90 ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ: ಆನ್‌ಲೈನ್ ಅರ್ಜಿ ಆಹ್ವಾನ- ಕರ್ನಾಟಕ ಹೈಕೋರ್ಟ್ ಅಧಿಸೂಚನೆ
90 ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿ: ಆನ್‌ಲೈನ್ ಅರ್ಜಿ ಆಹ್ವಾನ- ಕರ್ನಾಟಕ ಹೈಕೋರ್ಟ್ ಅಧಿಸೂಚನೆ
ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ನ್ಯಾಯಾಲಯಗಳಲ್ಲಿ ಖಾಲಿ ಇರುವ 90 ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗೆ ಆನ್‌ಲೈನ್ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಬಗ್ಗೆ 16-04-2026ರಂದು ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2026 ಆಗಿರುತ್ತದೆ.
ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಆಹ್ವಾನಿಸಲಾದ ಈ 90 ಸಿವಿಲ್ ನ್ಯಾಯಾಧೀಶರ ಹುದ್ದೆಗಳಲ್ಲಿ 15 ಹೊಸ ಹುದ್ದೆಗಳು ಮತ್ತು 75 ಉಳಿಕೆ (ಬ್ಯಾಕ್‌ಲಾಗ್) ಹುದ್ದೆಗಳು ಸೇರಿದೆ.
ಈ ಅಧಿಸೂಚನೆಯು ಕರ್ನಾಟಕ ಹೈಕೋರ್ಟ್‌ನ ಮುಂದೆ ಬಾಕಿ ಇರುವ ರಿಟ್ ಅರ್ಜಿ 200448/2025, 17968/2025 ಮತ್ತು 3145/2023ರ ಅಂತಿಮ ಫಲಿತಾಂಶಕ್ಕೆ ಒಳಪಟ್ಟಿರುತ್ತದೆ.
ಹುದ್ದೆಗಳ ವರ್ಗೀಕರಣವನ್ನು 27-02-2026ರ ಕರ್ನಾಟಕ ಸರ್ಕಾರದ ಸರ್ಕಾರಿ ಆದೇಶದಂತೆ ಮಾಡಲಾಗಿದೆ.
ಅಭ್ಯರ್ಥಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಕಾನೂನು ಪದವಿ ಪಡೆದಿರಬೇಕು. ವಿಚಾರಣಾ ನ್ಯಾಯಾಲಯ ಸೇರಿದಂತೆ ಯಾವುದೇ ನ್ಯಾಯಾಲಯಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಮೂರು ವರ್ಷಕ್ಕಿಂತ ಕಡಿಮೆ ಇಲ್ಲದಂತೆ ನಿರಂತರ ಕಾನೂನು ವೃತ್ತಿ ಮಾಡುತ್ತಿರಬೇಕು. ಅಥವಾ ಕೇಂದ್ರ/ರಾಜ್ಯ ಸರ್ಕಾರದ ಪೂರ್ಣಾವಧಿ ಉದ್ಯೋಗದಲ್ಲಿ ಸರ್ಕಾರಿ ವಕೀಲರಾಗಿ ಮೂರು ವರ್ಷಕ್ಕಿಂತ ಕಡಿಮೆ ಇಲ್ಲದ ಅವಧಿಗೆ ಕೆಲಸ ನಿರ್ವಹಿಸಿರಬೇಕು.
ಅಭ್ಯರ್ಥಿಗಳ ವಯಸ್ಸು 40 ಮೀರಿರಬಾರದು. ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇರುತ್ತದೆ.
ಆಯ್ಕೆಯು ಪೂರ್ವಭಾವಿ ಲಿಖಿತ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ಕಂಪ್ಯೂಟರ್ ಜ್ಞಾನದ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಸಂದಾಯ ಮಾಡಲು ಈ ಕೆಳಗಿನ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.
https://judiciary.karnataka.gov.in//
ಅರ್ಜಿ ಸಲ್ಲಿಸುವ ಮುನ್ನ ಎಲ್ಲ ವಿವರಗಳನ್ನು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಆನ್‌ಲೈನ್ ಹೊರತುಪಡಿಸಿ ಇತರ ಯಾವುದೇ ವಿಧಾನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅದೇ ರೀತಿ, ಶುಲ್ಕ ಪಾವತಿಯಾಗದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.