ಮತಾಂತರಿಗಳು ಮೀಸಲಾತಿಗೆ ಅರ್ಹರಲ್ಲ, ಮುಸ್ಲಿಮರಲ್ಲಿ ಜಾತಿ ಪ್ರಶ್ನೆ ಇಲ್ಲ: ಮದ್ರಾಸ್ ಹೈಕೋರ್ಟ್
ಮತಾಂತರಿಗಳು ಮೀಸಲಾತಿಗೆ ಅರ್ಹರಲ್ಲ, ಮುಸ್ಲಿಮರಲ್ಲಿ ಜಾತಿ ಪ್ರಶ್ನೆ ಇಲ್ಲ: ಮದ್ರಾಸ್ ಹೈಕೋರ್ಟ್
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡವರು ಹಿಂದುಳಿದ ವರ್ಗ (3) ಕೋಟಾದಡಿ ಮೀಸಲಿಗೆ ಅರ್ಹರಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಮಹತ್ವದ ತೀರ್ಪು ನೀಡಿದೆ.
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ನ್ಯಾ. ಜಿ.ಆರ್. ಸ್ವಾಮಿನಾಥನ್ ಹಾಗೂ ನ್ಯಾ.ಪಿ.ಬಿ.ಬಾಲಾಜಿ ಅವರಿದ್ದ ಮದುರೈ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
'ಇಸ್ಲಾಂಗೆ ಮತಾಂತರಗೊಂಡವರು ಮುಸ್ಲಿಮರು ಮಾತ್ರ. ಅದನ್ನು ಹೊರತುಪಡಿಸಿ ಮತಾಂತರದ ಹಿಂದಿನ ಧರ್ಮ, ಜಾತಿಗೂ ಸಂಬಂಧ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮತಾಂತರಗೊಂಡವರಿಗೆ ಹಿಂದುಳಿದ ವರ್ಗಗಳ ಅಡಿ ಮೀಸಲು ನೀಡುವ ತಮಿಳುನಾಡು ಸರಕಾರದ 2024ರ ಆದೇಶವನ್ನು ಅಸಾಂವಿಧಾನಿಕ ಎಂದು ನ್ಯಾಯಪೀಠ ಹೇಳಿದೆ.
ಇಸ್ಲಾಂಗೆ ಮತಾಂತರವಾಗಿದ್ದ ತೂತುಕುಡಿ ಜಿಲ್ಲೆಗೆ ಸೇರಿದ ವ್ಯಕ್ತಿಯೊಬ್ಬರು ಬಿಸಿ ವರ್ಗದ ಪ್ರಮಾಣಪತ್ರ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, “ಸಂವಿಧಾನದ 25ನೇ ವಿಧಿ ಪ್ರಕಾರ ಮತಾಂತರ ಮೂಲಭೂತ ಹಕ್ಕು. ಆದರೆ, ಮತಾಂತರದ ನಂತರ ಮೀಸಲಾತಿ ಸೌಲಭ್ಯ ಪಡೆಯುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ'' ಎಂದು ಹೇಳಿದೆ.
ಇಸ್ಲಾಂನಲ್ಲಿ ಜಾತಿ ವರ್ಗೀಕರಣ ಇಲ್ಲ
ಹಿಂದೂ ವ್ಯಕ್ತಿಯೊಬ್ಬರು ಇಸ್ಲಾಂಗೆ ಮತಾಂತರಗೊಂಡಾಗ ಆತ ಕೇವಲ ಮುಸಲ್ಮಾನನಾಗುತ್ತಾನೆ. ಮುಸ್ಲಿಂ ಸಮಾಜದಲ್ಲಿ ಆತನ ಸ್ಥಾನವನ್ನು ಮತಾಂತರಗೊಳ್ಳುವ ಮೊದಲು ಯಾವ ಜಾತಿಗೆ ಸೇರಿದವರು ಎಂಬುದರ ಮೇಲೆ ನಿರ್ಧರಿಸುವುದಿಲ್ಲ. ಮುಸ್ಲಿಂ ಸಮಾಜದಲ್ಲಿ ರಾವತ್, ಮರಕ್ಕಾಯರ್ ಅಥವಾ ಡೆಕ್ಕನಿ ಮುಂತಾದ ವರ್ಗಗಳಿವೆ. ಈ ವರ್ಗಗಳನ್ನು ಹುಟ್ಟಿನಿಂದಲೇ ನಿರ್ಧರಿಸಲಾಗುತ್ತದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಒಬ್ಬ ವ್ಯಕ್ತಿ ಬೇರೆ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ಮೂಲ ಜಾತಿ ಅಥವಾ ವರ್ಗದ ಭಾಗವಾಗಲು ಸಾಧ್ಯವಿಲ್ಲ. ತಮಿಳುನಾಡು ಕಾನೂನು ಅಡಿಯಲ್ಲಿ ಹಿಂದುಳಿದ ವರ್ಗದ ಸ್ಥಾನಮಾನ ನೀಡಲಾದ ಅನ್ಸಾರ್, ಡೆಕ್ಕನಿ, ದುಡೇಕುಲಾ, ಲ, ಮಾಪ್ಪಿಲ್ಲ, ಶೇಖ್, ಸೈಯದ್ ಸಮುದಾಯಗಳಿಗೆ ಮಾತ್ರ ಮೀಸಲಿಗೆ ಅರ್ಹ. ಈ ಸಮುದಾಯಗಳಲ್ಲಿ ಜನಿಸದ ವ್ಯಕ್ತಿಗಳು ಹಿಂದುಳಿದ ವರ್ಗದ ಅಡಿಯಲ್ಲಿ ಪ್ರಮಾಣಪತ್ರ ಪಡೆಯುವುದು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ.
ತಮಿಳುನಾಡು ಸರಕಾರ 2024ರಲ್ಲಿ ಹೊರಡಿಸಿದ ಸರಕಾರದ ಅಧಿಸೂಚನೆಯಂತೆ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಅಧಿಸೂಚಿತ ಸಮುದಾಯಗಳು ಅಥವಾ ಪರಿಶಿಷ್ಟ ಜಾತಿಗಳಿಂದ ಇಸ್ಲಾಂಗೆ ಮತಾಂತರಗೊಂಡವರಿಗೆ ಮೀಸಲು ಪ್ರಯೋಜನ ನೀಡಲು ಹಿಂದುಳಿದ ವರ್ಗದವರು ಎಂದು ಪರಿಗಣಿಸಬಹುದು. ಇಸ್ಲಾಂಗೆ ಮತಾಂತರಗೊಂಡವರನ್ನು ಹಿಂದುಳಿದವರು ಎಂದು ಪರಿಗಣಿಸಲು ಮುಸ್ಲಿಂ ಸಮುದಾಯದ ಅಧಿಸೂಚಿತ ಏಳು ಪಂಗಡಗಳಲ್ಲಿ ಒಂದಕ್ಕೆ ಸೇರಿದವರು ಎಂಬ ಪ್ರಮಾಣಪತ್ರವನ್ನು ನೀಡಬಹುದು ಎಂದು ಆದೇಶಿಸಿತ್ತು.
ಇದೇ ವೇಳೆ ಮುಂದುವರಿದ ಸಮುದಾಯದಿಂದ ಇಸ್ಲಾಂಗೆ ಮತಾಂತರಗೊಂಡವರಿಗೆ ಹಿಂದುಳಿದ ವರ್ಗದ ಪ್ರಮಾಣಪತ್ರ ನೀಡಲು ಬರುವುದಿಲ್ಲ. ಮೂಲ ಧರ್ಮದಲ್ಲಿ ಮೀಸಲು ಪ್ರಯೋಜನ ಪಡೆಯುತ್ತಿದ್ದವರು ಮಾತ್ರ ಇಸ್ಲಾಂಗೆ ಮತಾಂತರಗೊಂಡ ಬಳಿಕವೂ ಮೀಸಲು ಸೌಲಭ್ಯ ಪಡೆಯಲು ಅರ್ಹರು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ಜಾತಿ ಅಥವಾ ಉಪಜಾತಿಗಳ ಸದಸ್ಯರು ಇಸ್ಲಾಂಗೆ ಮತಾಂತರಗೊಂಡ ಬಳಿಕ ಮೂಲ ಜಾತಿಯ ಸದಸ್ಯರಾಗಿ ಉಳಿಯುವುದಿಲ್ಲ ಎಂಬ 1951ರಲ್ಲಿ ಹೈಕೋರ್ಟ್ ನೀಡಿದ ಆದೇಶ ಉಲ್ಲೇಖಿಸಿದ ನ್ಯಾಯಪೀಠ, "ಇಸ್ಲಾಂನಲ್ಲಿ ಎಲ್ಲಾ ಮನುಷ್ಯರನ್ನು ಸಮಾನರು ಎಂದು ಗುರುತಿಸುತ್ತದೆ. ಜಾತಿಯ ಆಧಾರದ ಮೇಲೆ ಹಿಂದುಳಿದವರು ಅಥವಾ ಮುಂದುವರಿದವರು ಎಂಬುದಾಗಿ ವರ್ಗೀಕರಿಸುವುದಿಲ್ಲ. ವರ್ಗ ಆಧಾರಿತ ವ್ಯವಸ್ಥೆ ಇಸ್ಲಾಂನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ,'' ಎಂದು ವಿಶ್ಲೇಷಿಸಿದೆ.
ಪ್ರಕರಣದ ಹಿನ್ನೆಲೆ
ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬ 2016ರಲ್ಲಿ ಮುಸ್ಲಿಂ ಪದ್ಧತಿಗಳ ಪ್ರಕಾರ ವಿವಾಹವಾದರು. ಇಬ್ಬರು ಮಕ್ಕಳು ಪಡೆದ ವ್ಯಕ್ತಿ, ಮುಸ್ಲಿಂ ಸಮುದಾಯದ ಲೆಬ್ಬೆ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದರು. ಕಾಯಥಾರ್ ತಹಶೀಲ್ದಾರ್ ಅರ್ಜಿಯನ್ನು ತಿರಸ್ಕರಿಸಿದರು. ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ, ಮುಸ್ಲಿಂ ಸಮುದಾಯದ ನಿಯಮಗಳನ್ನು ಪಾಲಿಸುತ್ತಿರುವೆ. ಸ್ಥಳೀಯ ಸಮುದಾಯ ಒಪ್ಪಿಕೊಂಡು ಲೆಬ್ಬೆ ಪ್ರಮಾಣಪತ್ರ ನೀಡಿದೆ. ಕಂದಾಯ ಇಲಾಖೆ ಅಧಿಕಾರಿಗೆ ನಮ್ಮ ಸಮುದಾಯ ನೀಡಿದ ಪ್ರಮಾಣಪತ್ರವನ್ನು ತಿರಸ್ಕರಿಸುವ ಹಕ್ಕಿಲ್ಲ ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, "ಧರ್ಮವನ್ನು ಬದಲಾಯಿಸುವುದು ಮೂಲಭೂತ ಹಕ್ಕಾದರೂ, ಧರ್ಮ ಬದಲಾವಣೆ ಬಳಿಕವೂ ಮೀಸಲು ಸೌಲಭ್ಯ ಪಡೆಯುವುದು ಕಾನೂನುಬದ್ಧವಾಗಿ ಅಮಾನ್ಯವಾಗಿದೆ,'' ಎಂದು ಷರಾ ಬರೆದಿದೆ.