ಶಿಕ್ಷಣ ಸಂಸ್ಥೆಗೆ ಪೋಷಕನ ಸ್ಥಾನ: ಪೋಕ್ಸೊ ಪ್ರಕರಣ ವರದಿ ಮಾಡದಿದ್ದರೂ ಅಪರಾಧ- ಹೈಕೋರ್ಟ್ ಖಡಕ್ ಮೆಸ್ಸೇಜ್
ಶಿಕ್ಷಣ ಸಂಸ್ಥೆಗೆ ಪೋಷಕನ ಸ್ಥಾನ: ಪೋಕ್ಸೊ ಪ್ರಕರಣ ವರದಿ ಮಾಡದಿದ್ದರೂ ಅಪರಾಧ- ಹೈಕೋರ್ಟ್ ಖಡಕ್ ಮೆಸ್ಸೇಜ್
ಹಾಸ್ಟೆಲ್ ವೊಂದರಲ್ಲಿ ಬಾಲಕನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪೋỄ ಪ್ರಕರಣ ರದ್ದು ಕೋರಿ ಉಡುಪಿ ಜಿಲ್ಲೆಯ ಶಾಲೆಯ ಮುಖ್ಯ ಶಿಕ್ಷಕ, ವಾರ್ಡನ್ ಮತ್ತು ಶಾಲೆಯ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿದೆ.
ಅಲ್ಲದೆ, ''ಶಿಕ್ಷಣ ಸಂಸ್ಥೆ ಎಷ್ಟೇ ದೊಡ್ಡದಿರಲಿ ಅಥವಾ ಚಿಕ್ಕದಿರಲಿ, ಸಾಮಾನ್ಯ ಹಿನ್ನೆಲೆಯ ಮಕ್ಕಳಿಗಾಗಿರಲಿ ಅಥವಾ ಸಮಾಜದ ಅತ್ಯಂತ ಸವಲತ್ತುಳ್ಳ ವರ್ಗದವರಿಗೇ ಆಗಿರಲಿ, ಯಾವುದಾದರೂ ಅದು ಪೋಷಕರ ಸ್ಥಾನದಲ್ಲಿ ನಿಲ್ಲುತ್ತದೆ. ಹಾಗಾಗಿ ಆಪಾದಿತರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ'' ಎಂದು ಹೇಳಿದೆ.
''ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಪೋಷಕರ ಮಹದಾಸೆಯನ್ನು ಪ್ರತಿಬಿಂಬಿಸುವ ಹಾಸ್ಟೆಲ್‌ಗಳು ಕೇವಲ ಬೋಧನಾ ಕೇಂದ್ರಗಳಲ್ಲ, ಬದಲಿಗೆ ತಮ್ಮಲ್ಲಿಗೆ ಬರುವ ಪ್ರತಿಯೊಂದು ಮಗುವಿನ ಸುರಕ್ಷತೆ, ಘನತೆ ಮತ್ತು ಕ್ಷೇಮ ಕಾಪಾಡುವ ಜವಾಬ್ದಾರಿ ಹೊತ್ತ ಕೇಂದ್ರಗಳಾಗಿರುತ್ತವೆ. ಆದರೆ ಕೆಲವು ಹಾಸ್ಟೆಲ್‌ಗಳು ತಮ್ಮ ಜವಾಬ್ದಾರಿಗಿಂತ ಹೆಚ್ಚಾಗಿ ಖ್ಯಾತಿಗೆ ಜೋತುಬಿದ್ದಿವೆ. ಮಕ್ಕಳ ಮುಗ್ಧತೆಯನ್ನು ಕಡೆಗಣಿಸಿ ಪ್ರತಿಷ್ಠೆಯನ್ನೇ ಮುಂದು ಮಾಡಿಕೊಂಡಿವೆ. ಪೋಷಕರ ವಿಶ್ವಾಸಕ್ಕೆ ದ್ರೋಹ ಬಗೆಯುತ್ತಿವೆ,'' ಎಂದು ನ್ಯಾಯಪೀಠ ತಿಳಿಸಿದೆ.
"ದೂರಿನ ವರದಿ ಮಾಡುವುದನ್ನು ತಡೆ ಹಿಡಿಯಲು ಅಥವಾ ಅದರ ಬಗ್ಗೆ ಏನೊಂದೂ' ಮಾತನಾಡದೆ ಮುಗುಂ ಆಗಿರುವುದು, ಇಲ್ಲವೇ ದೂರಿನ ನಿರೂಪಣೆಯನ್ನು ಕುಶಲತೆಯಿಂದ ನಿರ್ವಹಿಸುವ ಚಾಣಾಕ್ಷತೆ ಮೆರೆದರೆ ಸಂತ್ರಸ್ತ ಮಗುವಿಗೆ ಅನ್ಯಾಯ ಮಾಡಿದಂತೆ. ಈ ಪ್ರಕರಣದಲ್ಲಿ ಬಾಲಕನ ಮೇಲಿನ ದೌರ್ಜನ್ಯದ ಬಗ್ಗೆ ಸಂಸ್ಥೆ ಮೌನವಾಗಿ ವರ್ತಿಸಿರುವುದು ಶಾಸನಬದ್ಧ ಅಪರಾಧ," ಎಂದು ನ್ಯಾಯಪೀಠ ಆದೇಶಿಸಿದೆ.
'ಸಂತ್ರಸ್ತ ಬಾಲಕ ಅಂದು ಹುಷಾರಿಲ್ಲ ಎಂದು ಮಲಗಿದ್ದ ವೇಳೆ ಸಹವರ್ತಿ ವಿದ್ಯಾರ್ಥಿಯು ಇದ್ದಕ್ಕಿದ್ದಂತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕ ಜಾಗೃತಗೊಂಡು ವಿಷಯವನ್ನು ವಾರ್ಡನ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಕಲ್ಯಾಣ ಸಮಿತಿ ಅಧಿಕಾರಿ, ಬಾಲಕ ಕೊಟ್ಟ ದೂರನ್ನು ಹರಿದು ಹಾಕಿ ತಾನು ಹೇಳಿದಂತೆ ಬೇರೊಂದು ದೂರು ಬರೆದುಕೊಡುವಂತೆ ಒತ್ತಾಯಿಸಿದ್ದಾರೆ.
ಈ ಪ್ರಕರಣ ಇಬ್ಬರ ಒಪ್ಪಿಗೆ ಮೇಲೆ ನಡೆದ ಕೃತ್ಯ ಹಾಗೂ ಇಬ್ಬರ ನಡುವಿನ ಜಗಳ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ದೂರನ್ನು ವರದಿ ಮಾಡಲು ಐದಾರು ದಿನ ವಿಳಂಬ ಮಾಡಲಾಗಿದೆ. ಅಷ್ಟಕ್ಕೂ ದೌರ್ಜನ್ಯ ವೆಸಗಿದ ಬಾಲಕ 3 ದಿನಗಳ ನಂತರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹಾಗಾಗಿ ತನಿಖೆಯಿಂದ ಮಾತ್ರವೇ ನಿಜಾಂಶ ಹೊರಬರಬೇಕಿದೆ,'' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಸತಿಯುತ ಶಿಕ್ಷಣ ನೀಡುವ ಮೂಡುಬಿದಿರೆಯ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯ 10ನೇ ತರಗತಿಯ ಬಾಲಕನೊಬ್ಬ ಹಾಸ್ಟೆಲ್‌ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ತನ್ನ ಮೇಲೆ 2026ರ ಜೂ.2ರಂದು ಸಹಪಾಠಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಬಗ್ಗೆ ದೂರು ನೀಡಿದ್ದ. ದೂರಿನ ಅನುಸಾರ ಪೊಲೀಸರು ಅರ್ಜಿದಾರರ ವಿರುದ್ಧ ಪೋಕ್ಸ್ ಕಾಯಿದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ತ್ವರಿತ ವಿಚಾರಣೆ ಕೋರ್ಟ್‌ಗೆ ರವಾನಿಸಿದ್ದಾರೆ.