LAW POINT 43: ವ್ಯಕ್ತಿ ಸ್ವಾತಂತ್ರ್ಯ ಮತ್ತು ಜಾಮೀನು ನಿಯಮಗಳು: ಸುಪ್ರೀಂ ಕೋರ್ಟ್‌ನ 2021ರ ಕೆ.ಎ. ನಜೀಬ್ ಪ್ರಕರಣ
LAW POINT 43: ವ್ಯಕ್ತಿ ಸ್ವಾತಂತ್ರ್ಯ ಮತ್ತು ಜಾಮೀನು ನಿಯಮಗಳು: ಸುಪ್ರೀಂ ಕೋರ್ಟ್‌ನ 2021ರ ಕೆ.ಎ. ನಜೀಬ್ ಪ್ರಕರಣ
'ಜಾಮೀನು ನಿಯಮ, ಜೈಲು ಅಪವಾದ' (bail is rule, jail is exception) ಎನ್ನುವುದು ಭಾರತದ ನ್ಯಾಯ ವ್ಯವಸ್ಥೆಯ ಮಹತ್ವದ ಅಂಶವಾಗಿದೆ. ಆರೋಪಿಗಳ ಮೇಲೆ ಹೊರಿಸಲಾಗಿರುವ ಅಪರಾಧವು ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಅವರನ್ನು ನಿರಪರಾಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅಂತಹ ವ್ಯಕ್ತಿಗಳು ಜಾಮೀನಿಗೆ ಅರ್ಹರಾಗಿರುತ್ತಾರೆ ಎಂಬುದು ಈ ನಿಯಮದ ತಾತ್ಪರ್ಯ.
ಆದರೆ, ಈ ನಿಯಮವನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಬಂಧಿತರಾದವರಿಗೆ ಸಾಮಾನ್ಯವಾಗಿ ಅನ್ವಯ ಮಾಡಲಾಗುತ್ತಿರಲಿಲ್ಲ. ಆದರೆ, ಯುಎಪಿಎ ಅಡಿ ಆರೋಪಿಗಳು ಜಾಮೀನಿಗೆ ಅರ್ಹರೇ ಅಲ್ಲವೇ ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್‌ನ ವಿವಿಧ ಪೀಠಗಳು ಭಿನ್ನ ರೀತಿಯ ತೀರ್ಪುಗಳನ್ನು ನೀಡಿವೆ.
ಯುಎಪಿಎ ಅಡಿಯಲ್ಲಿ ದೂರು ದಾಖಲಾದರೆ ಪೊಲೀಸ್ ದಾಖಲೆ ಮತ್ತು ಪ್ರಕರಣದ ಡೈರಿಯಲ್ಲಿ ಆರೋಪಕ್ಕೆ ಪೂರಕವಾದ ಅಂಶಗಳಿವೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ, ಸೆಕ್ಷನ್ 43-ಡಿ 5ರ ಅಡಿಯಲ್ಲಿ ನ್ಯಾಯಾಲಯವು ಜಾಮೀನು ನಿರಾಕರಿಸಬಹುದು. ಹೀಗಾಗಿಯೇ ಯುಎಪಿಎ ಅಡಿ ವಿಶೇಷ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳಲ್ಲಿ ಬಹುತೇಕ ಜಾಮೀನು ಅರ್ಜಿಗಳು ತಿರಸ್ಕಾರಗೊಂಡಿವೆ.
ದೇಶದ ಪ್ರತಿಯೊಬ್ಬ ಪ್ರಜೆಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ದೇಶದ ಸಂವಿಧಾನದ 21ನೇ ವಿಧಿ ನೀಡುತ್ತದೆ. ಈ ವಿಧಿಯು ಆರೋಪಿಗಳ ತ್ವರಿತ ವಿಚಾರಣೆಯ ಹಕ್ಕನ್ನೂ ಒಳಗೊಂಡಿದೆ. ಈ ಅಂಶವನ್ನು ಸುಪ್ರೀಂ ಕೋರ್ಟ್ ಸುದೀರ್ಘ ಅವಧಿಯಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ.
ಆದರೆ, ಯುಎಪಿಎ ಅಡಿ ದಾಖಲಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ದೀರ್ಘಕಾಲ ಜೈಲುವಾಸ ಅನುಭವಿಸುವುದು ಸಾಮಾನ್ಯವಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 16 ಮಂದಿ ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ, ಅವರ ವಿರುದ್ಧ ಯುಎಪಿಎ ಸೇರಿದಂತೆ ಹಲವು ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ಹಲವು ವರ್ಷ ವಿಳಂಬವಾಗಿತ್ತು. ಬಂಧಿತರ ಪೈಕಿ ವರವರರಾವ್ ಅವರಿಗೆ ಮಾತ್ರ ಎರಡೂವರೆ ವರ್ಷಗಳ ನಂತರ ವೈದ್ಯಕೀಯ ಕಾರಣಕ್ಕೆ ಜಾಮೀನು ದೊರೆಯಿತು.
ಉಳಿದ ಬಹುತೇಕರು ಐದು ವರ್ಷಕ್ಕೂ ಹೆಚ್ಚು ಜೈಲುವಾಸ ಅನುಭವಿಸಿದರು. 86 ವರ್ಷದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಕ್ಯಾನ್ ಸ್ವಾಮಿ ತೀವ್ರ ಅನಾರೋಗ್ಯದ ನಡುವೆಯೂ ಜಾಮೀನು ದೊರೆಯದೆ, ಜೈಲಿನಲ್ಲಿಯೇ ನಿಧನರಾದರು. ಇದು ಭಾರಿ ಚರ್ಚೆಗೆ ಕಾರಣವಾಗಿತ್ತು. ಸಂವಿಧಾನದ 21ನೇ ವಿಧಿ ಅನ್ವಯ ಜಾಮೀನು ನೀಡಬೇಕೇ ಅಥವಾ ಯುಎಪಿಎ ಕಾಯ್ದೆಯ ಅಡಿ ಮೇಲ್ನೋಟಕ್ಕೆ ಆರೋಪ ನಿಜವೆಂದು ಕಂಡರೆ ಅವರನ್ನು ಜೈಲಿನಲ್ಲಿಯೇ ಉಳಿಸಬೇಕೇ ಎನ್ನುವ ಸಂದಿಗ್ಧ ತಲೆದೋರಿತ್ತು.
ಏನಿದು ನಜೀಬ್ ಪ್ರಕರಣ
2021ರ 'ಕೆ.ಎ.ನಜೀಬ್ ವಿರುದ್ಧ ಭಾರತ ಸರ್ಕಾರ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು ಯುಎಪಿಎ ಪ್ರಕರಣಗಳ ಜಾಮೀನು ಅರ್ಜಿಗೆ ಸಂಬಂಧಿಸಿ ಮಹತ್ವದ ಆದೇಶ ನೀಡಿತು. ಪ್ರಕರಣದ ವಿಚಾರಣೆ ನಿಗದಿತ ಅವಧಿಯಲ್ಲಿ ಮುಗಿಯುವುದಿಲ್ಲ ಎನ್ನುವಂತಿದ್ದರೆ ಅಥವಾ ಆರೋಪಿ ಅದಾಗಲೇ ಗಣನೀಯ ಅವಧಿಯ ಜೈಲುವಾಸ ಅನುಭವಿಸಿದ್ದರೆ, ಅವರಿಗೆ ಜಾಮೀನು ನೀಡಬಹುದು ಎಂದು ಈ ಪ್ರಕರಣದ ತೀರ್ಪು ಪ್ರತಿಪಾದಿಸಿದೆ.
ದೆಹಲಿ ಗಲಭೆಗಳ ಪ್ರಕರಣದಲ್ಲಿ ಬಂಧಿತರಾಗಿದ್ದ ಏಳು ಮಂದಿಯ ಪೈಕಿ ಗುಲ್‌ಫಿಶಾ ಫಾತಿಮಾ ಸೇರಿದಂತೆ ಐವರು ಆರೋಪಿಗಳಿಗೆ ಇದೇ ಜನವರಿಯಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ಜಾಮೀನು ನೀಡಿತ್ತು. ಆದರೆ, ಅದೇ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್‌ಮತ್ತು ಶರ್ಜೀಲ್ ಇಮಾಂ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.
ಕಾಯ್ದೆ ಅಡಿ ಕಠಿಣ ಜೈಲು ಶಿಕ್ಷೆ ಅನುಭವಿಸಿದ ನಂತರ ಆರೋಪಿಗಳಿಗೆ 21ನೇ ವಿಧಿ ಅನ್ವಯಿಸಬಹುದು ಎಂದು ನಜೀಬ್ ಪ್ರಕರಣದ ಆದೇಶವು ಹೇಳಿದರೆ, ಸಂವಿಧಾನದತ್ತವಾದ ಹಕ್ಕುಗಳ ಅಡಿಯಲ್ಲಿ ರಕ್ಷಣೆ ಸಿಗಬೇಕಾದರೆ, ಮೊದಲು ಕಾಯ್ದೆಯ ನಿಯಮಗಳನ್ನು ಪೂರೈಸಬೇಕು (ಮೇಲ್ನೋಟಕ್ಕೆ ಆರೋಪ ಸಾಬೀತಾಗದಿರುವುದು-ಸೆಕ್ಷನ್ 43-ಡಿ 5) ಎಂದು ಗುಲ್‌ಫಿಶಾ ಫಾತಿಮಾ ಮತ್ತು ಗುರ್‌ವಿಂದರ್ ಸಿಂಗ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಹೇಳಿತ್ತು.
ಅಂದ್ರಾಬಿ ಪ್ರಕರಣ:
ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪ ಹೊತ್ತವರಿಗೆ ಜಾಮೀನು ನಿರಾಕರಿಸುವ ನ್ಯಾಯಾಲಯಗಳ ತೀರ್ಪು ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನೀಡಿದ ಮಹತ್ವದ ತೀರ್ಪು (2026).
'ಸೈಯದ್ ಇಫ್ತಿಕರ್ ಅಂದ್ರಾಬಿ' ಎಂಬವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ, "ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ನಿರಾಕರಿಸಬಹುದು" ಎಂದು ಹೇಳಿತು. ಈ ಅಂಶ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ದಾಖಲಾದ ಪ್ರಕರಣಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದು ವ್ಯಾಪಕ ಚರ್ಚೆಗೆ ಕಾರಣವಾಯಿತು. ಅರ್ಜಿದಾರ ಸೈಯದ್ ಇಫ್ತಿಕರ್ ಅಂದ್ರಾಬಿ ಜಮ್ಮು-ಕಾಶ್ಮೀರದಲ್ಲಿ ಮಾದಕವಸ್ತು ಪೂರೈಕೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿರುವ ಗಡಿಯಾಚೆಗಿನ ಜಾಲದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಂದ್ವಾಡದ ನಿವಾಸಿ.
ಸುಪ್ರೀಂ ಕೋರ್ಟ್‌ನ ಇನ್ನೊಂದು ಪೀಠ ಉಮ್ಮರ್ ಖಾಲಿದ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ತರಾಟೆಗೆ ತೆಗೆದುಕೊಂಡ ನ್ಯಾ. ನಾಗರತ್ನ ನೇತೃತ್ವದ ಸುಪ್ರೀಂ ಪೀಠ, 'ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜಾಮೀನು ಅರ್ಜಿಯನ್ನು ನಿರಾಕರಿಸಬಹುದು' ಎಂಬುದು 21, 22ನೇ ವಿಧಿಗೆ ಸಂಬಂಧಿಸಿದ ಸಾಂವಿಧಾನಿಕ ತತ್ವವಾಗಿದೆ' ಎಂದು ಹೇಳಿತ್ತು.
ಯುಎಪಿಎ ಪ್ರಕರಣದಲ್ಲಿ ಜಾಮೀನು ನೀಡುವ ಕುರಿತು ಕೆ.ಎ ನಜೀಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ 2021ರಲ್ಲಿ ಮಹತ್ವದ ತೀರ್ಪು ನೀಡಿತ್ತು. 'ಜಾಮೀನು ನಿಯಮ, ಜೈಲು ಅಪವಾದ' ಎಂದು ನಜೀಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಇದನ್ನು ವಿಚಾರಣಾ ನ್ಯಾಯಾಲಯಗಳು, ಹೈಕೋರ್ಟ್ ಮತ್ತು ತನ್ನದೇ ಪೀಠಗಳು ತಳ್ಳಿಹಾಕುವಂತಿಲ್ಲ.
'ಯುಎಪಿಎಯಲ್ಲಿನ 43ಡಿ(5) ಸೆಕ್ಷನ್ ಅನಿರ್ದಿಷ್ಟಾವಧಿ ಜೈಲುಶಿಕ್ಷೆ-ಯನ್ನು ಸಮರ್ಥಿಸುವುದಿಲ್ಲ ಮತ್ತು ಅದು ಸಂವಿಧಾನದ 21 ಮತ್ತು 22ನೇ ವಿಧಿಯ ಅಡಿ ಕಾರ್ಯನಿರ್ವಹಿಸಬೇಕು. ಈ ಸೆಕ್ಷನ್‌ಗಳು ಕಠಿಣ ಜಾಮೀನು ಷರತ್ತುಗಳನ್ನು ವಿವರಿಸುತ್ತವೆ' ಎಂಬುದಾಗಿ ಕೆಳ ನ್ಯಾಯಾಲಯಗಳ ಜಾಮೀನು ಮಂಜೂರು ಮಾಡುವಲ್ಲಿ ಇರುವ ಕೊರತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.
ವ್ಯಕ್ತಿಗತ ಹಕ್ಕುಗಳನ್ನು ಎತ್ತಿ ಹಿಡಿಯುವ 'ನಜೀಬ್ ಪ್ರಕರಣ'ದ ತೀರ್ಪಿನಂತಹ ಪೂರ್ವ ನಿದರ್ಶನಗಳನ್ನು ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲ ನ್ಯಾಯಾಲಯಗಳು ಪಾಲಿಸಲೇಬೇಕು. ಇದು ಸ್ವತಃ ಸುಪ್ರೀಂ ಕೋರ್ಟ್ ಹೊರಡಿಸಿದ ಫರ್ಮಾನು.
ವಿಸ್ತ್ರತ ಪೀಠಗಳ ತಾರ್ಕಿಕತೆಗೆ ಕಡಿಮೆ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಸಣ್ಣ ಪೀಠಗಳು ಅಸಮ್ಮತಿ ವ್ಯಕ್ತಪಡಿಸದೆಯೇ ದುರ್ಬಲಗೊಳಿಸಿದೆ ಎಂಬದನ್ನೂ ಕೋರ್ಟ್ ಗಮನಿಸಿದೆ.
ವಿಭಾಗೀಯ ಪೀಠದ ಈ ಗಂಭೀರ ವಿಮರ್ಶೆ ಮತ್ತು ವಿಶ್ಲೇಷಣೆಯು, ಉಮರ್ ಖಾಲಿದ್ ರೀತಿಯ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಸಣ್ಣ ಪೀಠಗಳು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಮಾರ್ಗದರ್ಶನ ನೀಡುವಂತಿದೆ. ಉಮರ್ ಖಾಲಿದ್ ಬಂಧನವು ವಿವೇಚನೆ ಹಾಗೂ ನ್ಯಾಯದ ಚೌಕಟ್ಟನ್ನು ದಾಟಿದ್ದು, ಸರ್ಕಾರದ ಹಟದಿಂದ ಮಾತ್ರ ಅದು ಜಾರಿಯಲ್ಲಿದೆ. ತನಿಖಾಸಂಸ್ಥೆ ಹೊರಿಸಿರುವ ಮೇಲ್ನೋಟದ ಆರೋಪಗಳನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಅರೋಪಿಗಳಿಗೆ ಜಾಮೀನು ನಿರಾಕರಿಸಿದರೆ, ವಿಚಾರಣೆಗೆ ಮೊದಲಿನ ಬಂಧನದ ಅವಧಿಯೇ ವಿಚಾರಣೆಯ ನಂತರದ ಶಿಕ್ಷೆಯ ಸ್ವರೂಪವಾಗಿ ಪರಿಣಮಿಸುತ್ತದೆ ಎಂದು ಕೋರ್ಟ್ ಹೇಳಿದೆ. ಉಮರ್ ಖಾಲಿದ್ ಪ್ರಕರಣದಲ್ಲಿ ಹೀಗೆಯೇ ಅಗಿದ್ದು, ವಿಚಾರಣಾಪೂರ್ವ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸಿದೆ.
ಏನಿದು ಯುಎಪಿಎ?
ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸಂಕ್ಷಿಪ್ತ ರೂಪ ಯುಎಪಿಎ. ದೇಶದ ಭದ್ರತೆ, ಏಕತೆ ಮತ್ತು ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಕಾನೂನುಬಾಹಿರ ಚಟುವಟಿಕೆಗಳು, ಭಯೋತ್ಪಾದನೆಯಂತಹ ಕೃತ್ಯಗಳನ್ನು ತಡೆಯುವುದು ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ, ಕೃತ್ಯ ಎಸಗುವ ಸಂಘಟನೆಗಳಿಗೆ ಶಿಕ್ಷೆ ವಿಧಿಸುವುದು ಈ ಕಾನೂನಿನ ಪ್ರಮುಖ ಉದ್ದೇಶ. ದೇಶದಲ್ಲಿ ಜಾರಿಯಲ್ಲಿರುವ ಅತ್ಯಂತ ಕಠಿಣ ಕಾಯ್ದೆ ಎಂದು ಇದು ಗುರುತಿಸಿಕೊಂಡಿದೆ.
1967ರಲ್ಲಿ ಜಾರಿಗೆ ಬಂದ ಈ ಕಾನೂನಿಗೆ ಬಲ ಬಂದದ್ದು 2004ರಲ್ಲಿ. ಭಯೋತ್ಪಾದಕರು, ಭಯೋತ್ಪಾದನಾ ಸಂಘಟನೆಗಳನ್ನು ಶಿಕ್ಷಿಸುವುದಕ್ಕಾಗಿ ಈ ಕಾಯ್ದೆಗೆ ತಿದ್ದುಪಡಿ ತಂದು ಪ್ರತ್ಯೇಕ ಅಧ್ಯಾಯಗಳನ್ನು ಸೇರಿಸಿದ ಮೇಲೆ.
2019ರಲ್ಲಿ ಮತ್ತೊಂದು ತಿದ್ದುಪಡಿ ತರಲಾಯಿತು. ಈ ಮೂಲಕ 'ಯುಎಪಿಎ' ಮಹತ್ವದ ಬದಲಾವಣೆ ಕಂಡಿತು. ಈ ಕಾಯ್ದೆಯ ಸೆಕ್ಷನ್ 35 ಅನ್ನು ಬದಲಾಯಿಸಲಾಯಿತು. ಯಾವುದೇ ವ್ಯಕ್ತಿಯನ್ನು 'ಭಯೋತ್ಪಾದಕ' ಎಂದು ಗುರುತಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಇದು ನೀಡಿತು. ಇದಕ್ಕೂ ಮೊದಲು ಸಂಘಟನೆಗಳನ್ನು ಮಾತ್ರ ಈ ರೀತಿ ಗುರುತಿಸುವುದಕ್ಕೆ ಅವಕಾಶ ಇತ್ತು. ಈ ತಿದ್ದುಪಡಿಯನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ.
ಈ ಕಾನೂನಿನ ಬಗ್ಗೆ ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕ, ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಆಯೋಗ, ಅಮೆಸ್ಟಿ ಇಂಟರ್‌ನ್ಯಾಷನಲ್ ಸೇರಿದಂತೆ ಹಲವು ಜಾಗತಿಕ ಸಂಘಟನೆಗಳು ಯುಎಪಿಎಯನ್ನು ವಿರೋಧಿಸಿವೆ. ಇದರ ಅಡಿಯಲ್ಲಿ ಬಂಧಿತರಾಗಿರುವ ಮಾನವ ಹಕ್ಕುಗಳ ಕಾರ್ಯಕರ್ತರು, ಪತ್ರಕರ್ತರು, ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಲೇ ಬಂದಿವೆ.
ಈ ತಿದ್ದುಪಡಿಗಳನ್ನು ಆಡಳಿತ ಮತ್ತು ಸರ್ಕಾರ ತನ್ನ ಅನುಕೂಲಕ್ಕೂ ಬಳಸಬಹುದು. ತನ್ನನ್ನು ಕಟುವಾಗಿ ಟೀಕಿಸುತ್ತಿರುವವರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ ಎಂಬುದು ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪ. ತಾನು ಆಡಳಿತದಲ್ಲಿರುವ ರಾಜ್ಯಗಳು ಕೂಡ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ಆರೋಪವೂ ಇದೆ.
ಹೋರಾಟಗಾರರು, ಮಾನವ ಹಕ್ಕುಗಳ ಕಾರ್ಯಕರ್ತರನ್ನಲ್ಲದೆ, ಪತ್ರಕರ್ತರನ್ನೂ ಬಂಧಿಸಲಾಗಿದೆ. ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರು 2020ರಲ್ಲಿ ಉತ್ತರ ಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗೆಂದು ಹೋಗುತ್ತಿದ್ದಾಗ ಪೋಲಿಸರು ಅವರನ್ನು ಬಂಧಿಸಿದ್ದರು. 28 ತಿಂಗಳ ಜೈಲುವಾಸದ ಬಳಿಕ 2023ರ ಫೆಬ್ರುವರಿ 2ರಂದು ಅವರು ಬಿಡುಗಡೆಯಾದರು. ಕಾಶ್ಮೀರದ ಪತ್ರಕರ್ತ ಇರ್ಫಾನ್ ಮೆಹರಾಜ್ 2023ರ ಮಾರ್ಚ್ 20ರಂದು ಬಂಧನಕ್ಕೆ ಒಳಗಾಗಿದ್ದು, ಈಗಲೂ ಬಂಧನದಲ್ಲಿದ್ದಾರೆ.
ಚೀನಾ ಫಂಡಿಂಗ್ ಆರೋಪದಲ್ಲಿ 2023ರಲ್ಲಿ 'ನ್ಯೂಸ್ ಕ್ಲಿಕ್' ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರನ್ನು ಕೂಡ ಯುಎಪಿಎ ಬಳಸಿ ಬಂಧಿಸಲಾಗಿತ್ತು. 225 ದಿನಗಳ ಜೈಲುವಾಸದ ಬಳಿಕ ಅವರು ಬಿಡುಗಡೆಗೊಂಡರು.
ಕಳೆದ ಒಂದು ದಶಕದಲ್ಲಿ ದೇಶವು ಬೆರಳೆಣಿಕೆಯನ್ನೂ ಮೀರಿದ ರಾಜಕೀಯ ಬಂಧನಗಳ ಸರಮಾಲೆಯನ್ನು ಕಂಡಿದೆ. ಇದೆಲ್ಲವೂ ಆಡಳಿತಾರೂಢ ಪಕ್ಷದ ಮರ್ಜಿಗೆ ಸಂವಿಧಾನಿಕ ಸಂಸ್ಥೆಗಳ ದುರುಪಯೋಗ ನಡೆದಿರುವುದನ್ನು ಎತ್ತಿ ತೋರಿಸುತ್ತದೆ. ಆದರೆ, ಈ ಎಲ್ಲದ ಮಧ್ಯೆ ಮಿಂಚೊಂದು ಕಾಣಿಸಿದೆ. ಜಾಮೀನಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ 'ಸೈಯದ್ ಇಫ್ತಿಕರ್ ಅಂದ್ರಾಬಿ' ನೀಡಿದ ತೀರ್ಪು ಅಧಿಕಾರಸ್ಥರ ಅಧಿಕಾರಕ್ಕೆ ಕಡಿವಾಣ ಹಾಕುತ್ತದೆಯೇ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ.