ಕೃತಕ ಬುದ್ದಿಮತ್ತೆ ಆಧಾರಿತ, ನಕಲಿ ತೀರ್ಪುಗಳಿಗೆ ವಕೀಲರೇ ಹೊಣೆ: ತಂತ್ರಜ್ಞಾನದ ನೆಪ ಬೇಡ, ಇದು ವಕೀಲರ ವೃತ್ತಿಪರ ದುರ್ನಡನೆ- ಬಾರ್ ಕೌನ್ಸಿಲ್ ಆಫ್ ಇಂಡಿಯಾ
ಕೃತಕ ಬುದ್ದಿಮತ್ತೆ ಆಧಾರಿತ, ನಕಲಿ ತೀರ್ಪುಗಳಿಗೆ ವಕೀಲರೇ ಹೊಣೆ: ತಂತ್ರಜ್ಞಾನದ ನೆಪ ಬೇಡ, ಇದು ವಕೀಲರ ವೃತ್ತಿಪರ ದುರ್ನಡನೆ- ಬಾರ್ ಕೌನ್ಸಿಲ್ ಆಫ್ ಇಂಡಿಯಾ
ಕೃತಕ ಬುದ್ದಿಮತ್ತೆ ಆಧಾರಿತ ತೀರ್ಪುಗಳು ಮತ್ತು ನಕಲಿ ತೀರ್ಪುಗಳು ಮತ್ತು ತಪ್ಪು ವಾದಗಳಿಗೆ ಅದನ್ನು ಪ್ರಸ್ತುತಪಡಿಸಿದ ವಕೀಲರೇ ಹೊಣೆಯಾಗಿದ್ದಾರೆ. ತಂತ್ರಜ್ಞಾನದ ದೋಷ ಎಂದು ನೆಪವೊಡ್ಡಿ ವಕೀಲರು ತಮ್ಮ ವೃತ್ತಿಪರ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹಹೇಳಿದೆ.
ಕೃತಕ ಬುದ್ಧಿಮತ್ತೆ (AI) ಆಧಾರಿತ ತೀರ್ಪುಗಳು ಮತ್ತು ಕಾನೂನು ದಾಖಲೆಗಳ ಸಲ್ಲಿಕೆಯ ವಿಚಾರವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿದೆ.
ಕೃತಕ ಬುದ್ಧಿಮತ್ತೆ ಬಳಸಿಕೊಂಡು ಸಲ್ಲಿಸುವ ನಕಲಿ ತೀರ್ಪುಗಳು ಅಥವಾ ಸುಳ್ಳು ಉಲ್ಲೇಖಗಳಿಗೆ ವಕೀಲರೇ ನೇರ ಹೊಣೆಗಾರರಾಗಿರುತ್ತಾರೆ. ತಂತ್ರಜ್ಞಾನದ ತಪ್ಪು ಎಂದು ಹೇಳಿ ವಕೀಲರು ವೃತ್ತಿಪರ ದುರ್ನಡತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಕೃತಕ ಬುದ್ಧಿಮತ್ತೆ ಮತ್ತು ಬಾರ್ ಕೌನ್ಸಿಲ್ ನಿಯಮಗಳು:
ಸುಪ್ರೀಂ ಕೋರ್ಟ್ ಕಣ್ಗಾವಲು ಸಮಿತಿ
ಕೆಲವು ಕೆಳ ನ್ಯಾಯಾಲಯಗಳು ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ಅಸ್ತಿತ್ವದಲ್ಲೇ ಇಲ್ಲದ ನಕಲಿ ತೀರ್ಪುಗಳನ್ನು ಪರಿಗಣಿಸಿ ಆದೇಶಗಳನ್ನು ನೀಡಿರುವುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ನ್ಯಾಯಾಲಯದ ಪ್ರಕ್ರಿಯೆಗಳ ಸಮಗ್ರತೆಗೆ ಧಕ್ಕೆ ಬರುವ ಇಂತಹ ಪ್ರಕರಣಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಸೂಚನೆ ನೀಡಿದೆ.
ವಕೀಲರ ಜವಾಬ್ದಾರಿ ಮತ್ತು ಹೊಣೆಗಾರಿಕೆ:
ಕಡ್ಡಾಯ ಪರಿಶೀಲನೆ:
ವಕೀಲರು ತಮ್ಮ ಕಾನೂನು ಸಂಶೋಧನೆ ಮತ್ತು ಕರಡು ರಚನೆಗೆ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಬಳಸಬಹುದಾದರೂ, ಪ್ರತಿಯೊಂದು ಉಲ್ಲೇಖ (Citation), ಪ್ರಕರಣದ ವಿವರ ಮತ್ತು ಅಂಶಗಳನ್ನು ಖುದ್ದಾಗಿ ಪರಿಶೀಲಿಸುವುದು ಕಡ್ಡಾಯವಾಗಿದೆ.
ವೃತ್ತಿಪರ ದುರ್ನಡತೆ:
ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ಸುಳ್ಳು ಉಲ್ಲೇಖಗಳು ಅಥವಾ ನಕಲಿ ತೀರ್ಪುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ, ಅದನ್ನು ಕೇವಲ ಯಾಂತ್ರಿಕ ದೋಷ ಎಂದು ಪರಿಗಣಿಸಲಾಗುವುದಿಲ್ಲ.
ಶಿಸ್ತು ಕ್ರಮ: ಅಡ್ವೊಕೇಟ್ಸ್ ಆ್ಯಕ್ಟ್, 1961 ರ (Advocates Act) ಸೆಕ್ಷನ್ 35 ಮತ್ತು 36 ರ ಅಡಿಯಲ್ಲಿ ಅಂತಹ ವಕೀಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
ಗೌಪ್ಯತೆಯ ಕಾಳಜಿ:ಕಕ್ಷಿದಾರರ ಸೂಕ್ಷ್ಮ ಮಾಹಿತಿ, ಕಾನೂನು ತಂತ್ರಗಳು ಅಥವಾ ಖಾಸಗಿ ಸಂವಹನಗಳನ್ನು ಸುರಕ್ಷಿತವಲ್ಲದ ಪಬ್ಲಿಕ್ AI ಪ್ಲಾಟ್‌ಫಾರ್ಮ್‌ಗಳಿಗೆ ಅಪ್‌ಲೋಡ್ ಮಾಡುವುದರ ವಿರುದ್ಧ ಬಾರ್ ಕೌನ್ಸಿಲ್ ಎಚ್ಚರಿಸಿದೆ.
ವಕೀಲರು ತಮ್ಮ ಕಕ್ಷಿದಾರರಿಗೆ ವೃತ್ತಿಪರ ಗೌಪ್ಯತೆಯನ್ನು ಕಾಪಾಡಬೇಕಾದ ಕರ್ತವ್ಯವನ್ನು ಹೊಂದಿರುತ್ತಾರೆ.