Domestic Voilence Act: ಪ್ರಾಪ್ತ ವಯಸ್ಕ ಮಗಳ ಶಿಕ್ಷಣದ ವೆಚ್ಚಕ್ಕೂ ಪರಿಹಾರ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
Domestic Voilence Act: ಪ್ರಾಪ್ತ ವಯಸ್ಕ ಮಗಳ ಶಿಕ್ಷಣದ ವೆಚ್ಚಕ್ಕೂ ಪರಿಹಾರ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಪುತ್ರಿಯ ಶಿಕ್ಷಣ ವೆಚ್ಚಕ್ಕೂ ಹಣಕಾಸಿನ ಪರಿಹಾರ ದೊರೆಯುತ್ತದೆ; ಪುತ್ರಿ ಪ್ರಾಪ್ತವಯಸ್ಕಳಾದಳು ಎಂಬ ಕಾರಣಕ್ಕೆ ತಂದೆ ಶಿಕ್ಷಣ ವೆಚ್ಚ ನೀಡುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.
ಗೃಹ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, (Domestic Voilence Act) 2005ರ ಸೆಕ್ಷನ್ 20ರಡಿ ನೀಡಬಹುದಾದ ಹಣಕಾಸಿನ ಪರಿಹಾರ (Monetary Relief)ವು ಪುತ್ರಿಯ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣದ ವೆಚ್ಚವನ್ನೂ ಒಳಗೊಂಡಿರುತ್ತದೆ. ಪುತ್ರಿ ಪ್ರಾಪ್ತವಯಸ್ಕಳಾಗಿದ್ದಾಳೆ ಎಂಬ ಕಾರಣಕ್ಕೆ ತಂದೆಯು ಆಕೆಯ ಶಿಕ್ಷಣ ವೆಚ್ಚವನ್ನು ಭರಿಸಲು ನಿರಾಕರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ತಂದೆಯು ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು (Criminal Revision Petition) ವಜಾಗೊಳಿಸಿದ ಹೈಕೋರ್ಟ್, ತನ್ನ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷದ ಶುಲ್ಕ ಹಾಗೂ ಸಂಬಂಧಿತ ಶಿಕ್ಷಣ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ವಿಚಾರಣಾ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯದ ಆದೇಶಗಳನ್ನು ಎತ್ತಿಹಿಡಿದಿದೆ.
"ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ನೀಡುವ ಹಣಕಾಸಿನ ಪರಿಹಾರವು ನಿರ್ವಹಣಾ ಭತ್ಯೆಗೆ (Maintenance) ಹೆಚ್ಚುವರಿಯಾಗಿದೆ. ಪುತ್ರಿಯು ಪದವಿ ಶಿಕ್ಷಣ ಪಡೆಯುತ್ತಿರಲಿ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿರಲಿ, ಆಕೆಯ ಶಿಕ್ಷಣ ವೆಚ್ಚವನ್ನು ಭರಿಸುವುದು ತಂದೆಯ ಕಾನೂನುಬದ್ಧ ಕರ್ತವ್ಯವಾಗಿದೆ." ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ
ಪುತ್ರಿಯು ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20(d) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತನ್ನ ಎಂ.ಡಿ. (ಡರ್ಮಟಾಲಜಿ) ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷದ ಶುಲ್ಕ ಮತ್ತು ಇತರ ಶಿಕ್ಷಣ ವೆಚ್ಚಗಳಿಗಾಗಿ ₹16 ಲಕ್ಷ ನೀಡುವಂತೆ ಕೋರಿಕೆ ಸಲ್ಲಿಸಿದ್ದರು.
ಆಕೆ NEET ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಮೂಲಕ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದರು.
ತಂದೆಯ ವಾದ:
ಪುತ್ರಿಯ MBBS ಶಿಕ್ಷಣವನ್ನು ಈಗಾಗಲೇ ತಾನೇ ಪೂರ್ಣಗೊಳಿಸಿದ್ದೇನೆ. ಆಕೆ ಈಗ ಪ್ರಾಪ್ತವಯಸ್ಕಳಾಗಿದ್ದಾಳೆ, ಸ್ನಾತಕೋತ್ತರ ಶಿಕ್ಷಣದ ವೇಳೆ ಸ್ಟೈಪೆಂಡ್ ಪಡೆಯುತ್ತಿದ್ದಾಳೆ, ಆದ್ದರಿಂದ ಗೃಹ ಹಿಂಸಾಚಾರ ಕಾಯ್ದೆಯಡಿ ಇಂತಹ ಪರಿಹಾರವನ್ನು ಕೇಳಲು ಸಾಧ್ಯವಿಲ್ಲ, ಅಗತ್ಯವಿದ್ದರೆ ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು ಎಂದು ಅರ್ಜಿದಾರರ ತಂದೆ ವಾದ ಮಂಡಿಸಿದ್ದರು.
*ನ್ಯಾಯಾಲಯದ ಅಭಿಪ್ರಾಯ*
"ಅವಿವಾಹಿತ ಪ್ರಾಪ್ತವಯಸ್ಕ ಪುತ್ರಿಯು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20ರಡಿ ಹಣಕಾಸಿನ ಪರಿಹಾರವನ್ನು ಕೇಳಬಹುದೇ?" ಎಂಬ ಪ್ರಶ್ನೆಯನ್ನು ವಿವಾದಾಂಶವನ್ನಾಗಿ ನ್ಯಾಯಪೀಠ ಪರಿಗಣಿಸಿತು.
ನ್ಯಾಯಾಲಯವು, ಈ ಪ್ರಕರಣವು CrPC ಸೆಕ್ಷನ್ 125 ಅಡಿಯ ನಿರ್ವಹಣಾ ಭತ್ಯೆಗೆ ಸಂಬಂಧಿಸಿದದ್ದಲ್ಲ; ಬದಲಾಗಿ ಗೃಹ ಹಿಂಸಾಚಾರ ಕಾಯ್ದೆ ಎಂಬ ವಿಶೇಷ ಕಾನೂನಿನಡಿ ಉದ್ಭವಿಸಿರುವುದರಿಂದ, ಅದರ ಉದ್ದೇಶ ಮತ್ತು ವ್ಯಾಪ್ತಿ ಹೆಚ್ಚು ವಿಶಾಲವಾಗಿದೆ ಎಂದು ತಿಳಿಸಿತು.
ಪುತ್ರಿಯು MBBS ಪೂರ್ಣಗೊಳಿಸಿ, ಅಖಿಲ ಭಾರತ ಶ್ರೇಯಾಂಕ ಪಡೆದು, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ಹಾಗೂ ಗಣನೀಯ ಶುಲ್ಕವನ್ನು ಪಾವತಿಸಿರುವ ದಾಖಲೆಗಳನ್ನು ನ್ಯಾಯಾಲಯ ಗಮನಿಸಿತು.
"ಪುತ್ರಿಯು ಸ್ವಂತ ಆದಾಯ ಹೊಂದಿಲ್ಲ. ಆಕೆ ನಿರಂತರವಾಗಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರಿಸುತ್ತಿದ್ದಾಳೆ. ಈ ಸಂಗತಿಯನ್ನು ನ್ಯಾಯಾಲಯ ಪರಿಗಣಿಸಲೇಬೇಕು." ಎಂದು ಹೇಳಿತು.
ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖ
Neelima Choure v. Vijay Choure (2025) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್, ಪೋಷಕರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಪುತ್ರಿಯ ಶಿಕ್ಷಣ ವೆಚ್ಚವನ್ನು ಪಡೆಯುವುದು ಆಕೆಯ ಕಾನೂನುಬದ್ಧ ಹಕ್ಕು ಎಂದು ಪುನರುಚ್ಚರಿಸಿತು.
ಸೆಕ್ಷನ್ 20ರ ವ್ಯಾಪ್ತಿ
ಗೃಹ ಹಿಂಸಾಚಾರ ಕಾಯ್ದೆಯ ಸೆಕ್ಷನ್ 20 ಕೇವಲ ನಿರ್ವಹಣಾ ಭತ್ಯೆಗೆ ಸೀಮಿತವಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಈ ಸೆಕ್ಷನ್‌ನಲ್ಲಿ ಬಳಸಿರುವ "but is not limited to" (ಇದಕ್ಕಷ್ಟೇ ಸೀಮಿತವಲ್ಲ) ಹಾಗೂ "in addition to maintenance" (ನಿರ್ವಹಣಾ ಭತ್ಯೆಗೆ ಹೆಚ್ಚುವರಿಯಾಗಿ) ಎಂಬ ಪದಗಳು ಮ್ಯಾಜಿಸ್ಟ್ರೇಟ್‌ಗೆ ವಿಶಾಲ ಅಧಿಕಾರವನ್ನು ನೀಡುತ್ತವೆ. ಆದ್ದರಿಂದ, ಪ್ರಕರಣದ ವಾಸ್ತವಾಂಶಗಳನ್ನು ಅವಲಂಬಿಸಿ ಶಿಕ್ಷಣ ವೆಚ್ಚವನ್ನೂ ಹಣಕಾಸಿನ ಪರಿಹಾರದ ಭಾಗವಾಗಿ ನೀಡಬಹುದು ಎಂದು ನ್ಯಾಯಾಲಯ ತಿಳಿಸಿತು.
ತಂದೆಯ ಜವಾಬ್ದಾರಿ ಪ್ರಾಪ್ತವಯಸ್ಸಿನ ನಂತರವೂ ಮುಂದುವರಿಯುತ್ತದೆ. ಪುತ್ರಿ ಪ್ರಾಪ್ತವಯಸ್ಕಳಾದ ತಕ್ಷಣ ತಂದೆಯ ಶಿಕ್ಷಣ ವೆಚ್ಚ ಭರಿಸುವ ಕರ್ತವ್ಯ ಕೊನೆಗೊಳ್ಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
Jagadesan v. State of Tamil Nadu (2015) ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯ ಹೀಗೆ ಹೇಳಿತು:
"ತಂದೆಯ ಕರ್ತವ್ಯವು ಕೇವಲ ಪ್ರೀತಿ ಮತ್ತು ವಾತ್ಸಲ್ಯ ತೋರಿಸುವುದಕ್ಕೆ ಸೀಮಿತವಲ್ಲ. ಮಕ್ಕಳಿಗೆ ಆರೋಗ್ಯ, ಶಿಕ್ಷಣ, ಜೀವನದ ಮೂಲಭೂತ ಅಗತ್ಯಗಳು ಹಾಗೂ ಜೀವನೋಪಾಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವುದು ಅವನ ಕಾನೂನುಬದ್ಧ ಹಾಗೂ ನೈತಿಕ ಜವಾಬ್ದಾರಿಯಾಗಿದೆ. ಮಗು ಪ್ರಾಪ್ತವಯಸ್ಕನಾದ ಅಥವಾ ಪ್ರಾಪ್ತವಯಸ್ಕಳಾದ ನಂತರವೂ ಈ ಜವಾಬ್ದಾರಿ ಅಂತ್ಯಗೊಳ್ಳುವುದಿಲ್ಲ."
ಬ್ಯಾಂಕ್ ಸಾಲ ಪಡೆಯಬಹುದು ಎಂಬ ವಾದ ತಿರಸ್ಕಾರ
"ಪುತ್ರಿಯು ಬ್ಯಾಂಕ್ ಸಾಲ ಪಡೆದು ಶಿಕ್ಷಣ ಮುಂದುವರಿಸಬಹುದು" ಎಂಬ ತಂದೆಯ ವಾದವನ್ನು ಹೈಕೋರ್ಟ್ ತಿರಸ್ಕರಿಸಿತು.
ತಂದೆಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅವರು ವ್ಯವಹಾರ ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಸುವ ಸಾಮರ್ಥ್ಯ ಹೊಂದಿದ್ದು, ಸಾಲ ಪಡೆಯುವ ಮತ್ತು ಮರುಪಾವತಿಸುವ ಆರ್ಥಿಕ ಶಕ್ತಿ ಹೊಂದಿದ್ದಾರೆ ಎಂದು ದಾಖಲಿಸಿತು.
ಆದ್ದರಿಂದ, "ಪುತ್ರಿಯು ಪ್ರಾಪ್ತವಯಸ್ಕಳಾದ ನಂತರ ತಂದೆಗೆ ಶಿಕ್ಷಣ ವೆಚ್ಚ ಭರಿಸುವ ಜವಾಬ್ದಾರಿ ಇಲ್ಲ ಎಂಬ ವಾದದಲ್ಲಿ ಯಾವುದೇ ಬಲವಿಲ್ಲ." ಎಂದು ನ್ಯಾಯಾಲಯ ತೀರ್ಮಾನಿಸಿತು.
ಕರ್ನಾಟಕ ಹೈಕೋರ್ಟ್ ತಂದೆಯ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, ತಮ್ಮ ಪುತ್ರಿಯ ಎಂ.ಡಿ. ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣದ ವೆಚ್ಚಕ್ಕಾಗಿ ₹16 ಲಕ್ಷ ಪಾವತಿಸಬೇಕು ಎಂಬ ಕೆಳಹಂತದ ನ್ಯಾಯಾಲಯಗಳ ಆದೇಶವನ್ನು ಎತ್ತಿಹಿಡಿದಿದೆ.