ತುರ್ತು ಚಿಕಿತ್ಸೆಗೆ ವೈದ್ಯರ ನಿರಾಕರಣೆ: ಖಾಸಗಿ ಆಸ್ಪತ್ರೆ, ವೈದ್ಯರಿಗೆ ಸುಪ್ರೀಂ ಕೋರ್ಟ್ ಛೀಮಾರಿ
ತುರ್ತು ಚಿಕಿತ್ಸೆಗೆ ವೈದ್ಯರ ನಿರಾಕರಣೆ: ಖಾಸಗಿ ಆಸ್ಪತ್ರೆ, ವೈದ್ಯರಿಗೆ ಸುಪ್ರೀಂ ಕೋರ್ಟ್ ಛೀಮಾರಿ
ತುರ್ತು ಚಿಕಿತ್ಸೆಗೆ ವೈದ್ಯರ ನಿರಾಕರಣೆಗೆ ಸಂಬಂಧಿಸಿದಂತೆ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳ ವರ್ತನೆಗೆ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್, ಸರಿಯಾದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಆಗದಿದ್ದರೆ ನಿಮ್ಮ ಹೆಸರಿನ ಜೊತೆಗಿರುವ ವೈದ್ಯ ಪದವನ್ನು ಕಿತ್ತು ಬಿಸಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರಪ್ರದೇಶದ ಗಾಜಿಯಾ ಬಾದ್‌ನಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣದಲ್ಲಿ ಗಾಯಗೊಂಡು ಮೃತಪಟ್ಟ ನಾಲ್ಕು ವರ್ಷದ ಬಾಲಕಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದ ಆರೋಪ ಎದುರಿಸುತ್ತಿರುವ ಎರಡು ಖಾಸಗಿ ಆಸ್ಪತ್ರೆಗಳು ಹಾಗೂ ಅಲ್ಲಿನ ವೈದ್ಯರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಛೀಮಾರಿ ಹಾಕಿದೆ.
"ನಿಮ್ಮ ಕರ್ತವ್ಯವನ್ನು ನೀವು ನಿರ್ವಹಿಸದಿದ್ದರೆ ನಿಮ್ಮ ಹೆಸರಿನೊಂದಿಗೆ 'ವೈದ್ಯ' ಎಂದು ಬರೆದು ಕೊಳ್ಳುವ ಯಾವುದೇ ಹಕ್ಕು ನಿಮಗಿಲ್ಲ. ನಿಮ್ಮಲ್ಲಿ ಸಂವೇದನಾಶೀಲತೆ ಇದ್ದಿದ್ದರೆ, ನಿಮ್ಮಲ್ಲಿ ಸೌಲಭ್ಯವಿಲ್ಲದಿರುವಾಗಲೂ ನೀವೇ ಮಗುವಿನೊಂದಿಗೆ ಮತ್ತೊಂದು ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿದ್ದಿರಿ. ಸಂತ್ರಸ್ತ ಬಾಲಕಿ ಕುಟುಂಬ ದವರು ಬಡವರೆಂಬ ಕಾರಣಕ್ಕೆ ನೀವು ಅಲಕ್ಷ್ಯ ಮಾಡಿದ್ದೀರಿ' ಎಂದು ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠ ಖಾರವಾಗಿ ವೈದ್ಯರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
''ಇಂತಹ ಘೋರ ಅಪರಾಧಕ್ಕೆ ಬಲಿಯಾದ ಮಗುವನ್ನು ನಿಮ್ಮ ಮುಂದೆ ತರಲಾಗಿದೆ. ಆದರೆ ಕರುಣೆಯಿಲ್ಲದ ನೀವು ವೈದ್ಯಕೀಯ ಚಿಕಿತ್ಸೆ ನೀಡಲು ನಿರಾಕರಿಸಿದ್ದೀರಿ. ನಿಮಗೆ ಸಹಾನುಭೂತಿ ಇದ್ದಿದ್ದರೆ ನೀವೇ ಅವಳನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಿರಿ'' ಎಂದ ಕೋರ್ಟ್, 'ನಾವು ದಂಡ ವಿಧಿಸಿದರೆ ಅದು ಭಯಾನಕ ಪರಿಣಾಮವನ್ನು ಬೀರುತ್ತದೆ. ನೀವು ಅತ್ಯಂತ ನಿರ್ದಯವಾಗಿ ವರ್ತಿಸಿದ್ದೀರಿ'' ಎಂದು ಕಿಡಿಕಾರಿತು.
ಕಳೆದ ಮಾರ್ಚ್ 16ರಂದು ನೆರೆಹೊರೆ ಯವನೊಬ್ಬ ಚಾಕೊಲೇಟ್ ಕೊಡಿಸುವ ನೆಪದಲ್ಲಿ ಸಂತ್ರಸ್ತ ಮಗುವನ್ನು ಪುಸಲಾಯಿಸಿ ಕರೆದೊಯ್ದಿದ್ದ. ಮಗು ಹಿಂತಿರುಗದಿದ್ದಾಗ ಆಕೆಯ ತಂದೆ ಹುಡುಕಾಟ ನಡೆಸಿದ ವೇಳೆ ಮಗು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಕುಟುಂಬಸ್ಥರು ಮಗುವನ್ನು ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದರು.
ಆದರೆ, ಆ ಆಸ್ಪತ್ರೆಗಳು ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದವು ಎಂದು ಆರೋಪಿಸಲಾಗಿತ್ತು. ನಂತರ ಮಗುವನ್ನು ಗಾಜಿಯಾಬಾದ್‌ನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರೊಳಗೆ ಮಗು ಮೃತಪಟ್ಟಿತ್ತು.