-->
ರಸ್ತೆ ಅಪಘಾತ | ಪರಿಹಾರ ನಿರ್ಧಾರಕ್ಕೆ ಅಂಗವೈಕಲ್ಯದ ಶೇಕಡಾವಾರು ಅಲ್ಲ, ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟವೇ ಮುಖ್ಯ: ಸುಪ್ರೀಂ ಕೋರ್ಟ್

ರಸ್ತೆ ಅಪಘಾತ | ಪರಿಹಾರ ನಿರ್ಧಾರಕ್ಕೆ ಅಂಗವೈಕಲ್ಯದ ಶೇಕಡಾವಾರು ಅಲ್ಲ, ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟವೇ ಮುಖ್ಯ: ಸುಪ್ರೀಂ ಕೋರ್ಟ್

ರಸ್ತೆ ಅಪಘಾತ | ಪರಿಹಾರ ನಿರ್ಧಾರಕ್ಕೆ ಅಂಗವೈಕಲ್ಯದ ಶೇಕಡಾವಾರು ಅಲ್ಲ, ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟವೇ ಮುಖ್ಯ: ಸುಪ್ರೀಂ ಕೋರ್ಟ್





ಬಡಗಿಯೊಬ್ಬ ಅಪಘಾತದಲ್ಲಿ ತನ್ನ ಕಾಲನ್ನು ಕಳೆದುಕೊಂಡ ಪ್ರಕರಣದಲ್ಲಿ ಪರಿಹಾರಧನವನ್ನು ಹೆಚ್ಚಿಸಿದ ಸುಪ್ರೀಂ ಕೋರ್ಟ್, ವೈದ್ಯಕೀಯ ಅಂಗವೈಕಲ್ಯದ ಶೇಕಡಾವಾರಿಗಿಂತ, ಗಾಯಗೊಂಡ ವ್ಯಕ್ತಿಯ ವೃತ್ತಿ ಮತ್ತು ಅದರಿಂದ ಉಂಟಾದ ನಿಜವಾದ ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟದ ಆಧಾರದ ಮೇಲೆ ಕಾರ್ಯಾತ್ಮಕ ಅಂಗವೈಕಲ್ಯ (Functional Disability)ವನ್ನು ನಿರ್ಧರಿಸಬೇಕು ಎಂದು ಮಹತ್ವದ ತೀರ್ಪು ನೀಡಿದೆ.


ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪರಿಹಾರಧನವನ್ನು ನಿರ್ಧರಿಸುವಾಗ, ಶಾಶ್ವತ ಅಂಗವೈಕಲ್ಯವು ವ್ಯಕ್ತಿಯ ಜೀವನೋಪಾಯದ ಮೇಲೆ ಬೀರಿರುವ ಪರಿಣಾಮವೇ ಮುಖ್ಯ ಮಾನದಂಡವಾಗಿದ್ದು, ಕೇವಲ ವೈದ್ಯಕೀಯ ಅಂಗವೈಕಲ್ಯದ ಶೇಕಡಾವಾರು ನಿರ್ಣಾಯಕವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎನ್. ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ.


ಪ್ರಕರಣದ ಹಿನ್ನೆಲೆ


2004ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ, ಮರಗೆಲಸಗಾರ/ಬಡಗಿ (Carpenter) ಶಂಕರ್ ದತ್ ಅವರು ನಿರ್ಲಕ್ಷ್ಯದಿಂದ ಚಲಾಯಿಸಲಾದ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ಮೊಣಕಾಲಿನ ಕೆಳಭಾಗದ ಬಲಗಾಲನ್ನು ಕಳೆದುಕೊಂಡಿದ್ದರು.

ಈ ಪ್ರಕರಣದಲ್ಲಿ, ಅವರ ವೈದ್ಯಕೀಯ ಅಂಗವೈಕಲ್ಯವನ್ನು 70% ಎಂದು ಪ್ರಮಾಣೀಕರಿಸಲಾಗಿದ್ದರೂ, ಮರಗೆಲಸಗಾರನಾಗಿ ತಮ್ಮ ವೃತ್ತಿಯನ್ನು ಮುಂದುವರಿಸಲು ಸಂಪೂರ್ಣ ಅಸಮರ್ಥರಾಗಿರುವುದರಿಂದ, ಅವರ ಕಾರ್ಯಾತ್ಮಕ ಅಂಗವೈಕಲ್ಯವನ್ನು 100% ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿತು.


ಇದರಿಂದ, ಅವರಿಗೆ ನೀಡಲಾಗಿದ್ದ ಪರಿಹಾರಧನವನ್ನು ₹11.51 ಲಕ್ಷದಿಂದ ₹35.95 ಲಕ್ಷಕ್ಕೆ ಹೆಚ್ಚಿಸಲಾಯಿತು.

ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟವೇ ಮುಖ್ಯ ಮಾನದಂಡ

ಶಾಶ್ವತ ಅಂಗವೈಕಲ್ಯ ಪ್ರಕರಣಗಳಲ್ಲಿ ಪರಿಹಾರಧನವನ್ನು ನಿರ್ಧರಿಸುವಾಗ ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟವೇ (Loss of Earning Capacity) ಪ್ರಮುಖ ಮಾನದಂಡ ಎಂದು ನ್ಯಾಯಾಲಯ ಪುನರುಚ್ಚರಿಸಿತು.


*ನ್ಯಾಯಾಲಯದ ಅವಲೋಕನ:*

"ಪರಿಹಾರಧನದ ಪ್ರಮಾಣವು ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟಕ್ಕೆ ಅನುಗುಣವಾಗಿರಬೇಕು. ಆದಾಯ ಗಳಿಕೆಯ ಸಾಮರ್ಥ್ಯದ ನಷ್ಟವೇ ಪರಿಹಾರವನ್ನು ನಿರ್ಧರಿಸುವ ಪ್ರಮುಖ ಹಾಗೂ ನಿರ್ಣಾಯಕ ಪರೀಕ್ಷೆಯಾಗಿದೆ."


ಗಾಯವು ವ್ಯಕ್ತಿಯ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ, ಉಳಿದ ಕೆಲಸದ ಅವಧಿಯಲ್ಲಿಯೂ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.


ಕಾರ್ಯಾತ್ಮಕ ಅಂಗವೈಕಲ್ಯವು ವೃತ್ತಿಯನ್ನು ಅವಲಂಬಿಸಿರುತ್ತದೆ

ವೈದ್ಯರು ನಿಗದಿಪಡಿಸಿದ ಅಂಗವೈಕಲ್ಯದ ಶೇಕಡಾವಾರಿಗಿಂತ, ಗಾಯಗೊಂಡ ವ್ಯಕ್ತಿಯು ತನ್ನ ವೃತ್ತಿಯನ್ನು ಮುಂದುವರಿಸಲು ಎಷ್ಟರ ಮಟ್ಟಿಗೆ ಅಸಮರ್ಥನಾಗಿದ್ದಾನೆ ಎಂಬುದೇ ಮುಖ್ಯ ಎಂದು ನ್ಯಾಯಾಲಯ ವಿವರಿಸಿದೆ.


ಈ ಕುರಿತು ನ್ಯಾಯಾಲಯ ಹೀಗೆ ಹೇಳಿದೆ:

"ಗಾಯದಿಂದ ಉಂಟಾಗುವ ಕಾರ್ಯಾತ್ಮಕ ಅಂಗವೈಕಲ್ಯವು ಗಾಯಗೊಂಡ ವ್ಯಕ್ತಿಯ ವಯಸ್ಸು, ವೃತ್ತಿ, ಉದ್ಯೋಗ ಹಾಗೂ ಆದಾಯ ಗಳಿಕೆಯ ಸಾಮರ್ಥ್ಯದ ಮೇಲಿನ ಪರಿಣಾಮದೊಂದಿಗೆ ನೇರ ಸಂಬಂಧ ಹೊಂದಿದೆ."


*ಮರಗೆಲಸವು ಪರಿಣತಿ ಹೊಂದಿದ ವೃತ್ತಿ*


ಅಪೀಲುದಾರರು ಸಾಮಾನ್ಯ ಕಾರ್ಮಿಕರಲ್ಲ, ಪರಿಣತಿ ಹಾಗೂ ಕೌಶಲ್ಯ ಹೊಂದಿರುವ ಮರಗೆಲಸಗಾರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

"ಮರಗೆಲಸಗಾರನು ಒಬ್ಬ ಕುಶಲಕರ್ಮಿ (Artisan). ತನ್ನ ಕೌಶಲ್ಯ ಮತ್ತು ಪರಿಣತಿಯಿಂದ ವಿವಿಧ ಮರದ ವಸ್ತುಗಳನ್ನು ನಿರ್ಮಿಸುವ ನಿಪುಣ ಕೆಲಸಗಾರ."

ಆದ್ದರಿಂದ, ಅವರ ಆದಾಯವನ್ನು ಸಾಮಾನ್ಯ ಕಾರ್ಮಿಕರಂತೆ ಪರಿಗಣಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿತು.


ಅಪೀಲುದಾರರು ತಿಂಗಳಿಗೆ ₹8,000 ರಿಂದ ₹10,000 ಆದಾಯ ಗಳಿಸುತ್ತಿದ್ದರೆಂದು ಹೇಳಿದ್ದು ಪ್ರತಿವಾದಿಗಳಿಂದ ಪರಿಣಾಮಕಾರಿಯಾಗಿ ವಿರೋಧಿಸಲ್ಪಟ್ಟಿರಲಿಲ್ಲ. ಆದರೂ ಹೈಕೋರ್ಟ್ ಅದನ್ನು ₹5,000ಕ್ಕೆ ಸೀಮಿತಗೊಳಿಸಿದ್ದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತು.

ಕೃತಕ ಕಾಲಿನ ವೆಚ್ಚಕ್ಕೂ ಪರಿಹಾರ

ಕೃತಕ ಕಾಲು (Prosthetic Limb) ಶಾಶ್ವತ ಸಾಧನವಲ್ಲ. ಅದನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗುತ್ತದೆ ಹಾಗೂ ನಿರ್ವಹಣಾ ವೆಚ್ಚವೂ ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುತಿಸಿತು.


"ಅಂಗಚ್ಛೇದನಕ್ಕೊಳಗಾದ ವ್ಯಕ್ತಿಯು ಕೃತಕ ಅಂಗದ ಬದಲಾವಣೆ ಹಾಗೂ ನಿರ್ವಹಣೆಗೆ ಆಗುವ ಪುನರಾವರ್ತಿತ ವೆಚ್ಚಕ್ಕಾಗಿ ಸಮಂಜಸವಾದ ಹಣಕಾಸಿನ ಪರಿಹಾರ ಪಡೆಯಲು ಅರ್ಹನಾಗಿದ್ದಾನೆ."


ಈ ಹಿನ್ನೆಲೆಯಲ್ಲಿ, ಅಪೀಲುದಾರರ ಕೃತಕ ಕಾಲಿನ ಜೀವಿತಾವಧಿಯ ಖರೀದಿ, ಬದಲಾವಣೆ ಮತ್ತು ನಿರ್ವಹಣಾ ವೆಚ್ಚಕ್ಕಾಗಿ ₹10 ಲಕ್ಷಗಳನ್ನು ಪ್ರತ್ಯೇಕವಾಗಿ ಮಂಜೂರು ಮಾಡಿತು.

ಹಿಂದಿನ ತೀರ್ಪುಗಳ ಆಧಾರ

ಈ ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟ್ ತನ್ನ ಹಿಂದಿನ Jagdish v. Mohan (2018), Laxman @ Laxman Mourya v. Oriental Insurance Co. Ltd. (2011), Neeta v. Maharashtra SRTC (2018) ಹಾಗೂ Karamjit Singh v. Amandeep Singh (2024) ಪ್ರಕರಣಗಳಲ್ಲಿನ ತೀರ್ಪುಗಳನ್ನು ಅವಲಂಬಿಸಿತು.


ಅಂತಿಮ ಆದೇಶ

ಅಪೀಲುದಾರರಾದ ಶಂಕರ್ ದತ್ ಅವರಿಗೆ ₹35,95,923 ಪರಿಹಾರಧನವನ್ನು, ದಾವೆ ಸಲ್ಲಿಸಿದ ದಿನಾಂಕದಿಂದ ವಾಸ್ತವ ಪಾವತಿ ಆಗುವವರೆಗೆ ವಾರ್ಷಿಕ 6% ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತು.


ಪ್ರಕರಣದ ಶೀರ್ಷಿಕೆ: ಶಂಕರ್ ದತ್ ವಿರುದ್ಧ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಇತರರು

ಸುಪ್ರೀಂ ಕೋರ್ಟ್‌

ನ್ಯಾಯಪೀಠ: ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾ. ಎನ್. ವಿ. ಅಂಜಾರಿಯಾ

ತೀರ್ಪಿನ ದಿನಾಂಕ: 24 ಜೂನ್ 2026.



Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu