"ಥಳಿಸಿ ಬೋಧಿಸುವ ಅಗತ್ಯವಿಲ್ಲ" : ಮಗುವಿಗೆ ಹೊಡೆದ ಶಿಕ್ಷಕಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಕಾರ
"ಥಳಿಸಿ ಬೋಧಿಸುವ ಅಗತ್ಯವಿಲ್ಲ" : ಮಗುವಿಗೆ ಹೊಡೆದ ಶಿಕ್ಷಕಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಕಾರ
ಯುಕೆಜಿ ವಿದ್ಯಾರ್ಥಿನಿಗೆ ಹೊಡೆದಿದ್ದ ಶಿಕ್ಷಕಿ ವಿರುದ್ದ ಮಂಗಳೂರಿನ ಜೆ.ಎಂ.ಎಫ್.ಸಿ. 2ನೇ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ*
ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ಸಹಿಸುವುದಿಲ್ಲ' ಎಂದು ಕಟುವಾಗಿ ನುಡಿದಿರುವ ಕರ್ನಾಟಕ ಹೈಕೋರ್ಟ್, ಯುಕೆಜಿ ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದ ಪ್ರಕರಣವೊಂದರಲ್ಲಿ ಶಿಕ್ಷಕಿ ವಿರುದ್ಧದ ಮಂಗಳೂರಿನ ಜೆಎಂಎಫ್‌ಸಿ 2ನೇ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ನಿರಾಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಜೆಎಂಎಫ್‌ಸಿ ಕೋರ್ಟ್‌ನ ಸಿ.ಸಿ. 580/2026 ಈ ಮೊಕದ್ದೊಮ್ಮೆಯ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸುರತ್ಕಲ್‌ನ ಹೋಲಿ ಫ್ಯಾಮಿಲಿ ಶಾಲೆಯ ಶಿಕ್ಷಕಿ ಆಶಾ ಕ್ರಾಸ್ತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ (7.6.2026)ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಮೂರ್ತಿಗಳು, ಶಿಕ್ಷಕಿ ಯಾಕೆ ಮಗುವಿಗೆ ಹೊಡೆದರು ಎಂದು ಪ್ರಶ್ನಿಸಿದರು. ಇದಕ್ಕೆ ವಕೀಲರು, 'ನಾವಲ್ಲ' ಎಂದು ಹೇಳುತ್ತಿದ್ದಂತೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು 'ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ. ಇಂತಹ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ' ಎಂದು ಕಟುವಾಗಿ ನುಡಿದರು.
ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಯವರು, ಅರ್ಜಿಗೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಮತ್ತು ದೂರುದಾರೆಯಾದ ಮಗುವಿನ ತಾಯಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದರು.
2026ರ ಜನವರಿ ಅಂತ್ಯದಲ್ಲಿ ಸುರತ್ಕಲ್ ಠಾಣೆಗೆ 'ಶಿಕ್ಷಕಿ ಆಶಾ ಕ್ರಾಸ್ತಾ ಎಂಬವರ ವಿರುದ್ಧ ಮಗುವಿನ ತಾಯಿ ನನ್ನ 6 ವರ್ಷದ ಮಗಳಿಗೆ ತರಗತಿ ನಡೆಯುತ್ತಿದ್ದ ವೇಳೆಯಲ್ಲಿ ಹೊಡೆದಿದ್ದಾರೆ' ಎಂದು ಆರೋಪಿಸಿದ್ದರು. ಈ ಸಂಬಂಧ ಶಾಲೆಯ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಸಂಬಂಧಿಸಿದವರ ಜೊತೆ ಮಾತುಕತೆ ನಡೆಸಿ ಪ್ರಕರಣ ಮುಕ್ತಾಯಗೊಳಿಸಿದ್ದರು.
ಮಗುವಿನ ತಾಯಿ, ನಂತರ ಮತ್ತೊಮ್ಮೆ ದೂರು ನೀಡಿ, 'ನನ್ನ ಮಗಳಿಗೆ ಶಿಕ್ಷಕಿ ಪುನಃ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಹಾಗಾಗಿ, ಆಶಾ ಕ್ರಾಸ್ತಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕೋರಿದ್ದರು.
ಸದರಿ ದೂರಿನ ಮೇರೆಗೆ ಸುರತ್ಕಲ್ ಪೊಲೀಸ್ ಠಾಣಾಧಿಕಾರಿಯವರು ಅಪರಾಧ ಕ್ರಮಾಂಕ 7/2026 ರಡಿ ಆರೋಪಿ ಶಿಕ್ಷಕಿ ಆಶಾ ಕ್ರಾಸ್ತಾ ವಿರುದ್ದ ಎಫ್ಐಆರ್ ದಾಖಲಿಸಿದರು. ತನಿಖೆ ಕೈಗೊಂಡ ಬಳಿಕ ತನಿಖಾಧಿಕಾರಿಯವರು ಆರೋಪಿ ಶಿಕ್ಷಕಿ ವಿರುದ್ಧ ಮಂಗಳೂರಿನ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಆರೋಪಗಳನ್ನು ಅವಗಾಹನಿಸಿದ ನ್ಯಾಯಾಲಯವು ಸಿ.ಸಿ.580/2026 ಕ್ರಮಾಂಕದಡಿ ಕ್ರಿಮಿನಲ್ ಪ್ರಕರಣವನ್ನು ನೋಂದಾಯಿಸಿತು. ಸದರಿ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೆಟ್ಟಲೇರಿದ್ದರು.