-->
ಸರ್ಕಾರಿ ಅಧಿಕಾರಿಗಳ ವರ್ಗಾವಣೆ: ಎರಡು ವಿಭಿನ್ನ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶದ ಪರಾಮರ್ಶೆ

ಸರ್ಕಾರಿ ಅಧಿಕಾರಿಗಳ ವರ್ಗಾವಣೆ: ಎರಡು ವಿಭಿನ್ನ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶದ ಪರಾಮರ್ಶೆ

ಸರ್ಕಾರಿ ಅಧಿಕಾರಿಗಳ ವರ್ಗಾವಣೆ: ಎರಡು ವಿಭಿನ್ನ ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶದ ಪರಾಮರ್ಶೆ





ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕುರಿತು ಎರಡು ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್‌ ಹೊರಡಿಸಿದ ಮಹತ್ವದ ತೀರ್ಪು


ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಆಗಾಗ ಮೇಜರ್ ಸರ್ಜರಿ ಮಾಡುತ್ತಲಿರುತ್ತದೆ. ಕೆಲವರನ್ನು ಹುದ್ದೆ ತೋರಿಸದೆ ವರ್ಗಾವಣೆ ಮಾಡಿದ ಆರೋಪಗಳು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ ಹುದ್ದೆ ನಿಗದಿಪಡಿಸದೆ ಅಥವಾ ಸ್ಪಷ್ಟವಾಗಿ ಹೊಸ ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.


ಇನ್ನೊಂದು ಪ್ರಕರಣದಲ್ಲಿ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಹಾಗೂ ನಿಯೋಜನೆ ವಿಷಯಗಳಲ್ಲಿ ಮುಖ್ಯಮಂತ್ರಿ ಕಚೇರಿ ಹಸ್ತಕ್ಷೇಪ ಮಾಡಬಾರದು; ಮುಖ್ಯಮಂತ್ರಿ ಅವರಿಗೆ ಇನ್ನೂ ಮಹತ್ವದ ಕೆಲಸಗಳಿವೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.


ಮೊದಲನೇ ಪ್ರಕರಣ - ಅರುಣ್ ಕುಮಾರ್ ವಿರುದ್ಧ ಕರ್ನಾಟಕ ರಾಜ್ಯ ಸರಕಾರ


ಹುದ್ದೆ ನಿಗದಿಪಡಿಸದೆ ಅಥವಾ ಸ್ಪಷ್ಟವಾಗಿ ಹೊಸ ಹುದ್ದೆ ತೋರಿಸದೆ ಅಧಿಕಾರಿಗಳನ್ನು ವರ್ಗಾಯಿಸುವಂತಿಲ್ಲ. ಈ ರೀತಿಯ ಅಸ್ಪಷ್ಟ ವರ್ಗಾವಣೆ ಕ್ರಮಗಳು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ಪೀಠ, ಹುದ್ದೆ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಹುದ್ದೆ ನೀಡದೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ, ಅವರು ಕಾರ್ಯನಿರ್ವಹಿಸದೆ ಮನೆಯಲ್ಲಿ ಉಳಿದರೂ ಸಂಬಳ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ತೆರಿಗೆದಾರರ ಹಣ ದುರುಪಯೋಗವಾಗುತ್ತದೆ ಎಂದು ತಿಳಿಸಿದೆ. ಸಾರ್ವಜನಿಕ ಹಣದ ಸಮರ್ಪಕ ಬಳಕೆ ಸರ್ಕಾರದ ಹೊಣೆಗಾರಿಕೆ ಎಂಬುದನ್ನು ನೆನಪಿಸಿದ ನ್ಯಾಯಾಲಯ, ಹುದ್ದೆ ತೋರಿಸುವವರೆಗೆ ಅಧಿಕಾರಿಗಳನ್ನು ಹಿಂದಿನ ಹುದ್ದೆಯಿಂದ ಬಿಡುಗಡೆ ಮಾಡಬಾರದು. ಆಡಳಿತಾತ್ಮಕ ಕ್ರಮಗಳಲ್ಲಿ ಸ್ಪಷ್ಟತೆ ಮತ್ತು ಹೊಣೆಗಾರಿಕೆ ಅಗತ್ಯವಿದೆ ಎಂಬ ಸಂದೇಶವನ್ನು ಈ ಆದೇಶ ನೀಡಿದೆ.


'ವರ್ಗಾವಣೆ ಆದೇಶ ಹೊರಡಿಸಿದವರೇ ಜವಾಬ್ದಾರರು'


ಹುದ್ದೆ ನೀಡದೇ ವರ್ಗಾವಣೆ ಆದೇಶ ಹೊರಡಿಸಿದರೆ ಸಂಬಂಧಿತ ಇಲಾಖೆಯ ಮುಖ್ಯಸ್ಥರೇ ಅದರ ಹೊಣೆಗಾರರಾಗಬೇಕಾಗುತ್ತದೆ. ಹುದ್ದೆ ನೀಡದೇ ಕಾಯುವಿಕೆಯಲ್ಲಿ ಇರಿಸಿದ ಅವಧಿಗೆ ನೀಡಲಾದ ವೇತನವನ್ನು ಕಾರಣಕರ್ತ ಅಧಿಕಾರಿಯಿಂದಲೇ ವಸೂಲು ಮಾಡಬೇಕು ಎಂದು ಆದೇಶಿಸಿದೆ.


*ಜವಾಬ್ದಾರಿ ಮತ್ತು ಪಾರದರ್ಶಕತೆ ಕಡ್ಡಾಯ*


ಅಬಕಾರಿ ಇಲಾಖೆಯ ಉಪ ಆಯುಕ್ತ ಕೆ. ಅರುಣ್ ಕುಮಾರ್ ಅವರನ್ನು 2025ರ ಜನವರಿ 29ರಂದು ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು. ನಂತರ ಅವರಿಗೆ ಯಾವುದೇ ಹೊಸ ಹುದ್ದೆ ನೀಡದ ಹಿನ್ನೆಲೆಯಲ್ಲಿ ಅವರು ಪೋಸ್ಟಿಂಗ್ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಪೀಠ, ಸ್ಪಷ್ಟ ಹುದ್ದೆ ನೀಡದೇ ವರ್ಗಾವಣೆ ಮಾಡುವುದು ಸರಿಯಲ್ಲ. ಆಡಳಿತಾತ್ಮಕ ಕ್ರಮಗಳಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆ ಕಡ್ಡಾಯ ಎಂದು ಮತ್ತೊಮ್ಮೆ ಒತ್ತಿ ಹೇಳಿದೆ.



ವರ್ಗಾವಣೆ ನಿಯಮ, ಪ್ರಕ್ರಿಯೆಗಳು

ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಆಡಳಿತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದೆ. ಸೇವಾ ಅವಶ್ಯಕತೆ, ಸಾರ್ವಜನಿಕ ಹಿತಾಸಕ್ತಿ, ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶ ಮತ್ತು ಸಮನ್ವಯ ಸಾಧನೆಗಾಗಿ ವರ್ಗಾವಣೆಗಳನ್ನು ಮಾಡಲಾಗುತ್ತದೆ. ಆದರೆ ಈ ಪ್ರಕ್ರಿಯೆ ಸ್ಪಷ್ಟ ನಿಯಮಾವಳಿಗಳಡಿ ನಡೆಯಬೇಕು ಎಂಬುದು ನ್ಯಾಯಾಂಗವೂ ಹಲವು ಬಾರಿ ಒತ್ತಿ ಹೇಳುತ್ತಲೇ ಇದೆ.


ಹುದ್ದೆ ತೋರಿಸಿ ವರ್ಗಾಹಿಸುವುದು ಏಕೆ ಮುಖ್ಯ?


ವರ್ಗಾವಣೆ ಆದೇಶ ಹೊರಡಿಸುವಾಗ ಅಧಿಕಾರಿಗೆ ಹೊಸ ಹುದ್ದೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ಹುದ್ದೆ ಸೂಚನೆ ಇಲ್ಲದೆ ವರ್ಗಾವಣೆ ಮಾಡಿದರೆ ಆಡಳಿತದಲ್ಲಿ ಗೊಂದಲ ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಧಿಕಾರಿಗಳು ಹೊಸ ಪೋಸ್ಟಿಂಗ್ ಸಿಗುವವರೆಗೆ ಕೆಲಸವಿಲ್ಲದೆ, ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಸರ್ಕಾರಕ್ಕೆ ಅನಾವಶ್ಯಕ ಆರ್ಥಿಕ ಭಾರವೂ ಬೀಳಬಹುದು.


2ನೆಯ ಪ್ರಕರಣ - ಚೇತನ್ ಎಸ್ ವಿರುದ್ಧ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್


ಗುಂಪು ‘ಬಿ’ ಮತ್ತು ‘ಸಿ’ ನೌಕರರ ವರ್ಗಾವಣೆ ಅರ್ಜಿಗಳನ್ನು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಪರಿಗಣಿಸಬಾರದು; ವಿಷಯ ಇಲಾಖೆ ಮಟ್ಟದಲ್ಲೇ ಅಂತ್ಯಗೊಳ್ಳಬೇಕು.

ಸರ್ಕಾರಿ ನೌಕರರ ವರ್ಗಾವಣೆ ಹಾಗೂ ನಿಯೋಜನೆ ವಿಷಯಗಳಲ್ಲಿ ಮುಖ್ಯಮಂತ್ರಿ ಕಚೇರಿ ಹಸ್ತಕ್ಷೇಪ ಮಾಡಬಾರದು; ಮುಖ್ಯಮಂತ್ರಿ ಅವರಿಗೆ ಇನ್ನೂ ಮಹತ್ವದ ಕೆಲಸಗಳಿವೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.


ಗುಂಪು ‘ಬಿ’ ಮತ್ತು ‘ಸಿ’ ವರ್ಗದ ನೌಕರರ ವರ್ಗಾವಣೆ/ಪೋಸ್ಟಿಂಗ್ ಕುರಿತ ಅರ್ಜಿಗಳನ್ನು ಮುಖ್ಯಮಂತ್ರಿ ಕಚೇರಿ (ಸಿಎಂಒ) ಸ್ವೀಕರಿಸಬಾರದು. ಇಂತಹ ವಿಷಯಗಳು ಸಂಬಂಧಿತ ಇಲಾಖೆಯ ಮಟ್ಟದಲ್ಲೇ ಅಂತ್ಯಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.


ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ನ್ಯಾ.

ಡಿ.ಕೆ. ಸಿಂಗ್ ಮತ್ತು ನ್ಯಾ. ಟಿ.ಎಂ. ನಡಾಫ್ ಇವರನ್ನೊಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.


“ಮುಖ್ಯಮಂತ್ರಿಗಳ ಕಚೇರಿ ನೇರವಾಗಿ ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತ ಯಾವುದೇ ವಿನಂತಿಗಳನ್ನು ಪರಿಗಣಿಸಬಾರದು. ಈ ವಿಷಯಗಳು ಇಲಾಖೆಯ ಮಟ್ಟದಲ್ಲೇ ಅಂತ್ಯಗೊಳ್ಳಬೇಕು. ಮುಖ್ಯಮಂತ್ರಿಗಳಿಗೆ ಇಂತಹ ವಿಷಯಗಳಲ್ಲಿ ತೊಡಗಿಕೊಳ್ಳುವುದಕ್ಕಿಂತ ಹೆಚ್ಚು ಪ್ರಮುಖ ಕೆಲಸಗಳಿವೆ” ಎಂದು ಹೇಳಿದೆ.


ಪ್ರಕರಣದ ಹಿನ್ನೆಲೆ

ಏಕಸದಸ್ಯ ನ್ಯಾಯಾಧೀಶರ ಆದೇಶದ ವಿರುದ್ಧ ಸಲ್ಲಿಸಲಾದ ಒಳ ಅಪೀಲನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ, ಸಿಎಂ ಕಚೇರಿಯಿಂದ ಗುಂಪು ‘ಬಿ’ ಮತ್ತು ‘ಸಿ’ ನೌಕರರ ವರ್ಗಾವಣೆ ಕುರಿತಂತೆ ಅನೇಕ ಪತ್ರಗಳು/ಅನುಮೋದನೆಗಳು ಹೊರಡುತ್ತಿವೆ ಎಂಬುದನ್ನು ಗಮನಿಸಲಾಯಿತು. ಇವುಗಳಿಂದ ಅಧಿಕೃತ ಮೇಲಾಧಿಕಾರಿಗಳು ನೀಡಿದ ವರ್ಗಾವಣೆ ಆದೇಶಗಳು ಹಿಂಪಡೆಯಲ್ಪಡುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಗಮನಿಸಲಾಯಿತು.


ಈ ಪ್ರಕರಣದಲ್ಲಿ ಅರ್ಜಿದಾರರು (ಸಹಾಯಕ ವ್ಯವಸ್ಥಾಪಕ) ಸಿಎಂ ಕಚೇರಿಯಿಂದ ಪರಸ್ಪರ ವರ್ಗಾವಣೆಗೆ ಅನುಮೋದನೆ ಪಡೆಯಲು ಯಶಸ್ವಿಯಾಗಿದ್ದರು, ಆದರೆ ಅದು ಸಂಬಂಧಿತ ಸಂಸ್ಥೆಯಾದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯ ಕಚೇರಿಯಿಂದ ಬಂದದ್ದಲ್ಲ.


ಏಕಸದಸ್ಯ ನ್ಯಾಯಾಧೀಶರು, ಇಂತಹ ಆದೇಶಗಳು ಮುಖ್ಯಮಂತ್ರಿಗಳಿಗೆ ತಿಳಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದು, ಕಚೇರಿಯಲ್ಲಿ ಯಾರೋ ಯಾಂತ್ರಿಕವಾಗಿ ಇಂತಹ ಅನುಮೋದನೆಗಳನ್ನು ನೀಡುತ್ತಿರುವ ಸಾಧ್ಯತೆಯನ್ನೂ ಸೂಚಿಸಿದ್ದರು. ಇದರಿಂದ ನೌಕರರಲ್ಲಿ ಅಸಮಾಧಾನ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆಗಳು ಹೆಚ್ಚುತ್ತಿರುವುದಾಗಿ ಹೇಳಿದ್ದಾರೆ.


ಸರ್ಕಾರದ ನಿಲುವು

ರಾಜ್ಯದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ,

ಸಿಎಂ ಕಚೇರಿಯಿಂದ ಬರುವ ಟಿಪ್ಪಣಿಗಳು ಶಿಫಾರಸು ಸ್ವರೂಪದಲ್ಲಿದ್ದು, ಅವು ಸ್ವತಃ ವರ್ಗಾವಣೆ ಆದೇಶಗಳಲ್ಲ.


ಅಂತಿಮವಾಗಿ ಸಂಬಂಧಿತ ಆಡಳಿತ ಇಲಾಖೆಗಳು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪರಿಶೀಲನೆ ನಡೆಸಿ, ಸಮರ್ಥ ಪ್ರಾಧಿಕಾರದ ಅನುಮೋದನೆಯೊಂದಿಗೆ ವರ್ಗಾವಣೆ ಆದೇಶಗಳನ್ನು ಜಾರಿಗೊಳಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ.


ನ್ಯಾಯಾಲಯದ ಅಭಿಪ್ರಾಯ

ವರ್ಗಾವಣೆ ಮತ್ತು ಪೋಸ್ಟಿಂಗ್ ವಿಷಯಗಳನ್ನು ಸಂಬಂಧಿತ ಆಡಳಿತ ಇಲಾಖೆಗಳಿಗೇ ಬಿಟ್ಟುಕೊಡಬೇಕು,

ರಾಜ್ಯದ ಉನ್ನತ ಪ್ರಾಧಿಕಾರವಾದ ಮುಖ್ಯಮಂತ್ರಿಗಳು ಇಂತಹ ವಿಷಯಗಳಲ್ಲಿ ತಮ್ಮ ಸಮಯವನ್ನು ವ್ಯಯಿಸಬಾರದು, ಸಿಎಂ ಕಚೇರಿಯ ನೇರ ಹಸ್ತಕ್ಷೇಪ ತಪ್ಪಿಸಬೇಕು.


ಅಂತಿಮ ನಿರ್ದೇಶನ

ವರ್ಗಾವಣೆ ಮತ್ತು ಪೋಸ್ಟಿಂಗ್ ಕುರಿತ ಅರ್ಜಿಗಳನ್ನು ಸಿಎಂ ಕಚೇರಿ ನೇರವಾಗಿ ಪರಿಗಣಿಸಬಾರದು,

ಇಂತಹ ವಿಷಯಗಳು ಇಲಾಖೆಯ ಮಟ್ಟದಲ್ಲೇ ಅಂತ್ಯಗೊಳ್ಳಬೇಕು.

ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಸಹ ನ್ಯಾಯಾಲಯ ಆದೇಶಿಸಿದೆ.


*ಕಾನೂನುಬದ್ಧ ಅಂಶಗಳು*


ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ವರ್ಗಾವಣೆ ಸರ್ಕಾರದ ಹಕ್ಕಾಗಿದ್ದರೂ, ಅದು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿರಬೇಕು. ನಿಯಮ ಉಲ್ಲಂಘನೆಯಾದರೆ ಸಂಬಂಧಿಸಿತ ಅಧಿಕಾರಿಗಳು ನ್ಯಾಯಾಲಯದ ಮೆಟ್ಟಿಲು ಏರಬಹುದು. ನ್ಯಾಯಾಲಯಗಳು ಸಾಮಾನ್ಯವಾಗಿ ಸಾರ್ವಜನಿಕ ಹಣದ ದುರುಪಯೋಗವಾಗದಂತೆ ಹಾಗೂ ಆಡಳಿತದ ಜವಾಬ್ದಾರಿ ಖಚಿತವಾಗುವಂತೆ ಮಾರ್ಗಸೂಚಿ ನೀಡುತ್ತವೆ.


ಇನ್ನೂ ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ನಿಯಮ ಪಾಲನೆ ಕಡ್ಡಾಯವಾಗಿದೆ. ಸ್ಪಷ್ಟ ಹುದ್ದೆ, ವರದಿ ಮಾಡುವ ಅಧಿಕಾರಿಯನ್ನು ಸೂಚಿಸುವುದು ಉತ್ತಮ ಆಡಳಿತದ ಲಕ್ಷಣವೆಂದು ಪರಿಗಣಿಸಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಕ್ರಮವು ಕೇವಲ ಆಡಳಿತಾತ್ಮಕ ಕ್ರಮವಲ್ಲ. ಅದು ಸಾರ್ವಜನಿಕ ಹಣದ ಸಮರ್ಪಕ ಬಳಕೆಯೊಂದಿಗೆ ನೇರ ಸಂಪರ್ಕ ಹೊಂದಿದೆ.


✍️ ಪ್ರಕಾಶ್ ನಾಯಕ್, ಹಿರಿಯ ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ದ.ಕ.

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu