ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಿಂದ ಪ್ರತಿಕೂಲ ಸಾಕ್ಷಿ: ಪರಿಹಾರ ಘೋಷಿಸಿದ ಕೋರ್ಟ್ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಿಂದ ಪ್ರತಿಕೂಲ ಸಾಕ್ಷಿ: ಪರಿಹಾರ ಘೋಷಿಸಿದ ಕೋರ್ಟ್ ಆದೇಶ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸಾಕ್ಷಿ ನುಡಿಯದೆ ಪ್ರತಿಕೂಲ ಸಾಕ್ಷ್ಯ ನುಡಿಯುವ ಸಂತ್ರಸ್ತರಿಗೆ ಸರಕಾರದ ಸಂತ್ರಸ್ತರ ಪರಿಹಾರ ಯೋಜನೆಯಡಿ ಪರಿಹಾರ ನೀಡುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅತ್ಯಾಚಾರ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆಗೆ ಪರಿಹಾರ ಘೋಷಿಸಿದ ಕೋರ್ಟ್ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದ ಸಂತ್ರಸ್ತೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
''ಸಂತ್ರಸ್ತೆ ನೀಡಿದ ಪ್ರತಿಕೂಲ ಹೇಳಿಕೆಯ ಆಧಾರದಲ್ಲಿ ಆರೋಪಿ ಖುಲಾಸೆಗೊಂಡಿದ್ದಾನೆ. ಆದ್ದರಿಂದ, ಪ್ರತಿಕೂಲ ಹೇಳಿಕೆ ನೀಡಿದ ಸಂತ್ರಸ್ತೆಗೆ ಪರಿಹಾರ ನೀಡಲು ನಿರ್ದೇಶಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಲಾಗಿದೆ,'' ಎಂದು ಪೀಠ ತಿಳಿಸಿದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪರ ಎ.ಎಸ್.ವಿಶ್ವೇಶ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ
ತುಮಕೂರು ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ, ತನಿಖಾಧಿಕಾರಿ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಆರೋಪಿಯ ವಿರುದ್ಧ ಸಾಕ್ಷಿ ಹೇಳುವುದಾಗಿ ಹೇಳಿದ್ದರು. ಕೋರ್ಟ್‌ನಲ್ಲಿ ಪಾಟಿ ಸವಾಲು ಸಂದರ್ಭದಲ್ಲಿ ತಮ್ಮ ಮೊದಲಿನ ಹೇಳಿಕೆಗೆ ತದ್ವಿರುದ್ಧ ವಿವರಣೆ ನೀಡಿದ್ದರು