-->
Law Point 45 | ಅಶ್ಲೀಲ ದೃಶ್ಯ ಪ್ರಸಾರ: ವ್ಯಕ್ತಿ ಘನತೆ, 'ಖಾಸಗಿತನ'ದ ರಕ್ಷಣೆಯಲ್ಲಿ ಪೊಲೀಸರ ನಿರ್ಣಾಯಕ ಪಾತ್ರ

Law Point 45 | ಅಶ್ಲೀಲ ದೃಶ್ಯ ಪ್ರಸಾರ: ವ್ಯಕ್ತಿ ಘನತೆ, 'ಖಾಸಗಿತನ'ದ ರಕ್ಷಣೆಯಲ್ಲಿ ಪೊಲೀಸರ ನಿರ್ಣಾಯಕ ಪಾತ್ರ

ಅಶ್ಲೀಲ ದೃಶ್ಯ ಪ್ರಸಾರ: ವ್ಯಕ್ತಿ ಘನತೆ, 'ಖಾಸಗಿತನ'ದ ರಕ್ಷಣೆಯಲ್ಲಿ ಪೊಲೀಸರ ನಿರ್ಣಾಯಕ ಪಾತ್ರ





ಇದು ಡಿಜಿಟಲ್ ಯುಗ. ಮಕ್ಕಳಿಂದ ವಯೋವೃದ್ಧರ ಕೈಯಲ್ಲೂ ಸ್ಮಾರ್ಟ್ ಫೋನ್ ಮಾಮುಲು. ಮೊಬೈಲ್‌ನಲ್ಲಿ ವೀಡಿಯೋ ವೀಕ್ಷಿಸದವರು ಇಲ್ಲವೇ ಇಲ್ಲ. ಒಂದು ವೀಡಿಯೋ ನೋಡಿದರೆ ಸ್ಕ್ರೋಲ್ ಆಗಿ ನೂರೆಂಟು ವೀಡಿಯೋಗಳು ನಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ. ಈ ಪೈಕಿ ವ್ಯಕ್ತಿಯೊಬ್ಬರ 'ಖಾಸಗಿತನ'ಕ್ಕೆ ಧಕ್ಕೆ ತರುವ ವೀಡಿಯೋಗಳು ಇರಬಹುದು. ಅದನ್ನು ಶೇರ್ ಮಾಡಿಕೊಂಡರೆ ಅಪಾಯ ಖಂಡಿತ.


ಯಾವುದೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವ ದೃಶ್ಯಗಳನ್ನು, ಅವರ ಅನುಮತಿಯೇ ಇಲ್ಲದೆ ವಿಡಿಯೊ, ಫೋಟೋಗಳನ್ನು ಹಂಚಿಕೊಂಡು ವಿಕೃತ ಆನಂದ ಪಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಇಂಥ ಸೈಬರ್ ದೌರ್ಜನ್ಯಗಳು ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುತ್ತದೆ. ನೈತಿಕತೆಯ ಗಂಭೀರ ಅಧಃಪತನಕ್ಕೆ ದಾರಿ ಮಾಡಿಕೊಟ್ಟಿದೆ.


ಇಂತಹ ಪ್ರವೃತ್ತಿಗೆ ಬ್ರೇಕ್ ಹಾಕಲಿ ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಶಾರ್ಟ್ಸ್‌, ಮೀಮ್ಸ್‌, ಟ್ರೋಲ್‌ಗಳಲ್ಲಿ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಡೆಯುವ ವಿಚಾರದಲ್ಲಿ ಪೊಲೀಸ್ ಇಲಾಖೆ ಗಂಭೀರತೆ ತಾಳಿರುವುದು ನಿಜಕ್ಕೂ ಪ್ರಶಂಸನೀಯ.


ಅನುಮತಿಯಿಲ್ಲದೇ 'ಆಪ್ತ' ಚಿತ್ರಗಳು ಹಾಗೂ ವಿಡಿಯೊಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಸಂಬಂಧಿಸಿದಂತೆ ಪ್ರಕರಣಗಳಿಗೆ ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು ಎಂಬುದಾಗಿ ಮಾರ್ಗಸೂಚಿಯಲ್ಲಿ ನಿರ್ದೇಶಿಸಲಾಗಿದೆ. ಇಂತಹ ಘಟನೆಗಳು ವರದಿಯಾದಾಗ ಪೊಲೀಸರು, ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳನ್ನೂ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.


ಅಶ್ಲೀಲ, ಆಪ್ತ ಸನ್ನಿವೇಶಗಳ ಫೋಟೋ ತೆಗೆಯಲು ಇಲ್ಲವೇ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲು 'ಸಂತ್ರಸ್ತ'ರ ಅನುಮತಿ ಇತ್ತು ಎಂಬ ಕಾರಣಕ್ಕೆ, ದೂರುಗಳು ಬಂದಾಗ ಅಂತಹ ಪ್ರಕರಣಗಳನ್ನು ದಾಖಲಿಸಲು ಪೊಲೀಸರು ನಿರಾಕರಣೆ ಮಾಡುತ್ತಿರುವುದು ಅಥವಾ ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿರುವುದು ಕಂಡುಬಂದಿತ್ತು. ಸಂತ್ರಸ್ತರು ಮೊದಲು ವಿಡಿಯೊ ಚಿತ್ರೀಕರಿಸಲು ಒಪ್ಪಿಗೆ ನೀಡಿದ್ದರು ಎನ್ನುವ ಕಾರಣದ ಮೇಲೆ ದೂರು ಸ್ವೀಕರಿಸದೇ ಇರುವುದು ಪೊಲೀಸರ ಗಂಭೀರ ಕರ್ತವ್ಯ ಲೋಪವಾಗುತ್ತದೆ.


ನಿಯಮಾನುಸಾರ ಚಿತ್ರೀಕರಣಕ್ಕೆ ನೀಡಿದ್ದ ಒಪ್ಪಿಗೆಗೂ ಮತ್ತು ಇತರರಿಗೆ ಹಂಚಿಕೆ/ಪ್ರಸಾರಕ್ಕೆ ನೀಡುವ ಒಪ್ಪಿಗೆಗೂ ವ್ಯತ್ಯಾಸ ಇದೆ. ಮೊದಲನೆಯದಕ್ಕೆ ಒಪ್ಪಿಗೆ ಇದ್ದರೂ ನಂತರದ ಹಂಚಿಕೆಗೆ ಒಪ್ಪಿಗೆ ಇಲ್ಲದಿದ್ದರೂ ಪ್ರಚಾರಪಡಿಸಿದರೆ ಅದು ಅಪರಾಧವಾಗುತ್ತದೆ. ಈ ಸೂಕ್ಷ್ಮ ಎಳೆಯನ್ನು ಅಂದಾಜಿಸುವಲ್ಲಿ ಪೊಲೀಸರು ವಿಫಲರಾಗುತ್ತಿದ್ದರು. ಇದರಿಂದ ಎಷ್ಟೋ ಸಂತ್ರಸ್ತರು ನರಕಯಾತನೆ ಅನುಭವಿಸಿದ್ದೂ ಇದೆ.


ನಿಯಮಗಳ ಪ್ರಕಾರ, ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಬಾರದು. ಕಾದು ನೋಡೋಣ, ವಿಚಾರಣೆ ಬಳಿಕ ಎಫ್‌ಐಆರ್ ದಾಖಲಿಸೋಣ ಎಂದು ಪೊಲೀಸರ ಉದಾಸೀನ ಜಾಯಮಾನವೂ ಕರ್ತವ್ಯ ಲೋಪ ಮತ್ತು ಅಪರಾಧ.


ಒಪ್ಪಿಗೆಯು ನಂತರದ ಅನುಮತಿಯಿಲ್ಲದ ಪ್ರಸಾರಕ್ಕೆ ರಕ್ಷಣೆ ಆಗುವುದಿಲ್ಲ. ಆಪ್ತ ವಿಷಯಗಳನ್ನು ಬಳಸಿ ಹಣ, ಲೈಂಗಿಕ ಅನುಕೂಲ ಅಥವಾ ಬೇರೆ ಲಾಭಕ್ಕಾಗಿ ಬೆದರಿಕೆ, ಸುಲಿಗೆ ನಡೆಸಿದರೆ ಭಾರತೀಯ ನ್ಯಾಯ ಸಂಹಿತೆ 2023ರ ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ಸಂಬಂಧಿತ ಸೆಕ್ಷನ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಜತೆಗೆ ಅಳವಡಿಸಿ ಪ್ರಕರಣ ದಾಖಲು ಮಾಡಬೇಕು.


ಅಪರಾಧವು ಸ್ಥಳೀಯ ಠಾಣಾ ವ್ಯಾಪ್ತಿಯ ಹೊರೆಗೆ ನಡೆದಿದ್ದರೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಪ್ರಕಾರ 'ಝೀರೊ ಎಫ್‌ಐಆರ್' ದಾಖಲಿಸಿ ತಕ್ಷಣವೇ ಸಂಬಂಧಿತ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಬೇಕು.


ಒಪ್ಪಿಗೆ ಇಲ್ಲದೆ ಖಾಸಗಿ ದೃಶ್ಯಗಳ ಸೆರೆ ಹಿಡಿಯುವುದು, ಸಾಮಾಜಿಕ ಜಾಲದಲ್ಲಿ ಪ್ರಸಾರ ಮಾಡುವುದು ಮತ್ತು ಅಂತಹ ದೃಶ್ಯಗಳ ಮರುಪ್ರಸಾರ (ಫಾರ್ವರ್ಡ್‌) ಮಾಡಿದರೂ ಅದು ಅಪರಾಧ. ಈ ಅಪರಾಧಕ್ಕೆ ಗರಿಷ್ಠ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ₹2 ಲಕ್ಷದ ವರೆಗೆ ದಂಡ ವಿಧಿಸಬಹುದಾಗಿದೆ.


ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಕಾಮಪ್ರಚೋದಕ ವಿಷಯ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧ. ಮೊದಲ ಅಪರಾಧಕ್ಕೆ ಗರಿಷ್ಠ 3 ವರ್ಷಗಳ ಶಿಕ್ಷೆ ಹಾಗೂ

ರೂ. 5 ಲಕ್ಷದವರೆಗೆ ದಂಡ. ಪುನರಾವರ್ತಿತ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಶಿಕ್ಷೆ ಹಾಗೂ ರೂ. 10 ಲಕ್ಷ ದಂಡವಿದೆ.


ಫೋಟೊ ತೆಗೆಯುವುದಕ್ಕೆ ಅಥವಾ ಚಿತ್ರೀಕರಣಕ್ಕೆ ಸಮ್ಮತಿ ಇತ್ತು ಎನ್ನುವ ಕಾರಣದಿಂದ, ಖಾಸಗಿ ಛಾಯಾಚಿತ್ರ, ವಿಡಿಯೊಗಳ ಪ್ರಸಾರದ ಸಂದರ್ಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂಜರಿಯುತ್ತಿದ್ದರು. ಆದರೆ, ಫೋಟೊ ಅಥವಾ ವೀಡಿಯೋ ತೆಗೆಯಲು ನೀಡಿದ ಸಮ್ಮತಿಯು ಅದನ್ನು ಹಂಚಿಕೊಳ್ಳಲಿಕ್ಕೆ ಅಥವಾ ಪ್ರಸಾರ ಮಾಡಲಿಕ್ಕೆ ನೀಡಿದ ಒಪ್ಪಿಗೆಯಲ್ಲ. ಇದು ಮೂಲಭೂತ ಕಾನೂನು ತತ್ತ್ವ.


ಭಾರತೀಯ ನ್ಯಾಯಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವ್ಯಾಪ್ತಿಗೆ ಬರುವ ಈ ಪ್ರಕರಣಗಳು 'ಸಂಜ್ಞೇಯ ಅಪರಾಧ'ಗಳಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನಿನಲ್ಲಿ ಯಾವುದೇ ಗೊಂದಲವಿಲ್ಲ. ಸಂಜ್ಞೆಯ ಅಪರಾಧದ ಮಾಹಿತಿ ದೊರೆತಾಗ ಎಫ್‌ಐಆರ್ ದಾಖಲಿಸಲೇಬೇಕು. ಇದು ಪ್ರತಿ ಪೊಲೀಸ್ ಅಧಿಕಾರಿಗಳಿಗೂ ಗೊತ್ತಿರಬೇಕಾದ ಮೂಲಭೂತ ವಿಚಾರ. ದೂರು ದಾಖಲಿಸಿಕೊಳ್ಳುವುದನ್ನು ನಿರಾಕರಿಸುವುದು ಅಥವಾ ಸಂತ್ರಸ್ತರು ಠಾಣೆಯಿಂದ ಠಾಣೆಗೆ ಅಲೆಸುವುದು, ಮತ್ತು ಅಂತಹ ಪರಿಸ್ಥಿತಿಯನ್ನು ಸೃಷ್ಟಿಸುವುದು ಅಸೂಕ್ಷ್ಮ ವರ್ತನೆ ಮಾತ್ರವಲ್ಲ, ಗಂಭೀರ ಕರ್ತವ್ಯಲೋಪ ಕೂಡ ಆಗಿದೆ.


ಇಂತಹ ಅಪರಾಧಗಳ ದಾಖಲಿಸುವಲ್ಲಿ ಪೊಲೀಸರ ನಿಷ್ಕ್ರಿಯತೆ, ಉದಾಸೀನತೆ ಹಾಗೂ ಮುಂದೂಡುವ ಪ್ರವೃತ್ತಿಯಿಂದಾಗುವ ಪರಿಣಾಮಗಳು ಗಂಭೀರವಾಗಿರಬಹುದು, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಘಾಸಿ ಉಂಟುಮಾಡಬಹುದು. ಸಮ್ಮತಿಯಿಲ್ಲದೆ ಬಹಿರಂಗಪಡಿಸಲಾದ ಖಾಸಗಿ ಕ್ಷಣಗಳ ಒಂದು ಛಾಯಾಚಿತ್ರ ಅಥವಾ ವಿಡಿಯೊ ವ್ಯಕ್ತಿಯ ಗೌರವ, ವೃತ್ತಿ ಹಾಗೂ ಸಂಬಂಧಗಳನ್ನು ಹಾಳುಮಾಡಬಲ್ಲದು.


ಸಂತ್ರಸ್ತರು ಅವಮಾನ, ಮಾನಸಿಕ ಒತ್ತಡ, ಸೈಬರ್ ಸ್ಟಾಕಿಂಗ್ ಮತ್ತು ಬ್ಲಾಕ್‌ಮೇಲ್‌ ಗೆ ಒಳಗಾಗುವ ಸಾಧ್ಯತೆಯೂ ಇದೆ. ಡೀಪ್‌ ಫೇಕ್ ಹಾಗೂ ಡಿಜಿಟಲ್ ತಂತ್ರಜ್ಞಾನದಿಂದ ಮಾರ್ಪಡಿಸಲಾದ ವಿಷಯಗಳು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಬಹುದು; ಘಟಿಸದ ದೃಶ್ಯಗಳನ್ನು ದುರುದ್ದೇಶದಿಂದ ಸೃಷ್ಟಿಸುವ ಘಟನೆಗಳಲ್ಲಿ ಸಂತ್ರಸ್ತರು ಬಲಿಪಶುಗಳಾಗಬಹುದು. ಸಾಮಾಜಿಕ ಜಾಲತಾಣಗಳ ಕಾಲಘಟ್ಟದಲ್ಲಿ ಒಂದು ಪೋಸ್ಟ್ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರನ್ನು ತಲಪಬಲ್ಲದು. ಅದರಿಂದ ಉಂಟಾಗುವ ಹಾನಿಯನ್ನು ಸರಿಪಡಿಸುವುದು ಅಸಾಧ್ಯ.


ಆದ್ದರಿಂದ, ದೂರು ಸ್ವೀಕರಿಸಿದ ಕ್ಷಣದಿಂದಲೇ ಪೊಲೀಸರು ಸಂಬಂಧಿಸಿದ ವೇದಿಕೆ(ಫೇಸ್‌ಬುಕ್, ಇನ್ಸ್ಟಗ್ರಾಮ್‌ ಇತ್ಯಾದಿ)ಗಳನ್ನು ಸಂಪರ್ಕಿಸಿ, ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವಂತೆ ಸೂಚಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಆಗಬಹುದಾದ ಪ್ರತಿ ನಿಮಿಷದ ವಿಳಂಬ ಹಾನಿಕಾರಕ ವಿಷಯವು ಜನರನ್ನು ವ್ಯಾಪಕವಾಗಿ ತಲುಪುವಂತಾಗುತ್ತದೆ. ಪ್ರಮುಖ ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಸಂಸ್ಥೆಗಳೊಂದಿಗೆ ದಿನದ ಎಲ್ಲ ಸಮಯದಲ್ಲೂ ಸಮನ್ವಯ ಹೊಂದುವುದಕ್ಕಾಗಿ ವಿಶೇಷ ಸಂಪರ್ಕಾಧಿಕಾರಿಗಳನ್ನು ರಾಜ್ಯಗಳಲ್ಲಿ ನೇಮಿಸುವುದು ಅಗತ್ಯ. ಡಿಜಿಟಲ್ ಕಾಲಘಟ್ಟದಲ್ಲಿ ವ್ಯಕ್ತಿಯ ಖಾಸಗಿತನ ಮತ್ತು ಘನತೆಯನ್ನು ರಕ್ಷಿಸಲು ಪೊಲೀಸರ ಕಾನೂನು ಕ್ರಮ ಮಾತ್ರವಲ್ಲ, ತಂತ್ರಜ್ಞಾನ ಸಂಸ್ಥೆಗಳ ಸಮಾನ ವೇಗದ ಸಹಕಾರವೂ ಅಗತ್ಯವಾಗಿದೆ.


ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅನ್ವಯ, ಬಳಕೆದಾರರು ಪ್ರಕಟಿಸುವ ವಿಷಯಗಳಿಗೆ ಸಂಬಂಧಿಸಿದ ನೇರ ಹೊಣೆಗಾರಿಕೆಯಿಂದ ಡಿಜಿಟಲ್ ವೇದಿಕೆಗಳಿಗೆ ದೊರೆಯುವ 'ಸೇಫ್ ಹಾರ್ಬರ್' ರಕ್ಷಣೆಯು ಸಮಸ್ಯೆ ಸಂಕೀರ್ಣಗೊಳ್ಳಲು ಕಾರಣವಾಗಿದೆ. ಮೂರನೇ ವ್ಯಕ್ತಿಗಳು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ವಿಷಯಕ್ಕೆ ಸಂಬಂಧಿಸಿದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ವೇದಿಕೆಗಳು, ಅದೇ ಅಪಾಯಕಾರಿ ವಿಷಯಗಳಿಂದ ಲಾಭ ಮಾಡಿಕೊಳ್ಳುತ್ತವೆ. ವೇದಿಕೆಗಳಿಂದ ಕಾನೂನುಬಾಹಿರ ವಿಷಯಗಳನ್ನು ತೆಗೆದುಹಾಕುವಂತೆ ಸಂತ್ರಸ್ತರು ಮನವಿ ಮಾಡಿಕೊಂಡ ಸಂದರ್ಭಗಳಲ್ಲಿ, ಸ್ವಯಂಚಾಲಿತ ಉತ್ತರಗಳು ಎದುರಾಗುತ್ತವೆ ಹಾಗೂ ಮನವಿಗೆ ಸಂಬಂಧಿಸಿದ ಪ್ರತಿಕ್ರಿಯೆ ವಿಳಂಬದಿಂದ ಕೂಡಿರುತ್ತದೆ. ಇಂಥ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವುದು ಕಾನೂನು ಕ್ರಮದ ಮೊದಲ ಹೆಜ್ಜೆಯಾಗಿರುತ್ತದೆ.


ಯಾರದ್ದೋ ವೈಯಕ್ತಿಕ ಬದುಕನ್ನು ಇಂಟರ್ನೆಟ್ ಜಗತ್ತಿನಲ್ಲಿ ಹರಾಜಿಗಿಟ್ಟು ಮಜಾ ನೋಡುವ ವಿಕೃತಿಗಳಿಗೆ ಈ ಮೂಲಕ ಕಾನೂನಿನ ಬಿಸಿ ಮುಟ್ಟಿಸಬೇಕಾಗಿದೆ. ಪೊಲೀಸರು ಪರಿಸ್ಥಿತಿಯ ಗಂಭೀರತೆ ಅರಿತರೆ ತಪ್ಪು ಮಾಡುವವರ ಬೆನ್ನೆಲುಬು ಮುರಿದು ಇಂತಹ ಪ್ರವೃತ್ತಿಗೆ ಕೊನೆ ಹಾಡಬೇಕು. ಈ ಮೂಲಕ ವ್ಯಕ್ತಿ ಘನತೆ ಮತ್ತು ಖಾಸಗಿತನದ ವಿಷಯದಲ್ಲಿ ಚೆಲ್ಲಾಟವಾಡುವವರ ವಿರುದ್ಧ ಕಠಿಣ ಸಂದೇಶ ರವಾನಿಸಬೇಕಾಗಿದೆ.


ಲೇಖನ: ಶ್ರೀ ಸುಕೇಶ್ ಕುಮಾರ್ ಶೆಟ್ಟಿ, ವಕೀಲರು, ಮಂಗಳೂರು (Mob: 9483804040)


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu