ಅಧೀನ ಸಿಬ್ಬಂದಿ ಮೂಲಕ ಲಂಚದ ಬೇಡಿಕೆ: ಎಸ್‌ಐ ವಿರುದ್ಧದ ಎಫ್‌ಐಆರ್ ಪುನರ್‌ಸ್ಥಾಪಿಸಿದ ಸುಪ್ರೀಂ ಕೋರ್ಟ್
ಅಧೀನ ಸಿಬ್ಬಂದಿ ಮೂಲಕ ಲಂಚದ ಬೇಡಿಕೆ: ಎಸ್‌ಐ ವಿರುದ್ಧದ ಎಫ್‌ಐಆರ್ ಪುನರ್‌ಸ್ಥಾಪಿಸಿದ ಸುಪ್ರೀಂ ಕೋರ್ಟ್
ತನ್ನ ಅಧೀನ ಅಧಿಕಾರಿಗಳಿಗೆ ಪರೋಕ್ಷ ರೀತಿಯಲ್ಲಿ ಲಂಚದ ಬೇಡಿಕೆ ಇಟ್ಟ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಪೊಲೀಸ್ ಅಧಿಕಾರಿ ವಿರುದ್ಧದ ಎಫ್‌ಐಆರ್‌ನ್ನು ಪುನರ್ ಸ್ಥಾಪಿಸಿದೆ.
ತನಗೆ ನೇರವಾಗಿ ಹಣ ಮುಟ್ಟದಿದ್ದರೂ ಅಧೀನ ಸಿಬ್ಬಂದಿಯ ಮೂಲಕ ಲಂಚ ಪಡೆಯುವುದೂ ಸಹ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿರುವ ನ್ಯಾಯಪೀಠ, ಸರಕಾರಿ ಅಧಿಕಾರಿಗಳು ಅಥವಾ ಹಿರಿಯ ಅಧಿಕಾರಿಗಳು ನೇರವಾಗಿ ಲಂಚ ಪಡೆಯದೆ, ತಮ್ಮ ಅಧೀನ ಸಿಬ್ಬಂದಿ (ದಾಖಲೆ ಪರಿಶೀಲಕರು, ಜವಾನರು, ಅಥವಾ ಮಧ್ಯವರ್ತಿಗಳು) ಮೂಲಕ ಲಂಚದ ಬೇಡಿಕೆ ಇಡುವುದು ಮತ್ತು ಸ್ವೀಕರಿಸುವುದು ಭಾರತೀಯ ಕಾನೂನಿನ ಪ್ರಕಾರ ಗಂಭೀರವಾದ ಅಪರಾಧವಾಗಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಸಬ್ ಇನ್ಸ್‌ಪೆಕ್ಟರ್ ರಂಗಯ್ಯ ತನ್ನ ಇತರ ಸಿಬ್ಬಂದಿಗಾಗಿ ಏನಾದರೂ ಮಾಡಬೇಕು ಅಥವಾ ಹುಡುಗರನ್ನು ಖುಷಿಯಾಗಿ ಇರುವಂತೆ ನೋಡಬೇಕು ಎಂದು ಹೇಳುವ ಮೂಲಕ ತನ್ನ ಸಿಬ್ಬಂದಿಗಾಗಿ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
ಪ್ರಕರಣದ ವಿವರ:
ಮಾರ್ಚ್ 15, 2023 ರಂದು, ಪಡಿತರ ವ್ಯವಸ್ಥೆಯ ನ್ಯಾಯಬೆಲೆ ಅಂಗಡಿಗೆ ಸೇರಿದ ಅಕ್ಕಿಯನ್ನು ಬಸವನಗೌಡ ಸಾಗಿಸುತ್ತಿದ್ದಾರೆ ಎಂಬ ಕಾರಣಕ್ಕೆ ಎಸ್‌ಐ ರಂಗಯ್ಯ ಬಸವನಗೌಡರ ದ್ವಿಚಕ್ರ ವಾಹನ ಮತ್ತು ಮೊಬೈಲನ್ನು ವಶಕ್ಕೆ ಪಡೆದಿದ್ದರು. ವಶಪಡಿಸಿದ ವಸ್ತುಗಳನ್ನು ರಿಲೀಸ್ ಮಾಡಲು ವಿನಂತಿಸಿದರೂ ಒಪ್ಪಿರಲಿಲ್ಲ.
ಜೂನ್ 1, 2023 ರಂದು, ರಂಗಯ್ಯ ಅವರು ಕಾನ್‌ಸ್ಟೆಬಲ್ ಕಾಶಿನಾಥ್ ಅವರನ್ನು ಕರೆಸಿ ಆ ವಸ್ತುಗಳನ್ನು ರಿಲೀಸ್ ಮಾಡುವಂತೆ ಕೇಳಿಕೊಂಡರು. ನಂತರ, ರಂಗಯ್ಯ "ತನಗಾಗಿ ಬಸವನಗೌಡರು ಏನನ್ನೂ ಮಾಡಿಲ್ಲ" ಎಂದು ಹೇಳಿ, "ಆ ಮೂವರು ಸಿಬ್ಬಂದಿಗಳನ್ನು ಖುಷಿಪಡಿಸಿ" ಎಂದು ಸೂಚಿಸಿದರು. ಆ ಬಳಿಕ, ಕಾಶಿನಾಥ್ 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟು, ಕೊನೆಗೆ ಚೌಕಾಶಿ ನಡೆಸಿ 3,000 ರೂ. ಲಂಚ ಪಡೆದುಕೊಂಡರು.
ಬಸನಗೌಡ ನೀಡಿದ ದೂರಿನ ಮೇರೆಗೆ ರಂಗಯ್ಯ ಮತ್ತು ಕಾಶೀನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು. ಆದರೆ, ರಂಗಯ್ಯ ತನಗಾಗಿ ಲಂಚದ ಬೇಡಿಕೆ ಇಟ್ಟಿಲ್ಲ. ಅವರು ತನ್ನ ಅಧೀನ ಸಿಬ್ಬಂದಿಗಳಿಗಾಗಿ ಲಂಚದ ಬೇಡಿಕೆ ಇಟ್ಟಿದ್ದರು. ಹಾಗಾಗಿ ಸದ್ರಿ ಪ್ರಕರಣದಲ್ಲಿ ನೇರವಾದ ಲಂಚದ ಬೇಡಿಕೆಯ ಅಂಶ ಇಲ್ಲ ಎಂದು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ರಂಗಯ್ಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತ್ತು.
ಆದರೆ, ಈ ಅಭಿಪ್ರಾಯವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಅಧೀನ ಸಿಬ್ಬಂದಿಗಾಗಿ ಲಂಚದ ಬೇಡಿಕೆ ಇಟ್ಟರೂ ಅದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.