-->
ವೇಶ್ಯಾವಾಟಿಕೆ Vs ಮಾನವ ಕಳ್ಳಸಾಗಣೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಅವಲೋಕನ

ವೇಶ್ಯಾವಾಟಿಕೆ Vs ಮಾನವ ಕಳ್ಳಸಾಗಣೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಅವಲೋಕನ

ವೇಶ್ಯಾವಾಟಿಕೆ Vs ಮಾನವ ಕಳ್ಳಸಾಗಣೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪಿನ ಅವಲೋಕನ





ಅಕ್ರಮ ಮಾನವ ಸಾಗಣೆ ತಡೆಯಲು ಮತ್ತು ಮಾನವ ಕಳ್ಳಸಾಗಣೆಯಿಂದ ಬದುಕುಳಿದವರನ್ನು ರಕ್ಷಿಸಲು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪೊಂದನ್ನು ನೀಡಿದೆ.

ಮೇ 29, 2026 ರಂದು ‘ಪ್ರಜ್ವಲ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ನೀಡಿದ ಈ ತೀರ್ಪು ಒಂದು ಮಹತ್ವದ ತೀರ್ಪು. 2004ರಂದು ದೇಶದ ಸರ್ಕಾರೇತರ ಸಂಸ್ಥೆಯೊಂದು ದಾಖಲಿಸಿದ್ದ ರಿಟ್ ಅರ್ಜಿಯನ್ನು 22 ವರ್ಷಗಳ ಸುದೀರ್ಘ ಅವಧಿಯ ವರೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಅಕ್ರಮ ಮಾನವ ಸಾಗಣೆ ತಡೆಯಲು ಮತ್ತು ಸಂತ್ರಸ್ತರ ಪುನರ್ವಸತಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಆರ್. ಮಹದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠ ನೀಡಿರುವ ತೀರ್ಪು, ಸ್ವಯಂಪ್ರೇರಿತವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ವಯಸ್ಕ ಕಾರ್ಯಕರ್ತೆಯರ ಹಕ್ಕುಗಳನ್ನು ಗುರ್ತಿಸಲು ಹಾಗೂ ಅವರಿಗೆ ರಕ್ಷಣೆಯನ್ನು ಖಾತರಿಪಡಿಸಲು 'ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆ' (ಐಟಿಪಿಎ) ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಮಾನವ ಕಳ್ಳಸಾಗಣೆಯನ್ನು "ಸಾಂವಿಧಾನಿಕ ಘನತೆಯ ಮೇಲಿನ ನೇರ ಆಕ್ರಮಣ" ಎಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಸಂವಿಧಾನದ 21ನೇ ವಿಧಿಯಾದ ಜೀವಿಸುವ ಹಕ್ಕು ಮತ್ತು 23ನೇ ವಿಧಿಯಾದ ಶೋಷಣೆಯ ವಿರುದ್ಧದ ಹಕ್ಕು ಅಡಿಯಲ್ಲಿ ಸಂತ್ರಸ್ತರ ಪುನರ್ವಸತಿಯನ್ನು ಖಾತರಿಪಡಿಸಿದೆ.


ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ಮಾರ್ಗಸೂಚಿಗಳು ಮತ್ತು ಪ್ರಮುಖ ಅಂಶಗಳು ಕೆಳಗಿನಂತಿವೆ:


1. ಸಂತ್ರಸ್ತರ ರಕ್ಷಣಾ ಯೋಜನೆ ಜಾರಿ: ಮಾನವ ಕಳ್ಳಸಾಗಣೆಯಿಂದ ಬದುಕುಳಿದವರನ್ನು ರಕ್ಷಿಸಲು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸಲು ಸಮಗ್ರ 'ಸಂತ್ರಸ್ತರ ರಕ್ಷಣಾ ಯೋಜನೆ'ಯನ್ನು ಕಡ್ಡಾಯವಾಗಿ ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಇದೇ ವೇಳೆ, ಕಳ್ಳಸಾಗಣೆಗೆ ಒಳಗಾದವರನ್ನು ಅಪರಾಧಿಗಳಂತೆ ನೋಡದೆ, ಅವರನ್ನು ಮಾನವೀಯ ಸ್ಪರ್ಶದಿಂದ ನೋಡಿ ಅವರನ್ನು 'ಸಂತ್ರಸ್ತರು' ಎಂದು ಪರಿಗಣಿಸಿ ಅವರಿಗೆ ಮಾನಸಿಕ ಹಾಗೂ ಸಾಮಾಜಿಕ ಬೆಂಬಲ ನೀಡುವಂತೆ ಅಧಿಕಾರಿ ವರ್ಗಕ್ಕೆ ತಾಕೀತು ಮಾಡಿದೆ.


2. ಲೈಂಗಿಕ ವೃತ್ತಿ ಮತ್ತು ಕಳ್ಳಸಾಗಣೆ ನಡುವಿನ ವ್ಯತ್ಯಾಸ: ಸ್ವಯಂಪ್ರೇರಿತ ವೇಶ್ಯಾವಾಟಿಕಾ ವೃತ್ತಿ ಮತ್ತು ಮಾನವ ಕಳ್ಳಸಾಗಣೆಯ ಶೋಷಣೆ ನಡುವಿನ ಸೂಕ್ಷ್ಮತೆಯನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ. ವಯಸ್ಕರು ಸ್ವಯಂಪ್ರೇರಿತವಾಗಿ ಮಾಡುವ ಲೈಂಗಿಕ ವೃತ್ತಿ ಹಾಗೂ ಬಲವಂತದ ವಾಣಿಜ್ಯ ಲೈಂಗಿಕ ಶೋಷಣೆ (ಕಳ್ಳಸಾಗಣೆ) ಎರಡನ್ನೂ ವಿಭಿನ್ನವಾಗಿ ನೋಡಬೇಕು, ಎರಡರ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ ಎಂದು ತೀರ್ಪು ಸ್ಪಷ್ಟಪಡಿಸಿದೆ.


ಸ್ವಯಂಪ್ರೇರಿತ ಲೈಂಗಿಕ ಕಾರ್ಯಕರ್ತರನ್ನು ಅನಗತ್ಯವಾಗಿ ಪೀಡಿಸಬಾರದು ಮತ್ತು ಅವರ ಘನತೆಯನ್ನು ರಕ್ಷಿಸಬೇಕು ಎಂದು ಕೂಡ ತೀರ್ಪಿನಲ್ಲಿ ನಿರ್ದೇಶಿಸಲಾಗಿದೆ. ಇದೇ ವೇಳೆ, ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳು ಅಸ್ತಿತ್ವದಲ್ಲಿ ಇದೆ ಎಂದ ಮಾತ್ರಕ್ಕೆ, ಲೈಂಗಿಕ ವೃತ್ತಿಯನ್ನು ಹಕ್ಕಿನ ರೂಪದಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂಬ ಮಹತ್ವದ ಅಭಿಪ್ರಾಯವನ್ನೂ ಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲಿಸಿದೆ.


3. ವಲಸೆ ಮತ್ತು ಕಳ್ಳಸಾಗಣೆ ಬಗ್ಗೆ ಮೂಡಿಸುವಿಕೆ: ಬಡತನ ಅಥವಾ ಉದ್ಯೋಗದ ಹುಡುಕಾಟದಲ್ಲಿ ನಡೆಯುವ ವಲಸೆಯು ಮಾನವ ಕಳ್ಳಸಾಗಣೆಗೆ ಪ್ರಮುಖ ಕಾರಣವಾಗಿದೆ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಉದ್ಯೋಗದ ಆಮಿಷ ಮತ್ತು ವೈವಾಹಿಕ ಆಮಿಷವೊಡ್ಡಿ ಮಹಿಳೆಯರು ಮತ್ತು ಮಕ್ಕಳನ್ನು ಸೆಳೆಯುವ ಜಾಲವೇ ಇದೆ. ಅಂತಹ ಜಾಲವನ್ನು ಪತ್ತೆ ಹಚ್ಚಿ ಮಟ್ಟಹಾಕಬೇಕು. ಅಕ್ರಮವಾಗಿ, ಆಮಿಷದಿಂದ, ಬಲ ಪ್ರಯೋಗದಿಂದ ಹೆಣ್ಮಕ್ಕಳನ್ನು, ಯುವತಿಯರನ್ನು ಸಾಗಿಸುವ ಜಾಲಗಳ ವಿರುದ್ಧ ಕಠಿಣ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಒತ್ತಾಸೆ ನೀಡಿದೆ.


4. ಸಾಕ್ಷ್ಯ ಸಂಗ್ರಹಣೆಗೆ ತಂತ್ರಜ್ಞಾನದ ಬಳಕೆ (ವಿಡಿಯೋ ಕಾನ್ಫರೆನ್ಸಿಂಗ್): ಅಪ್ರಾಪ್ತ ಸಂತ್ರಸ್ತರು ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದನ್ನು ಮತ್ತು ಆರೋಪಿಗಳನ್ನು ಎದುರಿಸುವುದನ್ನು ತಪ್ಪಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕವೇ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ದಾಖಲಿಸಲು ಕೋರ್ಟ್ ವಿಶೇಷ ಮಾರ್ಗಸೂಚಿ (SOP) ಈ ತೀರ್ಪಿನ ಮೂಲಕ ನೀಡಿದೆ.


ಮಾನವ ಕಳ್ಳಸಾಗಣೆಗೆ ಗುರಿಯಾದ ಸಂತ್ರಸ್ತರನ್ನು ಗುರುತಿಸುವಲ್ಲಿ ಐಟಿಪಿಎ ಕಾಯ್ದೆ ವಿಫಲವಾಗಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ವಾಸ್ತವವಾಗಿ ಮಹಿಳೆಯರು ಇರುವ ಪರಿಸ್ಥಿತಿಯ ವ್ಯತ್ಯಾಸವನ್ನು ಅವಲೋಕಿಸದೆ, ಅವರ ರಕ್ಷಣೆ ಮತ್ತು ಪುನರ್ವಸತಿ ಪ್ರಕ್ರಿಯೆಯಲ್ಲಿ ಸ್ಟೀರಿಯೋಟೈಪ್ (ಏಕತಾನತೆ) ರೀತಿಯಲ್ಲಿ ವರ್ತಿಸಲಾಗತ್ತಿದೆ. ಲೈಂಗಿಕ ಕಾಯ್ದೆಯ ಅಡಿಯಲ್ಲಿ ಕಳ್ಳಸಾಗಣೆಗೆ ಒಳಗಾದ ಸಂತ್ರಸ್ತರನ್ನು ಹಾಗೂ ಸ್ವಯಂಪ್ರೇರಣೆಯಿಂದ ವೃತ್ತಿಯಲ್ಲಿ ತೊಡಗಿಕೊಂಡವರನ್ನು ಪುನರ್ವಸತಿ ಪ್ರಕ್ರಿಯೆಗೆ ಒಳಪಡಿಸುವ ಮೊದಲು, 'ಸುರಕ್ಷಾ ಬಂಧನ'ದಲ್ಲಿ ಇರಿಸಲಾಗುತ್ತದೆ. ಹೀಗೆ ಬಂಧನದಲ್ಲಿ ಇರಿಸುವ ಮೊದಲು ಪ್ರಾಥಮಿಕ ವಿಚಾರಣೆ ಅಗತ್ಯ ಎಂದು ಕೋರ್ಟ್ ಹೇಳಿದೆ.


ಪುನರ್ವಸತಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಲೈಂಗಿಕ ವೃತ್ತಿಯಲ್ಲಿ ತೊಡಗಿದ ವ್ಯಕ್ತಿಯ ಒಪ್ಪಿಗೆಯನ್ನು ಪರಿಗಣಿಸಬೇಕು. ವೈಯಕ್ತಿಕ ಅಭಿಪ್ರಾಯಗಳನ್ನು ಕಲ್ಯಾಣ ಕಾರ್ಯಕ್ರಮಗಳು ಹತ್ತಿಕ್ಕುವಂತಾಗಬಾರದು ಎಂಬ ಮೂಲತತ್ವವನ್ನು ನ್ಯಾಯಪೀಠ ಪ್ರತಿಪಾದಿಸಿದೆ.


ಲೈಂಗಿಕ ಕಾರ್ಯಕರ್ತೆ ಎಂದು ಸ್ವತಃ ಗುರ್ತಿಸಿಕೊಳ್ಳುವವರಿಗೆ ತಮ್ಮ ವೃತ್ತಿಯನ್ನು ಮುಂದುವರಿಸುವ ಹಕ್ಕಿದೆ ಮತ್ತು ಆ ಹಕ್ಕಿನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎನ್ನುವುದು ನ್ಯಾಯಪೀಠದ ಅಭಿಪ್ರಾಯವಾಗಿದೆ. ಲೈಂಗಿಕ ವೃತ್ತಿನಿರತರನ್ನೂ ಕಳ್ಳಸಾಗಣೆ ವ್ಯಾಪ್ತಿಯಲ್ಲಿ ಐಟಿಪಿಎ ಪರಿಗಣಿಸುವುದರಿಂದ, ಸಂತ್ರಸ್ತರು ರಕ್ಷಣೆಯ ಹೆಸರಿನಲ್ಲಿ ಕಿರುಕುಳಕ್ಕೆ ಒಳಗಾದಂತಾಗುತ್ತದೆ. ಹಾಗಾಗಿ, ಲೈಂಗಿಕ ಕಳ್ಳಸಾಗಣೆ ಮತ್ತು ಲೈಂಗಿಕ ವೃತ್ತಿಯನ್ನು ಏಕರೂಪದಲ್ಲಿ ಪರಿಗಣಿಸುವ ಈಗಿನ ಶಾಸನಾತ್ಮಕ ಚೌಕಟ್ಟನ್ನು ಮರುಪರಿಶೀಲಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.


ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ಕಳ್ಳಸಾಗಣೆಗೆ ಒಳಗಾದ ಸಂತ್ರಸ್ತೆಯರ ಪುನರ್ವಸತಿ, ಸಮಾಜದ ಮುಖ್ಯವಾಹಿನಿಗೆ ಅವರ ಪುನ‌ರ್ ಸೇರ್ಪಡೆ ಹಾಗೂ ದೀರ್ಘಕಾಲೀನ ರಕ್ಷಣೆಯ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದೆ.


ಆಶ್ರಯ ಕೇಂದ್ರಗಳಿಗೆ ಕನಿಷ್ಠ ಮಾನದಂಡಗಳನ್ನು ರೂಪಿಸುವುದು, ಕಾನೂನು ನೆರವು, ಮಾನಸಿಕ ಆರೋಗ್ಯಕ್ಕೆ ನೆರವು, ಶಿಕ್ಷಣ, ವೃತ್ತಿಪರ ತರಬೇತಿ ಹಾಗೂ ಮರುಕಳ್ಳಸಾಗಣೆಯಿಂದ ರಕ್ಷಣೆ ಒದಗಿಸುವ ಭರವಸೆ ಸೇರಿದಂತೆ ಸಂತ್ರಸ್ತರ ರಕ್ಷಣಾ ಯೋಜನೆಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.


ಐಷಾರಾಮಿಗಳ ಲೈಂಗಿಕ ತೃಷೆಗಾಗಿ ನಡೆಯುವ 'ಮಾನಿನಿಯರ ಕಳ್ಳಸಾಗಣೆ' ಎಂಬುದು ವಿಶ್ವವ್ಯಾಪಿ ಜಾಲ. ಇದರ ಹಿಂದೆ ಬಹು ಶತಕೋಟಿ ಡಾಲರ್‌ಗಳ ವಹಿವಾಟು ಇದೆ. ಮಾಫಿಯಾದ ಕಬಂಧ ಬಾಹುವಿನಲ್ಲಿ ಸಿಲುಕಿರುವ ವ್ಯವಸ್ಥಿತ ಜಾಲವಿದು. ದೇಶದ ಒಳಗೂ ಹೊರಗೂ ಇಂತಹ ಅಪರಾಧವನ್ನು ಎಗ್ಗಿಲ್ಲದೆ ನಡೆಯುತ್ತಿದೆ. ಈ ಕೃತ್ಯಗಳನ್ನು ಮೂಲೋತ್ಪಾಟನೆ ಮಾಡಲು ವ್ಯವಸ್ಥಿತವಾದ ಸಂಘಟಿತ ಪ್ರಯತ್ನಗಳು ನಡೆಯಬೇಕು ಎಂಬುದು ಸುಪ್ರೀಂ ಕೋರ್ಟ್ ನಿರ್ದೇಶನದ ಹಿಂದಿರುವ ಸದಾಶಯ.


ಬಡತನ, ನಿರುದ್ಯೋಗದ ಕಾರಣದಿಂದ ಅಥವಾ ಅಧಿಕಾರದ ಬಲದಿಂದ ನಡೆಯುವ ಇಂತಹ ಕೃತ್ಯಗಳನ್ನು ತಡೆದು

ಸಂತ್ರಸ್ತರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮತ್ತು ಮಾನವ ಘನತೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿರುವ ಓರೆಕೋರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವದ್ದಾಗಿದೆ.


"ರಾಮಕೃಷ್ಣ ವಿರುದ್ಧ ಪೊಲೀಸ್ ಮಹಾನಿರ್ದೇಶಕರು ಮತ್ತಿತರರು" (WPHC No. 100012/2024) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಇಂಥದ್ದೇ ನಿರ್ದೇಶನ ನೀಡಿತ್ತು. ವ್ಯಕ್ತಿಯ ನಾಪತ್ತೆಗೆ ಸಂಬಂಧಿಸಿದಂತೆ ದೂರು ನೀಡಲು ಬಂದರೆ, ನಮ್ಮ ಠಾಣೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠದ ತೀರ್ಪಿನಲ್ಲಿ, ಮಾನವ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಮಾನವ ಕಳ್ಳಸಾಗಣೆ ನಿಗ್ರಹ ಪಡೆ(Anti-Human Trafficking Cell/Unit)ಗಳ ಕಾರ್ಯಾಚರಣೆ ಬಗ್ಗೆ ಮೂರು ತಿಂಗಳಿಗೊಮ್ಮೆ ಪರಾಮರ್ಶೆ ಮಾಡಬೇಕು ಎಂದು ಹೇಳಿತ್ತು.

ನಾಪತ್ತೆ ಪ್ರಕರಣಗಳಲ್ಲಿ ನಾಪತ್ತೆಯ ದೂರು ಸ್ವೀಕರಿಸುವಾಗ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದ ಮಾರ್ಗಸೂಚಿ ಹೀಗಿದೆ;

► ನಾಪತ್ತೆಯಾಗಿರುವ ವ್ಯಕ್ತಿಗಳ ಬಗ್ಗೆ ದೂರುಗಳನ್ನು ಪ್ರಾಮಾಣಿಕವಾಗಿ ದಾಖಲು ಮಾಡಿಕೊಳ್ಳಬೇಕು. ಆ ದೂರುಗಳು ಕಾಣೆಯಾದ ಮಹಿಳೆ/ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದೆಯೇ ಅಥವಾ ಯಾವುದೇ ಇತರ ವ್ಯಕ್ತಿಗೆ ಸಂಬಂಧಿಸಿದೆಯೇ ಎಂಬುದನ್ನು ಸಂಬಂಧಿತ ಶಾಸನಬದ್ಧ ಪ್ರಾಧಿಕಾರಗಳು ನಿರ್ದಿಷ್ಟವಾಗಿ ಗಮನಿಸಿದ ನಂತರ ಮಾನವ ಕಳ್ಳ ಸಾಗಣೆ ಘಟಕ/ಕೋಶಕ್ಕೆ ಮಾಹಿತಿ ನೀಡಬೇಕು.

► ಯಾವುದೇ ದೂರನ್ನು ಯಾವುದೇ ಸಂದರ್ಭಗಳಲ್ಲಿಯೂ, ಯಾವುದೇ ಪೊಲೀಸ್‌ ಅಧಿಕಾರಿಗಳು ತಿರಸ್ಕರಿಸಬಾರದು. ಅಂತಹ ಪ್ರತಿಯೊಂದು ದೂರನ್ನು ತಕ್ಷಣವೇ ಪರಿಗಣಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

► ವ್ಯಕ್ತಿಯ ಮೃತದೇಹಗಳು ನಂತರ ಪತ್ತೆಯಾದರೆ, ತನಿಖಾ ಅಧಿಕಾರಿಗಳು ಡಿ.ಎನ್‌.ಎ. ವಿಶ್ಲೇಷಣೆಯ ಮೂಲಕ ಹೋಲಿಕೆ ಮಾಡಲು ಸಾಧ್ಯವಾಗುವಂತೆ ಕಾಣೆಯಾದ ವ್ಯಕ್ತಿಯ ಕುಟುಂಬ ಸದಸ್ಯರ ಫೋರೆನ್ಸಿಕ್‌ ಪುರಾವೆಗಳನ್ನು ಪಡೆದುಕೊಳ್ಳಬೇಕು.

► ಕಾಣೆಯಾದ ವ್ಯಕ್ತಿಯ ಇತ್ತೀಚಿನ ಭಾವಚಿತ್ರವನ್ನು ಸಂಗ್ರಹಿಸಿ ಅದರ ಪ್ರತಿಗಳನ್ನು ಎ.ಯು.ಟಿ.ಎಚ್‌.ಯು, ಸಿ.ಐ.ಡಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗಳಿಗೂ ಒದಗಿಸಬೇಕು.

► ಕಾಣೆಯಾದವರ ದೂರಿನ ವಿವರಗಳನ್ನು ದೂರು ದಾಖಲಾದ 24 ಗಂಟೆಗಳ ಒಳಗೆ ಬೀಟ್‌ ಪೊಲೀಸ್‌ ಸಿಬ್ಬಂದಿ ಮತ್ತು ಹೊಯ್ಸಳ ಮುಂತಾದ ಮೊಬೈಲ್‌ ಪೊಲೀಸ್‌ ಘಟಕಗಳಿಗೆ ಎಲೆಕ್ಟ್ರಾನಿಕ್‌ ರೂಪದಲ್ಲಿ ರವಾನಿಸಬೇಕು.

► ಕಾಣೆಯಾದವರ ವಿವರಗಳನ್ನು (ಆ ನಿಟ್ಟಿನಲ್ಲಿ ಅಗತ್ಯ ಒಪ್ಪಿಗೆ ಪಡೆದ ನಂತರ) ಮಾನ್ಯತೆ ಪಡೆದ ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಹಾಗೂ ಆಡಿಯೊ ಮತ್ತು ವಿಡಿಯೊ ಸುದ್ದಿ ಜಾಲಗಳ ಮೂಲಕ ಪ್ರಕಟಿಸಬೇಕು. ದೂರಿನ ವಿವರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪೋರ್ಟಲ್‌ಗಳಲ್ಲಿ ಹಾಗೂ ಇತರ ಪೋರ್ಟಲ್‌ಗಳಲ್ಲಿ ಅಪ್‌ಲೋಡ್‌ ಮಾಡಬೇಕು.


ರಾಜ್ಯ ಸರ್ಕಾರ ಜಿಲ್ಲಾ ಎಸ್‌ಪಿ ಮತ್ತು ಕಮಿಷನರ್‌ಗಳಿಗೆ ಕಳುಹಿಸಿದ ಸುತ್ತೋಲೆ ಆದೇಶ (1/aparadha/17:(2)/2010, dated 23.02.2010)ದ ಸಮರ್ಪಕ ಅನುಷ್ಟಾನಕ್ಕಾಗಿ ಉನ್ನತ ಪೊಲೀಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವಂತೆ ಸಲಹೆ ನೀಡಿದೆ.

ಪ್ರಸ್ತುತ ನಮ್ಮ ರಾಜ್ಯದಲ್ಲಿ ಐದು ನಿಗ್ರಹ ಪಡೆಗಳಿದ್ದು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಮೈಸೂರುಗಳಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ಪಡೆ ಕಾರ್ಯಾಚರಣೆ ಮಾಡುತ್ತಿದೆ. ಗುಲ್ಬರ್ಗ, ರಾಯಚೂರು, ದಾವಣಗೆರೆ ಮತ್ತು ಕೋಲಾರಗಳಲ್ಲಿ ಮಾನವ ಕಳ್ಳಸಾಗಣೆ ನಿಗ್ರಹ ಪಡೆಗಳನ್ನು ಸ್ಥಾಪಿಸುವ ಪ್ರಸ್ತಾಪ ಕರ್ನಾಟಕ ಸರ್ಕಾರಕ್ಕಿದೆ.

ಈ ನಿಗ್ರಹ ಪಡೆಗಳಿಗೆ ವಾಹನ, ಕ್ಯಾಮರಾ ಇತ್ಯಾದಿ ಅತ್ಯಾಧುನಿಕ ಅಗತ್ಯ ವಸ್ತುಗಳ ವ್ಯವಸ್ಥೆಯನ್ನು ಪೂರೈಸಿ ಕೇಂದ್ರಗಳನ್ನು ಬಲಪಡಿಸಿದರೆ ಕೋರ್ಟ್ ತೀರ್ಪುಗಳ ಪರಿಣಾಮಕಾರಿ ಅನುಷ್ಟಾನ ಸಾಧ್ಯವಾಗುತ್ತದೆ.



Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu