ಪಿತೃತ್ವ ಖಾತ್ರಿಗೆ ಡಿಎನ್‌ಎ ಟೆಸ್ಟ್: ಗೌಪ್ಯತೆ ಹಕ್ಕು ಉಲ್ಲಂಘನೆಯಾಗದು- ಕರ್ನಾಟಕ ಹೈಕೋರ್ಟ್
ಪಿತೃತ್ವ ಖಾತ್ರಿಗೆ ಡಿಎನ್‌ಎ ಟೆಸ್ಟ್: ಗೌಪ್ಯತೆ ಹಕ್ಕು ಉಲ್ಲಂಘನೆಯಾಗದು- ಕರ್ನಾಟಕ ಹೈಕೋರ್ಟ್
ಪಿತೃತ್ವ ಖಾತ್ರಿಗೆ ವೈದ್ಯಕೀಯ ಪರೀಕ್ಷೆ ಮಾಡುವುದರಿಂದ ವ್ಯಕ್ತಿಯ ಗೌಪ್ಯತೆ ಹಕ್ಕು ಉಲ್ಲಂಘನೆ ಆಗಲಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದ ಶಿವಣ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
''ವೈಜ್ಞಾನಿಕ ವಿಧಾನಗಳಿಂದ ಪಿತೃತ್ವ ಖಾತ್ರಿ ಪಡೆದುಕೊಳ್ಳುವುದಕ್ಕೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಮಕ್ಕಳು ತಮ್ಮ ಆಸ್ತಿ ವಿಭಜನೆಗಾಗಿ ಪ್ರಕರಣ ಸಲ್ಲಿಸಲು ತನ್ನ ಮೂಲ ತಿಳಿಯುವ ಪ್ರಯತ್ನದಲ್ಲಿ ಡಿಎನ್‌ಎ ಪರೀಕ್ಷೆಗೊಳಪಡಿಸುವುದು ಗೌಪ್ಯತೆಯ ಹಕ್ಕಿನ ಮೇಲೆ ದಾಳಿ ಅಥವಾ ಉಲ್ಲಂಘನೆ ಎನ್ನಲಾಗದು'' ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ವಿಚಾರಣಾ ನ್ಯಾಯಾಲಯದಲ್ಲಿ ಶಿವಣ್ಣ/ಅರ್ಜಿದಾರ ಪಾಟೀ ಸವಾಲು ಸಂದರ್ಭದಲ್ಲಿ ತಾವೇ ಖುದ್ದಾಗಿ ಡಿಎನ್‌ಎ ಪರೀಕ್ಷೆಗೆ ಸಿದ್ಧವಿರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಒಮ್ಮೆ ಒಪ್ಪಿಗೆ ನೀಡಿದ ಮೇಲೆ, ಈಗ ಅದು ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ವಾದಿಸುವುದು ಕಾನೂನುಬಾಹಿರ ಎಂದು ನ್ಯಾಯಪೀಠ ತಿಳಿಸಿತು.
"ಪ್ರಕರಣದಲ್ಲಿ ಅರ್ಜಿದಾರರ ಹೆಸರು ಎಚ್.ಸಿ.ಶಿವಣ್ಣ ಎಂಬುದಾಗಿದೆ. ಆದರೆ, ಶಿವಣ್ಣ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅರ್ಜಿದಾರರು ಮತ್ತು ಪ್ರತಿ ವಾದಿಗಳ ನಡುವಿನ ಜೈವಿಕ ಸಂಬಂಧ ಖಚಿತಪಡಿಸಿಕೊಳ್ಳಲು ಸಲ್ಲಿಸಲಾದ ಪುರಾವೆ ಗಳು ಸಾಕಾಗುವುದಿಲ್ಲ ಎಂಬುದು ಸ್ಪಷ್ಟ ವಾಗಿದೆ. ಡಿಎನ್ಎ ಪರೀಕ್ಷೆ ಮಾಡುವಂತೆ ಅರ್ಜಿದಾರರೇ ಸ್ವತಃ ಕೋರುತ್ತಾರೆ ಎಂಬುದನ್ನು ಗಮನಿಸಬೇಕು. ಆದ್ದರಿಂದ, ಗೌಪ್ಯತೆ ಆಕ್ರಮಣ ಅಥವಾ ನ್ಯಾಯಸಮ್ಮತತೆಗೆ ಕಳಂಕ ತರುವ ಪ್ರಶ್ನೆ ಉದ್ಭವಿಸುವುದಿಲ್ಲ'' ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಎಚ್.ಎಸ್. ಮಂಜುಳಾ ಮತ್ತು ಎಚ್.ಎಸ್. ಸೋಮೇಶ್ ಎಂಬುವರು ಶಿವಣ್ಣ ತಮ್ಮ ತಂದೆಯಾಗಿದ್ದು, ತಮಗೆ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕೋರಿ 2013ರಲ್ಲಿ ನಂಜನಗೂಡಿನ ನ್ಯಾಯಾಲಯ ದಲ್ಲಿ ವಿಭಾಗದ ಸಿವಿಲ್ ದಾವೆ ಹೂಡಿದ್ದರು.
ಆದರೆ, ಶಿವಣ್ಣ ಈ ಇಬ್ಬರು ಮಕ್ಕಳು ತನಗೆ ಜನಿಸಿದವರಲ್ಲ. ಇವರು ಮಹದೇವಮ್ಮ ಮತ್ತು ಎಚ್.ಸಿ.ಶಿವಣ್ಣ ಎಂಬ ಬೇರೆ ವ್ಯಕ್ತಿಗೆ ಜನಿಸಿದವರು ಎಂದು ವಾದಿಸಿ ಪಿತೃತ್ವವನ್ನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳು ಡಿಎನ್‌ಎ ಪರೀಕ್ಷೆ ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ಪುರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಶಿವಣ್ಣ ಹೈಕೋರ್ಟ್ ಮೊರೆ ಹೋಗಿದ್ದರು.