ಅಪಘಾತ ವಿಮಾ ಪರಿಹಾರ: ಮೃತರ 2ನೇ ಪತ್ನಿಯೂ ಅಪಘಾತ ಪರಿಹಾರಕ್ಕೆ ಅರ್ಹ- ಕರ್ನಾಟಕ ಹೈಕೋರ್ಟ್
ಅಪಘಾತ ವಿಮಾ ಪರಿಹಾರ: ಮೃತರ 2ನೇ ಪತ್ನಿಯೂ ಅಪಘಾತ ಪರಿಹಾರಕ್ಕೆ ಅರ್ಹ- ಕರ್ನಾಟಕ ಹೈಕೋರ್ಟ್
ಮೃತನ ಎರಡನೇ ಪತ್ನಿಗೂ ಅಪಘಾತ ಪರಿಹಾರ ಪಡೆಯುವ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಮೋಟಾರು ವಾಹನ ಕಾಯ್ದೆ ಅಡಿ ಅಪಘಾತ ಪರಿಹಾರವನ್ನು ನಿರ್ಧರಿಸುವಾಗ ಮೃತರ ಮೇಲಿನ ಆರ್ಥಿಕ ಅವಲಂಬನೆ ಮುಖ್ಯವಾಗುತ್ತದೆಯೇ ಹೊರತು ಕಾನೂನಾತ್ಮಕ ಸ್ಥಾನಮಾನವಲ್ಲ ಎಂದು ತೀರ್ಪು ಸ್ಪಷ್ಟಪಡಿಸಿದೆ.
ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಮೃತರ ಮೊದಲ ಮತ್ತು ಎರಡನೇ ಪತ್ನಿಯರು ಪರಿಹಾರದ ಮೊತ್ತವನ್ನು ಶೇ. 50 ಹಂಚಿಕೊಳ್ಳಲು ಒಪ್ಪಂದ ಮಾಡಿರುವುದನ್ನು ದಾಖಲಿಸಿಕೊಂಡಿದ್ದು, ಪರಿಹಾರವನ್ನು 15.10 ಲಕ್ಷ ರೂ.ನಿಂದ 30.12 ಲಕ್ಷ ರೂ.ಗೆ ಏರಿಸಿ ಆದೇಶಿಸಿದೆ.
ಘಟನೆಯ ವಿವರ:
2019ರ ಮಾರ್ಚ್‌ನಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ 34 ವರ್ಷದ ದಾವಣಗೆರೆಯ ರೈತ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಅಪಘಾತ ಪರಿಹಾರ ಕೋರಿ ಮೃತನ ಮೊದಲ ಪತ್ನಿ ಮತ್ತು ತಾಯಿ ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಮೃತರ ಎರಡನೇ ಪತ್ನಿ ಮತ್ತು 8 ವರ್ಷದ ಅಪ್ರಾಪ್ತ ಮಗಳು ಕೂಡ ತಮಗೂ ಪರಿಹಾರದ ಹಕ್ಕಿದೆ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ವಿವಾಹದ ಕಾನೂನುಬದ್ಧತೆಯನ್ನು ನಿರ್ಧರಿಸುವ ವ್ಯಾಪ್ತಿ ಈ ಕೋರ್ಟ್‌ಗಿಲ್ಲ ಎಂದು ನ್ಯಾಯಮಂಡಳಿ ಹೇಳಿತ್ತು.
ಅದೇ ರೀತಿ, ಪರಿಹಾರವನ್ನು ಪಾಲು ಹಂಚಿಕೆ ಮಾಡದೆ 15.10 ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸುಪ್ರೀಂ ಕೋರ್ಟ್ ಹಿಂದೆ ನೀಡಿರುವ ಹಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿ ಈ ಆದೇಶ ನೀಡಿದೆ.