ಕಾನೂನು ವ್ಯವಸ್ಥೆಯಲ್ಲಿ ಕಾಕ್ರೋಚ್ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷರ ಸ್ಫೋಟಕ ಹೇಳಿಕೆ
ಕಾನೂನು ವ್ಯವಸ್ಥೆಯಲ್ಲಿ ಕಾಕ್ರೋಚ್ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷರ ಸ್ಫೋಟಕ ಹೇಳಿಕೆ
ಬಾರ್ ಕೌನ್ಸಿಲ್ ಅಧ್ಯಕ್ಷರಾದ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಸ್ಫೋಟಕ ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿದೆ. ದೇಶದಲ್ಲಿರುವ ವೃತ್ತಿನಿರತ ವಕೀಲರಲ್ಲಿ ಶೇಕಡಾ 30ರಿಂದ 40ರಷ್ಟು ವಕೀಲರು ನಕಲಿಯಾಗಿದ್ಧಾರೆ. "ಫೇಕ್ ಡಿಗ್ರಿ"ಯನ್ನು ಹೊಂದಿದ್ದು, ವಕೀಲರಾಗಿ ನೋಂದಣಿ ಮಾಡಿಸಿಕೊಂಡು ನ್ಯಾಯಾಲಯಗಳಿಗೆ ವಾದ ಮಾಡಲು ಬರುತ್ತಿದ್ದಾರೆ ಎಂಬ ಶ್ರೀ ಮನನ್ ಅವರ ಮಾತು ವ್ಯಾಪಕ ಸಂಚಲನ ಮೂಡಿಸಿದ್ದು ನಿಜ.
ಕೆಲ ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಐತಿಹಾಸಿಕ 'ಜಿರಲೆ' ಕಾಮೆಂಟ್ ಮಾಡಿದ್ದರು. ಇದಾದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಡಿಜಿಟಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದು, ಸ್ವತಃ ಕೇಂದ್ರ ಸರ್ಕಾರವೇ ಇದೊಂದು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದು ಪರಿಗಣಿಸಿ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ಸ್ತಂಬನಗೊಳಿಸಿ, ಭಾರೀ ಒತ್ತಡದ ಬಳಿಕ ಪುನರ್ ಸ್ಥಾಪನೆಗೊಳಿಸಿತ್ತು.
"ನಮಗೆ ಹಿರಿಯ ವಕೀಲರ ಮಾನ್ಯತೆ ನೀಡಲು ದೆಹಲಿ ಹೈಕೋರ್ಟ್‌ಗೆ ನಿರ್ದೇಶನ ನೀಡಿ" ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸಿಜೆಐ ಸೂರ್ಯಕಾಂತ್, ಹಲವು ವಕೀಲರು ಹೊಂದಿರುವ ಪ್ರಮಾಣಪತ್ರದ ಬಗ್ಗೆಯೇ ಅನುಮಾನವಿದೆ. ಇವರ ಬಗ್ಗೆ ಬಾರ್ ಕೌನ್ಸಿಲ್ ಕ್ರಮ ಕೈಗೊಳ್ಳಬೇಕು ಎಂದು ನಾನು ಬಯಸುವುದಿಲ್ಲ. ಇಂತಹ ವಕೀಲರ ಪ್ರಮಾಣ ಪತ್ರದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದರು.
ಮುಂದುವರಿದು, "ನಕಲಿ ವಿದ್ಯಾರ್ಹತೆ ಪ್ರಮಾಣಪತ್ರ ಇಟ್ಟುಕೊಂಡು ಕಾನೂನು ವಲಯದ ವೃತ್ತಿಗೆ ಪ್ರವೇಶ ಮಾಡುವವರು ಸಮಾಜದಲ್ಲಿ ಜಿರಳೆಗಳಂತೆ ಇದ್ದು, ಈ ವರ್ಗ ಕ್ರಿಯಾಶೀಲತೆಯ ಹೆಸರಿನಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಿದ್ದಾರೆ" ಎಂದು ಹೇಳಿದ್ದರು. ಇದನ್ನು ಮಾಧ್ಯಮ ತಪ್ಪಾಗಿ ಅರ್ಥೈಸಿಕೊಂಡು, ಸಮಾಜದಲ್ಲಿನ ನಿರುದ್ಯೋಗಿ ಯುವಕರನ್ನು ಸಿಜೆಐ ಜಿರಳೆಗಳು ಎಂದು ಹೀಯಾಳಿಸಿದರು ಎಂದು ವರದಿ ಮಾಡಿದ್ದವು. ತಕ್ಷಣ ಈ ಬಗ್ಗೆ ಸಿಜೆಐ ಸೂರ್ಯಕಾಂತ್ ಅವರೇ ಸ್ಪಷ್ಟನೆ ಕೊಟ್ಟು, ನನ್ನ ಕಾಮೆಂಟ್‌ನ್ನು ತಿರುಚಲಾಗಿದೆ, ದೇಶದ ಯುವ ಸಮೂಹದ ಬಗ್ಗೆ ನನಗೆ ಗೌರವ ಇದೆ. ನಾನು ಸಂಬೋಧಿಸಿದ್ದು ಕಾನೂನು ವ್ಯವಸ್ಥೆಯೊಳಗೆ ನುಸುಳಿರುವ "ಪದವಿರಹಿತ ವಕೀಲ ಸಮುದಾಯ"ವನ್ನು ಎಂದು ಸ್ಪಷ್ಟನೆ ನೀಡಿದ್ದರು.
ಈ ಮಾತಿಗೆ ಇಂಬು ನೀಡುವಂತೆ ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಶೇಕಡಾ 30ರಿಂದ 40ರಷ್ಟು ವಕೀಲರ ಪದವಿ ನಕಲಿಯಾಗಿದೆ, ಇವುಗಳನ್ನು ಎಲ್ಲೋ ತಯಾರಿಸಿದ್ದೋ ಅಕ್ರಮವಾಗಿ ಖರೀದಿಸಿದ್ದೋ ಆಗಿದೆ ಎಂಬುದು ನನಗೆ ತಿಳಿದಿದೆ. ಇದನ್ನು ಸಿಜೆಐ ಅವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದ್ದಾರೆ.
ಬಾರ್ ಕೌನ್ಸಿಲ್ (ಬಿಸಿಐ) ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆ ನಡೆಸಬೇಕು. ಅದೇ ರೀತಿ, ಆ ಸಂಘಟನೆ ಜೊತೆಗೆ ಗುರುತಿಸಿಕೊಂಡಿರುವ ಕೆಲ ನಕಲಿ ವಕೀಲರು ಮತ್ತು ನಕಲಿ ಪದವೀಧರರ ಚಟುವಟಿಕೆಯನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಈ ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಆದರೆ, ಈ ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಇಷ್ಟೊಂದು ಭಾವನಾತ್ಮಕವಾಗಿ ಪರಿಗಣಿಸಬೇಡಿ ಎಂದು ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದೆ.
ಈ ಮಧ್ಯೆ, ಜಿರಲೆ ಕಾಮೆಂಟ್‌ನಿಂದ ರಾತೋರಾತ್ರಿ ಹುಟ್ಟಿದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಡಿಜಿಟಲ್ ಲೋಕದಲ್ಲಿ ಮೂಡಿಸಿದ ಹೊಸ ಸಂಚಲನದ ಬಗ್ಗೆ ಒಂದಿಷ್ಟು ಮಾತನ್ನು ಹೇಳಲೇ ಬೇಕು. ಜಿರಲೆ ಎಂಬ ಮಾತಿನಿಂದ ಕೆರಳಿದ ಯುವ ಸಮೂಹ, ತಮ್ಮಲ್ಲೂ ಆಕ್ರೋಶ ಇದೆ ಎಂಬುದನ್ನು ಈ ಬೆಳವಣಿಗೆ ತೋರಿಸಿದೆ. ಸದ್ದಿಲ್ಲದೆ ನಡೆದ ಈ ಜೆನ್ ಝೀ ಆಂದೋಲನ ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಆರೇಳು ದಿನಗಳಲ್ಲಿ ಎರಡು ಕೋಟಿಯಷ್ಟು ಜನರನ್ನು ಸೆಳೆದ ಈ ಕ್ಷಿಪ್ರ ಆಂದೋಲನಕ್ಕೆ ಸ್ವತಃ ಸರ್ಕಾರಗಳೇ ದಿಗಿಲುಗೊಂಡಿವೆ.
ಕಾಕ್ರೋಚ್ ಪಾರ್ಟಿಯ ಪ್ರಣಾಳಿಕೆ ಬೇಡಿಕೆ ಹಾಸ್ಯಾತ್ಮಕವಾಗಿ ಕಂಡರೂ ಅಷ್ಟೇ ಗಂಭೀರ ವಿಚಾರಗಳನ್ನು ಜನರ ಮುಂದಿಟ್ಟಿದೆ. ಯಾವ ನ್ಯಾಯಮೂರ್ತಿಗೂ ನಿವೃತ್ತಿ ನಂತರ ರಾಜ್ಯಸಭಾ ಸ್ಥಾನವನ್ನು ಕೊಡುಗೆಯಾಗಿ ನೀಡುವುದಿಲ್ಲ ಎಂದು ಹೇಳುವ ಮೂಲಕ ನ್ಯಾಯಾಂಗದಲ್ಲಿ ಗುಪ್ತಗಾಮಿನಿಯಂತೆ ಹರಿಯುವ ಭ್ರಷ್ಟತೆ ಬಗ್ಗೆ ಕಟುವಾಗಿ ಹೇಳಿದೆ.
ನಾಗರಿಕರ ಮತದಾನದ ಹಕ್ಕು ಕಸಿಯುವುದು ಭಯೋತ್ಪಾದನೆಗೆ ಸಮ ಮತ್ತು ಅಂತಹ ಕೃತ್ಯ ನಡೆದ ಚುನಾವಣಾಧಿಕಾರಿಯನ್ನು ಯುಎಪಿಎ ಅಡಿಯಲ್ಲಿ ಬಂಧಿಸಬೇಕು ಎಂದು ಲಘು ದಾಟಿಯಲ್ಲಿ ಅಷ್ಟೇ ಕಠೋರ ಶಬ್ಧಗಳನ್ನು ಹೇಳಿದೆ.
ಸಂಸತ್ತಿನ ಬಲವನ್ನು ಹೆಚ್ಚಿಸದೆ, ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಮಹಿಳಾ ಪರ ಘೋಷಣೆಯನ್ನು ಮೊಳಗಿಸಿದೆ. ನೈಜ, ಸ್ವತಂತ್ರ ಮಾಧ್ಯಮಕ್ಕೆ ಅವಕಾಶ ಎಂದು ಹೇಳುವ ಸಿಜೆಪಿ, ಅಂಬಾನಿ-ಅದಾನಿ ಮಾಲಕತ್ವದ ಮಾಧ್ಯಮಗಳ ಪರವಾನಿಗೆ ರದ್ದುಪಡಿಸಿ ಗೋದಿ ಮೀಡಿಯಾ ಪತ್ರಕರ್ತರ / ನಿರೂಪಕರ ಬ್ಯಾಂಕ್ ಖಾತೆಗಳ ತನಿಖೆಗೆ ನಡೆಸಬೇಕು ಎಂದು ಭ್ರಷ್ಟ ಮಾಧ್ಯಮದತ್ತ ಕೈತೋರಿಸಿದೆ. ಪಕ್ಷಾಂತರ ಮಾಡಿದ ರಾಜಕಾರಣಿಯನ್ನು 20 ವರ್ಷ ಬ್ಯಾನ್ ಮಾಡಬೇಕು ಎಂದು ಹೇಳಿ 'ಕುದುರೆ ವ್ಯಾಪಾರ' ಹಾಗೂ ರಾಜಕೀಯದ ಭ್ರಷ್ಟಾಚಾರವನ್ನು ಖಂಡಿಸಿದೆ.
ನಿರುದ್ಯೋಗದ ಬಗ್ಗೆ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಕಾಕ್ರೋಚ್ ಪಾರ್ಟಿ ಎಂಬುದು ಬಾಸ್ಟನ್ ವಿಶ್ವವಿದ್ಯಾನಿಲಯದ ಅಭಿಜಿತ್ ದೀಪ್ಕೆ ಎಂಬ ಯುವಕನ ಕಲ್ಪನೆಯಾದರೂ ಹಿಡಿ ಮುಷ್ಟಿಯ ಜೆನ್‌ಝೀ ಯುವಕರ ಆಕ್ರೋಶದ ಕಿಡಿ ಇರಬಹುದು ಎಂಬ ವ್ಯಾಖ್ಯಾನಗಳನ್ನು ಮಾಡಲಾಗುತ್ತಿದೆ.
ನೇಪಾಲದಲ್ಲಿ ಜೆನ್ ಝೀ ನಡೆಸಿದ ಕ್ರಾಂತಿ, ಶ್ರೀಲಂಕಾದ ಬಿಕ್ಕಟ್ಟಿನ ಮಧ್ಯೆ ಅರಳಿದ ಅರುಣ ಕುಮಾರ ದಿಸ್ಸನಾಯಕೆ, ತಮಿಳುನಾಡಿನ ಟಿವಿಕೆಯ ಉಜ್ವಲ ಉದಯದಂತೆ, ಸಮೂಹ ಮಾಧ್ಯಮದಲ್ಲಿ ಕಾಡ್ಗಿಚ್ಚಿನಂತೆ ಕಾಕ್ರೋಚ್ ಪಾರ್ಟಿ ಜನಪ್ರಿಯತೆ ಪಡೆದಿದೆ.
ಪ್ರಜಾಪ್ರಭುತ್ವದಲ್ಲಿ ಟೀಕೆಗಳು, ವಿಮರ್ಶೆಗಳು ಸಹಜ ಮತ್ತು ಆರೋಗ್ಯಯುತ ಬೆಳವಣಿಗೆ. ಸಮಾಜದ ನಾಡಿ ಮಿಡಿತವನ್ನು ಅರಿಯುವಲ್ಲಿ ಇದು ಸಹಕಾರಿ. ನ್ಯಾಯಾಂಗ ವ್ಯವಸ್ಥೆಯಲ್ಲೂ ವಿಮರ್ಶೆಗಳು, ಚರ್ಚೆಗಳು ನಡೆಯಬೇಕು. ವೈಚಾರಿಕ ಬದ್ಧತೆಯನ್ನು ಪ್ರದರ್ಶಿಸಿ ಟೀಕೆ-ವಿಮರ್ಶೆಗಳು ಎತ್ತಿರುವ ವಿಷಯವನ್ನು ಅರಿಯಬೇಕು, ಅದಕ್ಕೆ ಉತ್ತರಿಸಬೇಕು. ಆದರೆ, ಟೀಕೆ-ವಿಮರ್ಶೆಗಳ ನೆಪದಲ್ಲಿ ವೈಯಕ್ತಿಕ ದಾಳಿ, ತೇಜೋವಧೆಗಳು ನಡೆಯಬಾರದು.
ಅಸಂಘಟಿತ ನೆಲೆಯಲ್ಲಿ ನಡೆದ ಕಾಕ್ರೋಚ್ ಅಭಿಯಾನ ಐದು ದಿನದಲ್ಲಿ ಒಂದೂವರೆ ಕೋಟಿ ಜನರನ್ನು ಸೆಳೆದಿದೆ ಎಂದರೆ ಅದು ನಗಣ್ಯ ಮಾಡುವ ವಿಚಾರವಲ್ಲ. ಈ ಸಂಖ್ಯೆ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಬೆಂಬಲಿಗರ ಸಂಖ್ಯೆಗಿಂತಲೂ ಹೆಚ್ಚು. ಇಲ್ಲಿ ವಿದೇಶಿ ಶಕ್ತಿಯ ಕೈವಾಡ ಎಂದೆಲ್ಲ ಬೊಬ್ಬೆ ಹಾಕುವುದರಲ್ಲಿ ಅರ್ಥವಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಇತರ ಸಮಸ್ಯೆಗಳಿಂದ ನಲುಗಿರುವ ಯುವಜನರ ವ್ಯವಸ್ಥೆಯ ವಿರುದ್ಧದ ಧ್ವನಿ ಎಂದು ಅರ್ಥೈಸಲು ಆಗದಿದ್ದರೂ ಇದೊಂದು ಯುವಜನರ ಕೂಗಿನ ಗಟ್ಟಿ ಧ್ವನಿಯ ಮುನ್ಸೂಚನೆ ಆಗಿರಬಹುದೇ ಎಂಬುದು ಯಕ್ಷ ಪ್ರಶ್ನೆ.
ಇನ್ನು ಫೇಕ್ ಡಿಗ್ರಿ ಹೊಂದಿರುವ ನಕಲಿ ವಕೀಲರ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಬಾರ್ ಕೌನ್ಸಿಲ್ ಮತ್ತು ಅದರ ಅಧ್ಯಕ್ಷರು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನ್ಯಾಯಾಂಗ ವ್ಯವಸ್ಥೆ ಎದುರುನೋಡುತ್ತದೆ. ಸ್ಫೋಟಕ ಹೇಳಿಕೆ ನೀಡಿ 'ಹಿಟ್ ಆಂಡ್ ರನ್' ಮಾಡುವುದರಲ್ಲಿ ಕಾಲ ಕಳೆಯುವ ಬದಲು ಇಂತಹ ಅಕ್ರಮಗಳನ್ನು ತಡೆಯಲು ಯಾವ ದೃಢ ಕ್ರಮ ಕೈಗೊಳ್ಳುತ್ತಾರೆ ಎಂಬ ನಿರೀಕ್ಷೆ ನಮಗಿದೆ. ಅದಕ್ಕೆ ತಕ್ಕ ಯೋಜನೆ ಕಾರ್ಯಕ್ರಮ ರೂಪಿಸುವ ಬದ್ಧತೆಯನ್ನು ಬಾರ್ ಕೌನ್ಸಿಲ್ ಪ್ರದರ್ಶಿಸಬೇಕು.
ಬಾರ್ ಕೌನ್ಸಿಲ್ ಮಾತ್ರವೇ ವಕೀಲರ ಕುರಿತ ಏಕೈಕ ಶಿಸ್ತು ಪ್ರಾಧಿಕಾರ ಆಗಿದೆ. ಇತ್ತೀಚೆಗೆ ದೆಹಲಿ ಹೈಕೋರ್ಟ್ ಕೂಡ ಈ ಬಗ್ಗೆ ತೀರ್ಪು ನೀಡಿದೆ. ವಕೀಲರ ವಿರುದ್ಧದ ಎಲ್ಲ ಆರೋಪಗಳನ್ನು ತನಿಖೆ ನಡೆಸಿ ಶಿಕ್ಷಿಸುವ ಸಕ್ಷಮ ಪ್ರಾಧಿಕಾರ ತನ್ನ ನೈತಿಕ ಬದ್ಧತೆಯನ್ನು ಪ್ರದರ್ಶಿಸಬೇಕು.
ಇದೇ ಸಮಯದಲ್ಲಿ, ನ್ಯಾಯಾಂಗದ ಒಳಗೆ ನುಸುಳಿರುವ ನಕಲಿ ಪದವೀಧರರ ಬಗ್ಗೆ ಸ್ಫೋಟಕ ಮಾತನಾಡಿರುವ ಬಾರ್ ಕೌನ್ಸಿಲ್ ಅಧ್ಯಕ್ಷರು, ವಕೀಲಿ ವೃತ್ತಿಯ ಸ್ವಚ್ಚತೆಗೆ ಅಭಿಯಾನವನ್ನೇ ಮಾಡಬೇಕು. ತಾವು ಸ್ಫೋಟಿಸಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸುವ ಜವಾಬ್ದಾರಿಯನ್ನೂ ಹೊರಬೇಕು. ತಜ್ಞರ ಅಭಿಪ್ರಾಯ ಪಡೆದು ನ್ಯಾಯಾಂಗ ವ್ಯವಸ್ಥೆಯಲ್ಲಿ, ಕಾನೂನು ವೃತ್ತಿಯಲ್ಲಿ ಉಂಟಾಗಿರುವ ಕಲುಷಿತ ವಾತಾವರಣವನ್ನು ಸ್ವಚ್ಚಗೊಳಿಸಿ ನಿರ್ಮಲ ಕಾನೂನು ಲೋಕವನ್ನು ಸೃಷ್ಟಿಸಬೇಕಿದೆ.