಸಬೇಕು' ಎಂದು ಕೋರಿದ್ದರು.
ಉಭಯ ಪಕ್ಷಗಾರರು ಜಂಟಿ ಮಮೊಗೆ ಸಹಿ ಹಾಕಿ ಇತ್ಯರ್ಥಗೊಳಿಸಿದ ಮತ್ತು ಇಂತಹ ಪ್ರಕರಣವನ್ನು ಜಂಟಿ ಮೆಮೊ ಸಲ್ಲಿಕೆಯ ಮೂಲಕವೇ ಅದಾಲತ್ ಅಂಗೀಕರಿಸಿದ್ದರೆ ಮಾತ್ರ ಲೋಕ ಅದಾಲತ್ ತೀರ್ಪು ಕಾರ್ಯಗತಗೊಳ್ಳುತ್ತದೆ. ಎಂಬುದನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಸ್ಪಷ್ಟಪಡಿಸಿದರು.
ಲೋಕ ಅದಾಲತ್ ಐತಿರ್ಪನ್ನು ಸೀಮಿತ ಆಧಾರದಡಿ ಪ್ರಶ್ನಿಸಬಹುದು:
'ಉಭಯ ಪಕ್ಷಗಾರರು ಮಾಡಿಕೊಂಡ ಇತ್ಯರ್ಥ ಅಥವಾ ಒಪ್ಪಂದಕ್ಕೆ ತಮ್ಮ ಸಮ್ಮುಖದಲ್ಲಿ ಮಾತ್ರವೇ ತಮ್ಮ ಸಹಿ ಹಾಕುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಲೋಕ ಅದಾಲತ್‌ನ ಸದಸ್ಯರ ಜವಾಬ್ದಾರಿಯಾಗಿದೆ' ಎಂದು ತಿಳಿಸಿರುವ ನ್ಯಾಯಪೀಠ, ಪಂಜಾಬ್ ರಾಜ್ಯ ಸರ್ಕಾರ ಮತ್ತು ಜಲೋರ್ ಸಿಂಗ್ ಪ್ರಕರಣದಲ್ಲಿ ಉಲ್ಲೇಖಿಸಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ಭಾರ್ಗವಿ ಕನ್ಸ್‌ಟ್ರಕ್ಷನ್ v/s ಕೊತ್ತಕಾಪು ಮುತ್ತಾಯಮ್ ರೆಡ್ಡಿ ಪ್ರಕರಣದಲ್ಲಿ ಎತ್ತಿಹಿಡಿದಿದೆ ಎಂಬುದನ್ನು ಉಲ್ಲೇಖಿಸಿದೆ.
ಉಭಯ ಪಕ್ಷಗಾರರರು ಜಂಟಿ ಮೆಮೊ ಸಲ್ಲಿಸಿ ಇತ್ಯರ್ಥಗೊಂಡ ವಿಷಯದಲ್ಲಿ ಲೋಕ ಅದಾಲತ್ ತೀರ್ಪು ನೀಡಿದರೆ ಅದು ಅಂತಿಮವಾಗುತ್ತದೆ ಮತ್ತು ಇತ್ಯರ್ಥಕ್ಕೆ ಉಭಯ ಪಕ್ಷಗಾರರು ಬದ್ಧವಾಗಿ ಇರಬೇಕಾಗುತ್ತದೆ. ಇದು ಸಿವಿಲ್ ನ್ಯಾಯಾಲಯದ ತೀರ್ಪಿನಂತೆ ಕಾರ್ಯಗತಗೊಳ್ಳುತ್ತದೆ. ಇದರ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಒಂದು ವೇಳೆ ಪಕ್ಷಗಾರರಲ್ಲಿ ಯಾರಾದರೊಬ್ಬರು ಇತ್ಯರ್ಥಗೊಂಡ ಈ ತೀರ್ಪನ್ನು ಪ್ರಶ್ನಿಸಲು ಬಯಸಿದರೆ, ಅದನ್ನು ಸಂವಿಧಾನದ 226 ಮತ್ತು 227ನೇ ವಿಧಿಯ ಅಡಿಯಲ್ಲಿ ಬಹಳ ಸೀಮಿತ ಆಧಾರದಡಿ ಪ್ರಶ್ನಿಸಬಹುದು' ಎಂಬ ಅಂಶಗಳನ್ನು ಮೆಲುಕು ಹಾಕಿದೆ.
ಪ್ರಕರಣ: ಶೈಲಾ ಮತ್ತಿತರರು ವಿರುದ್ಧ ಆಡಳಿತ ನಿರ್ದೇಶಕರು, ಐಸಿಐಸಿಐ ಲೋಂಬಾರ್ಡ್ ಜಿಐಸಿ ಲಿ.
ಕರ್ನಾಟಕ ಹೈಕೋರ್ಟ್, WP 102733/2025 Dated 25-03-2026