ದಯಾನಂದ ಪೈ, ಸತೀಶ್ ಪೈ ಪ್ರವರ್ತಿತ 'ಲೇಕ್ ವ್ಯೂ': ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಜಮೀನು- 'ಭೂ ಮಾಫಿಯಾ'ಕ್ಕೆ ಸಿಬಿಐ ತನಿಖೆಯ ಕುಣಿಕೆ ಹಾಕಿದ ಕರ್ನಾಟಕ ಹೈಕೋರ್ಟ್
ದಯಾನಂದ ಪೈ, ಸತೀಶ್ ಪೈ ಪ್ರವರ್ತಿತ 'ಲೇಕ್ ವ್ಯೂ': ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಜಮೀನು- 'ಭೂ ಮಾಫಿಯಾ'ಕ್ಕೆ ಸಿಬಿಐ ತನಿಖೆಯ ಕುಣಿಕೆ ಹಾಕಿದ ಕರ್ನಾಟಕ ಹೈಕೋರ್ಟ್
ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಭೂಮಿ ಮಂಜೂರು ಮಾಡಿರುವುದು ನಿಜಕ್ಕೂ ಒಂದು ಘೋರ ವಂಚನೆ ಎಂದು ಬಣ್ಣಿಸಿದ ಕರ್ನಾಟಕ ಹೈಕೋರ್ಟ್, ಈ ಭಾರೀ ಭೂ ವಂಚನೆಯ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಲು ಸಿಬಿಐ ತನಿಖೆಗೆ ವಹಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್ ಮತ್ತು ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತನಿಖೆಯ ಆದೇಶ ಹೊರಡಿಸಿದೆ.
ಕರಾವಳಿ ಮೂಲದ ಪ್ರತಿಷ್ಠಿತ ಉದ್ಯಮಿಗಳಾದ ಡಾ. ರಾಮದಾಸ್ ಪೈ, ಸೈಯದ್ ಮೊಹಮ್ಮದ್ ಸಲಾಹುದ್ದೀನ್, ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಅವರನ್ನು ಪ್ರವರ್ತಕರನ್ನಾಗಿ ತೋರಿಸಿ 'ಲೇಕ್‌ವೀವ್ ಟೂರಿಸಂ' ಸಂಸ್ಥೆಯ ಅಸ್ತಿತ್ವವನ್ನು ಬಿಂಬಿಸಲಾಗಿತ್ತು.
ಈ ಸಂಸ್ಥೆಯನ್ನು ಪ್ರತಿನಿಧಿಸಿ ಪಿ ಸತೀಶ್ ಪೈ 2000ದಲ್ಲಿ ಸರ್ಕಾರಕ್ಕೆ ಒಂದು ಅರ್ಜಿ ಸಲ್ಲಿಸಿದ್ದರು. ರೆಸಾರ್ಟ್, ಪಂಚತಾರಾ ಹೋಟೆಲ್, ಅಮ್ಯೂಸ್‌ಮೆಂಟ್ ಪಾರ್ಕ್ ಇತ್ಯಾದಿ ಮಾಡಲು 'ಯೂನಿಕೇರ್ ಟೂರಿಸ್ಟ್ ಸೆಂಟರ್' ಆರಂಭಿಸುವ ಉದ್ದೇಶಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಂತೆ ಈ ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿಯ ಭಾಗವಾಗಿ ಅನುಕ್ರಮವಾಗಿ ಕರ್ನಾಟಕ ಸರ್ಕಾರ 2002 ಮತ್ತು 2004ರಲ್ಲಿ ಕೆಐಎಡಿಬಿಯು ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿತ್ತು.
ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ 2002-2004ರ ನಡುವೆ ಕೆಐಎಡಿಯು 55 ಎಕರೆ ಜಮೀನು ವಶಪಡಿಸಿಕೊಂಡು ಅದನ್ನು ಅಸ್ತಿತ್ವದಲ್ಲೇ ಇಲ್ಲದ ಲೇಕ್‌ವೀವ್ ಟೂರಿಸಂ ಕಾರ್ಪೊರೇಶನ್‌ಗೆ ನೀಡುವುದಲ್ಲದೇ ಅದನ್ನು ಟೌನ್‌ಶಿಪ್ ಮತ್ತು ಇತರೆ ಯೋಜನೆ ಕೈಗೊಳ್ಳಲು 2023ರಲ್ಲಿ ಅನುಮತಿಸಿದ ಅಧಿಕಾರಿಗಳು ಮತ್ತು ಸಂಸ್ಥೆಯ ನಿರ್ದೇಶಕರ ವಿರುದ್ಧ ಕರ್ನಾಟಕ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ಹೊರಡಿಸಿದೆ. ಜೊತೆಗೆ, ಇಡೀ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ, ಲೇಕ್‌ವೀವ್ ಟೂರಿಸಂ ಕಾರ್ಪೊರೇಶನ್‌ಗೆ ಬರೋಬ್ಬರಿ ₹10 ಲಕ್ಷ ದಂಡ ವಿಧಿಸಿದೆ.
"ಅಸ್ತಿತ್ವದಲ್ಲೇ ಇಲ್ಲದ 2011ರಲ್ಲಿ ಆರಂಭಿಸಲ್ಪಟ್ಟಿರುವ ಲೇಕ್‌ವೀಕ್ ಟೂರಿಸಂಗೆ ಅದರ ನಿರ್ದೇಶಕರ ಜೊತೆ ಸೇರಿ ಭೂಮಿ ಸ್ವಾಧೀನಪಡಿಸಿಕೊಂಡಿರುವ ಇಡೀ ಪ್ರಕ್ರಿಯೆಯು ಸರ್ಕಾರದ ಪ್ರಾಧಿಕಾರವು ನಡೆಸಿರುವ ಕ್ರಿಮಿನಲ್ ಪಿತೂರಿಯು ಘೋರ ವಂಚನೆಯಲ್ಲದೆ ಬೇರೇನೂ ಅಲ್ಲ. ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ನೈಜ ಭೂಮಾಲೀಕರಿಗೆ ಅವರ ಆಸ್ತಿಗೆ ಬಿಡಿಗಾಸು ನೀಡಿರುವ ಇದು ಶಾಸನಕ್ಕೆ ಮಾಡಿರುವ ಮಹಾವಂಚನೆಯಾಗಿದೆ" ಎಂದು ನ್ಯಾಯಪೀಠ ಆದೇಶಿಸಿದೆ.
ಇಡೀ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ, ಲೇಕ್‌ವೀವ್ ಟೂರಿಸಂ ಕಾರ್ಪೊರೇಶನ್‌ಗೆ ಬರೋಬ್ಬರಿ ₹10 ಲಕ್ಷ ದಂಡ ವಿಧಿಸಿ ಆದೇಶಿಸಿರುವ ಕರ್ನಾಟಕ ಹೈಕೋರ್ಟ್. ನಾಲ್ಕು ವಾರಗಳಲ್ಲಿ ದಂಡ ಪಾವತಿಸುವಂತೆ ನಿರ್ದೇಶಿಸಿದೆ.
ಸತೀಶ್ ಪೈ ಅವರು 2000ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಪ್ರವರ್ತಕರ ಪೈಕಿ ಯಾರೊಬ್ಬರೂ 2011ರಲ್ಲಿ ಲೇಕ್‌ವೀವ್ ಟೂರಿಸಂ ಆರಂಭವಾದಾಗ ಇರಲಿಲ್ಲ.
ಸಂಸ್ಥೆ ಆರಂಭವಾದಾಗ ಅದರ ಷೇರು ಬಂಡವಾಳವನ್ನು ಒಂದು ಲಕ್ಷ ತೋರಿಸಲಾಗಿದ್ದು, ಶೂನ್ಯ ಆದಾಯ ತೋರಿಸಲಾಗಿದೆ. 2011ರಿಂದ 12 ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾಣದ ಸಂಸ್ಥೆಗೆ 2023ರ ಮಾರ್ಚ್ 7ರಂದು ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯು ಎರಡು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಜೊತೆ ಲೇಕ್‌ವೀವ್ ಟೂರಿಸಂ ಕಾರ್ಪೊರೇಶನ್ ಪಾಲುದಾರಿಕೆ ಹೊಂದಿದೆ ಎಂಬುದನ್ನು ಪರಿಗಣಿಸಿದ್ದು, ವಾಣಿಜ್ಯ ಕಚೇರಿ ಸ್ಥಳಗಳನ್ನು ಒಳಗೊಂಡು ಸಮಗ್ರ ಟೌನ್‌ಶಿಪ್, ಮಾಹಿತಿ ತಂತ್ರಜ್ಞಾನ ಪಾರ್ಕ್ ಇತ್ಯಾದಿಗಾಗಿ ಭೂಮಿ ಮಾರ್ಪಾಡನ್ನು ಒಪ್ಪಿತ್ತು.
ಮೊದಲಿಗೆ ಏಕಸದಸ್ಯ ಪೀಠವು ಭೂಮಾಲೀಕರ ಅರ್ಜಿ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಅವರು ಮೇಲ್ಮನವಿ ಸಲ್ಲಿಸಿದ್ದರು.
ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ ಅನುಕೂಲ ಮಾಡಿಕೊಡಲು ನಿಜವಾದ ಭೂಮಾಲೀಕರಿಗೆ ಬಿಡಿಗಾಸಿಗೆ ಅವರ ಬೆಲೆಬಾಳುವ ಭೂಮಿಯನ್ನು ನಿರಾಕರಿಸುವುದು ಶಾಸನಕ್ಕೆ ಮಾಡುವ ವಂಚನೆಯಾಗಿದೆ ಎಂದು ವಿಭಾಗೀಯ ಪೀಠ ಹೇಳಿದೆ. ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಯು 31.12.2001ರಲ್ಲಿ ಆರಂಭವಾಗಿ 2,000 ಮಂದಿಗೆ ಉದ್ಯೋಗ ಕಲ್ಪಿಸುವುದಾಗಿ ಹೇಳಿತ್ತು. ಆದರೆ, 2022-23ರ ಆರ್ಥಿಕ ವರ್ಷದಲ್ಲಿ 8,60,686 ರೂಪಾಯಿ ಆದಾಯ ತೋರಿಸಿದೆ. 2022-23 ಆರ್ಥಿಕ ವರ್ಷದ ನಿರ್ದೇಶಕರ ವರದಿಯನ್ನು ನೋಡಿದರೆ ಮೂಲ ಉದ್ಯಮ ಚಟುವಟಿಕೆ ಆರಂಭಿಸಲು ಸಂಸ್ಥೆಯು ಇನ್ನೂ ಉದ್ಯಮ ಸಾಧ್ಯತೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಇದೆ ಎಂದು ತೋರಿಸಲಾಗಿದೆ. ಬರುವಂತ ವರ್ಷಗಳಲ್ಲಿ ಸಂಸ್ಥೆ ಬೆಳವಣಿಗೆ ಕಾಣದಲ್ಲಿ ಎನ್ನುವ ಆಶಾಭಾವವನ್ನು ಸಂಸ್ಥೆ ವ್ಯಕ್ತಪಡಿಸಿದೆ. 31.03.2022ರ ಅಂತ್ಯಕ್ಕೆ ಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ ₹45,963 ಇದ್ದು, ಲಾಭ ₹66,715" ಎಂದು ವಿಭಾಗೀಯ ಪೀಠ ಹೇಳಿದೆ.
ಹಿಂದಿನ ಸುತ್ತಿನಲ್ಲಿ ಭೂಸ್ವಾಧೀನವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು ಎಂಬ ಸಂಸ್ಥೆಯ ವಾದವನ್ನು ವಿಭಾಗೀಯ ಪೀಠವು ತಿರಸ್ಕರಿಸಿದೆ. “ವಂಚನೆಯಾಗಿದೆ ಎಂಬುದು ಕಂಡು ಬಂದರೆ ಆನಂತರ ತನ್ನ ಆದೇಶವನ್ನು ಹಿಂಪಡೆದಿರುವ, ಸರಿಪಡಿಸಿರುವ ಕೆಲಸವನ್ನು ಸಕ್ರಮ ನ್ಯಾಯಾಲಯ ಮಾಡಿವೆ ಎಂದು ವಿಭಾಗೀಯ ಪೀಠ ಸಮರ್ಥಿಸಿದೆ.
'ಲೇಕ್‌ವೀವ್ ಟೂರಿಸಂ ಸಂಸ್ಥೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ರಾಜ್ಯದ ಸರ್ಕಾರದ ಪ್ರಾಧಿಕಾರ ಕೈಗೊಂಡಿದೆ. ಸರ್ಕಾರದ ಪ್ರಾಧಿಕಾರವೇ ಘೋರ ವಂಚನೆಯಲ್ಲಿ ಭಾಗಿಯಾಗಿರುವುದರಿಂದ ರಾಜ್ಯ ಸರ್ಕಾರದ ಸಂಸ್ಥೆಗಳು ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆ ನಡೆಸುತ್ತವೆ ಎಂದು ನಿರೀಕ್ಷಿಸಲಾಗದು. ಈ ದೃಷ್ಟಿಯಿಂದ ಪಕ್ಷಪಾತವಾಗಿ ಸ್ವತಂತ್ರ ತನಿಖಾ ಸಂಸ್ಥೆ ತನಿಖೆ ನಡೆಸುವುದು ಅಗತ್ಯವಾಗಿದೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವುದು ಸರಿಯಾಗಿದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.