'ಅಕ್ರಮ ಲಾಭ'ಕ್ಕೆ ವಿಚಾರಣೆಗೆ ಮುನ್ನವೇ 'ಜಡ್ಜ್‌ಮೆಂಟ್' ರೆಡಿ! - ಆರೋಪಿ ಜಡ್ಜ್ ವಿರುದ್ಧದ ಶಿಸ್ತು ಕ್ರಮ ರದ್ದತಿಗೆ ಹೈಕೋರ್ಟ್ ನಕಾರ
'ಅಕ್ರಮ ಲಾಭ'ಕ್ಕೆ ವಿಚಾರಣೆಗೆ ಮುನ್ನವೇ 'ಜಡ್ಜ್‌ಮೆಂಟ್' ರೆಡಿ! - ಆರೋಪಿ ಜಡ್ಜ್ ವಿರುದ್ಧದ ಶಿಸ್ತು ಕ್ರಮ ರದ್ದತಿಗೆ ಹೈಕೋರ್ಟ್ ನಕಾರ
ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಖುಲಾಸೆ ತೀರ್ಪು ಸಿದ್ಧಪಡಿಸಿದ ಆರೋಪ ಹೊತ್ತಿರುವ ನ್ಯಾಯಾಧೀಶರ ಮಧ್ಯಪ್ರದೇಶ ಹೈಕೋರ್ಟ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಆರೋಪಿ ಜಡ್ಜ್‌ಗೆ ಪರಿಹಾರ ನೀಡಲು ನಿರಾಕರಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ಪಾಠಕ್ ಹಾಗೂ ನ್ಯಾಯಮೂರ್ತಿ ಬಿ.ಪಿ. ಶರ್ಮಾ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ವಿಚಾರಣೆ ಇನ್ನೂ ಬಾಕಿಯಿದ್ದಾಗಲೇ ಆರೋಪಿಯನ್ನು ಖುಲಾಸೆಗೊಳಿಸುವ ತೀರ್ಪನ್ನು 2020ರ ಅಕ್ಟೋಬರ್‌ನಲ್ಲೇ ಸಿದ್ಧಪಡಿಸಿದ್ದರು ಎಂಬ ಗಂಭೀರ ಆರೋಪ ಎದುರಿಸುತ್ತಿರುವ ಸಿವಿಲ್ ನ್ಯಾಯಾಧೀಶರ ವಿರುದ್ಧ ಆರಂಭಿಸಲಾದ ಇಲಾಖಾ ಶಿಸ್ತು ಕ್ರಮವನ್ನು ರದ್ದುಪಡಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರಾಕರಿಸಿದೆ.
ಜಡ್ಜ್ ಮೇಲಿನ ಆರೋಪಗಳೇನು..?
ಅಪರಾಧ ಪ್ರಕರಣ ಬಾಕಿಯಿದ್ದ ಕಾರಣ ಐಎಎಸ್ (IAS) ಹುದ್ದೆಗೆ ಅವರ ನೇಮಕಾತಿ ತಡೆಹಿಡಿಯಲ್ಪಟ್ಟಿದ್ದ ಸಂತೋಷ್ ವರ್ಮಾ ಅವರಿಗೆ ಅಕ್ರಮ ಲಾಭ ಕಲ್ಪಿಸುವ ಉದ್ದೇಶದಿಂದ ನಡೆದ ಸಂಚಿನ ಭಾಗವಾಗಿ ನ್ಯಾಯಾಧೀಶರು ಮುಂಚಿತವಾಗಿಯೇ ಖುಲಾಸೆ ತೀರ್ಪನ್ನು ಸಿದ್ಧಪಡಿಸಿದ್ದರು ಎನ್ನಲಾಗಿದೆ.
ನ್ಯಾಯಾಂಗ ಅಧಿಕಾರಿಯ ನಡೆ-ನುಡಿಗಳು ಅವರ ಹುದ್ದೆಗೆ ನಿರೀಕ್ಷಿಸಲಾದ "ಪ್ರಾಮಾಣಿಕತೆ (Integrity) ಮತ್ತು ಯೋಗ್ಯತೆ (Propriety)" ಎಂಬ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಶಿಸ್ತು ಪ್ರಾಧಿಕಾರದ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿತು.
ಪೀಠವು ಹೀಗೆ ಹೇಳಿದೆ:
«"ಆರೋಪಗಳ ಸತ್ಯಾಸತ್ಯತೆ, ಸಾಕ್ಷ್ಯಗಳ ಪರ್ಯಾಪ್ತತೆ ಹಾಗೂ ಆರೋಪಿತ ಸಿಬ್ಬಂದಿಯ ಪ್ರತಿರಕ್ಷೆ ಇವುಗಳನ್ನು ನಿರ್ಧರಿಸುವ ಅಧಿಕಾರ ಶಿಸ್ತು ಪ್ರಾಧಿಕಾರಕ್ಕೇ ಸೇರಿದ್ದು, ಸಂವಿಧಾನದ ಅನುಚ್ಛೇದ 226ರ ಅಡಿಯಲ್ಲಿ ಆರಂಭಿಕ ಹಂತದಲ್ಲೇ ಹೈಕೋರ್ಟ್ ಅವುಗಳನ್ನು ಪರಿಶೀಲಿಸುವುದಿಲ್ಲ. ಆದ್ದರಿಂದ ಈ ರಿಟ್ ಅರ್ಜಿಯಲ್ಲಿ ಯಾವುದೇ ಅರ್ಹತೆ ಕಂಡುಬರದ ಕಾರಣ ಅದನ್ನು ವಜಾಗೊಳಿಸಲಾಗುತ್ತದೆ. ಶಿಸ್ತು ಪ್ರಾಧಿಕಾರವು ಕಾನೂನಿನ ಪ್ರಕಾರ ಇಲಾಖಾ ವಿಚಾರಣೆಯನ್ನು ಮುಂದುವರಿಸಲು ಸ್ವತಂತ್ರವಾಗಿದೆ."»
ಅರ್ಜಿದಾರರಾದ ನ್ಯಾಯಾಧೀಶರು, ತಮ್ಮ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಲಾಖಾ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ ಹೀಗಿದೆ:
ಕ್ರಿಮಿನಲ್ ಟ್ರಯಲ್ ನಂ.1621/2019ರಲ್ಲಿ ವಿಚಾರಣೆ ಬಾಕಿಯಿದ್ದರೂ ಆರೋಪಿಯನ್ನು ಖುಲಾಸೆಗೊಳಿಸುವ ತೀರ್ಪನ್ನು ಮುಂಚಿತವಾಗಿ ಸಿದ್ಧಪಡಿಸಿ ಅಸ್ತಿತ್ವಕ್ಕೆ ತರಲಾಗಿದೆ ಎಂಬ ಆರೋಪಗಳು ಬೆಳಕಿಗೆ ಬಂದಿದ್ದವು. ಇದನ್ನು ಆಧರಿಸಿ ಶಿಸ್ತು ಪ್ರಾಧಿಕಾರವು ದಾಖಲೆಗಳನ್ನು ಪರಿಶೀಲಿಸಿ ಇಲಾಖಾ ಕ್ರಮ ಆರಂಭಿಸಿತು.
ಅರ್ಜಿದಾರರನ್ನು ಅಮಾನತುಗೊಳಿಸಲಾಗಿದ್ದು, ಮಧ್ಯಪ್ರದೇಶ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1966ರ ನಿಯಮ 14ರ ಅಡಿಯಲ್ಲಿ ಆರೋಪಪಟ್ಟಿ (Charge Sheet) ಸಲ್ಲಿಸಲಾಗಿತ್ತು.
ಅರ್ಜಿದಾರರ ಪರ ವಕೀಲರು, 2020ರಲ್ಲಿ ನಡೆದಿತ್ತೆನ್ನಲಾದ ಘಟನೆಯ ಕುರಿತು 2025ರಲ್ಲಿ ಆರೋಪಪಟ್ಟಿ ಸಲ್ಲಿಸಿರುವುದು ಅಸಮಂಜಸವಾದ ಮತ್ತು ವಿವರಣೆಯಿಲ್ಲದ ವಿಳಂಬವಾಗಿದ್ದು, ಅದರಿಂದ ಆರೋಪಪಟ್ಟಿಯನ್ನೇ ರದ್ದುಪಡಿಸಬೇಕು ಎಂದು ವಾದಿಸಿದರು. ಅಲ್ಲದೆ, ಕ್ರಿಮಿನಲ್ ಪ್ರಕರಣ ಮತ್ತು ಇಲಾಖಾ ವಿಚಾರಣೆ ಎರಡೂ ಒಂದೇ ಘಟನೆಗಳ ಆಧಾರಿತವಾಗಿರುವುದರಿಂದ ಇಲಾಖಾ ವಿಚಾರಣೆ ಮುಂದುವರಿದರೆ ಕ್ರಿಮಿನಲ್ ವಿಚಾರಣೆಯಲ್ಲಿ ಅರ್ಜಿದಾರರಿಗೆ ಹಾನಿಯಾಗುತ್ತದೆ ಎಂದು ವಾದಿಸಿದರು.
ಇದಕ್ಕೆ ವಿರೋಧವಾಗಿ ರಾಜ್ಯ ಸರ್ಕಾರದ ಪರ ವಕೀಲರು, ನ್ಯಾಯಾಂಗ ಅಧಿಕಾರಿಯ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಅತ್ಯಂತ ಗಂಭೀರ ಆರೋಪಗಳು ಇವುಗಳಾಗಿದ್ದು, ಇಂತಹ ಆರೋಪಗಳು "ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸದ ಅಡಿಪಾಯವನ್ನೇ ಅಲುಗಾಡಿಸುತ್ತವೆ" ಎಂದು ವಾದಿಸಿದರು. ಆದ್ದರಿಂದ ಸಮಗ್ರ ತನಿಖೆ ಅಗತ್ಯವೆಂದು ತಿಳಿಸಿದರು.
ಹೈಕೋರ್ಟ್, ಆರಂಭಿಕ ಹಂತದಲ್ಲೇ ರಿಟ್ ನ್ಯಾಯಾಲಯದ ಹಸ್ತಕ್ಷೇಪವು ಅಧಿಕಾರದ ಕೊರತೆ ಅಥವಾ ಕ್ರಮವು ಸ್ಪಷ್ಟವಾಗಿ ಸ್ವೇಚ್ಛಾಚಾರಿಯಾಗಿರುವ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಸಾಧ್ಯ ಎಂದು ಹೇಳಿತು. ಅಲ್ಲದೆ, ಈ ಪ್ರಕರಣದಲ್ಲಿನ ಆರೋಪಗಳು "ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ನ್ಯಾಯಾಂಗ ಸಂಸ್ಥೆಯ ಪ್ರಾಮಾಣಿಕತೆಗೆ ನೇರವಾಗಿ ಸಂಬಂಧಿಸಿದವು" ಎಂದು ಒತ್ತಿಹೇಳಿತು.
"ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಲಾಖಾ ಕ್ರಮ ಆರಂಭಿಸುವ ಮುನ್ನ ಎಚ್ಚರಿಕೆಯಿಂದ ಹಾಗೂ ಸಮಗ್ರ ಜಾಗೃತ ಪರಿಶೀಲನೆ (Vigilance Scrutiny) ನಡೆಸುವುದು ಅನಿವಾರ್ಯವಾಗಿದೆ." ಎಂದು ನ್ಯಾಯಪೀಠವ ಹೇಳಿತು.
ಮುಂದೆ, Dinesh Awasthi v. State of Madhya Pradesh (WP No.4145/2015) ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಲಯವು, ವಿಳಂಬವಾಗಿದೆ ಎಂಬ ಕಾರಣ ಮಾತ್ರದಿಂದ ಇಲಾಖಾ ವಿಚಾರಣೆ ಅಮಾನ್ಯವಾಗುವುದಿಲ್ಲ; ಆ ವಿಳಂಬದಿಂದ ಆರೋಪಿತರಿಗೆ ನಿಜವಾದ ಹಾನಿಯಾಗಿದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಹೇಳಿತು.
ಕ್ರಿಮಿನಲ್ ಪ್ರಕರಣ ಬಾಕಿಯಿರುವಾಗ ಇಲಾಖಾ ವಿಚಾರಣೆ ನಡೆಸಬಾರದು ಎಂಬ ಅರ್ಜಿದಾರರ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿತು.
"ಈ ಪ್ರಕರಣವು ನ್ಯಾಯಾಂಗ ಸೇವೆಯ ಸದಸ್ಯರ ಕುರಿತಾಗಿದೆ. ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸವು ಸಂವಿಧಾನಾತ್ಮಕ ವ್ಯವಸ್ಥೆಯ ಮೂಲ ಸ್ತಂಭಗಳಲ್ಲಿ ಒಂದಾಗಿದೆ. ನ್ಯಾಯಾಂಗ ಅಧಿಕಾರಿಯ ನಡೆ-ನುಡಿಗಳು ಅವರ ಹುದ್ದೆಗೆ ನಿರೀಕ್ಷಿಸಲಾದ ಪ್ರಾಮಾಣಿಕತೆ ಮತ್ತು ಯೋಗ್ಯತೆಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸುವುದು ಶಿಸ್ತು ಪ್ರಾಧಿಕಾರದ ಕರ್ತವ್ಯವಾಗಿದೆ. ಕ್ರಿಮಿನಲ್ ಪ್ರಕರಣ ಯಾವಾಗ ಮುಕ್ತಾಯವಾಗುತ್ತದೆ ಎಂಬುದು ಅನಿಶ್ಚಿತವಾಗಿರುವುದರಿಂದ ಅದರ ಅಂತ್ಯಕ್ಕಾಗಿ ಇಲಾಖಾ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದಿಲ್ಲ." ಎಂದು ಪೀಠವು ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ರಿಟ್ ಅರ್ಜಿಯನ್ನು ವಜಾಗೊಳಿಸಿ, ಕಾನೂನಿನ ಪ್ರಕಾರ ಇಲಾಖಾ ವಿಚಾರಣೆಯನ್ನು ಮುಂದುವರಿಸಲು ಶಿಸ್ತು ಪ್ರಾಧಿಕಾರಕ್ಕೆ ಸ್ವಾತಂತ್ರ್ಯ ನೀಡಿದೆ.
ಪ್ರಕರಣದ ಶೀರ್ಷಿಕೆ: ವಿಜೇಂದ್ರ ಸಿಂಗ್ ರಾವತ್ ವಿರುದ್ಧ ಮಧ್ಯಪ್ರದೇಶ ರಾಜ್ಯ ಸರಕಾರ
ಮಧ್ಯಪ್ರದೇಶ ಹೈಕೋರ್ಟ್, WP No.18568/2026